ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳು ಬೆಟ್ಟ ಮತ್ತು ಸೇತುವೆ ಹತ್ತಿಳಿದ ಅವಿಸ್ಮರಣೀಯ ಅನುಭವ

By Super
|
Google Oneindia Kannada News

Seetha Keshava
ಪ್ರಕೃತಿ ಸೌಂದರ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾಗಳು ಸಾಕಷ್ಟು ಸಾಮ್ಯತೆಗಳಿಂದ ಕೂಡಿವೆ. ಹಳ್ಳ ಕೊಳ್ಳ ನದಿ ಝರಿ ಗುಡ್ಡ ಬೆಟ್ಟಗಳ ಸೌಂದರ್ಯ ಒಂದನ್ನೊಂದು ಮೀರಿಸುವಂತಿವೆ.

* ಸೀತಾ ಕೇಶವ, ಸಿಡ್ನಿ

ಭಾರತೀಯ ಸಂಸ್ಕೃತಿ ಹಾಗೂ ಪುರಾಣ ಪುಣ್ಯಕಥೆಗಳಲ್ಲಿ ಸಂಖ್ಯೆ ಏಳಕ್ಕೆ ಬಹಳ ಮಹತ್ವ ಇದೆ ಎಂದರೆ ಅಚ್ಚರಿ ಇಲ್ಲ. ಏಕೆಂದರೆ ಸಪ್ತಋಷಿ, ಸಪ್ತಸಮುದ್ರ, ಸಪ್ತಗಿರಿ, ಸಪ್ತಪದಿ, ಸಪ್ತಖಂಡ, ಸಪ್ತಸ್ವರ ಸೇರಿ ಸಂಗೀತವಾಗಿದ್ದು, ಏಳು ಬಣ್ಣಗಳು ಸೇರಿ ಬಿಳಿಯ ಬಣ್ಣವಾಗಿರುವುದು ಹೀಗೆ ಅನೇಕ ರೀತಿಯಲ್ಲಿ ಹೇಳುವುದು ವಾಡಿಕೆ. ಹಾಗೆ ಸಪ್ತಪದಿ ತುಳಿದ ನಂತರ ನನ್ನ ಯಜಮಾನರೊಂದಿಗೆ ಭಾರತದ ಏಳು ಬೆಟ್ಟಗಳು ಮತ್ತು ಸಿಡ್ನಿಯ ಏಳು ಸೇತುವೆಗಳನ್ನು ಕಾಲ್ನಡಿಗೆಯಲ್ಲಿ ದಾಟಿದ್ದು ರೋಮಾಂಚಕಾರಿ ಅನುಭವ.

ವಿವಿಧ ಸಮಯಗಳಲ್ಲಿ ವಿವಿಧ ಏಳು ಬೆಟ್ಟಗಳನ್ನು ಹತ್ತಿದಾಗ ಅನುಭವಿಸಿದ ಸಂತದ ಘಳಿಗೆಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ ಓದಿಕೊಳ್ಳಿ.


1. ಮುಳ್ಳಯ್ಯನಗಿರಿ : ಚೆಲುವಿನ ಸಿರಿಯನ್ನೇ ಮೈವೆತ್ತಂತಿರುವ ಚಾರ್ಮಾಡಿ ಘಾಟ್‌ನಲ್ಲಿರುವ ಮುಳ್ಳಯ್ಯನಗಿರಿ ಚಿಕ್ಕಮಗಳೂರಿನಿಂದ ಕೇವಲ 25 ಕಿ.ಮೀ.ದೂರದಲ್ಲಿದೆ. ಕರ್ನಾಟಕದ ಅತಿ ಎತ್ತರದ ಶಿಖರ 'ಮುಳ್ಳಯ್ಯನಗಿರಿ'ಗೆ ಹೋಗುವ ಅವಕಾಶ, ಚಿಕ್ಕಮಗಳೂರಿನಲ್ಲಿರುವ ನಮ್ಮ ದೊಡ್ಡತ್ತೆ, ಮಾವನವರ ಮನೆಗೆ ಹೋದಾಗ ದಕ್ಕಿತ್ತು. ಮಾರ್ಗದಲ್ಲಿ ಸಿಕ್ಕುವ 'ರತ್ನಗಿರಿಬೋರೆ' ಹತ್ತಿರದ ನಾಣಿ ಹೋಟೆಲಿನ ಬೆಣ್ಣೆ ಮಸಾಲೆ ದೋಸೆ ತಿನ್ನುವ ಆಸೆ ಬೆಟ್ಟ ಹತ್ತುವ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ನಾವು ಆರು ಜನ 6400 ಅಡಿ ಎತ್ತರದ ಮುಳ್ಳಯ್ಯನಗಿರಿಯನ್ನು ಹತ್ತುವಾಗ, ಕಾಫಿ ತೋಟದ ಬೀಜದ ಸುವಾಸನೆಯನ್ನು ಹೀರುತ್ತ, ಹರಿಯುತ್ತಿರುವ ನೀರಿನ ಝುಳು ಝುಳು ನಿನಾದ ಕೇಳಿಸಿಕೊಳ್ಳುತ್ತ, ಶಿಖರಗಳಿಂದ ಕೂಡಿದ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಹೀರುತ್ತ, ರಕ್ತ ಹೀರುವ ಜಿಗಣೆಗಳನ್ನು ಜಾಗರೂಕತೆಯಿಂದ ನಿವಾರಿಸಿಕೊಳ್ಳುತ್ತ, ನಿಸ್ಸಾರ್ ಅಹಮದ್‌ರವರ 'ಜೋಗದಸಿರಿ' ಗುನುಗುತ್ತಾ ಬೆಟ್ಟ ಹತ್ತಿದ್ದು ಮರೆಯಲು ಸಾಧ್ಯವೇ ಇಲ್ಲದಂಥ ಅನುಭವ.

2. ಚಾಮುಂಡಿಬೆಟ್ಟ : ಮೈಸೂರಿನಿಂದ ಚಾಮುಂಡಿ ಬೆಟ್ಟಕ್ಕೆ ಹೋಗಲು ಸಾಕಷ್ಟು ಬಸ್ಸುಗಳ ಸೌಲಭ್ಯಗಳಿದ್ದರೂ ನಡೆದುಕೊಂಡೇ ಬೆಟ್ಟ ಹತ್ತುವ ಅನುಭವವೇ ಬೇರೆ. ವೀಳೆಯದೆಲೆಯ ತೋಟದ ಕಂಪನ್ನು ಮತ್ತು ಸೊಬಗು ಸವಿಯುತ್ತ 1000 ಮೆಟ್ಟಲುಗಳನ್ನು ಹತ್ತಿಕೊಂಡು ಹೋಗಿ ಮೈಸೂರಿನ ಚಾಮುಂಡೇಶ್ವರಿಯ ದರ್ಶನವನ್ನು ಮಾಡಿದ್ದು ಮನದಲ್ಲಿ ಈಗಲೂ ಉತ್ಸಾಹದ ಬುಗ್ಗೆ ಉಕ್ಕಿಸುತ್ತದೆ. ಬೆಟ್ಟದ ಮೇಲಿನ ನಂದಿ, ಮಹಿಷಾಸುರ, ಮೇಲಿನಿಂದ ನೋಡಿದಾಗ ಲಲಿತಮಹಲ್ ಅರಮನೆ, ನಗರದ ಮೈಸೂರು ಮಹಾರಾಜರ ಅರಮನೆ ನೋಡಿದ್ದು ಅಚ್ಚಳಿಯದೆ ಉಳಿದಿವೆ. ಮದುವೆಗೆ ಮುಂಚೆ ಎಲ್ಲೂ ಹೋಗದಿದ್ದ ನಾನು ಯಜಮಾನರ ಜೊತೆ ಬೆಟ್ಟ ಹತ್ತಿ ಮೈಸೂರಿನ ಅಜ್ಜಿ ತಾತರನ್ನು ಭೇಟಿಯಾದಾಗ ಅವರಲ್ಲೂ ನನ್ನಲ್ಲೂ ಅನಿರ್ವಚನೀಯ ಆನಂದ. ಮದುವೆಗೆ ಮುಂಚೆ ಎಲ್ಲೂ ಬರುತ್ತಲೇ ಇರಲಿಲ್ಲ, ಈಗ ಬಂದೇಬಿಟ್ಟಳೆಂದು ಅಜ್ಜಿ ತಾತ ಹಾಸ್ಯ ಮಾಡಿದ್ದು ಮರೆಯಲು ಸಾಧ್ಯವೇ ಇಲ್ಲ.

3. ನಂದಿಬೆಟ್ಟ : ಬೆಂಗಳೂರಿನಿಂದ 64 ಕಿ.ಮೀ.ದೂರದಲ್ಲಿರುವ ಚಿಕ್ಕಬಳ್ಳಾಪುರದ ಬಳಿಯ ನಂದಿಬೆಟ್ಟಕ್ಕೆ ಹೋಗಿದ್ದಂತೂ ಬಸ್ಸು ಹತ್ತಿದಾಗಲೇ ಗೊತ್ತಾದುದು. ನಂದಿಬೆಟ್ಟ, ಅಲ್ಲಿಗೆ ಹೋಗುವುದು ಹೇಗೆ, ಎಲ್ಲಿ ಇಳಿಯಬೇಕು, ಹೇಗೆ ಹೋಗಬೇಕು ಒಂದೂ ಗೊತ್ತಿರಲಿಲ್ಲ. ನಂದಿಬೆಟ್ಟದ ಸಮೀಪದ ನಂದಿಯಲ್ಲಿ ಬಸ್ಸು ನಿಲ್ಲಿಸಿ, ಕಾಕನ ಅಂಗಡಿಯವರನ್ನು ಕೇಳಿ ನಂದಿಬೆಟ್ಟಕ್ಕೆ ಹತ್ತುವ ದಾರಿ ತಿಳಿದುಕೊಂಡೆವು. ಮಟಮಟ ಮಧ್ಯಾಹ್ನವಾಗಿದ್ದರೂ ಬೀಸುತ್ತಿದ್ದ ತಂಪು ಗಾಳಿ ನಮ್ಮ ಆಯಾಸವನ್ನು ಶಮನ ಮಾಡುತ್ತಿತ್ತು. ನಂದೀಶ್ವರ ದೇವಸ್ಥಾನ, ಟಿಪ್ಪು ಡ್ರಾಪು ಹತ್ತಿರ ನಿಂತು ಸುಂದರ, ರಮಣೀಯ ದೃಶ್ಯಗಳನ್ನು ನೋಡಿದಾಗ ಮನಕ್ಕಾದ ಆನಂದ ಅಷ್ಟಿಷ್ಟಲ್ಲ.

4. ಕೇದಾರ : ಉತ್ತರ ಭಾರತದ ಪುಣ್ಯ ಕ್ಷೇತ್ರಗಳಾದ ಹರಿದ್ವಾರ, ಋಷಿಕೇಶ, ಕೇದಾರನಾಥ, ಬದರಿನಾಥ ವೈಷ್ಣವಿಗೆ ಹೋಗುವ ಮನಸ್ಸು ಮಾಡಿ ತಯಾರಿ ನಡೆಸುತ್ತಿದ್ದಾಗ, ಹೋಗಿಬಂದಿದ್ದವರು ಅವರ ಅನುಭವ ಹೇಳುತ್ತಾ "ಕೇದಾರೇಶ್ವರಕ್ಕೆ ಕುದುರೆ ಅಥವಾ ಡೋಲಿನಲ್ಲಿ ಹೋಗಬೇಕು, ನೀವು ಯಾವಾಗಲು ನಡಿಗೆಗೆ ಹೆಚ್ಚು ಮಹತ್ವ ಕೊಡುತ್ತೀರಿ" ಎಂದಾಗ ನಡಿಗೆಯಲ್ಲಿ ಯಾಕೆ ಹತ್ತಲಾಗದು ಎಂಬ ಪ್ರಶ್ನೆ ಉದ್ಭವಿಸಿತ್ತು. ನಮ್ಮ ಈ ಮನೋಬಲದಿಂದಲೇ ನಾನು ಮತ್ತು ನನ್ನ ಯಜಮಾನರು ಧೈರ್ಯವಾಗಿ ಗೌರಿಕುಂಡದಿಂದ ಬೆಳಗಿನಜಾವ ನಡೆಯಲು ಪ್ರಾರಂಭಿಸಿದೆವು. ಚುಮುಚುಮು ಬೆಳಕಿನಲ್ಲಿ ಮಾರ್ಗದಲ್ಲಿ ಯಾರೊಬ್ಬರೂ ಇರಲಿಲ್ಲ. ನಮ್ಮ ಸಹಾಯವಿಲ್ಲದೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳುತ್ತಿವೆಯೇನೋ ಎಂಬಂತಿದ್ದ ಕುದುರೆಗಳಿಗೇ ಬೈಬೈ ಹೇಳಿ ಪರಿಸರದ ಸೌಂದರ್ಯವನ್ನು ಸವಿಯುತ್ತಾ, ಸಹಯಾತ್ರಿಗಳೊಡನೆ ಸಂಭಾಷಿಸುತ್ತಾ, 14000 ಅಡಿ ಎತ್ತರ ಮತ್ತು 14 ಮೈಲಿ ನಡಿಗೆ ಮುಗಿಸಿ ದೇವಸ್ಠಾನಕ್ಕೆ ಸುಮಾರು 11 ಘಂಟೆಗೆ ತಲುಪಿದಾಗ ಏನೋ ಸಾಧಿಸಿದಂಥ ಸಾರ್ಥಕ ಭಾವ. ನಂತರ ಕೇದಾರೇಶ್ವರನಿಗೆ ಪೂಜೆ ಸಲ್ಲಿಸಿದೆವು. ನಡೆದುಕೊಂಡೇ ಇಳಿದುಬಂದ ನಂತರ ನಮ್ಮ ಸಾಹಸಕ್ಕೆ ಟಾಕ್ಸಿ ಡೈವರ್ ಬಲಕಾರ್ ಸಿಂಘ್ ಸಂತೋಷ ಮತ್ತು ಆಶ್ಚರ್ಯಪಟ್ಟುಬಿಟ್ಟರು.

Wonderful trekking places in India and Australia 5. ವೈಷ್ಣೋದೇವಿ :
ಚಲೋಬುಲಾವಾ ಆಯಾಹೈ ಮಾತಾಜಿ ಬುಯಾಲಾ ಹೈ ಎಂಬ ಹಾಡು ಕೇಳಿರಬಹುದು. ವೈಷ್ಣೋದೇವಿಯ ಶಕ್ತಿ, ಮಹಿಮೆಯ ಬಗ್ಗೆ ತಿಳಿದಿದ್ದ ನಮಗೆ ಅಲ್ಲಿಗೂ ಹೋಗಬೇಕೆಂಬ ಅಭಿಲಾಶೆ ಉತ್ಪತ್ತಿಯಾಗಿತ್ತು. ಮಧ್ಯಾಹ್ನ 4.30ಕ್ಕೆ ಸೆಕ್ಯುರಿಟಿ ಚೆಕಪ್ ಮುಗಿಸಿಕೊಂಡು ನಡೆದು ಹೊರಟಾಗ ಎಲ್ಲೆಡೆಯಲ್ಲಿರೂ ಜೈ ಮಾತಾ, ಹೇ ಮಾತಾಜಿ ಮುಂತಾದ ಉದ್ಘೋಷಗಳ ಝೇಂಕಾರ. ಕೇಳುತ್ತ ಕೇಳುತ್ತ ಭಕ್ತಿ ನಮ್ಮ ಹೃನ್ಮನಗಳಲ್ಲಿಯೂ ತುಂಬಿಕೊಂಡಿತ್ತು. 14 ಕಿ.ಮೀ. ಹತ್ತಿ 'ಕ್ಯೂ'ನಲ್ಲಿ ನಿಂತು ಗುಹೆಯೊಳಗೆ ಬಂಡೆಯ ಕೆಳಗಡೆ ಹರಿಯುವ ನೀರನ್ನು ತಲೆಗೆ ಪ್ರೋಕ್ಷಿಸಿಕೊಂಡು ಬಂದು ದೇವಿಯ ಮುಂದೆ ನಿಂತಾಗ ದೇವಿಯ ಸುಂದರ ಮೂರ್ತಿ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತ್ತು, ನಮ್ಮಲ್ಲಿ ಕೃತಾರ್ಥ ಭಾವ ಹುಟ್ಟಿಸಿತ್ತು. ನಂತರ ಇನ್ನೂ 3 ಕಿ.ಮೀ. ಮೇಲುಗಡೆ ಇರುವ 'ಬೈರವ'ನ ದರ್ಶನ ಮುಗಿಸಿ ನಡೆಯುತ್ತಾ ಹೊಟೇಲ್ ತಲುಪಿದಾಗ ಬೆಳಗಿನ ಜಾವ 3 ಗಂಟೆ. ಬೆಟ್ಟದ ಮೇಲೆ ಹಗಲು ರಾತ್ರಿಗಳನ್ನು ಒಂದು ಮಾಡುವ ಕಣ್ಣು ಕೋರೈಸುವ ದೀಪಗಳು, ಸುತ್ತಲಿನ ಸೌಂದರ್ಯ 34 ಕಿ.ಮೀ.ದೂರದ ಚೊಕ್ಕ ದಾರಿಯನ್ನು ಇನ್ನೂ ಚಿಕ್ಕದಾಗಿಸಿತ್ತು.

6. ತಿರುಮಲ : ದೇಶದ ವಿವಿಧ ಮೂಲೆಯಲ್ಲಿನ ಬೆಟ್ಟಗಳನ್ನು ಹತ್ತಿದನಂತರ ಪಕ್ಕದಲ್ಲೇ ಇರುವ 'ಸಪ್ತಗಿರಿವಾಸ' ತಿರುಮಲ ಬೆಟ್ಟ ಹತ್ತದಿರಲು ಸಾಧ್ಯವೇ? ಅದೂ ಮೆಟ್ಟಿಲು ಹತ್ತಿಯೇ ದರ್ಶನ ಮಾಡಬೇಕೆಂದೆನಿಸಿ ಹೊರಡಲುದ್ಯುಕ್ತವಾದಾಗ ಆತ್ಮೀಯರೂ ನಮ್ಮ ಜೊತೆಗೂಡಿದ್ದು ನಮ್ಮ ಉತ್ಸಾಹ ಇಮ್ಮಡಿಸಿತ್ತು. ಮೊದಲ 3000 ಮೆಟ್ಟಲುಗಳು ಬಹಳ ಕ್ಷೀಣಕರವಾಗಿದ್ದರೂ ಗೋವಿಂದ, ಗೋವಿಂದ ಎನ್ನುತ್ತಾ ಬರಿಯ ಕಾಲಿನಲ್ಲಿ ಹತ್ತಿ 'ಬ್ರಹ್ಮೋತ್ಸವದ' ದಿವಸ ಬೆಳಗ್ಗೆ ಶ್ರೀ ಶ್ರೀನಿವಾಸರ ದರ್ಶನವಾದದ್ದು ಅದ್ಭುತ.

7. ಶಿವಗಂಗೆ : ಬೆಂಗಳೂರು ಬಳಿಯ ಶಿವಗಂಗೆಯೂ ನಮ್ಮನ್ನು ಬಾಬಾ ಎಂದು ಕರೆಯುತ್ತಿತ್ತು. 'ದಕ್ಷಿಣ ಕಾಶಿ' ಎಂದೂ ಕರೆಯುವ 500 ಅಡಿ ಎತ್ತರ ಈ ಬೆಟ್ಟ ಹತ್ತುವುದು ಅಷ್ಟು ಸುಲಭವೇನೂ ಅಲ್ಲ ಎಂಬುದು ಅದನ್ನು ಹತ್ತುವಾಗಲೇ ಅರಿವಾಗಿದ್ದು. ಬೆಂಗಳೂರಿನಿಂದ ಕೇವಲ 50 ಕಿ.ಮೀ.ದೂರದಲ್ಲಿರುವ ಶಿವಗಂಗೆಗೆ ಹೋಗಲು ತುಮಕೂರು ರಸ್ತೆಯಲ್ಲಿರುವ ಡಾಬಸ್ ಪೇಟೆಯ ಬಳಿ ಎಡತಿರುವು ತೆಗೆದುಕೊಳ್ಳಬೇಕು. ಇಲ್ಲಿ ನೀಟಾಗಿ ಕಡಿದ ಮೆಟ್ಟಿಲುಗಳೂ ಇಲ್ಲ. ಬೆಟ್ಟ ಹತ್ತುವಾಗ ಕಬ್ಬಿಣದ ಸಳಿಗಳನ್ನು ಹಿಡಿದುಕೊಂಡೇ ಹತ್ತಬೇಕು ಕೆಲವೆಡೆ. ಕಬ್ಬಿಣದ ಸಲಾಕಿಗಳೂ ತುಕ್ಕು ಹಿಡಿದು ಅಲ್ಲಾಡುತ್ತಾ, ಎಲ್ಲಿ ಬೀಳಿಸಿಬಿಡುತ್ತೋ ಎನ್ನುವ ಹೆದರಿಕೆ ಬೇರೆ. ಅಲ್ಲಿ ವೀರಭದ್ರೇಶ್ವರನ ಗುಡಿಗೆ ಹೋಗಿ, ತೀರ್ಥ, ಪ್ರಸಾದ ತೆಗೆದುಕೊಂಡು, ಇಳಿದು ಬರುವಾಗ ವಿಪರೀತ ಕೋತಿ ಕಾಟ. ಕೈಯಲ್ಲಿ ಹಣ್ಣು ಕಾಯಿಗಳಿದ್ದರಂತೂ ಮುಗಿದೇಹೋಯಿತು. ಈ ದೇವಸ್ಥಾನದ ವಿಶೇಷವೆಂದರೆ ಗರ್ಭಗುಡಿಯ ಹಿಂಭಾಗದಲ್ಲಿರುವ, ಒಳಕಲ್ಲು ತೀರ್ಥದಲ್ಲಿ (ಸಣ್ಣಭಾವಿಯ ಹಾಗೆ) ಕೈ ಹಾಕಿದರೆ ನೀರು ಸಿಕ್ಕುವುದು. ನೀವು ಬೆಣ್ಣೆಯನ್ನು ಕಾಸಿ ತುಪ್ಪ ಮಾಡುವುದನ್ನು ನೋಡಿರುವಿರಿ. ಆದರೆ, ಮಾರ್ಗಮಧ್ಯದಲ್ಲಿ ಇರುವ ದೇವಸ್ಥಾನದಲ್ಲಿ ಲಿಂಗದ ಮೇಲೆ ತುಪ್ಪವನ್ನು ಲಿಂಗದ ಮೇಲೆ ತೀಡಿ ಬೆಣ್ಣೆ ಮಾಡುವ ಕ್ರಿಯೆಯಂತೂ ವಿಜ್ಞಾನಕ್ಕೆ ಒಂದು ಸವಾಲೇ ಸರಿ.

ಏಳುಬೆಟ್ಟಗಳನ್ನು ಹತ್ತಿದ್ದ ಅನುಭವ ಒಂದು ಬಗೆಯದಾದರೆ ಏಳು ಸೇತುವೆಗಳನ್ನು ದಾಟಿದ್ದು ಮತ್ತೊಂದು ರೋಮಾಂಚಕಾರಿ ಅನುಭವ.

English summary
Seetha Keshava from Sydney, Australia has explained her experience of trekking in 7 hills in different part of India and 7 bridges in Sydney.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X