keyboard_backspace

ಗುಜರಿ ನೀತಿಯ ಬಗ್ಗೆ ಜನ ಸಾಮಾನ್ಯರು ತಿಳಿದುಕೊಳ್ಳಲೇಬೇಕಾದ ಸಂಗತಿಗಳು

Google Oneindia Kannada News

ಬೆಂಗಳೂರು, ಆ. 31: ಪರಿಸರಕ್ಕೆ ಹಾನಿಯುಂಟು ಮಾಡುವ ದೇಶದ ಹಳೇ ವಾಹನಗಳನ್ನು ನಾಶ ಪಡಿಸುವ ಇಲ್ಲವೇ ಗುಜರಿಗೆ ಹಾಕುವ ಬಗ್ಗೆ ಕೇಂದ್ರ ಸರ್ಕಾರ ಹೊಸ ಗುಜರಿ ನೀತಿಗೆ ಚಾಲನೆ ನೀಡಿದೆ. ಈ ಹೊಸ ಗುಜರಿ ನೀತಿಯ ಪ್ರಕಾರ ಹದಿನೈದು ವರ್ಷ ಚಾಲನೆಗೊಂಡಿರುವ ವಾಣಿಜ್ಯ ವಾಹನ, 20 ವರ್ಷ ತುಂಬಿದ ವೈಟ್ ಬೋರ್ಡ್ ವಾಹನಗಳನ್ನು ಗುಜರಿಗೆ ಹಾಕಬೇಕು. ಇನ್ನೂ ಗುಜರಿಗೆ ಹಾಕುವುದರಿಂದ ಜನರಿಗೆ ಏನು ಲಾಭ ? ಯಾರಿಗೆ ನಷ್ಟ ? ಗುಜರಿಗೆ ಹಾಕುವ ಬಗ್ಗೆ ಹೊಸ ವಾಹನ ನೀತಿಯಲ್ಲಿರುವ ನಿಯಮಗಳ ವಿವರ ಇಲ್ಲಿದೆ.

ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ಕೇಂದ್ರ ಸಾರಿಗೆ ಮಂತ್ರಿ ನಿತಿನ್ ಗಡ್ಕರಿ "ನೂತನ ಗುಜರಿ ನೀತಿ'' ಯನ್ನು ಲೋಕಸಭೆಯಲ್ಲಿ ಅನುಮೋದನೆಗಾಗಿ ಕಾಯುತ್ತಿದೆ ಎಂದು ಹೇಳಿದ್ದರು. ದೇಶದ ಮಹತ್ವದ ಯೋಜನೆ ಎಂದು ಬಣ್ಣಿಸಿದ್ದರು. ವಾಯು ಮಾಲಿನ್ಯ ನಿಯಂತ್ರಣ ಜತೆಗೆ ದೇಶದ ಆಟೋ ಮೊಬೈಲ್ ಕ್ಷೇತ್ರದ ಪ್ರಗತಿಗೆ ಈ ಯೋಜನೆ ಮಹತ್ವದ ಕಾಣಿಕೆ ನೀಡಲಿದೆ. ಜತೆಗೆ ರಸ್ತೆ ಸುರಕ್ಷತೆಯಲ್ಲೂಕ್ರಾಂತಿಕಾರಕ ಬದಲಾವಣೆ ಆಗಲಿದೆ ಎಂದು ಹೇಳಿದ್ದರು. ಇದಕ್ಕೂ ಮೊದಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಗುಜರಿ ನೀತಿಯನ್ನು ಪ್ರಸ್ತಾಪಿಸಿದ್ದರು.

ಏನಿದು ಗುಜರಿ ನೀತಿ: ದೇಶದಲ್ಲಿ ವರ್ಷಗಳಿಂದ ಚಾಲನೆಯಲ್ಲಿರುವ ಹಳೇ ವಾಹನಗಳನ್ನುನಾಶ ಪಡಿಸುವುದು. ಈ ಮೂಲಕ ಪರಿಸರ ಸಂರಕ್ಷಣೆ ಮಾಡವುದು. ಆಟೋ ಮೊಬೈಲ್ ಕ್ಷೇತ್ರದ ಪ್ರಗತಿಗೆ ಅವಕಾಶ ಕೊಡುವ ಜತೆಗೆ ರಸ್ತೆ ಸುರಕ್ಷತೆ ಕಾಪಾಡುವುದು ಈ ಯೋಜನೆಯ ಉದ್ದೇಶ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಈ ಗುಜರಿ ನೀತಿಯಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಹೊಸ ನೀತಿ ಜಾರಿಗೆ ತರಲಾಗಿದೆ. ದೇಶದ ರಸ್ತೆಗಳಲ್ಲಿ ಸಂಚರಿಸುತ್ತಿವ ವಾಣಿಜ್ಯ ವಾಹನಗಳು ಹದಿನೈದು ವರ್ಷದ ಬಳಿಕ ಅವುಗಳ ಅರ್ಹತೆ ಬಗ್ಗೆ ತಪಾಸಣೆ ನಡೆಸಿ ಗುಜರಿಗೆ ಹಾಕುವುದು. ವಾಹನ ಖರೀದಿಸಿದ ಎಂಟು ವರ್ಷದ ಬಳಿಕ ಹದಿನೈದು ವರ್ಷದ ವರೆಗೂ ವಾಣಿಜ್ಯ ವಾಹನಗಳಿಗೆ ರಸ್ತೆ ತೆರಿಗೆಯ ಶೇ. 10 ರಿಂದ 15 ಪರ್ಸೆಟ್ ಗ್ರಿನ್ ಟ್ಯಾಕ್ಸ್ ವಿಧಿಸಲಾಗುತ್ತದೆ ಮತ್ತು ಸ್ವಂತಕ್ಕೆ ಬಳಸುವ ವೈಟ್ ಬೋರ್ಡ್ ವಾಹನಗಳಿಗೆ ಹದಿನೈದು ವರ್ಷದ ಬಳಿಕ ಶೇ. 50 ರಷ್ಟು ಗ್ರಿನ್ ಟ್ಯಾಕ್ಸ್ ವಿಧಿಸುವ ಪ್ರಸ್ತಾವನೆ ಹೊಂದಿದೆ.

ಈ ಮೂಲಕ ಹಳೇ ವಾಹನಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕುವಂತಹ ವಾತಾವರಣ ನಿರ್ಮಿಸುವ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೆ ತರಲಾಗಿದೆ. ಹೊಸದಾಗಿ ಖರೀದಿಸುವ ವಾಹನವು ನೋಂದಣಿಯಾದ ದಿನದಿಂದ ಹದಿನೈದು ವರ್ಷ ಮಾತ್ರ ಚಾಲನೆಗೆ ಅವಕಾಶ ನೀಡಲಾಗುತ್ತದೆ. ಆನಂತರ ಗುಜರಿಗೆ ಹಾಕಬೇಕು. ಸರ್ಕಾರಿ ವಾಹನಗಳು ಕೂಡ ಈ ಯೋಜನೆ ವ್ಯಾಪ್ತಿಗೆ ಒಳಪಡಲಿವೆ. ಈ ಯೋಜನೆ 2022 ಏಪ್ರಿಲ್ 1 ರಿಂದ ವಾಣಿಜ್ಯ ವಾಹನಗಳಿಗೆ ಅನ್ವಯವಾಗಲಿದೆ. 2023 ಏಪ್ರಿಲ್‌ನಿಂದ ವೈಟ್ ಬೋರ್ಡ್ ಸ್ವಂತ ವಾಹನಗಳಿಗೆ ಅನ್ವಯವಾಗಲಿದೆ.

2023 ರಿಂದ ಹಳೇ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆ

2023 ರಿಂದ ಹಳೇ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆ

ಖರೀದಿಸಿದ ಹದಿನೈದು ವರ್ಷದ ಬಳಿಕ ವಾಣಿಜ್ಯ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ. ಸ್ವಂತ ವಾಹನಗಳಿಗೆ 20 ವರ್ಷದ ಬಳಿಕ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ. ವಾಹನ ತಪಾಸಣೆಗೆಂದೇ ಪ್ರತಿ ನೂರು ಕಿ.ಮೀ. ದೂರದಲ್ಲಿ ಆಟೋ ಮೇಟೆಟ್ ಫಿಟ್ನೆಸ್ ಸೆಂಟರ್ ತೆರೆಯಲಾಗುತ್ತದೆ. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ತೆರೆಯುವ ಈ ಫಿಟ್ನೆಸ್ ಸೆಂಟರ್‌ನಲ್ಲಿ ವಾಹನಗಳನ್ನು ಅಂತಾರಾಷ್ಟ್ರೀಯ ಮಾನದಂಡ ಇಟ್ಟುಕೊಂಡು ತಪಾಸಣೆ ಮಾಡಲಾಗುತ್ತೆ. ಈ ಫಿಟ್ನೆಸ್ ಸೆಂಟರ್‌ನಲ್ಲಿ ಬ್ರೇಕ್ ಸಿಸ್ಟಮ್, ಮಾಲಿನ್ಯದ ಪ್ರಮಾಣ, ವಾಹನ ಚಾಲನೆಯ ಸುರಕ್ಷತೆ ಮಾನದಂಡ ಇಟ್ಟುಕೊಂಡು ಪರೀಕ್ಷೆ ನಡೆಸಲಾಗುತ್ತದೆ. ಈಗಾಗಲೇ 26 ಸ್ವಯಂ ಚಾಲಿತ ಪರೀಕ್ಷಾ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ಏಳು ಕೇಂದ್ರಗಳು ಕಾರ್ಯ ನಿರ್ವಹಣೆಗೆ ಸಜ್ಜಾಗಿವೆ.

ಮೊದಲ ಹಂತದಲ್ಲಿ 75 ಕೇಂದ್ರ ಸ್ಥಾಪನೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ 450 ರಿಂದ 500 ಕೇಂದ್ರಗಳನ್ನು ದೇಶದಲ್ಲಿ ಸ್ಥಾಪನೆ ಮಾಡಲಾಗುತ್ತದೆ. 2022 ಏಪ್ರಿಲ್ 1 ರಿಂದ ಸರ್ಕಾರದ ವಾಹನಗಳ ತಪಾಸಣೆ ನಡೆಸಲಾಗುತ್ತದೆ. 2023 ಏಪ್ರಿಲ್‌ನಿಂದ ಗೂಡ್ಸ್ ವಾಹನಗಳ ತಪಾಸಣೆ ಅರಂಭವಾಗಲಿದೆ. ಸ್ವಂತ ವಾಹನಗಳ ತಪಾಸಣೆ 2024 ಜೂನ್‌ನಿಂದ ಪ್ರಾರಂಭವಾಗಲಿದೆ. ಹೀಗೆ ಹಂತ ಹಂತವಾಗಿ ದೇಶದ ಎಲ್ಲಾ ವಾಹನಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕೇಂದ್ರ ಸಾರಿಗೆ ಮಂತ್ರಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 10 ಮಿಲಿಯನ್ ವಾಹನ ( 1 ಕೋಟಿ ) ತುರ್ತು ಗುಜರಿಗೆ ಸೇರಲಿವೆ. ವಾಣಿಜ್ಯ ವಾಹನಗಳ ಫಿಟ್ನೆಸ್ ಪರೀಕ್ಷೆ 2023 ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ಗುಜರಿ ನೀತಿಯಿಂದ ಪರಿಸರ ಮಾಲಿನ್ಯ ನಿಯಂತ್ರಣ

ಗುಜರಿ ನೀತಿಯಿಂದ ಪರಿಸರ ಮಾಲಿನ್ಯ ನಿಯಂತ್ರಣ

ದೇಶದಲ್ಲಿ ಜಾರಿಗೆ ಬರುತ್ತಿರುವ ಗುಜರಿ ನೀತಿ ಬಹು ಚರ್ಚೆಗೆ ನಾಂದಿ ಹಾಡಿದೆ. ಹತ್ತರಿಂದ ಹನ್ನೆಡು ವರ್ಷ ಚಾಲನೆಗೊಂಡಿರುವ ವಾಹನಗಳಿಂದ ಆಗುತ್ತಿರುವ ಮಾಲಿನ್ಯದಿಂದ ಪರಿಸರ ಹಾಳಾಗುತ್ತಿದೆ. ರಸ್ತೆ ಸುರಕ್ಷತಾ ವಿಚಾರದಲ್ಲೂ ದೊಡ್ಡ ಸಮಸ್ಯೆ ಎದುರಾಗಿದೆ. ಭಾರತದಲ್ಲಿ 51 ಲಕ್ಷ ಲಘು ವಾಹನಗಳು ( ಕಾರು, ಜೀಪು ) 20 ವರ್ಷಕ್ಕೂ ಹೆಚ್ಚು ಅವಧಿ ಮೀರಿದವು. 34 ಲಕ್ಷ ವಾಹನಗಳಿಗೆ ಹದಿನೈದು ವರ್ಷ ಮುಗಿದಿದೆ. 17 ಲಕ್ಷ ಮಧ್ಯಮ ವರ್ಗದ ವಾಹನಗಳು ಹದಿನೈದು ವರ್ಷ ಅವಧಿ ಮುಗಿದರೂ ಯಾವ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೇ ರಸ್ತೆಗಳಲ್ಲಿ ಓಡಾಡುತ್ತಿವೆ. ಇಂತಹ ಹಳೇ ವಾಹನಗಳಿಗೆ ಮುಕ್ತಿ ಕೊಡಿಸಿ ಪರಿಸರ ಮಾಲಿನ್ಯ ತಡೆಗಟ್ಟುವ ಜತೆಗೆ ರಸ್ತೆ ಸುರಕ್ಷತೆ ಕಾಪಾಡುವುದು ಈ ಯೋಜನೆಯ ಮೂಲ ಉದ್ದೇಶ. ಇದರಿಂದ ಆಟೋ ಮೊಬೈಲ್ ಕ್ಷೇತ್ರದ ಪ್ರಗತಿಕೊಂಡು ಉದ್ಯೋಗ ದಲ್ಲಿ ಕ್ರಾಂತಿಕಾರಿಯಾಗಲಿದೆ ಎಂದೇ ಅಂದಾಜಿಸಲಾಗಿದೆ.

ವಾಹನ ಮಾಲೀಕರಿಗೆ ಬಂಬರ್ ಆಫರ್

ವಾಹನ ಮಾಲೀಕರಿಗೆ ಬಂಬರ್ ಆಫರ್

ಗುಜರಿ ನೀತಿ ಜಾರಿಗೆ ಬಂದರೆ, ಹಳೇ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿ ಮಾಡಲು ಶೇ. 4. ರಿಂದ 6 ರಷ್ಟು ನೂತನ ವಾಹನಕ್ಕೆ ಡಿಸ್ಕೌಂಟ್ ಸಿಗಲಿದೆ. ಸ್ವಂತ ವಾಹನಗಳಿಗೆ ರಸ್ತೆ ತೆರಿಗೆಯಲ್ಲಿ ಶೇ. 25 ರಷ್ಟು ರಿಯಾಯಿತಿ ನೀಡುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ವಾಣಿಜ್ಯ ವಾಹನಗಳಿಗೆ ಶೇ. 15 ರಷ್ಟು ರಸ್ತೆ ತೆರಿಗೆಯಲ್ಲಿ ರಿಯಾಯಿತಿ ಲಭ್ಯವಾಗಲಿದೆ. ಇದರ ಜತೆಗೆ ವಾಹನ ಉತ್ಪಾದಕರು ಕೂಡ ಹೊಸ ವಾಹನ ಖರೀದಿ ವೇಳೆ ಶೇ. 5 ರಷ್ಟು ಡಿಸ್ಕೌಂಟ್ ನೀಡಲಿದ್ದಾರೆ. ಡಿಸ್ಕೌಂಟ್ ಪಡೆಯಬೇಕಾದರೆ ಹಳೇ ವಾಹನ ಗುಜರಿಗೆ ಹಾಕಿರುವ ಬಗ್ಗೆ ಸರ್ಟಿಫಿಕೇಟ್ ತೋರಿಸಬೇಕು.

ಇದರ ಜತೆಗೆ ಗುಜರಿ ಉಪಕರಣಗಳ ಬೆಲೆ ತೀರಾ ಕಡಿಮೆಯಾಗಲಿದ್ದು, ಹೊಸ ವಾಹನಗಳ ಉತ್ಪಾದನೆ ವೆಚ್ಚ ಕೂಡ ಕಡಿಮೆಯಾಗಲಿದೆ. ಇದರಿಂದ ದೇಶದಲ್ಲಿ 3.70 ಕೋಟಿ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಅಂದಾಜಿಸಲಾಗಿದೆ. ನೂತನ ಗುಜರಿ ನೀತಿಯಿಂದ 35 ಲಕ್ಷ ಮಂದಿಗೆ ಉದ್ಯೋಗ ಸಿಗಲಿದ್ದು, 10 ಸಾವಿರ ಕೋಟಿ ರೂ. ಬಂಡವಾಳ ಹರಿದು ಬರಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ 30 ಸಾವಿರದಿಂದ 40 ಸಾವಿರ ಕೋಟಿ ರೂ. ಹಣ ಜಿಎಸ್ ಟಿ ರೂಪದಲ್ಲಿ ಆದಾಯ ಹರಿದು ಬರಲಿದೆ. ಇನ್ನು ಈ ಫಿಟ್ನೆಸ್ ಕೇಂದ್ರ ತೆರೆಯುವರು ರಾಜ್ಯ ಸರ್ಕಾರದಿಂದ ಅನುಮತಿ ಪಡೆದು ಸರ್ಕಾರ ಸೂಚಿಸಿದ ಮೊತ್ತವನ್ನು ಇಎಂಡಿ ಇಟ್ಟು ಫಿಟ್ನೆಸ್ ಸೆಂಟರ್ ನಡೆಸಬೇಕಾಗುತ್ತದೆ.

ಗುಜರಿ ನೀತಿಯ ಪ್ರಕ್ರಿಯೆ ಹೇಗೆ ?:
ಅವಧಿ ಮುಗಿದ ವಾಹನವನ್ನು ಯಾವುದೇ ರಾಜ್ಯದಲ್ಲಿ ಗುಜರಿಗೆ ಹಾಕಬಹುದು.

ಹಳೇ ವಾಹನ ಗುಜರಿಗೆ ಹಾಕುವಾಗ ಹಳೇ ಚಾರ್ಸಿ ನಂಬರ್ ನ್ನು ನಾಶ ಮಾಡಲಾಗುತ್ತದೆ.

ವಾಹನ ಮಾಲೀಕರು ಸರ್ಕಾರ ಸೂಚಿತ ಗುಜರಿ ಕೇಂದ್ರದಲ್ಲಿ ವಾಹನ ಗುಜರಿಗೆ ಹಾಕಬೇಕು.

ಪರಿಸರಕ್ಕೆ ಹಾನಿ ಮಾಡದಂತೆ ಹಳೇ ವಾಹನ ವಿಲೇವಾರಿ ಮಾಡಬೇಕು.

ವಾಹನವನ್ನು ಗುಜರಿಗೆ ಹಾಕುತ್ತಿರುವ ಬಗ್ಗೆ ಸ್ಥಳೀಯ ಆರ್‌ಟಿಓ ಅಧಿಕಾರಿಗೆ ಮಾಹಿತಿ ನೀಡಬೇಕು.

ಗುಜರಿಗೆ ಹಾಕುವ ವಾಹನದ ನೊಂದಣಿಯನ್ನು ರದ್ದು ಮಾಡಿಸಬೇಕು.

ಗುಜರಿಗೆ ಹಾಕುವ ವಾಹನವನ್ನು ಗುಜರಿ ಮೊತ್ತವನ್ನು ಅದರ ತೂಕ ಇತರೆ ಮಾನದಂಡ ಆಧರಿಸಿ ನಿಗದಿ ಮಾಡಬೇಕು.

ವಾಹನ ಮಾಲೀಕರು ವಾಹನಕ್ಕೆ ನಿಗದಿ ಮಾಡಿದ ಗುಜರಿ ಮೊತ್ತ ಕ್ಕೆ ಸಮ್ಮತಿಸಿದ ಬಳಿಕವೇ ವಾಹನವನ್ನು ನಾಶ ಮಾಡಬೇಕು.

ಪ್ಲಾಸ್ಟಿಕ್, ರಬ್ಬರ್ , ಕಬ್ಬಿಣ ಪ್ರತ್ಯೇಕ ಮಾಡಬೇಕು.

ಗುಜರಿ ವಾಹನ ಮಾಲೀಕರು ವಾಹನದ ಬ್ಯಾಟರಿ, ಟೈರ್, ಕಾರಿನ ಇತರೆ ಉಪಕರಣಕ್ಕೆ ನಿಗದಿ ಮಾಡುವ ಬೆಲೆಯ ಬಗ್ಗೆ ಮಾತುಕತೆ ಮಾಡಿ ಬೆಲೆ ನಿಗದಿ ಮಾಡಬಹುದು.

ವಾಹನ ಮಾಲೀಕರು ಅಧಿಕೃತ ಗುಜರಿ ವಾಹನ ಡೀಲರ್ ಖಾತ್ರಿ ಪಡಿಸಿಕೊಳ್ಳಬೇಕು. ಅನಧಿಕೃತ ಗುಜರಿ ಡೀಲರ್ ಗಳಿಗೆ ಮಾರಾಟ ಮಾಡಿದರೆ ಅದು ಅಪರಾಧಕ್ಕೆ ಕಾರಣವಾಗುತ್ತದೆ. ಆ ವಾಹನ ಹಳೇ ಮಾಲೀಕರ ಹೆಸರಿನಲ್ಲಿ ಚಲಾವಣೆಯಾದರೆ ಅಪಾಯ ಕಟ್ಟಿಟ್ಟ ಬುತ್ತಿ.

ಗುಜರಿ ವಾಹನದ ಅರ್‌ಸಿ ಒರಿಜಿನಲ್ ನ್ನು ಕೊಡುವ ಅಗತ್ಯವಿಲ್ಲ. ಜೆರಾಕ್ಸ್ ಪ್ರತಿ ನೀಡಿದರು ಸಾಕು.

ವಾಹನ ಗುಜರಿಗೆ ಹಾಕುವುದನ್ನು ಮಾಲೀಕರು ಪೋಟೋ ತೆಗೆದುಕೊಂಡು ಸಾಕ್ಷಿ ಇಟ್ಟುಕೊಂಡಿರಬೇಕು

ಗುಜರಿಗೆ ಹಾಕುವ ವಾಹನ ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಮೆಟಲ್ ಪಾರ್ಟ್ ತೂಕದ ಲೆಕ್ಕ ಹಾಕಿ ಹಣ ಕೊಡಲಾಗುತ್ತದೆ.

ಗುಜರಿಗೆ ಹಾಕುವ ವಾಹನದ ಉಪಕರಣ ಸುಸ್ಥಿತಿಯಲ್ಲಿದ್ದರೆ ಒಳ್ಳೆಯ ಬೆಲೆ ಮಾಲೀಕರಿಗೆ ಸಿಗಲಿದೆ.

ಹಳೇ ವಾಹನ ಗುಜರಿಗೆ ಹಾಕುವ ನೋಂದಣಿ ನಾಶ ಮಾಡುವ ನಿಯಮಗಳು: ಅವಧಿ ಮುಗಿದ ವಾಹನಗಳನ್ನು ಗುಜರಿಗೆ ಹಾಕಿದ ಕೂಡಲೇ ಅವುಗಳ ಹಳೇ ನೋಂದಣಿ ಸಂಖ್ಯೆಯನ್ನು ರದ್ದು ಮಾಡುವ ಬಗ್ಗೆ ಗುಜರಿ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದಕ್ಕಾಗಿ ಅರ್‌ಟಿಓ ಅಧಿಕಾರಿಗಳಿಗೆ ಹಲವು ಜವಾಬ್ದಾರಿ ವಹಿಸಲಾಗಿದೆ. ಅವು ಈ ಕೆಳಗಿನಂತಿವೆ.

ವಾಹನ ಗುಜರಿಗೆ ಹಾಕುವ ಬಗ್ಗೆ ಮಾಲೀಕರು ಸ್ಥಳೀಯ ಆರ್‌ಟಿಓ ಅಧಿಕಾರಿಗೆ ಮೊದಲು ಮಾಹಿತಿ ನೀಡಬೇಕು.

ಗುಜರಿಗೆ ಹಾಕುವ ವಾಹನದ ದಾಖಲೆಗಳನ್ನು ಆರ್‌ಟಿಓ ಅಧಿಕಾರಿಗಳು ಸಿದ್ಧಪಡಿಸಬೇಕು.

ಗುಜರಿ ಡೀಲರ್ ವಾಹನವನ್ನು ನಾಶ ಮಾಡಿದ ಬಗ್ಗೆ ಸರ್ಟಿಫಿಕೇಟ್ ಕೊಡಬೇಕು. ವಾಹನವನ್ನು ಗುಜರಿಗೆ ಹಾಕಿದ ಬಗ್ಗೆ ಸಾಕ್ಷಿಗಳನ್ನು ಆರ್‌ಟಿಓಗೆ ಸಲ್ಲಿಸಬೇಕು.

ಗುಜರಿ ವಾಹನ ಮಾಲೀಕರು ಕೂಡ ತನ್ನ ವಾಹನ ಗುಜರಿಗೆ ಹಾಕಿದ್ದು, ನೋಂದಣಿ ಸಂಖ್ಯೆ ರದ್ದು ಮಾಡುವ ಬಗ್ಗೆ ಪ್ರಮಾಣ ಪತ್ರವನ್ನು ಅರ್‌ಟಿಓ ಅಧಿಕಾರಿಗಳಿಗೆ ಸಲ್ಲಿಸಬೇಕು

ಆರ್‌ಟಿಓ ಅಧಿಕಾರಿಗಳು ಗುಜರಿ ವಾಹನದ ದಾಖಲೆಗಳನ್ನು ಪರಿಶೀಲಿಸಿ ಅವುಗಳ ಮೇಲೆ ಅಪರಾಧ ದಂಡ ಬಾಕಿ ಇರುವ ಬಗ್ಗೆ ಪರಿಶೀಲಿಸಿ ಎನ್‌ಓಸಿ ನೀಡಬೇಕು.

Recommended Video

ಶ್ರೀಲಂಕಾದಲ್ಲಿ ಆಹಾರಕ್ಕೆ ಹಾಹಾಕಾರ: ಆರ್ಥಿಕ ಬಿಕ್ಕಟ್ಟಿನಿಂದ ತುರ್ತುಪರಿಸ್ಥಿತಿ ಘೋಷಣೆ | Oneindia Kannada
ಕೇಂದ್ರ ಮತ್ತು ರಾಜ್ಯ ಪಟ್ಟಿಯಲ್ಲಿ ಗುಜರಿ ನೀತಿ

ಕೇಂದ್ರ ಮತ್ತು ರಾಜ್ಯ ಪಟ್ಟಿಯಲ್ಲಿ ಗುಜರಿ ನೀತಿ

ಕೇಂದ್ರದಲ್ಲಿ ಮೂರು ಪಟ್ಟಿಯಿದೆ. ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಕೇಂದ್ರ ಹಾಗೂ ರಾಜ್ಯಪಟ್ಟಿ, ಸಾರಿಗೆ ನಿಯಮ ಕೇಂದ್ರ ಹಾಗೂ ರಾಜ್ಯ ಪಟ್ಟಿಯಲ್ಲಿ ಬರಲಿದ್ದು, ಗುಜರಿ ನೀತಿಯ ಪ್ರಕಾರ ಹಳೇ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿ ಮಾಡಿದವರಿಗೆ ರಸ್ತೆ ತೆರಿಗೆಯಲ್ಲಿ ವಿನಾಯ್ತಿ ನೀಡುವಂತೆ ರಾಜ್ಯಗಳಿಗೆ ಅವಕಾಶ ನೀಡಲಾಗಿದೆ. ತೆರಿಗೆ ಕಡಿತ ಮಾಡುವಂತೆ ರಾಜ್ಯಗಳಿಗೆ ಸಲಹೆ ನೀಡಲಾಗುತ್ತದೆ. ತೆರಿಗೆ ಕಡಿತ ಮಾಡುವ ಅಧಿಕಾರ ಆಯಾ ರಾಜ್ಯಗಳಿಗೆ ಅನ್ವಯಿಸಿದ್ದು, ರಾಜ್ಯ ಹಾಗೂ ಕೇಂದ್ರ ಪಟ್ಟಿಯಲ್ಲಿ ಬರುವ ಮೋಟಾರು ವಾಹನ ನಿಯಮ ಸಂಬಂಧ ಕೇಂದ್ರ ಸರ್ಕಾರವೇ ತೆರಿಗೆ ನಿರ್ಧಾರ ಮಾಡುವ ಅಧಿಕಾರ ಬಗ್ಗೆ ಕಾನೂನು ಸಲಹೆ ಕೇಳಲಾಗಿದೆ. ಈಗಿರುವ ಅಧಿಕಾರ ಬಳಸಿ ನಿಯಮಗಳನ್ನು ಬದಲಿಸಲಾಗಿದೆ. ಕೆಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಗುಜರಿ ನೀತಿಯ ಅಂತಿಮ ನಿಯಗಳನ್ನು ಅತಿ ಶೀಘ್ರದಲ್ಲಿಯೇ ಪ್ರಕಟಿಸಲಾಗುತ್ತದೆ.

English summary
What is the Vehicle Scrappage Policy? Know Process, Rules, Benefits and why it is important in Kannada
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X