ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಪ್ರವಾಸೋದ್ಯಮ ದಿನ: ಬದರಿನಾಥ ಯಾತ್ರೆ ದಿವ್ಯ ಅನುಭೂತಿ

By ಸೌಮ್ಯ ಬೀನಾ, ಸಾಗರ
|
Google Oneindia Kannada News

ಸತತವಾದ 4 ದಿನಗಳ ವ್ಯಾಲಿ ಆಫ್ ಫ್ಲಾವರ್ಸ್ ಮತ್ತು ಹೇಮಕುಂಡದ ನಮ್ಮ ಚಾರಣ, ಅಂದಿಗೆ ಮುಗಿದಿತ್ತು. ಪಾಂಡುಕೇಶ್ವರದ ಹೋಟೆಲ್ಲಿಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುವುದಷ್ಟೇ ಆ ದಿನಕ್ಕೆ ನಮಗುಳಿದ ಕೆಲಸ. ನಾವು ಬುಕ್ ಮಾಡಿದ್ದ ಟ್ರೆಕ್ಕಿಂಗ್ ಪ್ಯಾಕೇಜ್ ಏಜೆನ್ಸಿಯವರು, 'ಟೀಮ್ ನ ಇಚ್ಛೆಯಿದ್ದಲ್ಲಿ ಆ ದಿನ ಬದರಿನಾಥ್ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಬಹುದು. ವಾಹನದ ವ್ಯವಸ್ಥೆ ನೀಡಲಾಗುತ್ತದೆ. ಆದರೆ ಪ್ರಯಾಣ ಮಾತ್ರ ಸಂಪೂರ್ಣವಾಗಿ ಹವಾಮಾನದ ಮೇಲೆ ಅವಲಂವಬಿತ..' ಎಂಬ ನಿಯಮಿತ ಒಕ್ಕಣೆಯನ್ನು ಮುಂಚಿತವಾಗಿಯೇ ನೀಡಿದ್ದರು.

ಬದರಿನಾಥ್‌ಗೆ ಹೋಗುವ ಆಶಾಭಾವನೆಯಿಂದ ನಾವೆಲ್ಲರೂ ಘಾನ್ಗ್ರಿಯದಿಂದ ಪುಲ್ನವರೆಗಿನ ನಮ್ಮ ಅವರೋಹಣವನ್ನು ಸಾಧ್ಯವಾದಷ್ಟು ಚುರುಕಾಗಿ ಮುಗಿಸಿ ಬಂದಿದ್ದೆವು. ಬದರಿನಾಥ್ ಗೆ ಹೋಗುವ ಉತ್ಸಾಹ ಯಾರ ಮುಖದಲ್ಲೂ ಚಾರಣದ ಸುಸ್ತನ್ನು ಮೂಡಿಸಿರಲಿಲ್ಲ.. ಆದರೆ, 'ಹಿಂದಿನ ದಿನ ಸುರಿದ ಸತತ ಮಳೆಯ ಕಾರಣದಿಂದಾಗಿ, ಬದರಿನಾಥ್ ಗೆ ಹೋಗುವ ರಸ್ತೆಗಳು ಮುಚ್ಚಿದ್ದು, 500 ಕ್ಕೂ ಹೆಚ್ಚು ವಾಹನಗಳು ನಿಲುಗಡೆಯಲ್ಲಿವೆ, ಸಾವಿರಾರು ಭಕ್ತರು ಕಾಯ್ವಿಕೆಯಲ್ಲಿದ್ದಾರೆ, ಯಾವಾಗ ರಸ್ತೆ ತೆರೆಯುವುದೋ ತಿಳಿಯದು, ಹೋಗಿ ನೋಡಬೇಕೀಗ, ' ಎಂದು ನಮ್ಮ ಡ್ರೈವರ್ ಕೊಟ್ಟ ಮಾಹಿತಿಗೆ ಒಮ್ಮೆ ನಿರಾಸೆಯೆನಿಸಿದರೂ, ಭರವಸೆಯನ್ನು ಕಳೆದುಕೊಳ್ಳದೆ ಎಲ್ಲರೂ ಚುರುಕಾಗಿ ಪಾಂಡುಕೇಶ್ವರ್ ಗೆ ಹೊರಟು ಬಂದೆವು.

ಸಿಖ್ಖರ ಪವಿತ್ರ ತಾಣ ಹೇಮಕುಂಡ್ ಸಾಹಿಬ್ ಸುತ್ತಾ ರೋಚಕ ಚಾರಣಸಿಖ್ಖರ ಪವಿತ್ರ ತಾಣ ಹೇಮಕುಂಡ್ ಸಾಹಿಬ್ ಸುತ್ತಾ ರೋಚಕ ಚಾರಣ

ಪಾಂಡುಕೇಶ್ವರ್ ಸಮೀಪಿಸುತ್ತಿದ್ದಂತೆಯೂ, ರಸ್ತೆಯ ಇಕ್ಕೆಲಗಳಲ್ಲೂ ಓಡಾಟವಿಲ್ಲದೆ ಸಾಲುಗಟ್ಟಿ ನಿಂತಿದ್ದ ನೂರಾರು ವಾಹನಗಳೇ ನಮಗೆ ಉತ್ತರಿಸಿಯಾಗಿತ್ತು. ನಮ್ಮ ಅದೃಷ್ಟವನ್ನು ಹಳಿಯುತ್ತಾ ಹೋಟೆಲ್ ತಲುಪಿಕೊಂಡೆವು. ಬೇಕಾದಷ್ಟು ಬಿಡುವಿನ ಸಮಯವಿದ್ದರಿಂದ ಎಲ್ಲರೂ ಒಟ್ಟಿಗೆ ಊಟ ಮಾಡಿ, ಚಾರಣದ ಕುರಿತು ಒಂದಷ್ಟು ಹರಟು, ನಮ್ಮಮ್ಮ ರೂಮುಗಳಿಗೆ ತೆರಳಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆವು. ಮನೆಗೆ ಫೋನ್ ಮಾಡಿ "ಟ್ರೆಕಿಂಗ್ ಎಲ್ಲವೂ ಯಶಸ್ವಿಯಾಗಿ ಮುಗಿಸಿದ್ದಾಯಿತು ಆದರೆ ಇಷ್ಟು ಹತ್ತಿರಕ್ಕೆ ಬಂದರೂ ಬದರೀನಾಥನನ್ನು ನೋಡುವ ಒತ್ತಾಸೆ ಮಾತ್ರ ಈಡೇರಲಿಲ್ಲ" ಎಂದು ಬಾಯೊಡೆದು ಹೇಳಿದ್ದಷ್ಟೇ.. !!

ರೋಮಾಂಚನ ಬಣ್ಣಿಸಲು ಸಾಧ್ಯವಿಲ್ಲ

ರೋಮಾಂಚನ ಬಣ್ಣಿಸಲು ಸಾಧ್ಯವಿಲ್ಲ

- "ಬದರಿಯ ರಸ್ತೆ ತೆರೆಯಿತಂತೆ, ಈಗಾಗಲೇ ತಡವಾಗಿರುವುದರಿಂದ, ಎಲ್ಲರೂ ಇನ್ನೆರಡು ನಿಮಿಷದಲ್ಲಿ ವ್ಯಾನಿನ ಬಳಿಯಲ್ಲಿದ್ದರೆ ಮಾತ್ರ ನಾವು ಹೋಗಿಬರಲು ಸಾಧ್ಯ". ಎಂಬ ಕೂಗು ಹೊರಗಡೆಯಿಂದ ಕೇಳಿಬಂತು. ಆ ಸಮಯಕ್ಕೆ ಆದ ರೋಮಾಂಚನ ಬಣ್ಣಿಸಲು ಸಾಧ್ಯವಿಲ್ಲ, ಕೈ ರೋಮಗಳು ಒಂದು ಕ್ಷಣ ಎದ್ದು ನಿಂತು ಹೋದವು.. ಒಕ್ಕೊರಲಿನ "ಜೈ ವಿಶಾಲ್ ಭದ್ರಿ", ಎಂಬ ಜಯಕಾರ ಹೋಟೆಲ್ ತುಂಬಾ ತುಂಬಿ ಹೋಯಿತು.. ತಯಾರಾಗಲು ಕೊಂಚವೂ ಸಮಯವಿರಲಿಲ್ಲ. ಕೈಯಲ್ಲಿ ಪೌಚ್, ಕಾಲಿಗೆ ಚಪ್ಪಲಿ..ನಿಮಿಷಾರ್ಧದಲ್ಲಿ ಹೇಗಿದ್ದೇವೋ ಹಾಗೆ ಎಲ್ಲರೂ ಓಡಿದ್ದೆ..!!

ಬದರಿನಾಥ ಹಿಂದೂಗಳು ಅತಿ ಶ್ರದ್ಧೆ ಮತ್ತು ಭಕ್ತಿಯಿಂದ ನಡೆದುಕೊಳ್ಳುವ ಪವಿತ್ರ ಚಾರ್ ಧಾಮ್ (ರಾಮೇಶ್ವರಮ್, ದ್ವಾರಕಾ, ಪುರಿ ಜಗನ್ನಾಥ ಮತ್ತು ಬದರಿನಾಥ) ಯಾತ್ರಾಸ್ಥಳಗಳ ಪೈಕಿ ಒಂದು. ಭಾರತದ 'ದೇವ ಭೂಮಿ' ಎಂದೇ ಕರೆಯಲ್ಪಡುವ ಉತ್ತರಾಖಂಡದ ಛೋಟಾ ಚಾರ್ ಧಾಮ್ ತೀರ್ಥ ಯಾತ್ರೆಯ ಸ್ಥಳಗಳಾದ ಯಮುನೋತ್ರಿ, ಗಂಗೋತ್ರಿ ಮತ್ತು ಕೇದಾರನಾಥ ಜೊತೆಗಿನ ನಾಲ್ಕನೇ ಪುಣ್ಯ ಕ್ಷೇತ್ರವೂ ಹೌದು.

ಅಲಕನಂದಾ ನದಿಯಲ್ಲಿ ದೊರೆತ ಕಪ್ಪು ಸಾಲಿಗ್ರಾಮದ ಬದರಿನಾರಾಯಣದ ವಿಗ್ರಹವನ್ನು ಆದಿ ಶಂಕರಾಚಾರ್ಯರು ಕಂಡು ಅದನ್ನೆತ್ತಿ ತಪ್ತ ಕುಂಡದ ಪಕ್ಕದಲ್ಲಿನ ಗುಹೆಯಲ್ಲಿ ಸ್ಥಾಪಿಸಿ ಪೂಜಿಸುತ್ತಿದ್ದರು. ನಂತರ 15ನೇ ಶತಮಾನದಲ್ಲಿ ಘಾರ್ವಾಲ್ ಪ್ರಾಂತ್ಯದ ಅರಸರು ಈ ವಿಗ್ರಹಕ್ಕಾಗಿ ಇಲ್ಲಿರುವ ಮಂದಿರವನ್ನು ಕಟ್ಟಿಸಿದರು ಎಂಬ ಉಲ್ಲೇಖವಿದೆ. ಕಾಲಾಂತರದ ಶಿಥಿಲತೆ ಮತ್ತು ಪ್ರಕೃತಿವಿಕೋಪಗಳಿಗೆ ಒಳಗಾಗಿ, ಅನೇಕ ಬಾರಿ ಈ ಬದರಿ ನಾರಾಯಣನ ಮಂದಿರವು ಪುನರುತ್ಥಾನಗೊಂಡಿದೆ.

ನೀಲಕಂಠ ಪರ್ವತದ ತಪ್ಪಲಿನಲ್ಲಿರುವ ಕ್ಷೇತ್ರ

ನೀಲಕಂಠ ಪರ್ವತದ ತಪ್ಪಲಿನಲ್ಲಿರುವ ಕ್ಷೇತ್ರ

ಸಮುದ್ರ ಮಟ್ಟಕ್ಕಿಂತ 3133 ಮೀಟರ್ ನಷ್ಟು ಎತ್ತರದಲ್ಲಿ, ಹಿಮಾಲಯ ಶಿಖರಗಳ ನಡುವೆ, ನೀಲಕಂಠ ಪರ್ವತದ ತಪ್ಪಲಿನಲ್ಲಿರುವ ಬದರಿನಾಥ ಆಶ್ರಮ, ಇನ್ನಿತರ ಎಲ್ಲ ವೈಷ್ಣವತೀರ್ಥಕ್ಷೇತ್ರಕ್ಕಿಂತ ಎತ್ತರದಲ್ಲಿರುವ ಅತ್ಯುನ್ನತ ಧಾರ್ಮಿಕ ಕ್ಷೇತ್ರ ಎಂಬ ಹಿರಿಮೆಗೆ ಪಾತ್ರವಾಗಿದೆ.

ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?

ಶ್ರೀಮನ್ನಾರಾಯಣ ಇಲ್ಲಿನ ಕ್ಷೇತ್ರಸ್ವಾಮಿ. ತಾಪತ್ರಯಗಳನಿವಾರಣೆಯ ಪಾಲಿಗೆ ಬದರಿಗೆ ಮೀರಿದ ಕ್ಷೇತ್ರವಿಲ್ಲ ಎಂಬ ನಂಬುಗೆ ಅನೇಕ ಜನರಲ್ಲಿ ಇದೆ. ಬದರಿನಾಥ್ ಗೆ ಹೋಗಬೇಕಾದರೆ, ಪಾಂಡುಕೇಶ್ವರ್ ಇಂದ 22 ಕಿಮೀ ಗಳ ರಸ್ತೆಮಾರ್ಗದ ಪ್ರಯಾಣ ಮಾಡಬೇಕು. ತನ್ನದೇ ಆದ ದಂತಕಥೆ, ಪೌರಾಣಿಕ ಹಿನ್ನಲೆ, ಧಾರ್ಮಿಕ ಮಹತ್ವದಿಂದಾಗಿ ಹೆಸರುವಾಸಿಯಾಗಿರುವ ಈ ಕ್ಷೇತ್ರವು, ಅದೆಷ್ಟು ಅಗಾಧವಾದ ಪ್ರಾಕೃತಿಕ ಸೌಂದರ್ಯದಿಂದ ಪ್ರಸಿದ್ಧಗೊಂಡಿದೆಯೋ, ಅಷ್ಟೇ ನೈಸರ್ಗಿಕ ವಿಕೋಪಗಳಿಗೆ ಆಗ್ಗಾಗ್ಗೆ ತುತ್ತಾಗುವ ಪ್ರದೇಶವೂ ಆಗಿದೆ. ಹವಾಮಾನ ತೀವ್ರತೆಯಿಂದ ವರ್ಷದಲ್ಲಿ 6 ತಿಂಗಳುಗಳು ಕಾಲ ಮಾತ್ರ, ಬದರೀನಾಥನ ಮಂದಿರ ಯಾತ್ರಾರ್ಥಿಗಳ ದರ್ಶನಕ್ಕೆ ತೆರೆದಿರುತ್ತದೆ. ಉಳಿದರ್ಧ ವರ್ಷ ಈ ಸ್ಥಳ ಗುರುತೇ ಸಿಗದಂತೆ ಸಂಪೂರ್ಣ ಹಿಮಾವೃತ್ತಗೊಂಡಿರುತ್ತದೆ.

ಸ್ಪರ್ಶಿಸಲು ಅಸಾಧ್ಯವೆನಿಸುವಷ್ಟು ತಂಪಾಗಿರುವ ತಪ್ತಕುಂಡ್

ಸ್ಪರ್ಶಿಸಲು ಅಸಾಧ್ಯವೆನಿಸುವಷ್ಟು ತಂಪಾಗಿರುವ ತಪ್ತಕುಂಡ್

ಹೀಗಿದ್ದರೂ ಕೂಡ ವಿಶ್ವದಾದ್ಯಂತ ಎಲ್ಲ ಸ್ಥಳಗಳಿಂದ ಪ್ರತಿ ವರ್ಷವೂ ಸಂಖ್ಯೆಯಲ್ಲಿ ಲಕ್ಷಾಂತರ ಜನರು ಆಗಮಿಸುತ್ತಾರೆ. ಬದರಿನಾಥ ದೇವಾಲಯವು ಮುಚ್ಚಿರುವ ಸಮಯದಲ್ಲಿ ನಾರದ ಮಹರ್ಷಿಯು ಪ್ರತಿದಿನ ಬದರೀನಾರಾಯಣನಿಗೆ ಪೂಜೆ ಸಲ್ಲಿಸುವನು ಎಂಬ ನಂಬಿಕೆ ಅಲ್ಲಿದೆ. ಹಾಗಾಗಿ ಒಂದು ದಿನವೂ ತಪ್ಪದೇ ಪೂಜೆಯ ಓಲೈಸಿಕೊಂಡಿರುವ ಸ್ವಾಮೀ ನಮ್ಮ ದೇವರು ಎಂದು ಅಲ್ಲಿನವರು ಹೆಮ್ಮೆಯಿಂದ ಹೇಳುತ್ತಾರೆ. ಬದರಿನಾಥ್ ನ ವಿಶೇಷಗಳಲ್ಲಿ ಒಂದು ಇಲ್ಲಿನ ವಿಸ್ಮಯವಾದ ತಪ್ತಕುಂಡ್. ಯಾವ ಕಾಲಕ್ಕೆ ಹೋದರೂ, ಇಲ್ಲಿನ ನೀರು ಸ್ಪರ್ಶಿಸಲು ಅಸಾಧ್ಯವೆನಿಸುವಷ್ಟು ತಂಪು. ಹಾಗಿರುವಾಗ ಅಲಕಾನಂದ ನದಿನೀರಿನ ಪಕ್ಕದಲ್ಲೇ ನೈಸರ್ಗಿಕವಾಗಿ ನಿರ್ಮಿತ ಬಿಸಿನೀರಿನ ಬುಗ್ಗೆ ಆಶ್ಚರ್ಯವನ್ನು ಪುಳಕವನ್ನು ನೀಡುತ್ತದೆ. ತಪ್ತಕುಂಡ ಎಂದು ಕರೆಯಲಾಗುವ ಈ ಬಿಸಿನೀರು ಉಕ್ಕುವ ಕುಂಡದಲ್ಲಿ ಪವಿತ್ರ ಸ್ನಾನ ಮಾಡಿದರೆ ಚರ್ಮದ ಖಾಯಿಲೆಗಳೆಲ್ಲ ಉಪಶಮನಗೊಳ್ಳುತ್ತವೆ ಎಂಬ ಪ್ರತೀತಿಯಿದೆ.

ಆಗಷ್ಟೇ ಮಳೆ ಬಿದ್ದುನಿಂತಿತ್ತು, ನೋಡಿದಷ್ಟು ಮುಗಿಯದ ಸೌಂದರ್ಯ

ಆಗಷ್ಟೇ ಮಳೆ ಬಿದ್ದುನಿಂತಿತ್ತು, ನೋಡಿದಷ್ಟು ಮುಗಿಯದ ಸೌಂದರ್ಯ

ನಾವು ಹೋದದ್ದು ಆಗಸ್ಟ್ ತಿಂಗಳಿನಲ್ಲಾದ್ದರಿಂದ ಆಗಷ್ಟೇ ಮಳೆ ಬಿದ್ದುನಿಂತಿತ್ತು. ಪ್ರತಿಯೊಂದು ಗಿಡಗಂಟೆಗಳು ಕೂಡ ಪ್ರಖರವಾದ ಸೂರ್ಯರಶ್ಮಿಗೆ ಶುಭ್ರವಾಗಿ ಹೊಳೆಯುತ್ತಿದ್ದರಿಂದ, ಅದೊಂದು ಸ್ವರ್ಗಸದೃಶ ಸ್ವಪ್ನ ತಾಣದಂತೆ ಭಾಸವಾಗುತ್ತಿತ್ತು. ಹಿಮಾಲಯದ ಪರ್ವತಗಳನ್ನು ಕೊರೆದು ಮಾಡಿದ ಘಾಟಿ ಹಾದಿಯ ಹಿಡಿದು ನಮ್ಮ ಗಾಡಿ ಸಾಗಿತ್ತು. ಚುರುಕು ಬಿಸಿಲು ಮೂಡಿದ್ದರೂ ಕೂಡ, ಮೈಗೆ ಮಾತ್ರ ಕೊರೆವ ಛಳಿಯ ಗಾಳಿಯೇ ಸೋಕುತಿತ್ತು...ತಾಪಮಾನ ಸುಮಾರು 14-15 ಡಿಗ್ರಿಯಷ್ಟಿದ್ದಿರಬಹುದು.

ಮೇಘಾಲಯದ ನಿಸರ್ಗ ನಿರ್ಮಿತ ಸೇತುವೆ - ಲಿವಿಂಗ್ ರೂಟ್ ಬ್ರಿಡ್ಜ್ಮೇಘಾಲಯದ ನಿಸರ್ಗ ನಿರ್ಮಿತ ಸೇತುವೆ - ಲಿವಿಂಗ್ ರೂಟ್ ಬ್ರಿಡ್ಜ್

ದೂರದಲ್ಲಿ ಹಿಮದ ಟೊಪ್ಪಿಗೆ ತೊಟ್ಟಿರುವ ಎತ್ತರೆತ್ತರದ ಹಿಮಾಲಯದ ಶಿಖರಗಳು, ಹಾದಿಯುದ್ದಕ್ಕೂ ಕಣ್ಣು ಹಾಯಿಸಿದಷ್ಟು ಹಸಿರುಟ್ಟ ಪರ್ವತಗಳು ಮತ್ತವುಗಳ ಮಧ್ಯೆ ಪುಟ್ಟ ಪುಟ್ಟಜಲಪಾತಗಳು, ಕೈಚಾಚಿ ಬೊಗಸೆಯಲ್ಲಿ ಹಿಡಿದಿಟ್ಟುಕೊಳ್ಳಬಹುದು ಎಂದೆನಿಸುವ ಬೆಳ್ಳನೆಯ ಮೋಡಗಳು, ಪಕ್ಕದಲ್ಲಿಯೇ ಬಳುಕಿ ಹರಿವ ನದಿ ಅಲಕಾನಂದ, ಆಹಾ! ನೋಡಿದಷ್ಟು ಮುಗಿಯದ ಸೌಂದರ್ಯ..

ಕೈಕಾಲು ನಡುಗುವಂತಹ ಪ್ರಪಾತ ಇನ್ನೊಂದೆಡೆ

ಕೈಕಾಲು ನಡುಗುವಂತಹ ಪ್ರಪಾತ ಇನ್ನೊಂದೆಡೆ

ಹಾಗೆಂದು ಪ್ರಕೃತಿ ಸೌಂದರ್ಯವನ್ನು ನೋಡಿ ಸಂತೋಷಿಸುವಷ್ಟೇ ಕೆಲವೊಂದು ಕಡೆ ಅಲ್ಲಿನ ದುರ್ಗಮ ಹಾದಿಯನ್ನು ಕಂಡು ಭಯವೂ ಕೂಡ ಆಗುತ್ತಿತ್ತು..

ದೊಡ್ಡ ದೊಡ್ಡ ಬೆಟ್ಟಗಳನ್ನು ಕೊರೆದು ಮಾಡಿದ ಕಿರಿದಾದ ರಸ್ತೆ ಒಂದು ಕಡೆಯಾದರೆ, ಚಲಿಸುವ ವಾಹನದಿಂದ ಕೆಳಗೆ ನೋಡಿದರೆ ಕೈಕಾಲು ನಡುಗುವಂತಹ ಪ್ರಪಾತ ಇನ್ನೊಂದೆಡೆ. ಇನ್ನೇನು ತಲೆಯ ಮೇಲೆ ಬಿದ್ದೆ ಹೋಗುತ್ತದೆ ಎಂದು ಭಾಸವಾಗುವಂತಹ ಬ್ರಹತ್ ಬಂಡೆ ಕಲ್ಲುಗಳ ಕೆಳಗೆ ನಮ್ಮ ಗಾಡಿ ಸಾಗುವಾಗ ಒಮ್ಮೊಮ್ಮೆ ಆತಂಕವಾಗುವುದು ಸುಳ್ಳಲ್ಲ. ಮಳೆ ಹೆಚ್ಚಾಗಿ ಮೇಲಿಂದ ಹರಿದು ಬರುವ ಜಲಧಾರೆಯು ಕೆಲವೆಡೆ ರಸ್ತೆಯ ಮೇಲೆಯೇ ಹರಿಯುತ್ತದೆ. ಗಾಡಿ ಸ್ಕಿಡ್ ಆಗದಂತೆ ಚಾಲನೆ ಮಾಡುವ ಕೌಶಲ್ಯ ಅಲ್ಲಿನ ಡ್ರೈವರುಗಳಿಗಿದ್ದರೂ ನಮಗೆ ಉಸಿರು ಬಿಗಿಹಿಡಿಯುವಂತಹ ಪರಿಸ್ಥಿತಿ.

2013ರ ಭಯಾನಕ ಜಲಪ್ರಳಯದ ನಂತರದ ದೃಶ್ಯಗಳು

2013ರ ಭಯಾನಕ ಜಲಪ್ರಳಯದ ನಂತರದ ದೃಶ್ಯಗಳು

ಒಮ್ಮೊಮ್ಮೆ ಚಳಿಗಾಲದಲ್ಲಿ ಆಗುವ ಭಾರೀ ಹಿಮಪಾತಕ್ಕೆ ಇಲ್ಲಿನ ಹಳ್ಳಿಗರ ಅದೆಷ್ಟೋ ಮನೆ ಗುಡಿಸಲುಗಳು ಹಾನಿಗೊಳಗಾಗುತ್ತವೆ. ಆದರೂ ಕೆಚ್ಚೆದೆಯಿಂದ ಮತ್ತೆ ಜೀವನ ಕಟ್ಟಿಕೊಳ್ಳುವ ಇಲ್ಲಿನ ಜನರ ಸಾಹಸಮಯ ಬದುಕು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ. 2013ರ ಭಯಾನಕ ಜಲಪ್ರಳಯದ ನಂತರ ರಸ್ತೆಮಾರ್ಗಗಳು ಪುನರ್ನಿಮಾಣಗೊಂಡು, ಕಾಲಕಾಲಕ್ಕೆ ಕೆಲವೆಡೆ ರಸ್ತೆಗಳು ಅಭಿವೃದ್ಧಿಗೊಳ್ಳುತ್ತ ಬಂದಿದ್ದರೂ ಇಲ್ಲಿ ಯಾವ ಸಮಯಕ್ಕೆ ಹೇಗೆ ಎಂದು ಹೇಳಲಾಗುವುದಿಲ್ಲ.

ಅತಿ ಕಡಿಮೆ ಖರ್ಚಿನಲ್ಲಿ ವಿಶ್ವ ಪರ್ಯಟನೆಗೆ ಶ್ರೀನಿಧಿ ದಿಕ್ಸೂಚಿ!ಅತಿ ಕಡಿಮೆ ಖರ್ಚಿನಲ್ಲಿ ವಿಶ್ವ ಪರ್ಯಟನೆಗೆ ಶ್ರೀನಿಧಿ ದಿಕ್ಸೂಚಿ!

ಯಾವ ಕ್ಷಣಕ್ಕಾದರೂ ದೊಡ್ಡ ದೊಡ್ಡ ಸುತ್ತುವರೆದ ಪರ್ವತಗಳಿಂದ ಬಂಡೆಕಲ್ಲುಗಳು ಜಾರಿ ಹಾದಿ ಮುಚ್ಚಬಹುದು, ಭೂಮಿ ಕುಸಿಯಬಹುದು, ಇಲ್ಲಿ ಎಲ್ಲವೂ ಅನಿಶ್ಚಿತ..!! ಹಾಗೆ ಸಿಕ್ಕಿ ಹಾಕಿಕೊಂಡರೆ ದಿನಗಟ್ಟಲೆ ನಿಂತಲ್ಲೇ ರಸ್ತೆ ತೆರವುಗೊಳ್ಳುವ ವರೆಗೆ ಕಾಯುವ ಪರಿಸ್ಥಿತಿ. ಅದೇ ಕಾರಣದಿಂದ ಇವುಗಳಿಗೆ ಹೊಂದಿಕೊಂಡಂತೆ ಯಾತ್ರೆಯ ಹಾದಿಯ ಮಾಹಿತಿ ಕ್ಷಣಕ್ಷಣಕ್ಕೆ ನವೀಕರಿಸಿ ಯಾತ್ರಾರ್ಥಿಗಳಿಗೆ ತಿಳಿಸಲಾಗುತ್ತದೆ. ಹೀಗೆ ಇಲ್ಲಿನ ಭೂರಾಶಿಯ ವೈವಿದ್ಯಮಯ ಸಂಗತಿಗಳಿಗೆ ಬೆರಗಾಗುತ್ತಾ ನಾವೆಲ್ಲರೂ ಬದರಿನಾಥ ಆಶ್ರಮ/ಮಂದಿರದ ಸ್ಥಳ ತಲುಪಿದ್ದಾಯಿತು.

 ನಾರಾಯಣ ಮತ್ತು ನರಪರ್ವತಗಳ ದರ್ಶನ

ನಾರಾಯಣ ಮತ್ತು ನರಪರ್ವತಗಳ ದರ್ಶನ

ಬದರಿಯಲ್ಲಿ ಪರಸ್ಪರ ಎದುರುಬದರಾಗಿ ರಾರಾಜಿಸುವುದು ಎರಡು ಬ್ರಹತ್ಪರ್ವತಗಳಾದ ನಾರಾಯಣ ಮತ್ತು ನರಪರ್ವತ. ನಾರಾಯಣ ಪರ್ವತದ ಬುಡದಲ್ಲಿಯೇ ಇರುವುದು, ಭವ್ಯವಾಗಿ ಎದ್ದು ಕಾಣುವ ಬದರೀ ಮಂದಿರ. ಅಲ್ಲಿ ಭೋರ್ಗರೆಯುತ್ತಾ ಹರಿಯುವುದು ಅಲಕನಂದಾ ನದಿ. ಮಂದಿರಕ್ಕೆ ಹೋಗಲು ಅಲಕನಂದಾ ನದಿಯ ಸೇತುವೆ ದಾಟಿ ಹೋಗಬೇಕು. ಅದರ ಪಕ್ಕದಲ್ಲೇ ತೀರ್ಥಸ್ನಾನಘಟ್ಟಕ್ಕೆ ಹೋಗುವ ದಾರಿ. ನೆಲದ ಮಟ್ಟಕ್ಕಿಂತ ಸುಮಾರು 50 ಅಡಿ ಎತ್ತರದಲ್ಲಿ ವರ್ಣರಂಜಿತ ದ್ವಾರ, ಬಂಗಾರ ಲೇಪಿತ ಕಳಶದಿಂದ ಅಲಂಕೃತಗೊಂಡ ಈ ದೇವಾಲಯ ನೋಡುವುದೇ ಕಣ್ಣಿಗೆ ಒಂದು ಹಬ್ಬ. ಮಂದಿರದ ಒಳಾಂಗಣದಲ್ಲಿ ಮರದ ಸೂಕ್ಷ್ಮವಾದ ಕೆತ್ತನೆಗಳು ಮನಸ್ಸಿಗೆ ಮುದವನ್ನು ನೀಡುತ್ತದೆ.

 'ಜೈ ವಿಶಾಲ್ ಭದ್ರಿನಾಥ್' ಎಂಬ ಒಕ್ಕೊರಲಿನ ಜಯಕಾರ

'ಜೈ ವಿಶಾಲ್ ಭದ್ರಿನಾಥ್' ಎಂಬ ಒಕ್ಕೊರಲಿನ ಜಯಕಾರ

ಸುತ್ತಲಿನ ಪ್ರಕೃತಿ ಸೌಂದರ್ಯ ಈ ಸ್ಥಳಕ್ಕೆ ಮತ್ತಷ್ಟು ಮೆರಗು ನೀಡುತ್ತದೆ. ಪ್ರತಿ ನಿತ್ಯಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡಿ ಪುನೀತರಾಗುತ್ತಾರೆ. ನಾವು ಹೋದ ಸಮಯಕ್ಕೆ, ದರ್ಶನಕ್ಕೆ ಮಂದಿರದ ಬಾಗಿಲುಗಳು ತೆರೆಯಲು ಸನ್ನದ್ಧವಾಗಿದ್ದರಿಂದ, ಜನರ ಭಕ್ತಿ ಭಾವ, ಆ ಹುರುಪು ಎಲ್ಲವೂ ಒಂದು ಅವಿಸ್ಮರಣೀಯ ಅನುಭವ. ಗಂಟೆಯ ನಾದ ಮೊಳಗಿ, ಬಾಗಿಲು ತೆರೆದುಕೊಳ್ಳುತ್ತಿದ್ದಂತೆಯೇ, ಒಮ್ಮೆಲೇ ನೂರಾರು ಜನರ ಮುಗಿಲು ಮುಟ್ಟುವಂತಹ 'ಜೈ ವಿಶಾಲ್ ಭದ್ರಿನಾಥ್' ಎಂಬ ಒಕ್ಕೊರಲಿನ ಜಯಕಾರ ನಮ್ಮನ್ನು ಯಾವುದೊ ಒಂದು ಅಲೌಕಿಕ ಭಾವಕ್ಕೆ ಎಳೆದೊಯ್ಯುವಂತೆ ಭಾಸವಾಗುತ್ತಿತ್ತು. ಕಪ್ಪು ಸಾಲಿಗ್ರಾಮದಿಂದ ಮಾಡಲ್ಪಟ್ಟ, ಶಂಖ ಚಕ್ರ ಧಾರಿತ ವಿಷ್ಣು ಸರ್ವಾಲಂಕಾರದಿಂದ ಭೂಷಿತನಾಗಿ, ಧ್ಯಾನಮಗ್ನ ಭಂಗಿಯಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದ. ಅವನ ಸುತ್ತುವರೆದಿರುವುದು ಗರುಡ, ಕುಬೇರ, ನಾರದ ಮುನಿ, ನರ, ನಾರಾಯಣ, ಗಣಪತಿ ಇತ್ಯಾದಿ ಅವನ ದೇವತಾ ಪರಿವಾರ.

ಪ್ರವಾಸ ಕಥನ : ಪಟ್ಟಾಯದ 'ಸ್ಯಾಂಚುರಿ ಆಫ್ ಟ್ರುಥ್ ' ದೇಗುಲದಲ್ಲೊಂದು ಸುತ್ತುಪ್ರವಾಸ ಕಥನ : ಪಟ್ಟಾಯದ 'ಸ್ಯಾಂಚುರಿ ಆಫ್ ಟ್ರುಥ್ ' ದೇಗುಲದಲ್ಲೊಂದು ಸುತ್ತು

ಬದರಿ ನಾರಾಯಣನ ದರ್ಶನ ಪಡೆದ ಧನ್ಯತಾ ಭಾವ

ಬದರಿ ನಾರಾಯಣನ ದರ್ಶನ ಪಡೆದ ಧನ್ಯತಾ ಭಾವ

ಬದರಿ ನಾರಾಯಣನ ದರ್ಶನ ಪಡೆದ ಧನ್ಯತಾ ಭಾವ ನಮ್ಮದಾಯಿತು. ಹೊರಗೆ ಬರುವಾಗ ಸಕ್ಕರೆಯ ಅಚ್ಚಿನ ಸಂಕ್ರಾಂತಿ ಕಾಳುಗಳುಗಳನ್ನು ಪ್ರಸಾದವಾಗಿ ನೀಡುತ್ತಾರೆ..ಮೊಬೈಲ್ ನೆಟ್ ವರ್ಕ್ ತಕ್ಕಮಟ್ಟಿಗೆ ಚೆನ್ನಾಗಿಯೇ ಸಿಗುತ್ತಿದ್ದ ಕಾರಣ, ಕುಟುಂಬದವರಿಗೆಲ್ಲರಿಗೂ ವಿಡಿಯೋ ಕಾಲ್ ಮಾಡಿ ಅಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯವನ್ನೂ, ಬದರಿ ನಾರಾಯಣನ ಮಂದಿರವನ್ನು ತೋರಿಸುವ ಧನ್ಯ ಅವಕಾಶ ಸಿಗುತ್ತದೆ. ಬದರಿ ನಾರಾಯಣನ ಮಂದಿರದ ಹೊರತಾಗಿ, ಬ್ರಹ್ಮಕಪಾಲ, ನಾರದಶಿಲಾ , ಗರುಡಶಿಲಾ ಇತ್ಯಾದಿ ಇನ್ನೂ ಸಾಕಷ್ಟು ನೋಡುವಂತಹ ಸ್ಥಳಗಳಿವೆ ಎಂದು ಅಲ್ಲಿನ ಸ್ಥಳೀಯರಿಂದ ಕೇಳ್ಪಟ್ಟೆವು.

ಆದರೆ ನಮಗೆ ಮುಂದಕ್ಕೆ ಬದರಿಯಷ್ಟೇ ಪ್ರಸಿದ್ಧ ಮಾನಾ ಹಳ್ಳಿಯನ್ನು ವೀಕ್ಷಿಸಿ ವಾಪಸು ಸಂಜೆಯಷ್ಟರಲ್ಲಿ ಸುರಕ್ಷಿತವಾಗಿ ಪಾಂಡುಕೇಶ್ವರ್ ತಲುಪಬೇಕಾದ ಅನಿವಾರ್ಯತೆಯಿತ್ತದ್ದರಿಂದ ಬದರಿಯ ಇನ್ನೂ ವಿಸ್ತಾರವಾದ ಭೇಟಿ ನಮ್ಮದಾಗಲಿಲ್ಲ. ಮಂದಿರದ ಹಾದಿಯನ್ನು ದಾಟಿ ಬರುವವರೆಗೂ ಹೊರಳಿ ಮತ್ತೆ ಮತ್ತೆ ನೋಡಬೇಕೆನಿಸುವ ಆ ದಿವ್ಯ ಆಕರ್ಷಣೆ, ಆ ಅನುಭೂತಿಯನ್ನು ಅಚ್ಚಳಿಯದಂತೆ ಮನದಲ್ಲಿ ಕೂಡಿಟ್ಟುಕೊಂಡು ತೃಪ್ತಿಯಿಂದ ಅಲ್ಲಿಂದ ಹೊರಟು ಬಂದೆವು.

ಇದೀಗ ಕೊರೋನಾ ವಿಪತ್ತಿನಿಂದ ಪ್ರವಾಸೋದ್ಯಮ ಕುಸಿತ

ಇದೀಗ ಕೊರೋನಾ ವಿಪತ್ತಿನಿಂದ ಪ್ರವಾಸೋದ್ಯಮ ಕುಸಿತ

ಇದೀಗ ಕೊರೋನಾ ವಿಪತ್ತಿನಿಂದ ಜನರ ಪ್ರವಾಸದಲ್ಲಿ ಇಳಿಮುಖ ಕಂಡಿದ್ದರೂ, ಬದರಿನಾಥ ಯಾತ್ರೆಗೆ ತೆರೆದಿದೆ. ಉತ್ತರಾಖಂಡ್ ರಾಜ್ಯಕ್ಕೆ ಹೊರಗಿನಿಂದ ಬರುವ ಯಾತ್ರಿಗಳು 96 ಗಂಟೆಗಳಿಗಿಂತ ಹೆಚ್ಚು ಸಮಯ ಮೀರದಿರುವ ಕೋವಿಡ್ ನೆಗೆಟಿವ್ ತಪಾಸಣಾ ಪಾತ್ರವನ್ನು ಹಿಡಿದು, ಬದರಿನಾಥ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ. ದೇವಾಲಯದ ಒಳಾಂಗಣ ಆವರಣಕ್ಕೆ ಹೋಗಲು ಅನುಮತಿ ಕೂಡಾ ಸಿಕ್ಕಿದೆ. ಆ ಪುಣ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಪುಣ್ಯ ಮತ್ತು ಈ ಋತುವಿಗೆ ಕಾಣಬಹುದಾದ ಸ್ವರ್ಗ ಸದೃಶ ನೈಸರ್ಗಿಕ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ತೆರಳುತ್ತಿದ್ದಾರೆ. ಜೀವನದಲ್ಲಿ ಒಮ್ಮೆ ಖಂಡಿತವಾಗಿಯೂ ನೋಡಬೇಕಾದ ಸ್ಥಳ ಇದಾಗಿದೆ.

ಪ್ರವಾಸಕ್ಕೆ ಹೊರಟ್ರಾ? ನಿಲ್ಲಿ, ಈ ಲೇಖನವನ್ನು ಓದುತ್ತಾ ಮುಂದೆ ಸಾಗಿಪ್ರವಾಸಕ್ಕೆ ಹೊರಟ್ರಾ? ನಿಲ್ಲಿ, ಈ ಲೇಖನವನ್ನು ಓದುತ್ತಾ ಮುಂದೆ ಸಾಗಿ

English summary
World Tourism Day Special: Visit to Badrinath temple in Uttarakhand a travelogue by a trekker traveler Sowmya Beena, Sagara from Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X