ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಕ್ಷೇತ್ರ ದರ್ಶನ:ಹಟ್ಟಿಯಂಗಡಿ ಸಿದ್ದಿವಿನಾಯಕ

By *ಬಾಲರಾಜ್ ತಂತ್ರಿ
|
Google Oneindia Kannada News

Temple round up Hattiangady Sri Siddi Vinayaka Temple
ಇದೇ ಬುಧವಾರ (ಸೆ 19) ನಾಡಿನೆಲ್ಲಡೆ ಗಣೇಶ ಚತುರ್ಥಿಯ ಸಡಗರ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಕರಾವಳಿ ಜಿಲ್ಲೆಯಾದ ಉಡುಪಿಯ ಇತಿಹಾಸ ಪ್ರಸಿದ್ದ ಹಟ್ಟಿಯಂಗಡಿ ಶ್ರೀವಿನಾಯಕ ದೇವಾಲಯದ ಕಿರು ಕ್ಷೇತ್ರ ಪರಿಚಯ ಮಾಡಿಕೊಳ್ಳೋಣ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ಈ ದೇವಾಲಯ ಎಂಟನೇ ಶತಮಾನದ್ದು ಎನ್ನುವುದು ಪ್ರತೀತಿ. ಅಲೂಪ ರಾಜಮನೆತನ ಈ ಕ್ಷೇತ್ರವನ್ನು ಪಟ್ಟಿನಗಾರ ಎಂದು ಕರೆಯುತ್ತಿದ್ದರು ಮತ್ತು ಅವರ ರಾಜಧಾನಿಯಾಗಿತ್ತು.

ಅಲೂಪರು ಏಳರಿಂದ ಎಂಟನೇ ಶತಮಾನದಲ್ಲಿ ತುಳುನಾಡನ್ನು ಆಳುತ್ತಿದ್ದರು. ಇವರ ನಂತರ ಹೊಯ್ಸಳರು ಮತ್ತು ಹೊನ್ನೆಕಂಬಾಲ ಮನೆತನ ಈ ಕ್ಷೇತ್ರವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು.

ವಾರಾಹಿ ನದಿ ದಂಡೆಯಲ್ಲಿರುವ ಈ ದೇವಾಲಯದ ವಿನಾಯಕನ ವಿಗ್ರಹ ಶಾಲಿಗ್ರಾಮ ಶಿಲೆಯಿಂದ ಮಾಡಿದ್ದು. ದಿನದಿಂದ ದಿನಕ್ಕೆ ವಿಗ್ರಹ ಬೆಳೆಯುತ್ತದೆ ಎನ್ನುವುದು ಕ್ಷೇತ್ರದ ಭಕ್ತರ ಹೇಳಿಕೆ. ಕುಂದಾಪುರದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯದ ಆಸುಪಾಸಿನಲ್ಲಿ ಜೈನರ ಬಸದಿ, ಶಂಕರನಾರಾಯಣ, ಮರಳಾದೇವಿ ಮುಂತಾದ ದೇವಾಲಯಗಳಿವೆ.

6ನೇ ಶತಮಾನದಲ್ಲಿ ಶ್ರೀ ಗೋವಿಂದರಾಮ ಯತಿವರ್ಯರು ಈ ಕ್ಷೇತ್ರದಲ್ಲಿ ಅಘೋರ ತಪಸ್ಸನ್ನು ಮಾಡಿದ್ದರು. ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ರಾಮ ಭಟ್ಟರ ನಿಷ್ಠೆ, ನಿಯಮಗಳಿಗೆ ಮೆಚ್ಚಿ ಯತಿಗಳು ಇನ್ನು ಮುನ್ನೂರು ವರ್ಷಗಳೊಳಗೆ ಈ ದೇವಾಲಯ ಜಗತ್ಪ್ರಸಿದ್ದಿ ಯಾಗಲಿ ಎಂದು ಆಶೀರ್ವದಿಸಿದ್ದರು ಎನ್ನುವುದು ಕ್ಷೇತ್ರದ ಇತಿಹಾಸ ತಿರುವಿದಾಗ ಸಿಗುವ ಮಾಹಿತಿ.

ಜಟೆಯನ್ನು ಹೊಂದಿರುವ ದೇಶದ ಏಕೈಕ ವಿಗ್ರಹ ಇದಾಗಿದ್ದು, ವಿಗ್ರಹದ ಎತ್ತರ ಎರಡೂವರೆ ಅಡಿ. ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಈ ವಿನಾಯಕ ತದನಂತರ 'ಸಿದ್ದಿ' ವಿನಾಯಕನೆಂದು ಪ್ರಸಿದ್ದಿಯಾಯಿತು.

ಸಹಸ್ರ ನಾರಿಕೇಳ ಗಣಹೋಮ (ಸಾವಿರದ ಎಂಟು ತೆಂಗಿನಕಾಯಿ), ಶ್ರೀ ಸತ್ಯಗಣಪತಿ ವೃತ, ಲಕ್ಷ ದೂರ್ವಾರ್ಚನೆ, ಸಿಂಧೂರ ಅರ್ಚನೆ, ತ್ರಿಕಾಲ ಪೂಜೆ ಕ್ಷೇತ್ರದ ಪ್ರಮುಖ ಸೇವೆಗಳು. ಸಂಕಷ್ಟಹರ ಚತುರ್ಥಿ, ಗಣೇಶ ಚತುರ್ಥಿಯ ದಿನದಂದು ಅಲ್ಲದೆ ನವರಾತ್ರಿಯ ಸಮಯದಲ್ಲಿ ಕ್ಷೇತ್ರದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳಿರುತ್ತವೆ.

1980 ರಲ್ಲಿ ರಾಜ್ಯದ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವಾರಾಜ್ ಅರಸು ಅವರು ದೇವಾಲಯವನ್ನು ಜೀರ್ಣೋದ್ದಾರ ಮಾಡಿದರು. 1997ರಲ್ಲಿ ಗ್ರಾನೈಟ್ ಶಿಲೆಗಳನ್ನು ಹಾಕಿ ದೇವಾಲಯವನ್ನು ಮತ್ತೊಮ್ಮೆ ಜೀರ್ಣೋದ್ದಾರ ಮಾಡಲಾಯಿತು.

ಮುದ್ಗಾಲ ಪುರಾಣದ ಪ್ರಕಾರ ಈ ಸಮಯದಲ್ಲಿ ದೇವಾಲಯದಲ್ಲಿ 32 ಗಣೇಶನ ವಿಗ್ರಹ ಮತ್ತು ನವಗ್ರಹ ಮಂದಿರವನ್ನು ಕಟ್ಟಲಾಯಿತು. ವರ್ಷದ ಯಾವುದೇ ದಿನ ಏಕಾದಶಿ ಹೊರತು ಪಡಿಸಿ ಭಕ್ತರಿಗೆ ಮಧ್ಯಾಹ್ನ ದೇವಾಲಯದ ವತಿಯಿಂದ ಅನ್ನಸಂತರ್ಪಣೆ ನಡೆಯುತ್ತದೆ.

ಕ್ಷೇತ್ರದಲ್ಲಿ ಭಕ್ತರ ಅನುಕೂಲಕ್ಕಾಗಿ ಅತ್ಯುತ್ತಮ ವಸತಿ ಗೃಹ, ಕಲ್ಯಾಣ ಮಂಟಪ, ತಪೋವನ ಸೌಲಭ್ಯಗಳಿವೆ. ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರಮಿಸಿ, ಕುಂದಾಪುರದಿಂದ ಎಂಟು ಕಿಲೋಮೀಟರ್ ದೂರ ಪ್ರಯಾಣಿಸಿದ ನಂತರ ಬಲಕ್ಕೆ ತಿರುಗಿ, ಸುಮಾರು ಐದು ಕಿಲೋಮೀಟರ್ ಪ್ರಯಾಣಿಸಿದರೆ ಕ್ಷೇತ್ರಕ್ಕೆ ತಲುಪಬಹುದು. ಉಡುಪಿ ಮತ್ತು ಕುಂದಾಪುರಿಂದ ಕ್ಷೇತ್ರಕ್ಕೆ ಖಾಸಾಗಿ ಬಸ್ ವ್ಯವಸ್ಥೆಗಳಿವೆ.

ಕ್ಷೇತ್ರದ ವಿಳಾಸ
ಶ್ರೀ ಸಿದ್ದಿ ವಿನಾಯಕ ದೇವಾಲಯ
ಹಟ್ಟಿಯಂಗಡಿ - 576283
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
ದೂ: 0824 -264201

ಕ್ಷೇತ್ರಕ್ಕೆ ಸಮೀಪವಿರುವ ಕೆಲವು ಆಕರ್ಷಣೀಯ ಸ್ಥಳ, ದೂರ ಇತ್ಯಾದಿಗಳಿಗೆ ಈ ಕೊಂಡಿಯನ್ನು ಒತ್ತಿ.

ನಾಡಿನ ಸಮಸ್ತ ಕುಲಕೋಟಿಗೆ ಶ್ರೀಸಿದ್ದಿ ವಿನಾಯಕನ ಕೃಪಾಕಟಾಕ್ಷ ಎಂದೆಂದಿಗೂ ಇರಲಿ. ನಮ್ಮ ಎಲ್ಲಾ ಓದುಗರಿಗೂ ಗಣೇಶ ಚತುರ್ಥಿಯ ಶುಭಾಶಯಗಳು.

English summary
The eighth century Sri Siddhivinayaka Temple at Hattiyangadi in Kundapur taluk, Udupi district is a historical and well-known pilgrimage center for Hindus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X