ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ವೀಕೆಂಡ್ ಪಯಣ ಚಾಮುಂಡಿಬೆಟ್ಟದ ಕಡೆಗಿರಲಿ...!

By ಬಿಎಂ ಲವಕುಮಾರ್
|
Google Oneindia Kannada News

ಮೈಸೂರಿನ ಮುಕುಟ ಮಣಿಯಂತೆ ಕಂಗೊಳಿಸುವ ಚಾಮುಂಡಿಬೆಟ್ಟ ದೈವಿಕ ನೆಲೆಯಾಗಿದ್ದರೂ ಇದು ನಿಸರ್ಗ ಆರಾಧಕರಿಗೆ ಚೆಲುವಿನ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಪಟ್ಟಣದ ಗೌಜು ಗದ್ದಲದಲ್ಲಿ, ಒತ್ತಡದ ದುಡಿಮೆಯಲ್ಲಿ ಬದುಕು ಕಂಡುಕೊಂಡವರಿಗೆ ರಿಲ್ಯಾಕ್ಸ್ ಆಗಲು ಇದು ಅತ್ಯುತ್ತಮ ಸ್ಥಳ.

ಮುಂಜಾನೆ ಹಸಿರಿನ ನಡುವೆ ಬೀಸುವ ತಂಗಾಳಿಗೆ ಮೈಕೊಟ್ಟು ಮೆಟ್ಟಿಲೇರುತ್ತಾ ಸಾಗುವುದು ರೋಮಾಂಚನ ನೀಡುತ್ತದೆ. ಅಷ್ಟೇ ಅಲ್ಲ ಹೀಗೆ ಸಾಗುವಾಗ ಒಂದಷ್ಟು ಸುಸ್ತು ಅಂಥ ಅನಿಸಿದರೂ ಸುತ್ತಲಿನ ಸುಂದರ ನಿಸರ್ಗಕ್ಕೆ ಮತ್ತು ಬೀಸುವ ತಂಗಾಳಿಗೆ ಆ ಆಯಾಸವನ್ನು ಹೊಡೆದೋಡಿಸಿ ಮನಸ್ಸನ್ನು ಉಲ್ಲಾಸಗೊಳಿಸುವ ಶಕ್ತಿಯಿರುವುದು ವಿಶೇಷ.

ಅಪರೂಪದ ಪ್ರಾಣಿ: ಈ ಬೆಕ್ಕಿಗಿದೆ ಎರಡಲ್ಲ ಮೂರು ಕಣ್ಣು..!ಅಪರೂಪದ ಪ್ರಾಣಿ: ಈ ಬೆಕ್ಕಿಗಿದೆ ಎರಡಲ್ಲ ಮೂರು ಕಣ್ಣು..!

ಈಗ ಚಾಮುಂಡಿಬೆಟ್ಟಕ್ಕೆ ತೆರಳುವ ಪ್ರತಿಯೊಬ್ಬರೂ ಇಲ್ಲಿನ ಸುಂದರ ನೋಡಕ್ಕೆ ಮೈಮರೆಯದಿರಲಾರರು. ಮುಂಜಾನೆಯ ನೋಟವಂತೂ ಕಣ್ಣಿಗೆ ತಂಪು ನೀಡುತ್ತದೆ. ಹಸಿರು ಗಿಡಮರಗಳ ನಡುವೆ ಸಾಗುವಾಗ ಮಲೆನಾಡಿನ ಹಾದಿಯನ್ನು ನೆನಪಿಸುತ್ತದೆ. ದೂರದ ಮಲೆನಾಡಿಗೆ ಹೋಗಲಾಗದವರು ಚಾಮುಂಡಿಬೆಟ್ಟದತ್ತ ಹೆಜ್ಜೆಹಾಕಿದರೆ ಸುಂದರ ವಾತಾವರಣದಲ್ಲಿ ತಮ್ಮೆಲ್ಲ ಜಂಜಡವನ್ನು ಮರೆತು ಮೈಮನವನ್ನು ಹಗುರ ಮಾಡಿಕೊಂಡು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಬರಲು ಸಾಧ್ಯವಿದೆ.

 ಮುಂಗಾರು ಮಳೆಯಲ್ಲಿ ಮಿಂದೆದ್ದಿದೆ ಚಾಮುಂಡಿಬೆಟ್ಟ

ಮುಂಗಾರು ಮಳೆಯಲ್ಲಿ ಮಿಂದೆದ್ದಿದೆ ಚಾಮುಂಡಿಬೆಟ್ಟ

ಮೈಸೂರಿಗೆ ಬಂದವರು ಚಾಮುಂಡಿಬೆಟ್ಟಕ್ಕೆ ತೆರಳದಿದ್ದರೆ ನಿಮ್ಮ ಪ್ರವಾಸ ಅಪೂರ್ಣವಾದಂತೆಯೇ.. ಏಕೆಂದರೆ ಚಾಮುಂಡಿಬೆಟ್ಟ ದೈವಿಕ ನೆಲೆ ಮಾತ್ರವಲ್ಲದೆ, ಪ್ರೇಕ್ಷಣೀಯ ತಾಣವೂ ಆಗಿರುವುದರಿಂದ ಎಲ್ಲರಿಗೂ ಅಚ್ಚುಮೆಚ್ಚಾಗಿದೆ. ಸಮುದ್ರಮಟ್ಟದಿಂದ ಸುಮಾರು 3,489 ಅಡಿಯಷ್ಟು ಎತ್ತರದಲ್ಲಿದ್ದು, ಇಲ್ಲಿನ ಹಸಿರು ಹಚ್ಚಡ ಹೊದ್ದ ನಿಸರ್ಗ ಸೌಂದರ್ಯ ಕಣ್ಮನ ತಣಿಸುತ್ತದೆ. ಬೆಟ್ಟದಿಂದ ಕಂಡುಬರುವಂತಹ ಮೈಸೂರು ನಗರ ಸೇರಿದಂತೆ ಸುತ್ತಮುತ್ತಲಿನ ವಿಹಂಗಮ ನೋಟ ಮೈಪುಳಕಗೊಳಿಸುತ್ತದೆ.

ಚಾಮುಂಡಿಬೆಟ್ಟಕ್ಕೆ ಈಗೇನಾದರೂ ತೆರಳಿದರೆ ಇಲ್ಲಿ ಕಂಡುಬರುವ ದೃಶ್ಯಗಳಂತು ವರ್ಣಿಸಲು ಸಾಧ್ಯವಿಲ್ಲದಾಗಿದೆ ಮುಂಗಾರು ಮಳೆಯಲ್ಲಿ ಮಿಂದೆದ್ದ ಚಾಮುಂಡಿಬೆಟ್ಟ ಹಸಿರು ಹೊದಿಕೆಹೊದ್ದು ಮಿನುಗುತ್ತಿದೆ. ಅದರಲ್ಲೂ ಜಿಟಿಜಿಟಿ ಮಳೆಯಲ್ಲಿ ತೊಯ್ದು, ಮಂಜಿನಲ್ಲಿ ಮುಳುಗಿ, ರವಿಕಿರಣದಲ್ಲಿ ಮಿನುಗಿ ಹಸಿರ ರಂಗಿನ ಚೆಲುವು ಸೂಸುವುದನ್ನು ನೋಡುವುದೇ ಹೊಸ ಅನುಭವ. ಪ್ರತಿದಿನವೂ ನೋಡಲು ಅದೇ ಚಾಮುಂಡಿಬೆಟ್ಟವಾದರೂ ಅದು ತೆರೆದುಕೊಳ್ಳುವ ನೋಟಕ್ಕೆ ಲೆಕ್ಕವೇ ಸಿಗುವುದಿಲ್ಲ.

 ಮೆಟ್ಟಿಲೇರಿದರೆ ಸಿಗುವ ಮಜವೇ ಬೇರೆ

ಮೆಟ್ಟಿಲೇರಿದರೆ ಸಿಗುವ ಮಜವೇ ಬೇರೆ

ನಸುಕಿನಲ್ಲಿ ದಟ್ಟವಾದ ಮಂಜಿನಲ್ಲಿ, ಬೀಸುವ ತಂಗಾಳಿಯಲ್ಲಿ ಚಾಮುಂಡಿಬೆಟ್ಟದಲ್ಲಿ ಅಡ್ಡಾಡಿದರೆ ಸಿಗುವ ಮಜಾವೇ ವಿಭಿನ್ನವಾಗಿರುತ್ತದೆ. ಇನ್ನು ಚಾಮುಂಡಿಬೆಟ್ಟದ ನಿಜವಾದ ಸೊಬಗನ್ನು ಅರಿಯಬೇಕಾದರೆ ಮೆಟ್ಟಿಲೇರಬೇಕು. ಇದು ಕಷ್ಟವಾಗಿ ಕಂಡರೂ ಮೆಟ್ಟಿಲೇರುತ್ತಾ ಹೋದಂತೆ ಸುತ್ತಲ ನಿಸರ್ಗದ ಚೆಲುವು ಹುರುಪು ನೀಡುತ್ತದೆ. ಜತೆಗೆ ಮೆಟ್ಟಿಲೇರುವಾಗಿನ ಆಯಾಸವನ್ನೆಲ್ಲ ಹೊಡೆದೋಡಿಸಿ ಬಿಡುತ್ತದೆ.

ಚಾಮುಂಡಿಬೆಟ್ಟದ ಮೆಟ್ಟಿಲು ಏರುತ್ತಾ ಹೋದಂತೆ ಅಲ್ಲಿಂದ ಕಾಣಸಿಗುವ ಮೈಸೂರು ನಗರದ ನೋಟ ಕಣ್ಣಿಗೆ ಸೋಜಿಗವನ್ನುಂಟು ಮಾಡುತ್ತಿದೆ. ಇಡೀ ಮೈಸೂರು ಮುಂಗಾರು ಮಳೆಯಲ್ಲಿ ತೊಯ್ದು ಪಳಪಳ ಹೊಳೆಯುತ್ತಿರುವಂತೆ ಭಾಸವಾಗುತ್ತದೆ. ಸದಾ ಜಂಜಾಟದಲ್ಲಿದ್ದವರು ವೀಕೆಂಡ್ ಟ್ರಿಪ್ ಗೆ ದೂರದ ಊರುಗಳಿಗೆ ಹೋಗುವ ಬದಲಿಗೆ ಮೈಸೂರಿನ ಚಾಮುಂಡಿಬೆಟ್ಟದತ್ತ ಮುಖ ಮಾಡಿದರೆ ಹೊಸ ಅನುಭವ ಪಡೆಯಲು ಸಾಧ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.

 ಸಿನಿಮಾ ಸ್ಟೋರಿಗಿಂತ ಕಡಿಮೆಯಿಲ್ಲ ಭವಿಷ್ಯದ ಅಂಬಾರಿ ಆನೆ ಭೀಮನ ಕಥೆ ಸಿನಿಮಾ ಸ್ಟೋರಿಗಿಂತ ಕಡಿಮೆಯಿಲ್ಲ ಭವಿಷ್ಯದ ಅಂಬಾರಿ ಆನೆ ಭೀಮನ ಕಥೆ

 ಮಹಿಷಾಸುರ ಸಂಹಾರ

ಮಹಿಷಾಸುರ ಸಂಹಾರ

ಇಷ್ಟೆಲ್ಲ ಹೇಳಿದ ಮೇಲೆ ಚಾಮುಂಡಿಬೆಟ್ಟದ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ ಬ್ರಹ್ಮ-ವಿಷ್ಣು-ಮಹೇಶ್ವರರ ಶಕ್ತಿದೇವತೆಯಾಗಿ, ಅಷ್ಟದಳ ಪರ್ವತಗಳಲ್ಲಿ ಪಶ್ಚಿಮದಳದ ಮಧ್ಯಭಾಗದ ಶೃಂಗದಲ್ಲಿಯೇ ಆದಿಶಕ್ತಿ ಸ್ವರೂಪಿಣಿಯಾಗಿ ಮಹಿಷಾಸುರನೆಂಬ ದುಷ್ಟ ರಕ್ಕಸವನ್ನು ಸಂಹರಿಸಿ ಚಾಮುಂಡಾ ಎಂಬ ಹೆಸರಿನಿಂದ ಪ್ರಖ್ಯಾತಿ ಪಡೆದಿರುವ ಚಾಮುಂಡೇಶ್ವರಿಯ ನೆಲೆಯಾಗಿರುವ ಚಾಮುಂಡಿಬೆಟ್ಟಕ್ಕೆ 11ನೇ ಶತಮಾನದ ಇತಿಹಾಸವಿದ್ದು, ಆಗ ಈ ಕ್ಷೇತ್ರವನ್ನು ಮೊರ್ಬಲದ ತೀರ್ಥ, ಮೊಬೈಲದ ತೀರ್ಥ ಕರೆಯಲಾಗುತ್ತಿತ್ತು ಎನ್ನಲಾಗಿದೆ.

ಪೌರಾಣಿಕ ಕಥೆಯ ಪ್ರಕಾರ ಹಿಂದೆ ಮಹಿಷಾಸುರ ಎಂಬ ರಾಕ್ಷಸ ಜನರಿಗೆ ಹಾಗೂ ಋಷಿ ಮುನಿಗಳಿಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದನಲ್ಲದೆ ಯಜ್ಞಯಾಗಾದಿಗಳಿಗೆ ಅಡ್ಡಿಪಡಿಸುತ್ತಿದ್ದನು. ಹೀಗಿರಲು ಮಹಿಷಾಸುರನ ಉಪಟಳದಿಂದ ಬೇಸತ್ತ ಋಷಿ ಮುನಿಗಳು ತಮ್ಮನ್ನು ದುಷ್ಟ ರಾಕ್ಷಸನಿಂದ ಪಾರು ಮಾಡುವಂತೆ ಶಿವನ ಮೂಲಕ ಪಾರ್ವತಿ ಮೊರೆಹೋದರು. ಪಾರ್ವತಿ ದೇವಿಗೆ ಎಲ್ಲ ದೇವತೆಗಳು ಶಕ್ತಿ ತುಂಬಿದಾಗ ಚಾಮುಂಡೇಶ್ವರಿಯಾಗಿ ಸಿಂಹಾರೂಢಳಾಗಿ ಆಯುಧಗಳೊಂದಿಗೆ ತೆರಳಿ ದುಷ್ಟ ಮಹಿಷಾಸುರನನ್ನು ಕೊಂದಳೆಂಬುದು ಪುರಾಣದ ಕಥೆಯಾಗಿದೆ.

 ಮೈಸೂರು ರಾಜಮನೆತನದ ಕುಲದೇವತೆ

ಮೈಸೂರು ರಾಜಮನೆತನದ ಕುಲದೇವತೆ

ಚಾಮುಂಡಿಬೆಟ್ಟದ ದೇವಾಲಯದಲ್ಲಿರುವ ಅಷ್ಟಭುಜದ ಶ್ರೀ ಚಾಮುಂಡೇಶ್ವರಿ ಮೂರ್ತಿಯು ಪುರಾತನದ್ದು ಎಂದು ಹೇಳಲಾಗಿದ್ದು, ಇದನ್ನು ಮಾರ್ಕಂಡೇಯ ಋಷಿಗಳು ಸ್ಥಾಪಿಸಿದರೆಂಬ ಐತಿಹ್ಯವಿದೆ. ದೇವಾಲಯವು ಹಳೇಬೀಡು ಮತ್ತು ಬೇಲೂರಿನ ಹೊಯ್ಸಳರ ಕಾಲದ ದೇವಾಲಯಗಳ ಮಾದರಿಯಲ್ಲಿದ್ದು, ಗೋಪುರ ದ್ರಾವಿಡ ಶೈಲಿಯಲ್ಲಿ ತ್ರಿಕೋನಾಕಾರದಲ್ಲಿದೆ. ಯದುವಂಶಸ್ಥರಾದ ಮೈಸೂರು ಮಹಾರಾಜರು ತಮ್ಮ ಕುಲದೇವತೆಯಾಗಿ ಚಾಮುಂಡೇಶ್ವರಿಯನ್ನು ಸ್ವೀಕರಿಸಿದ ಕಾರಣದಿಂದಾಗಿ ಚಾಮುಂಡಿಬೆಟ್ಟ ಮತ್ತು ಅಮ್ಮನವರ ದೇಗುಲ ಬಹುಬೇಗ ಪ್ರವರ್ಧಮಾನಕ್ಕೆ ಬಂದು ಅತ್ಯಂತ ವೈಭವವನ್ನು ಪಡೆಯುವಂತಾಯಿತು.

ವಾಹನಗಳು ಇಲ್ಲದ ಕಾಲದಲ್ಲಿ ದೇವಾಲಯಕ್ಕೆ ತೆರಳಲು ಅನುಕೂಲವಾಗುವಂತೆ ದೊಡ್ಡದೇವರಾಜ ಒಡೆಯರ್ ಅವರು ಒಂದು ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಹಾಗೆಯೇ 700ಮೆಟ್ಟಿಲುಗಳ ಬಳಿಯಲ್ಲಿ 16 ಅಡಿ ಎತ್ತರ 26 ಅಡಿ ಉದ್ದದ ಶಿಲಾಮೂರ್ತಿ ನಂದಿಯನ್ನು ನಿರ್ಮಿಸಿದರು ಎನ್ನುವುದು ಇತಿಹಾಸವಾಗಿದೆ. ಇನ್ನು ಐತಿಹಾಸಿಕ ಮೈಸೂರು ದಸರಾಕ್ಕೆ ಚಾಲನೆ ಸಿಗುವುದು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಎನ್ನುವುದು ಮತ್ತೊಂದು ವಿಶೇಷವಾಗಿದೆ.

English summary
Chamundi Hills in Mysore is one top tourist place to visit in Karnataka, The beauty of chamundi hills is now enhanced with more greenary after Monsoon rain,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X