ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿಕೇರಿಯ ನಿಶಾನೆಮೊಟ್ಟೆ ಏರೋಕೆ ಗುಂಡಿಗೆ ಬೇಕು

By ಬಿ.ಎಂ. ಲವಕುಮಾರ್, ಮೈಸೂರು
|
Google Oneindia Kannada News

ಕಣ್ಣು ಹಾಯಿಸಿದುದ್ದಕೂ ಬೆಟ್ಟಸಾಲುಗಳು... ದೂರದ ಕಾಫಿ, ಏಲಕ್ಕಿ ತೋಟಗಳು... ಗದ್ದೆ ಬಯಲುಗಳು... ಅಂಕು ಡೊಂಕಾದ ರಸ್ತೆಗಳಲ್ಲಿ ಸರ್ಕಸ್ ಮಾಡುತ್ತಾ ಸಾಗುವ ವಾಹನಗಳು... ಮೇಲಿನ ಗುಡ್ಡದಲ್ಲಿ, ಕೆಳಗಿನ ಹಳ್ಳದಲ್ಲಿ ಅಲ್ಲಲ್ಲಿ ಕಾಣುವ ಹೆಂಚಿನ ಮನೆಗಳು... ದೂರದ ಅರಣ್ಯದ ನಡುವೆ ಮಲೆಕುಡಿಯರ ಜೋಪಡಿಗಳಿಂದ ಗಾಳಿಯಾಡುತ್ತಾ ಮೇಲೇಳುವ ಹೊಗೆ... ಒಂದೇ ಎರಡೇ ಹತ್ತಾರು ಸುಂದರ, ವಿಸ್ಮಯ ನೋಟಗಳು ಇದನ್ನೆಲ್ಲ ನೋಡಬೇಕೆಂದರೆ ಮಡಿಕೇರಿ ಬಳಿಯಿರುವ ನಿಶಾನೆಮೊಟ್ಟೆಯತ್ತ ಹೆಜ್ಜೆ ಹಾಕಬೇಕು.

ಮಡಿಕೇರಿ ಸುತ್ತಮುತ್ತಲಿರುವ ಪ್ರವಾಸಿ ತಾಣಗಳ ಪೈಕಿ ಒಂದಾಗಿರುವ ನಿಶಾನೆಮೊಟ್ಟೆ ನಿಸರ್ಗ ಸೌಂದರ್ಯವನ್ನು ಆಸ್ವಾದಿಸಲೆಂದು ಬರುವ ಪ್ರಕೃತಿ ಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ.

ಹೋಗುವುದು ಹೇಗೆ : ಮಡಿಕೇರಿಯಿಂದ ಹತ್ತು ಕಿ.ಮೀ. ದೂರದಲ್ಲಿರುವ ನಿಶಾನೆಮೊಟ್ಟೆಯತ್ತ ತೆರಳಬೇಕಾದರೆ ಗುಡ್ಡವನ್ನೇರುವ ಗುಂಡಿಗೆಯಿದ್ದರೆ ಮಾತ್ರ ಸಾಧ್ಯ. ಮಡಿಕೇರಿಯಿಂದ ಸ್ಟೀವರ್ಟ್‌ಹಿಲ್ ಮಾರ್ಗವಾಗಿ ಸುಮಾರು ನಾಲ್ಕು ಕಿ.ಮೀ. ದೂರವನ್ನು ಆಯಾಸವಿಲ್ಲದೆ ಕ್ರಮಿಸಬಹುದಾದರೂ ನಂತರದ ಹಾದಿ ಮಾತ್ರ ಸವಾಲ್‌ವೊಡ್ಡುವಂತದ್ದಾಗಿದೆ.

Nishani Motte wildlife trekking near Madikeri

ಹಳ್ಳ, ದಿಣ್ಣೆಗಳಿಂದ ಕೂಡಿದ ರಸ್ತೆಯಲ್ಲಿ ಜೀಪು ಹೊರತು ಪಡಿಸಿ ಇನ್ಯಾವುದೇ ವಾಹನಗಳಲ್ಲಿ ಹೋಗುವುದು ಕಷ್ಟಸಾಧ್ಯ. ಹಾಗಾಗಿ ಹೆಚ್ಚಿನವರು ವಾಹನವನ್ನು ತಳ್ಳುವ ಕಷ್ಟವೇ ಬೇಡವೆಂದು ನಡೆದುಕೊಂಡೇ ಹೋಗುತ್ತಾರೆ.

ನಿಜ ಹೇಳಬೇಕೆಂದರೆ ಸುತ್ತಮುತ್ತಲಿನ ನಿಸರ್ಗ ಸೌಂದರ್ಯದತ್ತ ಕಣ್ಣು ಹಾಯಿಸುತ್ತಾ ಹೆಜ್ಜೆ ಹಾಕುವುದು ಮನಸ್ಸಿಗೆ ಮುದನೀಡುತ್ತದೆ. ಸುಮಾರು ಏಳು ಕಿ.ಮೀ. ಸಾಗುತ್ತಿದಂತೆಯೇ ಇಕ್ಕೆಲಗಳಲ್ಲಿ ಹಸಿರನ್ನೊದ್ದು ಕುಳಿತ ನಿಸರ್ಗದ ವಿಹಂಗಮ ನೋಟ ಕಣ್ಮುಂದೆ ಹಾದು ಬರುತ್ತದೆ.

ಮಡಿಕೇರಿಯಿಂದ ಹೊರಟು ನಿಶಾನೆಮೊಟ್ಟೆಯ ತಪ್ಪಲು ತಲುಪಬೇಕಾದರೆ ಕನಿಷ್ಠ ಒಂದು ಗಂಟೆಯಾದರು ಬೇಕಾಗುತ್ತದೆ. ಅಲ್ಲಿಂದ ಸುಮಾರು ಮುನ್ನೂರು ಹೆಜ್ಜೆ ಹಾಕಿದರೆ ಸಾಕು ನಿಶಾನೆಮೊಟ್ಟೆಯ ತುತ್ತತುದಿ ತಲುಪಬಹುದು. ಬೀಸಿಬರುವ ತಂಗಾಳಿಗೆ ಮೈಯೊಡ್ಡಿ ನಿಂತು ಒಂದು ಸುತ್ತು ಕಣ್ಣು ಹಾಯಿಸಿದ್ದೇ ಆದರೆ ಅಲ್ಲಿಂದ ಕಂಡುಬರುವ ನಿಸರ್ಗದ ಸುಂದರನೋಟ ಕಣ್ಣಿಗೆ ರಸದೂಟವಾಗುತ್ತದೆ.

ಒಂದನ್ನೊಂದು ಜೋಡಿಸಿಟ್ಟಂತೆ ಕಣ್ಣು ಹಾಯಿಸಿದುದ್ದಕ್ಕೂ ಕಂಗೊಳಿಸುವ ಬೆಟ್ಟಗುಡ್ಡಗಳು ರೋಮಾಂಚನವನ್ನುಂಟು ಮಾಡುತ್ತವೆ. ಮಡಿಕೇರಿಗೆ ನೀರು ಒದಗಿಸುವ ಜಲಗಾರ ಕೂಟುಹೊಳೆ ಹಾಗೂ ಮಡಿಕೇರಿ ಪಟ್ಟಣದ ವಿಹಂಗಮ ನೋಟವೂ ಲಭ್ಯವಾಗುತ್ತದೆ.

Nishani Motte wildlife trekking near Madikeri

ನಿಶಾನೆಮೊಟ್ಟೆ ಹೆಸರು ಬಂದಿದ್ದು ಹೇಗೆ?

ನಿಶಾನೆಮೊಟ್ಟೆಯ ಮೇಲ್ಭಾಗದಲ್ಲಿ ವಿಶಾಲ ಸಮತಟ್ಟಾದ ಜಾಗವಿರುವುದರಿಂದ ಆಡಿ ಕುಣಿದು ಕುಪ್ಪಳಿಸಬಹುದು ಅಷ್ಟೇ ಅಲ್ಲ ಟೆಂಟ್ ಹಾಕಿ ಅಲ್ಲಿ ರಾತ್ರಿ ಕೂಡ ಕಳೆಯಬಹುದು. ಇನ್ನು ಈ ನಿಸರ್ಗ ರಮಣೀಯವಾದಂತಹ ಬೆಟ್ಟಕ್ಕೆ ನಿಶಾನೆಮೊಟ್ಟೆ ಎಂಬ ಹೆಸರು ಏಕೆ ಬಂದಿರಬಹುದೆಂಬ ಕುತೂಹಲ ಕಾಡದಿರದು.

ಹಿಂದೆ ಕೊಡಗನ್ನು ಆಳುತ್ತಿದ್ದ ರಾಜರ ಕಾಲದಲ್ಲಿ ಶತ್ರುಗಳು ದಂಡೆತ್ತಿ ಬರುವುದನ್ನು ಅರಿಯಲು ಈ ಗುಡ್ಡದ ಮೇಲೆ ಸೈನಿಕರನ್ನಿರಿಸಲಾಗುತ್ತಿತ್ತಂತೆ. ಈ ಸೈನಿಕರು ಇಲ್ಲಿ ಪಹರೆ ಕಾಯುತ್ತಿದ್ದರಂತೆ. ಈ ಗುಡ್ಡದಿಂದ ನಿಂತು ನೋಡಿದರೆ ದೂರದಿಂದ ಬರುವ ಶತ್ರು ಸೈನ್ಯ ಕಾಣುತ್ತಿತ್ತಂತೆ. ತಕ್ಷಣ ರಾಜನಿಗೆ ಸುದ್ದಿ ಮುಟ್ಟಿಸಿ ಸೈನ್ಯವನ್ನು ಸಜ್ಜುಗೊಳಿಸಿ ಶತ್ರುಗಳನ್ನು ಹಿಮ್ಮೆಟ್ಟಿಸುತ್ತಿದ್ದರಂತೆ.

ಘಟ್ಟವನ್ನೇರಿ ಬರುವ ಶತ್ರು ಸೈನಿಕರ ಮೇಲೆ ನಿಶಾನೆ ಇಡಲು ಈ ಗುಡ್ಡ ಯೋಗ್ಯವಾಗಿದ್ದರಿಂದ ನಿಶಾನೆ ಮೊಟ್ಟೆ ಎಂಬ ಹೆಸರು ಬಂದಿರಬಹುದೆಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಕೊಡಗಿನಲ್ಲಿ ಎತ್ತರದ ಜಾಗವನ್ನು ಮೊಟ್ಟೆ ಎಂದು ಕರೆಯುವುದು ರೂಢಿ. ಮಡಿಕೇರಿ ಬಳಿಯ ಎತ್ತರದ ಈ ನಿಶಾನೆಬೆಟ್ಟ ಜನರ ಆಡು ಮಾತಿನಲ್ಲಿ ನಿಶಾನೆಮೊಟ್ಟೆ ಎಂದೇ ಕರೆಯಲ್ಪಡುತ್ತಿದೆ.

ನಿಶಾನೆಮೊಟ್ಟೆಗೆ ಪಿಕ್‌ನಿಕ್ ಹೋಗುವವರು ತಮ್ಮೊಂದಿಗೆ ತಿಂಡಿ ತಿನಿಸುಗಳನ್ನು ಒಯ್ದರೆ ಒಂದಷ್ಟು ಹೊತ್ತು ಅಲ್ಲಿದ್ದು ಬರಬಹುದು. ಮಡಿಕೇರಿಯಿಂದ ನಿಶಾನೆಮೊಟ್ಟೆಯತ್ತ ಹೆಜ್ಜೆ ಹಾಕುವಾಗ ಸಿಗುವ ಸ್ಟೋನ್ ಹಿಲ್ ಕೂಡ ಒಂದು ಸುಂದರ ವೀಕ್ಷಣಾ ತಾಣ(ವ್ಯೂ ಪಾಯಿಂಟ್). ಇಲ್ಲಿ ನಿಂತು ನೋಡಿದರೆ ಮಡಿಕೇರಿ ಪಟ್ಟಣದ ಸುಂದರನೋಟ ಮನಸ್ಸೆಳೆಯುತ್ತದೆ. ಸ್ಟೋನ್‌ಹಿಲ್‌ನಲ್ಲಿ ಮಡಿಕೇರಿಗೆ ನೀರು ಒದಗಿಸುವ ಶುದ್ದೀಕರಣ ಘಟಕವಿದೆ. ಕೂಟುಹೊಳೆಯಿಂದ ಇಲ್ಲಿಗೆ ನೀರು ಹಾಯಿಸಿ, ಶುದ್ದೀಕರಣದ ಬಳಿಕ ನಗರಕ್ಕೆ ನೀರನ್ನು ಒದಗಿಸಲಾಗುತ್ತದೆ.

ನಿಶಾನೆಮೊಟ್ಟೆಯನ್ನು ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಪಡಿಸಿದ್ದೇ ಆದರೆ ಪ್ರವಾಸಿಗರನ್ನು ಸೆಳೆಯುವ ಮೂಲಕ ಪಿಕ್‌ನಿಕ್ ತಾಣವಾಗುವುದರಲ್ಲಿ ಸಂಶಯವಿಲ್ಲ.

English summary
It is challenging for any trekker to trek in Nishani Motte hill in Madikeri. Nishani betta or hill is just 10 KM away from Madikeri in Coorg. Natural beauty is another attraction for the adventurous people. Enjoy the wildlife and tranquility during weekend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X