By : Oneindia Kannada Video Team
Published : December 05, 2017, 03:51

ಜಯಲಲಿತಾ ಎಲ್ಲರನ್ನ ಅಗಲಿ ಇಂದಿಗೆ 1 ವರ್ಷ ಟ್ವಿಟ್ಟರ್ ನಲ್ಲಿ ಕಂಬನಿ

ತಮಿಳುನಾಡು ರಾಜಕೀಯದ ಉಕ್ಕಿನ ಮಹಿಳೆ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅಸುನೀಗಿ ಇಂದಿಗೆ(ಡಿ.5) ಒಂದು ವರ್ಷ. ಬದುಕಿದ್ದಾಗ ತಮ್ಮ ದಿಟ್ಟ ವ್ಯಕ್ತಿತ್ವದಿಂದ ಸದಾ ಸುದ್ದಿಯಲ್ಲಿರುತ್ತಿದ್ದ, ತಮಿಳುನಾಡಿನ ಜನರ ಪಾಲಿಗೆ 'ಅಮ್ಮ'ನಾಗಿ, ಇಡಿ ದೇಶದ ರಾಜಕೀಯದಲ್ಲೂ ಹಲವು ಬಾರಿ ನಿರ್ಣಾಯಕ ಪಾತ್ರ ವಹಿಸಿದ್ದ ಜಯಲಲಿತಾ ಅವರ ಸಾವನ್ನು ತಮಿಳುನಾಡಿನ ಹಲವರು ಇಂದಿಗೂ ಒಪ್ಪಿಕೊಂಡಿಲ್ಲ. ಅವರೆಲ್ಲರ ಮನಸ್ಸಿನಲ್ಲಿ 'ಅಮ್ಮ' ಇನ್ನೂ ಬದುಕಿದ್ದಾರೆ. ಆ ಸ್ಥಾನವನ್ನು ಮತ್ತ್ಯಾರೂ ತುಂಬುವುದಕ್ಕೆ ಸಾಧ್ಯವೇ ಇಲ್ಲ ಎಂಬಷ್ಟರಮಟ್ಟಿಗೆ 'ಅಮ್ಮ' ಎಂಬ ಪದಕ್ಕೆ ಜಯಲಲಿತಾ ಅನ್ವರ್ಥವಾಗಿದ್ದಾರೆ! ಹೃದಯಾಘಾತವಾಗಿ ಆಸ್ಪತ್ರೆಗೆ ಸೇರಿದ 68 ವರ್ಷ ವಯಸ್ಸಿನ ಜಯಲಲಿತಾ, ನಂತರ ಹೊರಬಂದಿದ್ದು ಶವವಾಗಿಯೇ. ಈ ನಡುವೆ ಹುಟ್ಟಿದ ಊಹಾಪೋಹಗಳೆಷ್ಟೋ, ವಿವಾದಗಳೆಷ್ಟೋ, ಅನಿಮಾನಗಳೆಷ್ಟೋ! ಅವೆಲ್ಲ ಇಂದಿಗೂ ಬಗೆಹರಿದಿಲ್ಲ. ಜಯಲಲಿತಾ ಬದುಕಿನಂತೆ ಅವರ ಸಾವೂ ನಿಗೂಢವಾಗಿಯೇ ಉಳಿಯಿತು.ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಡಿಸೆಂಬರ್ 5, 2016 ರಂದು ರಾತ್ರಿ 11:30 ಕ್ಕೆ ಜಯಲಲಿತಾ ಅವರು ಅಸುನೀಗುತ್ತಿದ್ದಂತೆಯೇ ತಮಿಳುನಾಡಿನ ಚಿತ್ರಣವೇ ಬದಲಾಗಿತ್ತು. ಕುಟುಂಬದ ಆತ್ಮೀಯರೊಬ್ಬರು ಅಸುನೀಗಿದಾಗ ಮೂಡುವ ಸೂತಕದ ಛಾಯೆ ಇಡೀ ರಾಜ್ಯವನ್ನು ಆವರಿಸಿತ್ತು. ಅವರ ಅಂತ್ಯ ಸಂಸ್ಕಾರದಲ್ಲಿ ನೆರೆದಿದ್ದ ಲಕ್ಷಾಂತರ ಜನ, ಬಿಕ್ಕಿ ಬಿಕ್ಕಿ ಅತ್ತು, ಒಲ್ಲದ ಮನಸ್ಸಿನಿಂದಲೇ ಅಮ್ಮನನ್ನು ಬಾರದ ಲೋಕಕ್ಕೆ ಕಳಿಸಿಕೊಟ್ಟಿದ್ದರು. ಅವೆಲ್ಲ ಮುಗಿದು ಇಂದಿಗೆ ಒಂದು ವರ್ಷವಾಗಿದ್ದರೂ, ಇಂದಿಗೂ ತಮಿಳುನಾಡಿನ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಅಮ್ಮ ನೆಲೆಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!