ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ಆರಿದ್ರಾ ಮಳೆಗೆ ಮಲ್ಲಳ್ಳಿಯಲ್ಲಿ ಜಲನರ್ತನ

By ಕೊಡಗು ಪ್ರತಿನಿಧಿ
|
Google Oneindia Kannada News

ಮಳೆ ಸುರಿಯುತ್ತಿದ್ದಂತೆಯೇ ಜಲಧಾರೆಗಳು ಮೈತುಂಬಿಕೊಂಡ ಕನ್ಯೆರಂತೆ ಕಂಗೊಳಿಸುತ್ತವೆ. ಕೊಡಗಿಗೊಂದು ಸುತ್ತು ಹೊಡೆದರೆ ಇಲ್ಲಿ ಹತ್ತಾರು ಜಲಪಾತಗಳು ಕಾಣಸಿಗುತ್ತವೆ ಅವುಗಳಲ್ಲಿ ಸೋಮವಾರಪೇಟೆ ತಾಲೂಕಿಗೆ ಸೇರಿದ ಶಾಂತಳ್ಳಿ ಬಳಿಯಿರುವ ಮಲ್ಲಳ್ಳಿ ಜಲಧಾರೆಯೂ ಒಂದಾಗಿದೆ.

ದೂರದಲ್ಲಿ ಮುಗಿಲನ್ನು ಚುಂಬಿಸಲೋ ಎನ್ನುವಂತೆ ನಿಂತ ಬೆಟ್ಟ ಶ್ರೇಣಿಗಳು... ಅವುಗಳ ನಡುವಿನ ಕಂದಕದಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ವೃಕ್ಷ ರಾಶಿಗಳು... ಏಲಕ್ಕಿ, ಕಾಫಿ ತೋಟಗಳು... ಕಣ್ಣು ಹಾಯಿಸಿದುದ್ದಕ್ಕೂ ಹಸಿರು ಹಚ್ಚಡವನ್ನೊದ್ದ ನಿಸರ್ಗ... ಇಂತಹ ಒಂದು ದಟ್ಟಕಾನನದ ನಡುವಿನ ಸುಂದರ ಪರಿಸರದೊಳಗೆ ಹೆಬ್ಬಂಡೆಯ ಮೇಲೆ ಬೆಳ್ಳಿ ಬಳುಕಿದಂತೆ ಗೋಚರಿಸುತ್ತದೆ ಮಲ್ಲಳ್ಳಿ ಜಲಕನ್ಯೆ.

ಹೌದು! ಮಲ್ಲಳ್ಳಿ ಜಲಧಾರೆ ನೆಲೆ ನಿಂತ ಪರಿಸರವೇ ಹಾಗಿದೆ. ಇವತ್ತು ಕೊಡಗಿನಲ್ಲಿರುವ ಜಲಧಾರೆಗಳಿಗೆ ಹೋಲಿಸಿದರೆ ಇದು ವಿಭಿನ್ನವಾಗಿಯೂ, ವಿಶಿಷ್ಟವಾಗಿಯೂ ಗಮನಸೆಳೆಯುತ್ತದೆ. ಕೊಡಗಿನಲ್ಲಿರುವ ಬೆಟ್ಟಗಳಲ್ಲೊಂದಾದ ಪುಷ್ಪಗಿರಿ ಬೆಟ್ಟಶ್ರೇಣಿಯ ಕುಮಾರಪರ್ವತದ ನಡುವೆ ಕುಮಾರಧಾರಾ ನದಿಯಿಂದ ಸೃಷ್ಟಿಯಾಗಿರುವ ಈ ಜಲಧಾರೆಯತ್ತ ತೆರಳುವ ವೀಕ್ಷಕರ ಸಂಖ್ಯೆ ಕಡಿಮೆಯಾದರೂ ಶ್ರಮವಹಿಸಿ ತೆರಳಿದವರನ್ನು ಜಲಧಾರೆಯ ರುದ್ರನರ್ತನ ರೋಮಾಂಚನಗೊಳಿಸುತ್ತದೆ.

Kodagu Monsoon Magic Mallalli Falls Ardra Rain Somwarpet

ಹಾಗೆನೋಡಿದರೆ ಮಲ್ಲಳ್ಳಿ ಜಲಧಾರೆ ಸನಿಹಕ್ಕೆ ಹೋಗಿ ಬರುವುದು ಅಷ್ಟು ಸುಲಭವಲ್ಲ. ಪೇಟೆ, ಪಟ್ಟಣದಿಂದ ದೂರವಾಗಿ, ಬಸ್, ವಾಹನಗಳ ಸಂಚಾರದಿಂದ ವಂಚಿತವಾಗಿರುವ ಈ ತಾಣಕ್ಕೆ ಭೇಟಿ ನೀಡಬೇಕೆಂದರೆ, ದಿನವೊಂದನ್ನು ಮೀಸಲಿಡಬೇಕು. ರಕ್ತ ಹೀರಲು ಬರುವ ಜಿಗಣೆಗಳಿಂದ ತಪ್ಪಿಸಿಕೊಂಡು ಕಲ್ಲು-ಮುಳ್ಳು, ಏರು ತಗ್ಗುಗಳ ಹಾದಿಯನ್ನು ಕ್ರಮಿಸಿ ಶ್ರಮಪಡಬೇಕು. ಇದಕ್ಕೆಲ್ಲಾ ತಯಾರಿದ್ದರೆ ಮಾತ್ರ ನಾವು ಸನಿಹಕ್ಕೆ ತೆರಳಿ ಜಲಧಾರೆಯ ಸೊಬಗನ್ನು ಸವಿಯಲು ಸಾಧ್ಯ.

ಬೆಟ್ಟಗಳ ನಡುವಿನ ಹೆಬ್ಬಂಡೆಗಳ ಮೇಲಿನಿಂದ ಬೃಹತ್ ಕಂದಕಕ್ಕೆ ಸುಮಾರು ಎಂಬತ್ತು ಅಡಿ ಅಗಲವಾಗಿ ನೂರೈವತ್ತು ಅಡಿಯಷ್ಟು ಎತ್ತರದಿಂದ ಧುಮುಕುವ ಜಲರಾಶಿ ಬಳಿಕ ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ತಳಸೇರುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತದೆ. ಒಂದು ಹೆಬ್ಬಂಡೆಯಿಂದ ಇನ್ನೊಂದು ಹೆಬ್ಬಂಡೆಗೆ ಚಿಮ್ಮುವಾಗ ಕಾಣಸಿಗುವ ಸುಂದರ ದೃಶ್ಯ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಒಂದು ಕ್ಷಣ ಭೂತಾಯಿಯ ಒಡಲ ಬೆಳ್ಳಿಯೆಲ್ಲಾ ಕರಗಿ ಬಂಡೆಯ ಮೇಲೆ ಹರಿಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ.

Kodagu Monsoon Magic Mallalli Falls, Somwarpet

ಪಶ್ಚಿಮಕ್ಕೆ ಹರಿಯುವ ನದಿ : ಮಲ್ಲಳ್ಳಿ ಜಲಧಾರೆಯನ್ನು ಮಲ್ಲಳ್ಳಿ ಅಬ್ಬಿ, ಪುಷ್ಪಹಾರಿ ಜಲಧಾರೆ, ಕುಮಾರಧಾರಾ ಜಲಧಾರೆ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಈ ಜಲಧಾರೆಯು ಕುಮಾರ ನದಿಯಿಂದ ನಿರ್ಮಿತವಾಗಿದ್ದು, ನದಿಯನ್ನು ಇಲ್ಲಿನವರು ಮಲ್ಲಳ್ಳಿ ಹೊಳೆ, ಹೆಗ್ಗಡೆಮನೆ ಹೊಳೆ ಎಂಬುವುದಾಗಿಯೂ ಕರೆಯುವುದಿದೆ. ಇದರ ವೈಶಿಷ್ಟ್ಯತೆ ಎಂದರೆ ಜಿಲ್ಲೆಯಲ್ಲಿರುವ ಬೇರೆಲ್ಲಾ ನದಿಗಳು ಪೂರ್ವದಿಕ್ಕಿಗೆ ಹರಿದು ಕಾವೇರಿಯೊಂದಿಗೆ ಹರಿದು ಬಳಿಕ ಬಂಗಾಳಕೊಲ್ಲಿ ಸೇರಿದರೆ, ಈ ನದಿ ಮಾತ್ರ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರ ಸೇರುತ್ತದೆ.

ಜಲಧಾರೆ ಸೊಬಗನ್ನು ವೀಕ್ಷಿಸಲು ತೆರಳುವವರು ಜಲಧಾರೆಗೆ ಅನತಿ ದೂರದಲ್ಲಿರುವ ಮೈದಾನದಿಂದಲೇ ನಿಂತು ನೋಡಬಹುದು. ಇದಕ್ಕೆ ಅನುಕೂಲವಾಗುವಂತೆ ನಿಸರ್ಗವೇ ನಿರ್ಮಿಸಿದ ಹೆಬ್ಬಂಡೆಯ ವೀಕ್ಷಣಾ ಕಟ್ಟೆಯಿದೆ.

Mallalli Falls

ಅಲ್ಲಿಂದಲೇ ನಿಂತು ಜಲಧಾರೆಯ ಸೊಬಗನ್ನು ಸವಿಯಬಹುದಾಗಿದೆ. ಇನ್ನು ಇಲ್ಲಿಂದ ಕಡಿದಾದ ಹಾದಿಯಲ್ಲಿ ಜಾಗರೂಕತೆಯಿಂದ ಇಳಿದಿದ್ದೇ ಆದರೆ ಜಲಪಾತದ ತಳಭಾಗವನ್ನು ತಲುಪಬಹುದು. ಇಲ್ಲಿ ನಿಂತಿದ್ದೇ ಆದರೆ ಧುಮ್ಮಿಕ್ಕುವ ಶ್ವೇತಧಾರೆಯ ಸಿಂಚನ ಮೈಯ್ಯನ್ನು ಸ್ಪರ್ಶಿಸಿ ಪುಳಕಗೊಳಿಸುತ್ತದೆ.

ಜಲಧಾರೆಯತ್ತ ತೆರಳುವವರಿಗೆ ಕೇವಲ ಜಲಧಾರೆಯ ಸೊಬಗು ಮಾತ್ರವಲ್ಲದೆ, ಇಲ್ಲಿ ದಾರಿಯುದ್ದಕ್ಕೂ ಕಂಡುಬರುವ ನಿಸರ್ಗ ಸೌಂದರ್ಯ ಮೈ ಪುಳಕಗೊಳಿಸುತ್ತದೆ. ಮಲ್ಲಳ್ಳಿ ಜಲಧಾರೆಗೆ ಹಾದಿಯಲ್ಲೇ ಅಂಬೂರ ಅಬ್ಬಿ ಹಾಗೂ ಹಾಸರ ಅಬ್ಬಿ ಎಂಬ ಪುಟ್ಟ ಜಲಧಾರೆಗಳಿವೆ.

Mallalli Falls

ಬಹುಶಃ ಪಟ್ಟಣಕ್ಕೆ ಸನಿಹ ಇದ್ದಿದ್ದರೆ ಇದೊಂದು ಪ್ರೇಕ್ಷಣೀಯ ತಾಣವಾಗಿ ಖ್ಯಾತಿಪಡೆಯುವುದರೊಂದಿಗೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ತನ್ನತ್ತ ಸೆಳೆಯುತ್ತಿತ್ತೇನೋ? ಆದರೆ ಪಟ್ಟಣದಿಂದ ದೂರವಾಗಿ ರಸ್ತೆ, ವಾಹನಗಳ ಸೌಲಭ್ಯದಿಂದ ವಂಚಿತರಾಗಿರುವ ಕಾರಣ ಇದು ಇಂದಿಗೂ ಅಪರಿಚಿತಾಗಿಯೇ ಉಳಿಯುವಂತಾಗಿದೆ.

ಕೊಡಗಿನಲ್ಲಿ ಆರಿದ್ರಾ ಮಳೆಗೆ ಮಲ್ಲಳ್ಳಿಯಲ್ಲಿ ಜಲನರ್ತನ

ಚಾರಣಕ್ಕೆ ತೆರಳುವವರು ತೋಟದ ಕೆಲಸಕ್ಕೆ ಹೋಗುವವರು ಮಾತ್ರ ಇತ್ತ ತೆರಳುತ್ತಿರುತ್ತಾರೆ. ಉಳಿದಂತೆ ಈ ಜಲಧಾರೆಯತ್ತ ಸ್ಥಳೀಯ ಕೃಷಿಕರನ್ನು ಹೊರತುಪಡಿಸಿದರೆ ಇಲ್ಲಿ ಯಾರೂ ಕಾಣಸಿಗಲಾರರು. ಹಾಗಾಗಿ ಎಲ್ಲಾ ದಿನಗಳಲ್ಲಿಯೂ ಈ ತಾಣ ನಿರ್ಜನವಾಗಿಯೇ ಇರುತ್ತದೆ.

ಇಲ್ಲಿಗೆ ತಲುಪುವುದು ಹೇಗೆ?: ಮಲ್ಲಳ್ಳಿ ಜಲಧಾರೆಯನ್ನು ವೀಕ್ಷಿಸಲು ತೆರಳುವವರು ಕೊಡಗಿನ ತಾಲ್ಲೂಕು ಕೇಂದ್ರಗಳಲ್ಲೊಂದಾದ ಸೋಮವಾರಪೇಟೆಗೆ ತೆರಳಿದರೆ ಅಲ್ಲಿಂದ ಶಾಂತಳ್ಳಿ ಮೂಲಕ ಸುಮಾರು ಇಪ್ಪತ್ತು ಕಿ.ಮೀ. ತೆರಳಿದರೆ ಹಂಚಿನಳ್ಳಿ ಗ್ರಾಮ ಸಿಗುತ್ತದೆ.

Mallalli Falls

ಇಲ್ಲಿಂದ ಬಲಕ್ಕೆ ಮಣ್ಣು ರಸ್ತೆಯಲ್ಲಿ ನಾಲ್ಕು ಕಿ.ಮೀ. ಏರು-ತಗ್ಗುಗಳನ್ನು ದಾಟಿ ಮುನ್ನಡೆಯಬೇಕು. ಹೀಗೆ ನಡೆಯುವಾಗ ಆಯಾಸವಾಗುವುದು ಸಹಜ ಆದರೆ ಸುತ್ತಲಿನ ನಿಸರ್ಗ ಸೌಂದರ್ಯ ನಮ್ಮ ಆಯಾಸವನ್ನು ಹೊಡೆದೋಡಿಸಿ ಉಲ್ಲಾಸವನ್ನು ತುಂಬುತ್ತಿರುತ್ತದೆ. ಕಾಲ್ನಡಿಗೆಯ ಹಾದಿ ಮುಗಿಯುತ್ತಿದ್ದಂತೆಯೇ ವಿಶಾಲವಾದ ಮೈದಾನ ಎದುರಾಗುತ್ತದೆ. ಇಲ್ಲಿಂದ ನಿಂತು ನೋಡಿದರೆ ದೂರದಲ್ಲಿ ಹೆಬ್ಬಂಡೆಗಳ ನಡುವೆ ಶ್ವೇತಧಾರೆಯಾಗಿ ನಾಟ್ಯಾಂಗಿಯಂತೆ ಜಲಧಾರೆ ಕಂಗೊಳಿಸುತ್ತದೆ.

English summary
Monsoon Magic in Kodagu is back. Ardra Nakshatra rain bringing glory to breathtaking Malalli falls on the foothills of Pushpagiri mountain. Mallalli falls is around 25 km from Somwarpet is attracting tourists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X