ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನ ಮೆಕ್ಕಾ ಎಮ್ಮೆಮಾಡುನಲ್ಲಿ ಮಾ.1ರಿಂದ ಉರೂಸ್

By ಬಿ.ಎಂ. ಲವಕುಮಾರ್, ಮೈಸೂರು
|
Google Oneindia Kannada News

Yemmemadu uroos in Coorg
ಕೊಡಗಿನ ಮೆಕ್ಕಾ ಎಂದೇ ಕರೆಯಲ್ಪಡುವ ಎಮ್ಮೆಮಾಡುವಿನಲ್ಲೀಗ ಉರೂಸ್ ಆರಂಭವಾಗಿದೆ. ಮಾ.1ರಿಂದ 8ರವರೆಗೆ ನಡೆಯಲಿರುವ ಉರೂಸ್‌ನಲ್ಲಿ ದಿನನಿತ್ಯ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಐತಿಹಾಸಿಕ ತಾಣವಾಗಿ, ಭಾವೈಕ್ಯತೆಯ ನೆಲೆಯಾಗಿ, ತನ್ನನ್ನು ನಂಬಿದ ಭಕ್ತರ ಇಷ್ಟಾರ್ಥ ನೆರವೇರಿಸುತ್ತಿರುವ ಎಮ್ಮೆಮಾಡು ಭಾವೈಕ್ಯತೆಯ ಸಂಗಮವಾಗಿ ಕೊಡಗಿನ ಬೆಟ್ಟಗುಡ್ಡ, ಕಾಫಿ ತೋಟಗಳ ನಿಸರ್ಗ ರಮಣೀಯ, ಪ್ರಶಾಂತ ಸ್ಥಳದಲ್ಲಿ ನೆಲೆ ನಿಂತಿದೆ.

ಹಾಗೆನೋಡಿದರೆ ಎಮ್ಮೆಮಾಡು ತಾಣ ದೇಶ ವಿದೇಶಗಳ ಜನರ ಗಮನಸೆಳೆಯುತ್ತಿದ್ದು, ಕೊಡಗಿನಲ್ಲಿರುವ ಪ್ರಾರ್ಥನಾ ಮಂದಿರಗಳಿಗೆ ಹೋಲಿಸಿದರೆ ತನ್ನದೇ ಆದ ಇತಿಹಾಸ, ನಿಸರ್ಗ ಸೌಂದರ್ಯ ಹಾಗೂ ಧಾರ್ಮಿಕ ಕಾರ್ಯಗಳಿಂದ ವಿಶಿಷ್ಟವಾಗಿ ಕಂಗೊಳಿಸುತ್ತಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಎಮ್ಮೆಮಾಡು ಇವತ್ತು ಸಹಸ್ರಾರು ಸಂಖ್ಯೆಯ ಭಕ್ತರನ್ನು ತನ್ನತ್ತ ಸೆಳೆದಿದ್ದರೆ ಅದಕ್ಕೆ ಸೂಫಿ ಸಂತರು ಕಾಲಿಟ್ಟು ಪಾವನಗೊಳಿಸಿದ ಪುಣ್ಯ ಭೂಮಿ ಎಂಬುವುದೇ ಕಾರಣವಾಗಿದೆ. ಸೂಫಿ ಸಂತರು ತಮ್ಮ ಜೀವಿತಾವಧಿಯ ಕೊನೆಯ ಕಾಲದಲ್ಲಿ ಈ ಗ್ರಾಮಕ್ಕೆ ಆಗಮಿಸಿ ಸಮಾಧಿ ಹೊಂದುವುದರ ಮೂಲಕ ಅಂತಿಮ ವಿಶ್ರಾಂತಿ ಪಡೆಯುತ್ತಿದ್ದು, ಜೀವನದಲ್ಲೊಮ್ಮೆ ಆ ಸಂತರ ದರ್ಶನ ಭಾಗ್ಯ ಪಡೆದು ಧನ್ಯರಾಗಲು ಜಾತಿ ಮತ ಮರೆತು ಭಕ್ತರು ಆಗಮಿಸುತ್ತಾರೆ.

ಪವಾಡಗಳು : ಎಮ್ಮೆಮಾಡುವಿನ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿಹಾಕುತ್ತಾ ಹೋದರೆ ಒಂದಷ್ಟು ಪವಾಡಗಳು ಗೋಚರಿಸುತ್ತವೆ. ನೂರಾರು ವರ್ಷಗಳ ಹಿಂದೆ ಊರೂರು ಅಲೆಯುತ್ತಾ ಶಾಂತಿ ಸಂದೇಶವನ್ನೂ ಸಾರುತ್ತಾ ಸಾಗುತ್ತಿದ್ದ ಸೂಫಿ ಶಹೀದ್ ಸಂತರು ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಕೊಡಗಿನ ಎಮ್ಮೆಮಾಡಿಗೆ ಬಂದಿದ್ದರು.

ಬೆಟ್ಟಗುಡ್ಡಗಳು... ತೊರೆಗಳು... ಬೀಸುವ ತಂಗಾಳಿ... ಎಲ್ಲೆಡೆ ನೋಡಿದರೂ ಹಚ್ಚ ಹಸಿರಿನಿಂದ ಕಂಗೊಳಿಸುವ ನಿಸರ್ಗ ಸೂಫಿ ಶಹೀದ್ ಸಂತರನ್ನು ಸೆಳೆದಿತ್ತು. ತನ್ನ ಜೀವಿತಾವಧಿಯ ಕೊನೆಯ ವಿಶ್ರಾಂತಿಗೆ ಈ ತಾಣವೇ ಸೂಕ್ತವೆಂದು ನಿರ್ಧರಿಸಿದ ಅವರು ಗ್ರಾಮದ ಎಲ್ಲಾ ಜನಾಗದವರೊಂದಿಗೆ ಬೆರೆಯುತ್ತಾ ಅವರ ಕಷ್ಟಕಾರ್ಪಣ್ಯಕ್ಕೆ ಸಲಹೆ ನೀಡುತ್ತಾ ಜನತೆಯಲ್ಲಿ ಸೌಹಾರ್ದತೆಯನ್ನು ಬೆಳೆಸುತ್ತಾ ಹೆಚ್ಚಿನ ಕಾಲವನ್ನು ದೇವರ ಸ್ಮರಣೆಯಲ್ಲೇ ಕಳೆಯತೊಡಗಿದ್ದರು. ಸದಾ ದೇವರ ಧ್ಯಾನದಲ್ಲಿ ಮಗ್ನರಾಗಿರುತ್ತಿದ್ದ ಅವರನ್ನು ಜನ ಪೂಜ್ಯ ಭಾವನೆಯಿಂದ ಕಾಣುತ್ತಿದ್ದರಲ್ಲದೆ, ದೈವಸ್ವರೂಪಿಯಾದ ಅವರಿಗೆ ನಮಸ್ಕರಿಸಿ ಹೋಗುತ್ತಿದ್ದರು.

ಸೂಫಿ ಶಹೀದ್ ಸಂತರ ಬಗ್ಗೆ ಕೇಳಿ ತಿಳಿದ ದೂರದ ಮಂದಿ ಅವರ ದರ್ಶನ ಭಾಗ್ಯಕ್ಕಾಗಿ ಹಾತೊರೆಯುತ್ತಿದ್ದರು. ದಿನಗಳು ಕಳೆಯುತ್ತಿದ್ದಂತೆಯೇ ಅವರಿಗೆ ತಮ್ಮ ಬದುಕಿನ ಅಂತಿಮ ದಿನಗಳು ಸಮೀಪಿಸುತ್ತಿದೆ ಎಂಬುವುದು ಗೋಚರವಾಗಿತ್ತು. ಹಾಗಾಗಿ ಅವರು ಎಮ್ಮೆಮಾಡು ಬಳಿಯ ಬರಾಕೊಲ್ಲಿ ಎಂಬಲ್ಲಿ ಹೆಬ್ಬಂಡೆಯ ಮೇಲೆ ಮಲಗಿದ್ದರಂತೆ. ಬಳಲಿದ್ದ ಅವರನ್ನು ಕಂಡ ಹಸುವೊಂದು ಕಟ್ಟಿಹಾಕಿದ ಹಗ್ಗವನ್ನು ತುಂಡರಿಸಿಕೊಂಡು ಬಂದು ಪಕ್ಕದಲ್ಲೇ ಹರಿದು ಹೋಗುತ್ತಿದ್ದ ತೋಡು(ತೊರೆ)ನ ನೀರಿನಲ್ಲಿ ತನ್ನ ಕೆಚ್ಚಲನ್ನು ಮುಳುಗಿಸಿಕೊಂಡು ಬಂದು ಮಂಡಿಯೂರಿ ಅವರ ಬಾಯಿಗೆ ಹಾಲುಣಿಸಿತಂತೆ. ಇದಕ್ಕೆ ಇಂದಿಗೂ ಬಂಡೆಕಲ್ಲಿನ ಮೇಲೆ ಉಳಿದಿರುವ ಕೆಲವು ಕುರುಹುಗಳು ಸಾಕ್ಷಿಯಾಗಿವೆ.

ಸೂಫಿ ಶಹೀದ್ ಸಂತರಿಗೆ ಹಸು ಹಾಲುಣಿಸಿದ ಪವಾಡ ನಡೆದಂದಿನಿಂದ ಇಲ್ಲಿಯವರೆಗೂ ಎಮ್ಮೆಮಾಡು ದರ್ಗಾ ಹಸುಕರುಗಳಿಗೆ ಉಂಟಾಗುವ ರೋಗರುಜಿನ ಇನ್ನಿತರ ಯಾವುದೇ ತೊಂದರೆಗಳಿಗೆ ಪರಿಹಾರ ನೀಡುತ್ತಾ ಬರುತ್ತಿರುವುದು ಗಮನಾರ್ಹವಾಗಿದೆ. ಮನೆಯಲ್ಲಿ ಸಾಕಿದ ಹಸುಕರುಗಳಿಗೆ ಏನಾದರು ಕಾಯಿಲೆ, ತೊಂದರೆಗಳು ಆದಾಗ ಎಮ್ಮೆಮಾಡು ದರ್ಗಾಕ್ಕೆ ಹರಕೆ ಹೊತ್ತುಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪ್ರತಿ ವರ್ಷವೂ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಸಿದ್ದಕ್ಕಾಗಿ ಬೆಳ್ಳಿಯ ಹಸುಕರುವಿನ ಪ್ರತಿಕೃತಿ ಹಾಗೂ ತುಪ್ಪ, ನಗದನ್ನು ಹರಕೆಯ ರೂಪದಲ್ಲಿ ಒಪ್ಪಿಸುತ್ತಾರೆ. ಇದುವರೆಗೆ ಕೇವಲ ದನಕರುಗಳ ಸಮಸ್ಯೆಗೆ ಮಾತ್ರವಲ್ಲದೆ, ಮಾನಸಿಕ, ಶಾರೀರಿಕವಾಗಿ ಕೆಲವೊಂದು ತೊಂದರೆಗಳಿಂದ ಬಳಲುತ್ತಿದ್ದವರು ಕೂಡ ಇಲ್ಲಿಗೆ ಭೇಟಿ ನೀಡಿ ಪರಿಹಾರ ಕಂಡುಕೊಂಡ ಹಲವು ಉದಾಹರಣೆಗಳನ್ನು ನಾವು ಕಾಣಬಹುದು.

ಜಾತಿಭೇದವಿಲ್ಲದ ದರ್ಗಾ : ಭಕ್ತರ ಇಷ್ಟಾರ್ಥಗಳು ನೆರವೇರುತ್ತಾ ಬಂದಿರುವುದರಿಂದ ದರ್ಗಾಕ್ಕೆ ಜಾತಿಭೇದವಿಲ್ಲದೆ ಎಲ್ಲಾ ಜನಾಂಗದವರು ದರ್ಶನ ಮಾಡಿ ಹರಕೆಹೊತ್ತು ಕಷ್ಟ ಪರಿಹಾರವಾದ ಬಳಿಕ ತಮ್ಮ ಹರಕೆಯನ್ನು ಅರ್ಪಿಸಿ ಹೋಗುತ್ತಾರೆ. ಒಂದು ಕಾಲದಲ್ಲಿ ಕುಗ್ರಾಮವಾದ ಎಮ್ಮೆಮಾಡು ಇಲ್ಲಿನ ದರ್ಗಾದ ಮಹಿಮೆಯಿಂದಾಗಿ ಅಭಿವೃದ್ಧಿಯತ್ತ ಸಾಗುತ್ತಿದ್ದು ಧಾರ್ಮಿಕ, ಸಾಮಾಜಿಕ ಮತ್ತು ವಿದ್ಯಾ ಕೇಂದ್ರವಾಗಿ ದಾಪುಗಾಲಿಡುತ್ತಿದೆ.

ಇಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಧಾರ್ಮಿಕ ಹಾಗೂ ಲೌಕಿಕ ಎರಡನ್ನೂ ಅಭ್ಯಾಸ ಮಾಡುವ ಅನುಕೂಲವಿದೆ. ಇದರೊಂದಿಗೆ ಸೂಫಿ ಶಹೀದ್ ಸಂತರ ಹೆಸರಿನಲ್ಲಿ ಶಹೀದಿಯಾ ಅನಾಥ ಮತ್ತು ಬಡ ಮಕ್ಕಳ ವಸತಿ ಗೃಹವನ್ನು ಕೂಡ ನಡೆಸಿಕೊಂಡು ಬರಲಾಗುತ್ತಿದೆ. ಈ ವಸತಿಗೃಹದಲ್ಲಿ ಆಶ್ರಯ ಪಡೆದಿರುವ ಅನಾಥ ಮತ್ತು ಬಡ ಮಕ್ಕಳಿಗೆ ತಾನು ಅನಾಥ, ನಿರ್ಗತಿಕನೆಂಬ ಪ್ರಜ್ಞೆ ಬಾರದಂತೆ ಉಚಿತ ಊಟ, ಪುಸ್ತಕ ಸೇರಿದಂತೆ ಸಕಲ ಸವಲತ್ತನ್ನು ನೀಡಿ ಅವರ ಉತ್ತಮ ಚಟುವಟಿಕೆಯನ್ನು ಪ್ರೋತ್ಸಾಹಿಸಿ ಬೆಳೆಸಲಾಗುತ್ತಿದೆ.

ಇನ್ನು ಇಲ್ಲಿರುವ ಮಸೀದಿಯಂತು ಸುಂದರವಾಗಿದ್ದು, ಜಿಲ್ಲೆಯಲ್ಲಿರುವ ಮಸೀದಿಗಳ ಪೈಕಿ ಅತಿ ದೊಡ್ಡದಾದ ಮಸೀದಿಯಾಗಿದೆ. ಸುಮಾರು ಒಂದು ಕೋಟಿಗೂ ಹೆಚ್ಚು ಖರ್ಚು ಮಾಡಿ ನಿರ್ಮಿಸಲಾಗಿರುವ ಮಸೀದಿಯು ಸಾವಿರಾರು ಮಂದಿ ನೆರೆದು ಪ್ರಾರ್ಥನೆ ಸಲ್ಲಿಸುವಷ್ಟು ವಿಸ್ತಾರವನ್ನು ಹೊಂದಿದೆ. ಎಮ್ಮೆಮಾಡಿನಲ್ಲಿ ಸೂಫಿ ಶಹೀದ್ ಸಂತರ ಮಸೀದಿಯಲ್ಲದೆ, ಪ್ರವಾದಿ ಮಹಮ್ಮದ್ ಪೈಗಂಬರ್‌ರವರ ವಂಶಸ್ಥರಾದ ಸೈಯದ್ ಹಸನ್ ಸಖಾಫ್ ಎಂಬ ಮತ್ತೊಬ್ಬ ಸಂತರ ಮಸೀದಿಯನ್ನು ಕೂಡ ಕಾಣಬಹುದು. ಈ ಮಸೀದಿಯು ಸೂಫಿ ಶಹೀದ್ ದರ್ಗಾ ಶರೀಫ್‌ಗೆ ತೆರಳುವ ಮಾರ್ಗದ ಬಲಬದಿಯಲ್ಲಿದೆ. ಬಹಳ ವರ್ಷಗಳ ಹಿಂದಿನ ದರ್ಗಾಗಳಾದ ಇವುಗಳನ್ನು ಪುನಾರಚಿಸಲಾಗಿದೆ.

ಪ್ರತಿವರ್ಷವೂ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಸೂಫಿ ಶಹೀದ್ ಸಂತರ ಹೆಸರಿನಲ್ಲಿ ಉರೂಸ್ ನಡೆಯುತ್ತದೆ. (ಈ ಬಾರಿ ಮಾ.1ರಿಂದ 8ರವರೆಗೆ ನಡೆಯುತ್ತಿದೆ.) ಈ ಸಂದರ್ಭ ಲಕ್ಷಾಂತರ ಮುಸ್ಲಿಂ ಬಾಂಧವರು ನೆರೆಯುತ್ತಾರೆ. ಉರೂಸ್ ಸಂದರ್ಭ ಸಾರ್ವಜನಿಕ ಸಮ್ಮೇಳನ, ಸಾಮೂಹಿಕ ವಿವಾಹ, ಅನ್ನಸಂತರ್ಪಣೆ, ಮತಪ್ರವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಹತ್ತು ಹಲವು ವಿಶೇಷತೆಗಳನ್ನು ತನ್ನೊಡಲಲ್ಲಿ ತುಂಬಿಕೊಂಡು, ತನ್ನಡೆಗೆ ಬರುವ ಭಕ್ತಾದಿಗಳ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಬಂದಿರುವ ಎಮ್ಮೆಮಾಡು ತಾಣ ಮಡಿಕೇರಿಯಿಂದ 32 ಕಿಲೋ ಮೀಟರ್ ದೂರದಲ್ಲಿದ್ದು, ನಾಪೋಕ್ಲಿಗೆ ಸಮೀಪದಲ್ಲಿದೆ. ಇಲ್ಲಿಗೆ ವಾಹನ ಸೌಕರ್ಯಗಳಿರುವುದರಿಂದ ಹಾಗೂ ಉರೂಸ್ ಸಂದರ್ಭ ವಿಶೇಷ ಬಸ್ ಸೌಲಭ್ಯವೂ ಒದಗಿಸುವುದರಿಂದ ಭೇಟಿ ನೀಡುವವರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

English summary
Dargah sharief of Yemmemadu in Coorg district is a pilgrimage centre and a very sacred place of the Muslims. An annual Uroos (Urus) is held here from March 1 to 8, 2013 and people from all religion and caste come here to fulfil their wishes. Yemmemadu is 32 kms from Madikeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X