• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಾರಣಿಗರನ್ನೂ, ಆಸ್ತಿಕರನ್ನೂ ಸೆಳೆಯುವ ಕುಂದಬೆಟ್ಟ

By ಬಿಎಂ ಲವಕುಮಾರ್, ಮಡಿಕೇರಿ
|

ಕೊಡಗಿನ ಹಲವಾರು ಬೆಟ್ಟಗಳು ವಿವಿಧ ವೈಶಿಷ್ಟ್ಯತೆಯನ್ನು ಹೊಂದಿದ್ದು, ಅದಕ್ಕೆ ಕುಂದಬೆಟ್ಟವೂ ಸೇರಿದೆ. ಸಾಹಸಪ್ರಿಯರಿಗೆ ಚಾರಣಕ್ಕೆ ಯೋಗ್ಯವೆನಿಸಿದರೆ, ಭಕ್ತಾದಿಗಳಿಗೆ ಪವಿತ್ರ ತಾಣವಾಗಿದೆ. ವೀಕ್ಷಕರಿಗೆ ಪ್ರಕೃತಿ ಸೌಂದರ‍್ಯದ ಮೂಲಕ ರಸದೂಟವನ್ನು ನೀಡುತ್ತದೆ.

ಕೊಡಗಿನಲ್ಲಿರುವ ಅದೆಷ್ಟೋ ಬೆಟ್ಟಗಳು ಕೇವಲ ಬೆಟ್ಟಗಳಾಗಿಯೇನೂ ಉಳಿದಿಲ್ಲ. ಅವು ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿವೆ. ಕೆಲವು ಬೆಟ್ಟಗಳು ಚಾರಣ ಪ್ರಿಯರಿಗೆ ಮುದ ನೀಡಿದರೆ, ಇನ್ನು ಕೆಲವು ಪವಿತ್ರ ತಾಣವಾಗಿಯೂ ಖ್ಯಾತಿಯಾಗಿವೆ. ಇಂತಹ ಬೆಟ್ಟಗಳ ಮಧ್ಯೆ ಕುಂದಬೆಟ್ಟ ಚಾರಣಿಗರಿಗೂ ಸೈ, ಪವಿತ್ರ ತಾಣವಾಗಿಯೂ ಜೈ.

ಚಾರಣ ತಾಣವಾಗಿಯೂ, ಪವಿತ್ರ ಕ್ಷೇತ್ರವಾಗಿಯೂ ವೀಕ್ಷಕರನ್ನು ತನ್ನಡೆಗೆ ಆಕರ್ಷಿಸುವ ಕುಂದಬೆಟ್ಟವು ಕೊಡಗಿನ ಪ್ರಮುಖ ಪಟ್ಟಣ ಮಡಿಕೇರಿಯಿಂದ 60 ಕಿಲೋಮೀಟರ್ ದೂರದಲ್ಲಿದೆ. ಸಮುದ್ರ ಮಟ್ಟದಿಂದ 3,200 ಅಡಿ ಎತ್ತರವಿರುವ ಈ ತಾಣ ತನ್ನ ಸ್ನಿಗ್ಧ ಸೌಂದರ್ಯದಿಂದ ಜನರನ್ನು ಬೆರಗುಗೊಳಿಸುತ್ತದೆ. [ಚಾರಣಿಗರ ಕೈಬೀಸಿ ಕರೆಯುವ ಕೊಡಗಿನ ಭತ್ತದರಾಶಿ ಬೆಟ್ಟ]

ಮರೆಯಲಾಗದ ಅನುಭವ : ಈ ತಾಣಕ್ಕೆ ಸಾಗುವುದೆಂದರೆ ಅದೊಂದು ಮರೆಯಲಾಗದ ಅನುಭವ. ಕೊಡವ ಭಾಷೆಯಲ್ಲಿ 'ಕುಂದ್' ಎಂಬ ಪದವು ಬೆಟ್ಟ ಎಂಬ ಅರ್ಥವನ್ನು ನೀಡುತ್ತದೆ. ಬೆಟ್ಟವೊಂದು ಗ್ರಾಮದ ಹೃದಯ ಭಾಗದಲ್ಲಿ ಮೈದಾಳಿ ನಿಂತಿದ್ದರಿಂದಲೋ ಏನೋ ಈ ಗ್ರಾಮವನ್ನು ಕುಂದವೆಂದೇ ಕರೆಯುತ್ತಾರೆ. ಗ್ರಾಮದ ಕಣ್ಮಣಿಯೇ ಕುಂದಬೆಟ್ಟ.

ಕಲ್ಲು, ಮುಳ್ಳು ಅಂಕುಡೊಂಕಿನ ಹಾದಿಯ ಮೂಲಕ ಈ ಬೆಟ್ಟವನ್ನೇರುವುದು ಅಷ್ಟು ಸಲೀಸೇನಲ್ಲ. ಸುತ್ತಲೂ ಹಸಿರು ಹೊದ್ದು ಕುಳಿತ ಪರಿಸರ, ಬೀಸುವ ತಂಗಾಳಿ, ಬೆಟ್ಟವನ್ನೇರಲು ಹುರುಪು ನೀಡುತ್ತವೆ. ಬೆಟ್ಟದ ಮೇಲ್ಭಾಗವನ್ನು ತಲುಪಿ ಅಲ್ಲಿ ಒಂದು ಕ್ಷಣ ನಿಂತು ಸುತ್ತಲೂ ದೃಷ್ಟಿ ಹರಿಸಿದರೆ ಇಲ್ಲಿಂದ ಕಾಣಬರುವ ಸುಂದರ ನೋಟ ನೋಡುಗನ ಪಾಲಿಗೆ ರಸದೂಟವಾಗುತ್ತದೆ.

ದೂರದಲ್ಲಿ ಹರಡಿಕೊಂಡಿರುವ ಪರ್ವತ ಶ್ರೇಣಿಗಳು.. ಹಸಿರನ್ನೊಳಗೊಂಡು ಗುಂಪುಗುಂಪಾಗಿ ಕಂಡು ಬರುವ ಕಾನನಗಳು.. ಕಾಫಿ ತೋಟಗಳು.. ಗದ್ದೆಯ ಬಯಲುಗಳು ಸೇರಿದಂತೆ ಪ್ರಕೃತಿಯ ವಿಹಂಗಮ ನೋಟ ಮನತಣಿಸುತ್ತದೆ. ಕೈಕೇರಿ ಬಳಿಯಿಂದ ಸಾಗಿದರೆ 1 ಗಂಟೆಯಲ್ಲಿ ಬೆಟ್ಟದ ತುದಿ ತಲುಪಬಹುದು. [ಮಡಿಕೇರಿಯ ನಿಶಾನೆಮೊಟ್ಟೆ ಏರೋಕೆ ಗುಂಡಿಗೆ ಬೇಕು]

ಪವಿತ್ರ ಕ್ಷೇತ್ರ, ಪೌರಾಣಿಕ ಕಥೆ : ಹಾಗೆನೋಡಿದರೆ ಈ ಕುಂದಬೆಟ್ಟ ಚಾರಣಿಗರ ಮನ ತಣಿಸುವ ತಾಣ ಮಾತ್ರವಾಗಿರದೇ, ಪವಿತ್ರ ಕ್ಷೇತ್ರವೂ ಇದಾಗಿದೆ. ಇಲ್ಲಿ ಬೊಟ್ಲಪ್ಪ ಈಶ್ವರ ದೇವಾಲಯ, ಭೀಮ ಕಲ್ಲು, ದೇರಟೆ ಕಲ್ಲು, ನರಿಗುಡ್ಡೆ ಮೊದಲಾದ ವೀಕ್ಷಣಾರ್ಹ ಸ್ಥಳಗಳಿಗೆ. ಇಲ್ಲಿರುವ ಬೊಟ್ಲಪ್ಪ ಈಶ್ವರ ದೇವಾಲಯ ಪುರಾತನದಾಗಿದ್ದು, ಈ ದೇವಾಲಯ ಹೇಗೆ ನಿರ್ಮಿತವಾಯಿತು ಎಂಬುದಕ್ಕೊಂದು ದಂತ ಕಥೆಯಿದೆ.

ವನವಾಸಕ್ಕೆ ತೆರಳಿದ ಪಾಂಡವರು ಕುಂದಬೆಟ್ಟಕ್ಕೆ ಬಂದಿದ್ದರಂತೆ. ಈ ಸಂದರ್ಭದಲ್ಲಿ ಒಂದೇ ರಾತ್ರಿಯಲ್ಲಿ ಭೀಮನು ಕಲ್ಲು ಹೊತ್ತು ತಂದು ದೇವಾಲಯವನ್ನು ಕಟ್ಟಿದನೆಂದೂ ಕೆಲಸ ಸಂಪೂರ್ಣ ಮುಗಿಯುವ ವೇಳೆಗೆ ಬೆಳಗಾದುದರಿಂದ ದೇವಾಲಯಕ್ಕೆ ಬಾಗಿಲು ನಿರ್ಮಿಸಲಿಕ್ಕಾಗಲಿಲ್ಲವಂತೆ. ಆದರೆ ಕೆಲವರ ಅಭಿಪ್ರಾಯದ ಪ್ರಕಾರ, ಈ ದೇವಾಲಯವು ಕೊಡಗು ರಾಜರ ಕಾಲದಲ್ಲಿ ನಿರ್ಮಿತವಾಗಿದೆಯೆಂದು, ಇದಕ್ಕೆ ಪೂರಕ ಎನ್ನುವಂತೆ ಶಿಲಾಸನದಲ್ಲಿ ಮನೆಯ ಪಂಡ ಸಂಬ್ರಾಯ' ಎಂಬ ಹೆಸರಿರುವುದು ಕಂಡು ಬರುತ್ತದೆ. ಅದೇನೆ ಇರಲಿ ಈ ದೇವಾಲಯದ ಅಧಿದೇವತೆಯೂ ಆದ ಈಶ್ವರ ಸುತ್ತ ಮುತ್ತಲ ಗ್ರಾಮದ ರಕ್ಷಕನಾಗಿದ್ದಾನೆ. [ತಡಿಯದೇ ಕಾಡುವ ತಡಿಯಂಡಮೋಲ್]

ಮೂರು ಸುತ್ತು ಸುತ್ತಿದರೆ : ದೇವಾಲಯದ ಮುಂದೆ ಬೃಹತ್ ಶಿಲಾ ಬಂಡೆಯೊಂದು ಹರಡಿಕೊಂಡಿದ್ದು, ಈ ಬಂಡೆಯ ತುದಿಯಲ್ಲಿ ಒಂದು ಉಬ್ಬು ಕಲ್ಲಿದ್ದು, ಇದರ ಮೇಲೆ ನಿಂತು ಮೂರು ಸುತ್ತು ಸುತ್ತಿದರೆ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತದೆಯೆಂಬ ಪ್ರತೀತಿಯಿದೆ. ಹಿಂದೆ ಸುಬ್ರಹ್ಮಣ್ಯ ಸ್ವಾಮಿಯ ನವಿಲು ಈ ಕಲ್ಲಿನ ಮೇಲೆ ನಾಟ್ಯವಾಡಿತ್ತೆಂದೂ ಆದುದರಿಂದಲೋ ಏನೋ ಈ ಕಲ್ಲನ್ನು ದೇರಟೆಕಲ್ಲು ಎಂದು ಕರೆಯುತ್ತಾರೆ.

ದೇರಟೆ ಕಲ್ಲಿನ ವಿಶೇಷತೆ ಹಾಗಿದ್ದರೆ, ದೇವಾಲಯದ ಹಿಂಭಾಗದಲ್ಲಿ ಮತ್ತೊಂದು ಬೃಹತ್ ಕಲ್ಲು ಕಂಡು ಬರುತ್ತದೆ. ಇದನ್ನು ಭೀಮನ ಕಲ್ಲು ಎಂದೇ ಕರೆಯುತ್ತಾರೆ. ಬೊಟ್ಲಪ್ಪ ಈಶ್ವರ ದೇವಾಲಯವನ್ನು ನಿರ್ಮಿಸುತ್ತಿದ್ದ ಸಂದರ್ಭ ಭೀಮನೇ ಆ ಬೃಹತ್ ಕಲ್ಲನ್ನು ಹೊತ್ತು ತಂದು ಅಲ್ಲಿಟ್ಟನಂತೆ. ಈ ಕಲ್ಲಿನಲ್ಲಿ ಕಾಲಿನ ಮಂಡಿಯ ಮತ್ತು ಕೈಬೆರಳುಗಳ ಗುರುತು ಕಂಡು ಬರುತ್ತದೆ. ಈ ಕಲ್ಲಿನ ಪಕ್ಕದಲ್ಲೇ ಚಿಕ್ಕ ಪೊಟರೆಯೊಂದಿದ್ದು, ಹಿಂದೆ ಪಾಂಡವರು ಈ ಪೊಟರೆಯನ್ನು ಅಡುಗೆ ಸಾಮಾನುಗಳನ್ನು ಇಡಲು ಉಪಯೋಗಿಸುತ್ತಿದ್ದರೆಂದು ಕೆಲವರು ಹೇಳುತ್ತಾರೆ. ಈ ಕಲ್ಲನ್ನೇರಿ ಕುಳಿತು ಸೌಂದರ್ಯವನ್ನು ಆಸ್ವಾದಿಸುವುದು ಅದೊಂದು ರೀತಿಯ ಮಜಾ. [ಪೊಸಡಿಗುಂಪೆ ಬೆಟ್ಟಕ್ಕೆ ಬಂದು ಸೂರ್ಯಾಸ್ತ ನೋಡಿ]

ದೇವಾಲಯದ ಮುಂಭಾಗಕ್ಕಾಗಿ ಹಾದು ಕಾಡು, ಮೇಡನ್ನೆಲ್ಲಾ ಕ್ರಮಿಸಿದರೆ, ಅಲ್ಲೊಂದು ಬಾಯಿ ತೆರೆದ ಗುಹೆಯೊಂದು ಗೋಚರವಾಗುತ್ತದೆ. ನೆಲಮಾಳಿಗೆಯಂತಿರುವ ಗುಹೆಯಲ್ಲಿ ಕತ್ತಲು ಆವರಿಸಿದ್ದು, ಈ ಗುಹೆಯೊಳಗೆ ನುಗ್ಗಿ ಮುನ್ನಡೆದರೆ ಅಲ್ಲೊಂದು ಕಿಂಡಿಯಿದ್ದು, ಇದರ ಮೂಲಕ ಪ್ರಕೃತಿ ಸೊಬಗನ್ನು ಸವಿಯಬಹುದಾಗಿದೆ.

ವರುಷದ ತುಲಾ ಸಂಕ್ರಮಣದ ಮಾರನೇ ದಿನ ಈ ಬೆಟ್ಟದಲ್ಲಿ ಜಾತ್ರೆಯನ್ನು ನಡೆಸಲಾಗುತ್ತದೆ. ಈ ಸಂದರ್ಭ ಸುತ್ತ ಮುತ್ತಲಿನಿಂದ ಜನರು ಬಂದು ಜಮಾಯಿಸುವುದನ್ನು ಕಾಣಬಹುದು. ಹಲವು ವೈಶಿಷ್ಟ್ಯತೆಯಿಂದ ಕೂಡಿದ ಈ ಹಬ್ಬವನ್ನು ಕುಂದಬೆಟ್ಟದ ಕುದುರೆ ಹಬ್ಬ ಎಂದೇ ಕರೆಯುವುದು ವಾಡಿಕೆ. ಇದೀಗ ಚಾರಣಪ್ರಿಯರನ್ನೂ, ಆಸ್ತಿಕರನ್ನೂ ತನ್ನೆಡೆಗೆ ಸೆಳೆಯುವ ಈ ತಾಣಕ್ಕೆ ಸಾಗುವ ಪ್ರವಾಸಿಗರ ಸಂಖ್ಯೆಯೂ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. [ಬೇಸಿಗೆಯಲ್ಲಿ ಕೋಸಳ್ಳಿ ಜಲಪಾತಕ್ಕೆ ಹೋಗಿಬನ್ನಿ]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kunda Betta is one of the finest trekking places in Coorg district. Unlike other hills, Kunda Betta attracts both trekkers and God believers, as it has a Shiva temple, believed to be built by Bhima of Mahabharata. Rich green and cool breeze makes trekking most memorable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more