ವಿಶ್ವ ರೇಬಿಸ್ ದಿನ 2021: ಇತಿಹಾಸ, ರೋಗ ಲಕ್ಷಣ, ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ
ಪ್ರತಿ ವರ್ಷವೂ ಸೆಪ್ಟೆಂಬರ್ 28 ರಂದು ವಿಶ್ವಾದ್ಯಂತ ರೇಬಿಸ್ ದಿನವನ್ನು ಆಚರಿಸಿ ರೇಬಿಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಸೆಪ್ಟೆಂಬರ್ 28ರಂದು ಮೊದಲ ರೇಬಿಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಫ್ರೆಂಚ್ ರಸಾಯನಶಾಸ್ತ್ರಜ್ಞ ಹಾಗೂ ಸೂಕ್ಷ್ಮ ಜೀವಿ ವಿಜ್ಞಾನಿ ಸರ್ ಲೂಯಿಸ್ ಪಾಶ್ಚರ್ ಅವರು ಮರಣ ಹೊಂದಿದ ದಿನ. ಅವರ ನೆನಪಿಗಾಗಿ ಈ ದಿನವನ್ನು ವಿಶ್ವ ರೇಬೀಸ್ ದಿನ ಎಂದು ಆಚರಣೆಗೆ ತರಲಾಯಿತು.
ಪ್ರತಿ ವರ್ಷ ಜಗತ್ತಿನಲ್ಲಿ ರೇಬಿಸ್ನಿಂದ ಸಂಭವಿಸುವ ಮರಣ 59 ಸಾವಿರ. ಅದರಲ್ಲಿ ಶೇ.90ರಷ್ಟು ಸಾವುಗಳು ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ವರದಿಯಾಗುತ್ತಿವೆ. ರೇಬಿಸ್ ಉಷ್ಣ ರಕ್ತದ ಪ್ರಾಣಿಗಳ ಗಂಭೀರ ಸೋಂಕು ಆಗಿದೆ.
ನರಮಂಡಲಕ್ಕೆ ದಾಳಿಯಿಡುವ ವೈರಸ್ ನಿಂದ ರೇಬಿಸ್ ಉಂಟಾಗುತ್ತದೆ. ಇದೊಂದು ಮಾರಣಾಂತಿಕ ರೋಗವಾಗಿದೆ. ರೋಗಿ ರೇಬಿಸ್ಗೆ ತುತ್ತಾದರೆ ಯಾವುದೇ ಚಿಕಿತ್ಸೆ ಫಲಕಾರಿಯಾಗುವುದಿಲ್ಲ.
ಸೋಂಕಿತ ಪ್ರಾಣಿಯೊಂದು ಇನ್ನೊಂದು ಪ್ರಾಣಿಯನ್ನು ಕಚ್ಚಿದಾಗ ಸೋಂಕಿತ ಪ್ರಾಣಿಯ ಜೊಲ್ಲಿನಲ್ಲಿರುವ ವೈರಸ್ ವರ್ಗಾವಣೆಗೊಳ್ಳುತ್ತದೆ. ಪ್ರಾಣಿಗಳು ತಮ್ಮ ಪಂಜ ಅಥವಾ ಉಗುರುಗಳನ್ನು ನೆಕ್ಕುತ್ತಿರುವುದರಿಂದ ಅವುಗಳು ಪರಚಿದರೂ ಅಪಾಯಕಾರಿಯಾಗುತ್ತದೆ. ಗಾಯ ಅಥವಾ ಗೀರು ಅಥವಾ ಬಾಯಿ ಮತ್ತು ಕಣ್ಣುಗಳ ಲೋಳೆಯ ಪದರಗಳ ಮೂಲಕ ರೇಬಿಸ್ ವೈರಸ್ ಶರೀರವನ್ನು ಪ್ರವೇಶಿಸುತ್ತದೆ.
ಅಲ್ಲಿಂದ ಅದು ಮಿದುಳು ಮತ್ತು ಮಿದುಳು ಬಳ್ಳಿ ಅಥವಾ ಬೆನ್ನುಹುರಿಗೆ ಸಾಗುತ್ತದೆ. ಸೋಂಕು ಮಿದುಳಿಗೆ ಹರಡಿದಾಗ ಅದು ಮಿದುಳಿನ ನರಗಳ ಮೂಲಕ ಶರೀರದಲ್ಲಿ ಇಳಿಯುತ್ತದೆ ಮತ್ತು ವಿವಿಧ ಅಂಗಾಂಗಗಳಿಗೆ ದಾಳಿಯಿಡುತ್ತದೆ. ಬಾವಲಿಗಳು ತಮ್ಮ ಮಲದ ಮೂಲಕ ರೇಬಿಸ್ ವೈರಸ್ನ್ನು ಹರಡುತ್ತವೆ. ಹೀಗಾಗಿ ಬಾವಲಿಗಳು ವಾಸವಿರುವ ಗುಹೆಗಳನ್ನು ಪ್ರವೇಶಿಸುವವರು ಅವು ಸೃಷ್ಟಿಸಿರುವ ವಾಯುದ್ರವವನ್ನು ಉಸಿರಾಡಿಸುವ ಮೂಲಕ ರೇಬಿಸ್ಗೆ ತುತ್ತಾಗುತ್ತಾರೆ.
ರೇಬಿಸ್ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಅದನ್ನು ತಡೆಯಲು ಎಲ್ಲ ಪ್ರಯತ್ನಗಳು ಅಗತ್ಯ. ಸಾಕುನಾಯಿ ಮತ್ತು ಬೆಕ್ಕುಗಳಿಗೆ ನಿಯಮಿತವಾಗಿ ರೇಬಿಸ್ ನಿರೋಧಕ ಚುಚ್ಚುಮದ್ದನ್ನು ಕೊಡಿಸಬೇಕು. ಅವುಗಳ ಆರೋಗ್ಯದ ಬಗ್ಗೆ ಪಶುವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಬೇಕು. ಬೀದಿನಾಯಿಗಳೊಂದಿಗೆ ಆಟವಾಡಲು ಮಕ್ಕಳಿಗೆ ಅವಕಾಶ ನೀಡಬಾರದು.
ಪ್ರತಿವರ್ಷ ಭಾರತದಲ್ಲಿ ರೇಬಿಸ್ನಿಂದ 20 ಸಾವಿರ ಸಂಭವಿಸುತ್ತದೆ ಎಂದು ಕೇಂದ್ರ ಸರಕಾರವೇ ಹೇಳಿಕೊಂಡಿದೆ. ಅಂಡಮಾನ್-ನಿಕೋಬಾರ್, ಲಕ್ಷದ್ವೀಪದಲ್ಲಿ ಮಾತ್ರ ಯಾವುದೇ ರೇಬಿಸ್ ಸಾವು ಘಟಿಸುತ್ತಿಲ್ಲ!
ರೇಬಿಸ್ನಿಂದ ಸಾವಿಗೀಡಾಗುವ ಮಕ್ಕಳಲ್ಲಿ ಹೆಚ್ಚಿನವರು 5ರಿಂದ 13 ವರ್ಷದೊಳಗಿನ ಮಕ್ಕಳು. ಶ್ವಾನಗಳ ಜತೆ ಆಟವಾಡುವುದು, ಅವುಗಳ ವರ್ತನೆ ಗೊತ್ತಿಲ್ಲದೇ ಕೆಣಕಲು ಹೋಗಿ ಕಚ್ಚಿಸಿಕೊಳ್ಳುವುದು ಮುಖ್ಯ ಕಾರಣ. ಹೀಗಾಗಿ ಶ್ವಾನಗಳ ವರ್ತನೆ ಮತ್ತು ಆಂಗಿಕ ಭಾಷೆ (ಸಿಟ್ಟು, ಹತಾಶೆ, ಸ್ನೇಹದ ವರ್ತನೆ) ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿದೆ. ರೇಬಿಸ್ ಕುರಿತು ಅರಿವು ಮೂಡಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 'ರಾಷ್ಟ್ರೀಯ ರೇಬಿಸ್ ನಿಯಂತ್ರಣ ಯೋಜನೆ' ರೂಪಿಸಿದೆ.
ರೇಬಿಸ್ಬಗ್ಗೆ ಒಂದಿಷ್ಟು ಮಾಹಿತಿ:
ವಿಶ್ವದೆಲ್ಲೆಡೆ ರೇಬಿಸ್ನಿಂದ ಆಗುವ ಮರಣದ ಸಂಖ್ಯೆಯಲ್ಲಿ ಭಾರತದವೊಂದರಲ್ಲೇ ಶೇ.36ರಷ್ಟು ಕಾಣಸಿಗುತ್ತದೆ. ರೇಬಿಸ್ ಎನ್ನುವ ವೈರಸ್ ಹೆಚ್ಚಾಗಿ ನಾಯಿ ಕಡಿತದಿಂದ ಹರಡುತ್ತದೆ. ಸಾಮಾನ್ಯವಾಗಿ ಸುಮಾರು ಶೇ.60 ಬೀದಿನಾಯಿಗಳಿಂದ ಮತ್ತು ಶೇ.40ರಷ್ಟು ಸಾಕು ನಾಯಿಗಳ ಕಡಿತದಿಂದ ಹರಡುತ್ತದೆ.
ಸಮಾಧಾನಕರ ಅಂಶವೆಂದರೆ ನಾಯಿ ಕಡಿತದ ತಕ್ಷಣ ಚಿಕಿತ್ಸೆ ದೊರೆತಲ್ಲಿ ಹೆಚ್ಚಿನ ಪ್ರಾಣಹಾನಿಯನ್ನು ತಡೆಗಟ್ಟಬಹುದಾಗಿದೆ. ನಾಯಿ ಕಚ್ಚಿದಾಗ ಎಂಜಲಿನ ಮೂಲಕ ರೋಗಿಯ ದೇಹವನ್ನು ಸೇರುವ ವೈರಸ್ ಸಾಮಾನ್ಯವಾಗಿ ನರಮಂಡಲವನ್ನು ಕ್ಷೀಣಿಸುತ್ತದೆ.
ರೇಬಿಸ್ ರೋಗ ತಡೆಗಟ್ಟುವುದು ಹೇಗೆ?
ಶೇ.60ರಷ್ಟು ಬೀದಿ ನಾಯಿಗಳು ಶೇ.40ರಷ್ಟು ಸಾಕು ನಾಯಿಗಳು ನಾಯಿ ಕಡಿತಕ್ಕೆ ಕಾರಣವಾಗುತ್ತದೆ. ಸಾಕು ನಾಯಿಗಳನ್ನು ಆಯ್ಕೆ ಮಾಡುವಾಗ ಹುಷಾರಾಗಿರಬೇಕು. ಪರಿಚಯವಿಲ್ಲದ ನಾಯಿಗಳಿಂದ ದೂರವಿರಬೇಕು. ಸಣ್ಣ ಮಕ್ಕಳನ್ನು ನಾಯಿಗಳ ಜತೆ ಕಳೆಯಲು ಬಿಡಬಾರದು. ನಾಯಿ ತಿನ್ನುತ್ತಿರುವಾಗ ಅಥವಾ ತನ್ನ ಮರಿಗಳಿಗೆ ಹಾಲುಣಿಸುವಾಗ ಅದರ ತಂಟೆಗೆ ಹೋಗಬಾರದು. ನಾಯಿಯನ್ನು ಮುದ್ದಿಸಬೇಕೆಂದರೆ ನಿಧಾನವಾಗಿ ನಾಯಿಯ ಬಳಿ ಸಾಗಬೇಕು. ನಾಯಿಯು ನಮ್ಮ ಬಳಿ ಬರುವಂತೆ ಆಕರ್ಷಿಸಬೇಕು.
ರೇಬಿಸ್ ರೋಗದ ಲಕ್ಷಣಗಳು:
ರೇಬಿಸ್ ವೈರಾಣುವಿನ ಸೋಂಕಿನಿಂದ ಬರುವ ರೇಬಿಸ್ ಮುಖ್ಯವಾಗಿ ಮೆದುಳಿನ ಜೀಚಕೋಶಗಳಿಗೆ ಊತವನ್ನುಂಟುಮಾಡಬಹುದು. ಮೊದಲು ಜ್ವರ ಬರಬಹುದು. ಬಳಿಕ ಗಾಯದ ಬಳಿ ಸಂಚೇದನೆ ಇಲ್ಲದಂತಾಗಬಹುದು. ತಡೆಗದುಕೊಳ್ಳಲಾಗದ ಉದ್ರೇಕ, ನಿಯಂತ್ರಣವಿಲ್ಲದ ಚಲನವಲನಗಳು, ನೀರಿನ ಭಯ, ದೇಹದ ಭಾಗಗಳ ಮೇಲೆ ನಿಯಂತ್ರಣ ತಪ್ಪುವಿಕೆ, ಪ್ರಜ್ಞೆ ತಪ್ಪುವುದು ಇವೆಲ್ಲವೂ ರೋಗದ ಲಕ್ಷಣಗಳಾಗಿವೆ.
ರೇಬಿಸ್ ಲಸಿಕೆ ಕುರಿತು ಮಾಹಿತಿ
ಲಸಿಕೆ ಮೂಲಕ ರೇಬಿಸ್ ರೋಗವನ್ನು ತಡೆಯಬಹುದು, ರೇಬಿಸ್ ಲಸಿಕೆಯನ್ನು ಸತ್ತ ರೇಬಿಸ್ನ ವೈರಾಣುವಿನಿಂದ ಮಾಡಲಾಗಿದ್ದು, ಲಸಿಕೆಯಿಂದ ರೇಬಿಸ್ ಬರುವ ಸಾಧ್ಯತೆ ಇಲ್ಲ. ರೋಗದ ಲಕ್ಷಣ ಕಾಣಿಸಿಕೊಂಡ ಬಳಿಕ ಈ ಲಸಿಕೆ ಪಡೆಯುವುದರಿಂದ ಉಪಯೋಗವಿಲ್ಲ. ನಾಯಿ ಕಚ್ಚುವ ಮದೊಲು ರೇಬಿಸ್ ತಡೆಗಟ್ಟಲೆಂದು ಹೆಚ್ಚಾಗಿ ಈ ರೀತಿ ನಾಯಿಗಳು ಮತ್ತು ರೇಬಿಸ್ ಹಡರುವ ಪ್ರಾಣಿಗಳ ಜತೆ ವ್ಯವಹರಿಸುವಾಗ 3 ಆಂಟಿ ರೇಬಿಸ್ ಲಸಿಕೆ ನೀಡಲಾಗುತ್ತದೆ.
ಪ್ರಥಮ ಚಿಕಿತ್ಸೆ ಕುರಿತು ಮಾಹಿತಿ
ನಾಯಿಯ ಕಡಿತ ಚರ್ಮಕ್ಕೆ ಮಾತ್ರ ಸೀಮಿತವಾಗಿದ್ದರೆ ಅದನ್ನು ಸಣ್ಣಗಾಯವೆಂದು ಪರಿಗಣಿಸಬಹುದು. ಗಾಯವನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದು,ಆಯಂಟಿಬಯಾಟಿಕ್ ಕ್ರೀಮ್ನ್ನು ಲೇಪಿಸಿ ಬ್ಯಾಂಡೇಜ್ ಬಟ್ಟೆಯನ್ನು ಸುತ್ತಬೇಕು.
ಗಾಯವು ಆಳವಾಗಿದ್ದರೆ ಅಥವಾ ಅಂಗಾಂಶಗಳಿಗೆ ಘಾಸಿಯಾಗಿದ್ದರೆ ಮತ್ತು ರಕ್ತಸ್ರಾವವಾಗುತ್ತಿದ್ದರೆ ಒತ್ತಡವನ್ನು ಹೇರಿ ರಕ್ತಸ್ರಾವವನ್ನು ನಿಲ್ಲಿಸಲು ಪ್ರಯತ್ನಿಸಬೇಕು ಹಾಗೂ ತಕ್ಷಣ ವೈದ್ಯಕೀಯ ನೆರವು ಪಡೆದುಕೊಳ್ಳಬೇಕು. ಗಾಯವಾದ ಜಾಗದಲ್ಲಿ ಊತ,ಕೆಂಪಾಗುವಿಕೆ ಅಥವಾ ದ್ರವ ಸೋರಿಕೆಯಂತಹ ಸೋಂಕಿನ ಲಕ್ಷಣಗಳು ಕಂಡು ಬಂದರಂತೂ ವೈದ್ಯರ ಭೇಟಿಯನ್ನು ವಿಳಂಬಿಸಲೇಬಾರದು.
ವ್ಯಕ್ತಿಯನ್ನು ಕಚ್ಚಿದ ನಾಯಿ ವಿಲಕ್ಷಣವಾಗಿ ವರ್ತಿಸುತ್ತಿದ್ದರೆ,ಬಾಯಿಯಿಂದ ನೊರೆ ಸುರಿಯುತ್ತಿದ್ದರೆ ಅಥವಾ ಯಾವುದೇ ಪ್ರಚೋದನೆ ಇಲ್ಲದಿದ್ದಾಗಲೂ ಕಚ್ಚಿದ್ದರೂ ವೈದ್ಯರನ್ನು ತಕ್ಷಣ ಭೇಟಿಯಾಗಬೇಕು. ಅವರು ರೇಬಿಸ್ ನಿರೋಧಕ ಲಸಿಕೆಯನ್ನು ತೆಗೆದುಕೊಳ್ಳುವಂತೆ ಸೂಚಿಸಬಹುದು.
ಈ ಹಿಂದಿನ ಚುಚ್ಚುಮದ್ದುಗಳಿಗಿಂತ ಆಧುನಿಕ ಲಸಿಕೆಗಳು ಹೆಚ್ಚು ಸುರಕ್ಷಿತವಾಗಿವೆ. ಕೇವಲ ಐದು ಚುಚ್ಚುಮದ್ದುಗಳು ಅಗತ್ಯವಾಗುತ್ತವೆ. ಹಿಂದಿನ 10 ವರ್ಷಗಳಲ್ಲಿ ಟೆಟಾನಸ್ ವಿರುದ್ಧ ರಕ್ಷಣೆಯನ್ನು ಪಡೆದುಕೊಂಡಿರದಿದ್ದರೆ ಟೆಟಾನಸ್ ಬೂಸ್ಟರ್ನ್ನು ಸಹ ತೆಗೆದುಕೊಳ್ಳಬೇಕು. ರೇಬಿಸ್ ನಿರೋಧಕ ಔಷಧಿಗಳ ಕುರಿತು ವೈದ್ಯರ ಸಲಹೆ ಪಡೆದುಕೊಳ್ಳುವುದು ಸದಾ ಸುರಕ್ಷಿತವಾಗಿದೆ.