keyboard_backspace

ನಿರುದ್ಯೋಗ ಭತ್ಯೆ ಕೊಡಲು ಸರ್ಕಾರಕ್ಕೆ ಏಕೆ ಮನಸ್ಸಿಲ್ಲ?

Google Oneindia Kannada News

ನಿರುದ್ಯೋಗದ ಭೂತ ಕಾಡುತ್ತಿದ್ದ ಭಾರತಕ್ಕೆ ಕೊರೊನಾ ವೈರಸ್ ಮಹಾಮಾರಿ ಮತ್ತಷ್ಟು ಆಘಾತ ನೀಡಿದೆ. ಕಳೆದಯ ನಾಲ್ಕೈದು ತಿಂಗಳಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಖಾಸಗಿ ಕಂಪೆನಿಗಳು, ಸಣ್ಣ ಪುಟ್ಟ ಉದ್ಯಮಗಳು ನಷ್ಟ ಭರಿಸಲಾಗದೆ ಕೆಲಸಗಾರರನ್ನು ಮನೆಗೆ ಕಳುಹಿಸಿವೆ. ಜತೆಗೆ ಸ್ವ ಉದ್ಯೋಗದಲ್ಲಿ ನೆಲೆ ಕಂಡುಕೊಂಡಿದ್ದವರೂ ದಿಕ್ಕೆಟ್ಟಿದ್ದಾರೆ.

ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆ ಎನಿಸಿಕೊಂಡಿರುವ ಭಾರತದ ಜಿಡಿಪಿ 2019ರ ವೇಳೆಗೆ 2.94 ಟ್ರಿಲಿಯನ್ ಡಾಲರ್. ಆದರೆ ಈ ಅತಿ ದೊಡ್ಡ ಆರ್ಥಿಕತೆಯ ದೇಶಗಳಲ್ಲಿ ಒಟ್ಟಾರೆ ಕಾರ್ಯಪಡೆಯ ಅಂದಾಜನ್ನು ಹೊಂದಿರದ ಏಕೈಕ ದೇಶವೂ ಹೌದು.

ಭಾರತದಲ್ಲಿ ನಿರುದ್ಯೋಗದ ಪ್ರಮಾಣದ ಬಗ್ಗೆ ಮಾತ್ರ ಅಧಿಕೃತ ಮಾಹಿತಿ ಸಿಗುತ್ತದೆ. ಆದರೆ ಒಟ್ಟಾರೆ ಉದ್ಯೋಗಿಗಳು, ಎಷ್ಟುಜನರಿಗೆ ಸಾಮಾಜಿಕ ಭದ್ರತಾ ಸೌಲಭ್ಯವಿದೆ, ಎಷ್ಟು ಮಂದಿ ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡಿದ್ದಾರೆ ಮತ್ತು ಎಷ್ಟು ಜನರಿಗೆ ನಿರುದ್ಯೋಗ ಭತ್ಯೆ ಸಿಗುತ್ತಿದೆ ಎಂಬುದಕ್ಕೆ ಅಧಿಕೃತ ದಾಖಲೆಗಳಿಲ್ಲ ಎಂದು 'ಬಿಜಿನೆಟ್ ಟುಡೆ' ವರದಿ ಹೇಳಿದೆ. ಮುಂದೆ ಓದಿ.

ನಿರುದ್ಯೋಗ ಭತ್ಯೆ ನಿಯಮ ಸಡಿಲ

ನಿರುದ್ಯೋಗ ಭತ್ಯೆ ನಿಯಮ ಸಡಿಲ

ಲಾಕ್ ಡೌನ್ ಕಾರಣದಿಂದ ಉದ್ಯೋಗ ಕಳೆದುಕೊಂಡವರಿಗೆ ನಿರುದ್ಯೋಗ ಭತ್ಯೆ ನೀಡುವ ನಿಯಮಗಳನ್ನು ಸಡಿಲಗೊಳಿಸುವುದಾಗಿ ಆಗಸ್ಟ್ 20ರಂದು ಸರ್ಕಾರ ಪ್ರಕಟಿಸಿದೆ. ಆದರೆ ಇದನ್ನು ಎಂಪ್ಲಾಯೀಸ್ ಸ್ಟೇಟ್ ಇನ್ಶೂರೆನ್ಸ್ ಕಾರ್ಪೊರೇಷನ್‌ನ (ಇಎಸ್‌ಐಸಿ) ಡೇಟಾಬೇಸ್‌ನಲ್ಲಿರುವ ವಿಮೆದಾರನಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಸಂಘಟಿತ ವಲಯಕ್ಕೆ ಸೇರಿರುವ ಒಟ್ಟಾರೆ ಉದ್ಯೋಗಿಗಳಲ್ಲಿ ಅವರ ಪ್ರಮಾಣ ಕೇವಲ ಶೇ 6. ಈ ಆದೇಶದ ಕುರಿತಾದ ಸರ್ಕಾರದ ಗೆಜೆಟ್ ನೋಟಿಫಿಕೇಷನ್ ಮುಂದಿನ ತಿಂಗಳು ಹೊರಬರಲಿದೆ.

ವಿಮೆದಾರ ನೌಕರರಿಗೆ ಅವಕಾಶ

ವಿಮೆದಾರ ನೌಕರರಿಗೆ ಅವಕಾಶ

ಹೊಸ ನಿರುದ್ಯೋಗ ಭತ್ಯೆ ನೀಡುವ ಯೋಜನೆಯನ್ನು ಅಟಲ್ ಬೀಮಿಟ್ ವ್ಯಕ್ತಿ ಕಲ್ಯಾಣ್ ಯೋಜನಾ (ಎಬಿವಿಕೆಜೆ) ಎಂದು ಕರೆಯಲಾಗುತ್ತದೆ. ಈ ಯೋಜನೆ 2018ರ ಡಿ. 14ರಂದು ಜಾರಿಗೆ ಬಂದಿತ್ತು. ಬೀಮಿಟ್ ವ್ಯಕ್ತಿ ಎಂದರೆ ವಿಮೆದಾರ.

ಕಾರ್ಮಿಕರ ಸಂಸತ್ತಿನ ಸ್ಥಾಯಿ ಸಮಿತಿ 2020ರ ಜುಲೈನಲ್ಲಿ ನೀಡಿದ ವರದಿ ಪ್ರಕಾರ ಇಎಸ್‌ಐಸಿ ಡೇಟಾಬೇಸ್‌ನಲ್ಲಿ 34.9 ಮಿಲಿಯನ್ ವಿಮೆದಾರ ವ್ಯಕ್ತಿಗಳಿದ್ದಾರೆ. ಆದರೆ ಈ ಸಂಖ್ಯೆಯನ್ನು ಎರಡು ಕಾರಣಗಳಿಂದ ನಾವು ನಂಬಲು ಸಾಧ್ಯವಾಗದು.

ಎರಡು ಕಾರಣಗಳು ಇಲ್ಲಿವೆ

ಎರಡು ಕಾರಣಗಳು ಇಲ್ಲಿವೆ

ಒಂದನೆಯದಾಗಿ, ಇಎಸ್‌ಐಸಿ ಡೇಟಾ ಬೇಸ್‌ನಲ್ಲಿ ನಕಲುಗಳಿದ್ದರೆ (ಉದ್ಯೋಗಿ ಕೆಲಸ ಬದಲಿಸಿದ್ದರೆ), ಅರ್ಹತೆ ಕಳೆದುಕೊಂಡಿರುವವರು (ಅಧಿಕ ವೇತನ ಪಡೆದುಕೊಳ್ಳುತ್ತಿದ್ದರೆ) ಅಥವಾ ಮೃತಪಟ್ಟಿದ್ದರೆ ಅವರು ನಿರುದ್ಯೋಗ ಭತ್ಯೆಗೆ ಅರ್ಹರಾಗುವುದಿಲ್ಲ.

ಎರಡನೆಯದು, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧಿಕೃತ ವೆಬ್‌ಸೈಟ್ ಪ್ರಕಾರ ದೇಶದಲ್ಲಿನ ಒಟ್ಟಾರೆ ಕೆಲಸಗಾರರ ಸಂಖ್ಯೆ ಅಂದಾಜು 465 ಮಿಲಿಯನ್. ಅದರಲ್ಲಿ 28 ಮಿಲಿಯನ್ (ಶೇ 6) ಸಂಘಟಿತ ವಲಯದಲ್ಲಿದ್ದಾರೆ. ಉಳಿದ 437 ಮಿಲಿಯನ್ (ಶೇ 94) ಅಸಂಘಟಿತ ವಲಯದಲ್ಲಿದ್ದಾರೆ.

ಶೇ 94ರಷ್ಟು ಜನರ ಕಥೆಯೇನು?

ಶೇ 94ರಷ್ಟು ಜನರ ಕಥೆಯೇನು?

ಸಂಘಟಿತ ವಲಯವು ಸರ್ಕಾರಿ ಉದ್ಯೋಗಿಗಳನ್ನು (ರಾಜ್ಯ ಮತ್ತು ಕೇಂದ್ರ), ಕಾರ್ಪೊರೇಟ್ ವಲಯದ ನೌಕರರನ್ನು ಮತ್ತು ಇಎಸ್‌ಐಸಿ ಡೇಟಾಬೇಸ್‌ನಲ್ಲಿರುವವರನ್ನು ಸಹ ಒಳಗೊಂಡಿರುತ್ತದೆ. ಇಎಸ್‌ಐಸಿಯಲ್ಲಿನ ವಿಮೆದಾರರ ಸಂಖ್ಯೆ ಸಂಘಟಿತ ವಲಯದ ಉದ್ಯೋಗಿಗಳ ಒಟ್ಟು ಸಂಖ್ಯೆಯನ್ನು (28 ಮಿಲಿಯನ್) ಮೀರಬಾರದು.

ಇಎಸ್‌ಐಸಿ ಡೇಟಾಬೇಸ್ 10 ಅಥವಾ ಅದಕ್ಕಿಂತ ಹೆಚ್ಚು 21,000 ಮಾಸಿಕ ವೇತನದವರೆಗಿನ ಉದ್ಯೋಗಿಗಳನ್ನು ಹೊಂದಿರುವ ಫ್ಯಾಕ್ಟರಿಗಳನ್ನು ಒಳಗೊಳ್ಳುತ್ತದೆ. ಅವರು ಸಂಘಟಿತ ವಲಯದ ಕಾರ್ಮಿಕರು. ಹಾಗಾದರೆ ಅಸಂಘಟಿತ ವಲಯದ ಉಳಿದ ಶೇ 94 ನೌಕರರ ಕಥೆಯೇನು? ಅವರಿಗೆ ನಿರುದ್ಯೋಗ ಭತ್ಯೆ ಸಿಗುವುದಿಲ್ಲ.

ಉದ್ಯೋಗ ಖಾತ್ರಿ ಯೋಜನೆ

ಉದ್ಯೋಗ ಖಾತ್ರಿ ಯೋಜನೆ

ಇಎಸ್‌ಐಸಿಯ ಹೊರತಾಗಿ ನಿರುದ್ಯೋಗ ಭತ್ಯೆ ಒದಗಿಸುವ ಮತ್ತೊಂದು ಕಾನೂನಾತ್ಮಕ ಅವಕಾಶವಿದೆ. ಅದು. ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ. ಎಂಜಿಎನ್‌ಆರ್‌ಇಜಿಎಸ್ ಕೆಲಸಗಾರರನ್ನು ಸಾಮಾನ್ಯ ಮಾನ್ಯತೆಯ ಕೆಲಸಗಾರರು ಎಂದು ಪರಿಗಣಿಸುವುದಿಲ್ಲ. ಹೀಗಾಗಿ ಅವರು ಉದ್ಯೋಗಿಗಳ ಲೆಕ್ಕದ ವ್ಯಾಪ್ತಿಯಲ್ಲಿ ಇರುವುದಿಲ್ಲ. ಅವರಲ್ಲಿಯೂ ಎಷ್ಟು ಮಂದಿಗೆ ನಿರುದ್ಯೋಗ ಭತ್ಯೆ ಸಿಗುತ್ತಿದೆ ಎನ್ನುವ ಅಧಿಕೃತ ಅಂದಾಜು ಇಲ್ಲ.

ಮೂರು ತಿಂಗಳಿನಿಂದ ನಿರುದ್ಯೋಗಿಗಳಾಗಿರುವ ವಿಮೆದಾರ ಕೆಲಸಗಾರರು ಜೀವಮಾನದಲ್ಲಿ ಒಮ್ಮೆ ಮಾತ್ರ ಗರಿಷ್ಠ 90 ದಿನಗಳವರೆಗೆ ನಿರುದ್ಯೋಗ ಭತ್ಯೆ ಪಡೆದುಕೊಳ್ಳಲು ಅಟಲ್ ಬೀಮಿಟ್ ವ್ಯಕ್ತಿ ಕಲ್ಯಾಣ್ ಯೋಜನೆಯಲ್ಲಿ ಅವಕಾಶವಿದೆ. ಅವರು ಇಎಸ್‌ಐಸಿಗೆ ಕಳೆದ ಎರಡು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ವಿಮೆ ಪಾವತಿಸಿದ್ದರೆ ಮಾತ್ರವೇ ಅವರ ಎರಡು ವರ್ಷದ ದೈನಂದಿನ ಸಂಪಾದನೆಯ ಸರಾಸರಿಯ ಶೇ 25ರಷ್ಟು ಪಡೆದುಕೊಳ್ಳುತ್ತಾರೆ.

ಭತ್ಯೆ ಪಡೆದವರೆಷ್ಟು ಮಂದಿ?

ಭತ್ಯೆ ಪಡೆದವರೆಷ್ಟು ಮಂದಿ?

2018ರ ಡಿಸೆಂಬರ್‌ನಿಂದ ಈ ಯೋಜನೆಯಡಿ ಇದುವರೆಗೂ 262 ಮಂದಿ ಮಾತ್ರ ಒಟ್ಟು 25 ಲಕ್ಷ ರೂ ಹಣವನ್ನು ನಿರುದ್ಯೋಗ ಭತ್ಯೆ ರೂಪದಲ್ಲಿ ಪಡೆದುಕೊಂಡಿದ್ದಾರೆ ಎನ್ನುತ್ತದೆ ಇಎಸ್‌ಐಸಿ ದಾಖಲೆಗಳು. 2020ರ ಆಗಸ್ಟ್ 20ರಂದು ಈ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ತಂದು ಲಾಕ್ ಡೌನ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡವರನ್ನು ಇದರ ವ್ಯಾಪ್ತಿಗೆ ತರಲಾಗಿದೆ. ಇದು ಡಿ.31ರವರೆಗೂ ಮುಂದುವರಿಯಲಿದೆ. ಈಗಿನ ನಿಯಮಗಳಂತೆಯೇ ಹೊಸ ಫಲಾನುಭವಿಗಳ ಹಿಂದಿನ ಎರಡು ವರ್ಷದವರೆಗಿನ ದಿನದ ಸಂಪಾದನೆಯ ಶೇ 50ರಷ್ಟನ್ನು ನೀಡಲಾಗುತ್ತದೆ.

ಲಾಕ್ ಡೌನ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡ ಅಂದಾಜು 8.04 ಮಿಲಿಯನ್ ಜನರ ಪೈಕಿ 3.03 ಮಿಲಿಯನ್ ಜನರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಇಎಸ್‌ಐಸಿ ಅಧಿಕಾರಿಗಳು ಅಂದಾಜಿಸಿದ್ದಾರೆ. ಉದ್ಯೋಗ ನಷ್ಟದ ಅವರ ಅಂದಾಜು (8.04 ಮಿಲಿಯನ್) ಏಪ್ರಿಲ್-ಮೇ ತಿಂಗಳಿನಲ್ಲಿ ತಪ್ಪಿ ಹೋಗಿರುವ ಅವರ ಇಎಸ್‌ಐಸಿ ಡೇಟಾಬೇಸ್‌ನ ಕೊಡುಗೆಯ ಮೇಲೆ ಮಾಡಲಾಗಿದೆ.

ಅಂದರೆ ದೇಶದ 465 ಮಿಲಿಯನ್ ಉದ್ಯೋಗಿಗಳಲ್ಲಿನ ಶೇ 37ರಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದು, ಅವರಲ್ಲಿ 0.64% ಮಾತ್ರ ನಿರುದ್ಯೋಗ ಭತ್ಯೆ ಪಡೆದುಕೊಳ್ಳುತ್ತಾರೆ. ಹಾಗಾದರೆ ಅವರಿಗೆ ಸಿಗಬಹುದಾದ ಭತ್ಯೆ ಎಷ್ಟು?

ಭತ್ಯೆ ಸಿಕ್ಕರೂ ಸಿಗುವುದು ಅಲ್ಪ

ಭತ್ಯೆ ಸಿಕ್ಕರೂ ಸಿಗುವುದು ಅಲ್ಪ

ವಿಮದಾರ ನೌಕರ ಮಾಸಿಕ 21,000 ರೂ ಸಂಬಳ ಪಡೆಯುತ್ತಿದ್ದರೆ (ಇಎಸ್‌ಐನ ಗರಿಷ್ಠ ಮಿತಿ) ದಿನಕ್ಕೆ 345 ರೂ.ದಂತೆ ಭತ್ಯೆ ಹಂಚಿಕೆಯಾಗುತ್ತದೆ. ಅದರಲ್ಲಿ 24 ತಿಂಗಳ ಒಟ್ಟಾರೆ ಸಂಪಾದನೆಯ ಶೇ 50ರಷ್ಟನ್ನು 730 ದಿನಗಳಿಂದ ವಿಭಜಿಸಲಾಗುತ್ತದೆ. ಅಂದರೆ ಒಬ್ಬ ನೌಕರ 90 ದಿನಗಳಿಗೆ ಗರಿಷ್ಠ 31,068 ಪಡೆದುಕೊಳ್ಳಬಹುದಾಗಿದೆ.

ಹೀಗೆ ನೀಡಲಾಗುವ ನಿರುದ್ಯೋಗ ಭತ್ಯೆಗಳ ವಿಚಾರದಲ್ಲಿ ಅನೇಕ ಗೊಂದಲಗಳಿವೆ. ಆದರೆ ಶೇ 94ರಷ್ಟು ದೇಶದ ಉದ್ಯೋಗಿಗಳು ನೌಕರಿ ಕಳೆದುಕೊಂಡರೆ ನಿರುದ್ಯೋಗ ಭತ್ಯೆಯನ್ನು ಪಡೆದುಕೊಳ್ಳಲು ಯಾವ ರೀತಿಯೂ ಅವಕಾಶವಿಲ್ಲ ಮತ್ತು ಸರ್ಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಸ್ಪಷ್ಟ.

English summary
Why Indian government is not willing to provide enemployment allowance who lost their jobs for various reasons?
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X