ಆಕಾಶ ಕಾಯಗಳು ಅಥವಾ ನಿದ್ದೆ ...ಯಾವುದನ್ನು ಆಯ್ದುಕೊಳ್ಳುತ್ತೀರಿ ?
ಇನ್ಫೋ ಇನ್‌ಸೈಟ್
ಬೇಕೋ, ಬೇಡವೋ, ಚಳಿ ಬೆಂಗಳೂರಿಗರನ್ನು ಆಟವಾಡಿಸುತ್ತಿದೆ. ಒಂದು ಬೆಳಗ್ಗೆ ಏಳು ಗಂಟೆಗೆಲ್ಲಾ ಬಿಸಿಲು ಸುಡುತ್ತಿದ್ದರೆ, ಮಾರನೆಯ ಮುಂಜಾನೆ ಮಂಜಿನ ಹನಿಗಳು ಟ್ರಾಫಿಕ್ಕಿನೆಡೆಯಲ್ಲೂ ಕೆನ್ನೆಗೆ ಮುತ್ತಿಡುತ್ತವೆ. ಮಾಘ ಮಾಸ ಇನ್ನೇನು ನಾಲ್ಕೇ ದಿನಕ್ಕೆ ಮುಗಿದು ಹೋಗುತ್ತದೆ. ಮತ್ತೆ ಫಾಲ್ಗುಣದ ಕಾರುಬಾರು. ಆದರೂ ಶಿವರಾತ್ರಿ ಕಳೆಯದೇ ಈ ಚಳಿ ಬೆನ್ನು ಬಿಡುವುದಿಲ್ಲಪ್ಪಾ ಅಂತ ಮನೆಯಲ್ಲಿ ಅಜ್ಜಿ ಬಿಸಿನೀರಿನ ಒಲೆ ಮುಂದೆ ಕುಳಿತುಕೊಂಡು ವಟಗುಟ್ಟುತ್ತಾಳೆ.
ನೀವು ಆಕಾಶ ನೋಡಿದ್ದೀರಾ... ? ನಿಮಗೆ ಆಕಾಶ ನೋಡುವ ಹವ್ಯಾಸ..ಅಥವಾ ಹುಚ್ಚು ಇಲ್ಲದೇ ಇದ್ದರೆ ಈ ಪ್ರಶ್ನೆ ಅನ್ವಯಿಸುವುದೇ ಇಲ್ಲ. ಏನಿದೆ ಅಲ್ಲಿ ? ಬರೇ ನಕ್ಷತ್ರಗಳು. ಹುಣ್ಣಿಮೆಯಾದರೆ ಹಾಲು ಬೆಳಕಾದರೂ ಇರುತ್ತದೆ. ಹುಣ್ಣಮೆಗಿನ್ನೂ ಹನ್ನೊಂದು ದಿನ ಕಾಯಬೇಕು ಬಿಡಿ. ಆದರೂ ಆಕಾಶ ಕಾಯಗಳು ಆಸಕ್ತಿ ಮೂಡಿಸುವುದಿಲ್ಲವೇ ?
ಅಂದ ಹಾಗೆ ಇನ್ನೊಂದು ಸುದ್ದಿ ಬಂದಿದೆ. ಫೆಬ್ರವರಿ 18ರಿಂದ 25ರವರೆಗೆ ಬೆಂಗಳೂರಿನ ಆಕಾಶದಲ್ಲಿ ಬರಿಗಣ್ಣಿಗೆ ಬುಧ ಗ್ರಹ ಕಾಣಿಸುತ್ತದಂತೆ. ಬುಧನೆಂದರೆ ಜ್ಯೋತಿಷಿಗಳ ಪ್ರಕಾರ ಜ್ಞಾನಾಧಿಪತಿ.
ಬುಧ ಗ್ರಹ ನೋಡಬೇಕಿದ್ದರೆ ನೀವು ಮುಂಜಾನೆ, ಕೋಳಿ ಕೂಗುವ ಮುನ್ನ... ಕ್ಷಮಿಸಿ, 5.40ಕ್ಕೆ ಅಲರಾಂ ಹೊಡೆಯುತ್ತಲೇ ಎದ್ದೇಳಬೇಕು. ಚಳಿಯಾಡನೆ ಯುದ್ಧ ಮಾಡಬೇಕು. ಜಯಿಸಬೇಕು. ನಂತರ ಅಂಗಳದಲ್ಲಿಯೋ, ಟೆರೇಸಿನಲ್ಲಿಯೂ ದುರ್ಬೀನು ಹಿಡಿದು ನಿಲ್ಲಬೇಕು. ಬುಧ ಕಿತ್ತಳೆ ಬಣ್ಣದ ಗ್ರಹ. ಆಗ್ನೇಯ ದಿಕ್ಕಿನಲ್ಲಿ ಬರೇ 10 ನಿಮಿಷಗಳ ಕಾಲ ಮಾತ್ರ ಇದು ಬರಿಗಣ್ಣಿಗೆ ಗೋಚರಿಸುವುದಂತೆ.
ಈ ಗ್ರಹ ಜುಲೈ 11ರಂದು ಮತ್ತೆ ಕಾಣಿಸಿಕೊಳ್ಳಲಿದೆ. ಆದರೆ ಆಗ ಮಳೆಗಾಲ ಬಂದು ಬಿಡುತ್ತದೆ. ಹೌದು . ಬೆಂಗಳೂರಿನ ಕೆಂಪು ಆಕಾಶದಲ್ಲಿ ಈ ಗ್ರಹ ಕಾಣಿಸಿಕೊಳ್ಳುವುದುಂಟಾ ...? ಎಂ. ಬಿ. ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ನಿರ್ದೇಶಕ ಡಾ. ಜಿ.ಎಸ್. ಡಿ. ಬಾಬು ಬುಧ ಗ್ರಹದ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿದ್ದಾರೆ. ಅವರಿಗೆ ಫೋನಾಯಿಸುತ್ತೀರಾ - 080- 2385956.
ಮಂಗಳೂರಿನ ಆಕಾಶದಲ್ಲೇನಿರುತ್ತದೆ ?
ಆಕಾಶ ಕಾಯಗಳ ವೀಕ್ಷಣೆಯ ಬಗ್ಗೆ ಮಂಗಳೂರು ಆಕಾಶವಾಣಿಯೂ ಆಸಕ್ತಿ ಹೊಂದಿರುವ ಹಾಗಿದೆ. ಫೆಬ್ರವರಿ 17ರ ಭಾನುವಾರದಂದು ರಾತ್ರಿ 8 ಗಂಟೆಗೆ ಆಕಾಶ ಕಾಯಗಳ ವೀಕ್ಷಣೆ ಕಾರ್ಯಕ್ರಮದ ನೇರಪ್ರಸಾರ ಮಾಡಲಿದೆ. ರೇಡಿಯೋಗೆ ಬ್ಯಾಟರಿ ಹಾಕಿಕೊಂಡು ನೀವು ಊರಿನ ಎತ್ತರದ ಜಾಗಕ್ಕೆ ಅಥವಾ ಟೆರೇಸಿಗೆ ಹೋಗಿ ರೇಡಿಯೋದಲ್ಲಿ ಉಲಿಯುವ ಮಾಹಿತಿ ಆಧರಿಸಿ ಆಕಾಶ ನೋಡಬೇಕು. ಪ್ರೊ। ಎಚ್.ಆರ್. ರಾಮಕೃಷ್ಣ ರಾವ್ ಆಕಾಶಕಾಯಗಳನ್ನು ಗುರುತಿಸಲು ನೆರವಾಗುವರು. ಮಂಗಳೂರಿನಲ್ಲಿ ಈಪಾಟಿ ಚಳಿ ಇಲ್ಲವಾದ್ದರಿಂದ ರಾತ್ರಿ ಒಂದು ಕೈ ನೋಡಿಯೇ ಬಿಡಬಹುದು.
ಆಕಾಶ ಕಾಯಗಳು ..ಅಥವಾ ನಿದ್ದೆ .. ಯಾವುದನ್ನು ಆಯ್ದುಕೊಳ್ಳುತ್ತೀರಿ ? ಏನಿವೇ, ಆಲ್ ದ ಬೆಸ್ಟ್.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications