ರೈತರಿಗೆ ಸಲಹೆ: ಅಕಾಲಿಕ ಮಳೆ, ಮಾವು ಕೊಯ್ಲು ಮಾಡುವುದು ಹೇಗೆ?
ಮೇ ತಿಂಗಳ ಪ್ರಾರಂಭದಿಂದ ಅಲ್ಲಲ್ಲಿ ಗಾಳಿ, ಆಲಿಕಲ್ಲು ಸಹಿತ ಬಿರುಸು ಮಳೆಯಾಗುತ್ತಿದೆ. ಮಾವು ಬೆಳೆಯುವ ರೈತರಿಗೆ ಸಲಹೆಗಳು ಇಲ್ಲಿವೆ.
ಮೇ ತಿಂಗಳ ಪ್ರಾರಂಭದಿಂದ ಮಾವು ಬೆಳೆಯುವ ಅನೇಕ ಪ್ರದೇಶಗಳಲ್ಲಿ ಅಲ್ಲಲ್ಲಿ ಗಾಳಿ, ಆಲಿಕಲ್ಲು ಸಹಿತ ಬಿರುಸು ಮಳೆಯಾಗುತ್ತಿದೆ.
ಗಾಳಿ, ಆಲಿಕಲ್ಲು ಸಹಿತ ಬಿರುಸು ಮಳೆಯಿಂದ ಕಟಾವಿಗೆ ಸಿದ್ದವಾಗಿರುವ/ ಬಲಿಯುತ್ತಿರುವ ಮಾವಿನಕಾಯಿಗಳಿಗೆ ಹೆಚ್ಚಿನ ಹಾನಿ ಆಗುತ್ತಿದೆ.
ಹವಾಮಾನ ಬದಲಾವಣೆಯ ಕಾರಣ ವಾತಾವರಣದಲ್ಲಿ ತೇವಾಂಶ ಅಧಿಕಗೊಂಡು ಹಣ್ಣಿನ ಊಜಿನೊಣಗಳ ಹಾವಳಿ ಸಹ ಹೆಚ್ಚುವ ಸಾಧ್ಯತೆ ಇರುತ್ತದೆ
ಮರದಲ್ಲಿ ಮಾವಿನಕಾಯಿಗಳು ಬಲಿತ್ತಿದ್ದರೆ ಅವುಗಳನ್ನು ತಡಮಾಡದೇ ಶೀಘ್ರವಾಗಿ ಕೊಯ್ಲು ಮಾಡಬೇಕು ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.
ಹಣ್ಣಿನ ಊಜಿನೊಣಗಳನ್ನು ಹತೋಟಿಯಲ್ಲಿಡಲು ಎಕರೆಗೆ ಕನಿಷ್ಠ8-10 ಮೋಹಕ ಬಲೆಗಳನ್ನು ಕಟ್ಟಬೇಕು. ಮರಗಳಿಗೆ Deltamethrin ಕೀಟನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ 1.0 ಮಿ.ಲಿ. ಪ್ರಮಾಣದಲ್ಲಿ ಬೆರಸಿ ಸಿಂಪಡಿಸಬೇಕು.
10 ದಿನಗಳ ನಂತರ (ಕೊಯ್ಲು ಮುಂಚಿತವಾಗಿ ಕನಿಷ್ಠ 10-15 ದಿನಗಳ ಮೊದಲು) ಈ ಕ್ರಮವನ್ನು ಮತ್ತೆ ಪುನರಾವರ್ತಿಸಬೇಕು.
ತೋಟದಲ್ಲಿ ಈಗಾಗಲೇ ಹಣ್ಣಿನ ಊಜಿನೊಣಗಳ ಹಾವಳಿಗೆ ತುತ್ತಾಗಿ ನೆಲಕ್ಕೆ ಬಿದ್ದಿರುವ ಹಣ್ಣುಗಳನ್ನು ತಡಮಾಡದೇ ಸಂಗ್ರಹಿಸಿ ಅವುಗಳನ್ನು 1 ಅಡಿ ಆಳದ ಗುಣಿ ತೋಡಿ ಹೂತು ಹಾಕಿ ಮಣ್ಣು ಮುಚ್ಚಬೇಕು.
ಯಾವುದೇ ಸನ್ನಿವೇಶದಲ್ಲಿ ಕಾಯಿಗಳನ್ನು ಪ್ರಖರ ಬಿಸಿಲಿನಲ್ಲಿ ಕೊಯ್ಲು ಮಾಡಬಾರದು
ಬಿಸಿಲಿನ ಪ್ರಖರತೆ ಕಡಿಮೆ ಇರುವ ಮುಂಜಾವು ಮತ್ತು ಸಾಯಂಕಾಲದಲ್ಲಿ ಮಾತ್ರ ಕಾಯಿಗಳನ್ನು ಕೊಯ್ಲು ಮಾಡುವುದು. ಕೊಯ್ಲು ಮಾಡಿದ ಕಾಯಿಗಳನ್ನು ಯಾವುದೇ ಕಾರಣಕ್ಕೂ ಬಿಸಿಲಿಗೆ ಒಡ್ಡಬಾರದು.
ಕೊಯ್ಲು ಮಾಡಿದ ಕಾಯಿಗಳನ್ನು ತಕ್ಷಣವೇ ನೆರಳಿನಲ್ಲಿ ಇಡುವುದು ಸೂಕ್ತ. ಕೊಯ್ಲು ಮಾಡಿದ ಕಾಯಿಗಳನ್ನು ನೆಲ-ಮಣ್ಣಿನ ಮೇಲೆ ಇಡುವುದು ತಪ್ಪು ಕ್ರಮ.