ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಡಿಯದೇ ಕಾಡುವ ತಡಿಯಂಡಮೋಲ್ (ಭಾಗ 2)

By Super
|
Google Oneindia Kannada News

Dont worry about what is there under your feet, just enjoy!
(ಮುಂದುವರಿದಿದೆ...)
ಅಲ್ಲಿಗಾಗಲೇ ಬೆಂಗಳೂರಿಂದ ಒಂದು ದೊಡ್ಡ ತಂಡ ನಮಗಿಂತಲೇ ಮೊದಲು ಬಂದು ಚಾರಣಕ್ಕೆ ಹೊರಟೇ ಬಿಟ್ಟಿತ್ತು. ಜೊತೆಗೊಬ್ಬ ಗೈಡ್ ಕೂಡ ಇದ್ದ. ನಮಗೆ ಹ್ಯಾಗಿದ್ದರೂ ದಾರಿ ತೋರಿಸಿದ್ದಾರೆ, ಮ್ಯಾಪ್ ಇದೆ. ಸುಮ್ಮನೆ ಗೈಡ್‌ಗ್ಯಾಕೆ ದುಡ್ಡು ಕೊಡೋದು ಅಂದು ನಾವೇ ಹೊರಟುಬಿಟ್ಟವು. ಅಲ್ಲೇ ಆಗಿದ್ದು ಎಡವಟ್ಟು.

ರಕ್ತಪಿಪಾಸು ಜಿಗಣೆ : ದಟ್ಟ ಕಾಡು, ಮಳೆಗಾಲ ಮುಗಿದಿದ್ದರೂ ಒಂದು ವಾರದಿಂದ ಅಲ್ಲಿ ಸತತ ಮಳೆ ಸುರಿಯುತ್ತಿತ್ತು. ಗಿಡಗಳಿಂದ ಉದುರಿದ ಎಲೆಗಳು ಕೊಳತುಬಿಟ್ಟಿವೆ. ಅನಾಮತ್ತು ಜಿಗಣೆಗಳ ಸಾಮ್ರಾಜ್ಯಕ್ಕೇ ಕಾಲಿಟ್ಟಿದ್ದೆವು. ಜಿಗಣೆಗಳನ್ನು ಓಡಿಸಲು ಕಡ್ಡಿಪೊಟ್ಟಣ, ತಂಬಾಕು, ಸುಣ್ಣ, ಉಪ್ಪು ಯಾವುದನ್ನೂ ಕೊಂಡೊಯ್ದಿರಲಿಲ್ಲ. ಕಾಲಿಟ್ಟ ಹತ್ತು ಸೆಕೆಂಡಿನಲ್ಲಿ ಒಂದೊಂದು ಕಾಲಿಗೆ 20 ಜಿಗಣೆಗಳು ಅಮರಿಕೊಂಡು ಸ್ವಾಗತ ಕೋರಿದ್ದವು. ಎಂದೂ ಜಿಗಣೆಗಳನ್ನು ಕಂಡಿರದ ನಮಗೆ ಅಷ್ಟೊಂದು ರಕ್ತಪಿಪಾಸುಗಳನ್ನು ನೋಡಿದ ಕೂಡಲೆ ಎಲ್ಲರೂ ಭರತನಾಟ್ಯ ಶುರು ಮಾಡಿದೆವು.

ಮೊದಲೇ ಒಂದು ಬಾಟಲಿ ರಕ್ತ ಕೊಟ್ಟು ಬಂದಿದ್ದೆ. ಇನ್ನಿವಷ್ಟು ರಕ್ತ ಹೀರಿಬಿಟ್ಟರೆ ವಾಪಸ್ಸು ಬರೋದು ಡೌಟು ಅಂದ್ಕೊಂಡು ಹೆದರಿಕೆಯಾಯಿತು.

ಅದೃಷ್ಟವಶಾತ್ ಒಬ್ಬ ಗೆಳೆಯ ಡಿಯೋಡೊರಂಟ್ ತಂದಿದ್ದ. ಹೆದರಬೇಡಿ ಇದನ್ನು ಬೂಟಿನ ಮೇಲೆ ಸ್ಪ್ರೇ ಮಾಡಿಕೊಂಡರೆ ಜಿಗಣೆಗಳು ಹತ್ತಿರಕ್ಕೂ ಸುಳಿಯುವುದಿಲ್ಲ ಎಂದು ರಾಜಾರೋಶವಾಗಿ ಹೇಳಿದ. ಆದರೇನು ಮಾಡುವುದು ಪುಸ್‌ಪುಸ್ ಅಂದ ನಾಲ್ಕಾರು ಬಾರಿ ಹೊಡೆಯುತ್ತಿದ್ದಂತೆ ಅದೂ ಖಾಲಿ. ಸರಿಹೋಯ್ತು ಅಂದ್ಕೊಂಡು ಕೈಯಲ್ಲಿ ಒಬ್ಬೊಬ್ಬರೂ ಹಿಡಿದಿದ್ದ ಕೋಲಿನಿಂದ ಜಿಗಣೆಗಳನ್ನು ದೂರ ಸರಿಸಲು ಪ್ರಾರಂಭಿಸಿದೆವು. ನಂತರ ಬೆರಳೇ ಅಸ್ತ್ರವಾಯಿತು. ಅವನ್ನು ಬೆರಳಿನಿಂದ ಹೊಡೆಯಬೇಕೆಂದು ನಿಂತ್ರೆ ಇನ್ನಿಪ್ಪತ್ತು ಏರಿರುತ್ತಿದ್ದವು. ಥತ್ ಯಾಕಪ್ಪಾ ಬಂದ್ವಿ ಟ್ರೆಕ್ಕಿಂಗ್‌ಗೆ ಅಂತ ಕೆಲವರು ಪ್ರಲಾಪ ತೆಗೆದರು.

ಸುತ್ತಲೂ ನಿತ್ಯಹರಿದ್ವರ್ಣದ ದಟ್ಟ ಕಾಡು, ಎಲ್ಲೆಲ್ಲೂ ಮನುಷ್ಯರ ಸುಳಿವೇ ಇಲ್ಲ, ಅತ್ಯಂತ ಶುದ್ಧವಾದ ಹವಾಮಾನ, ಮಳೆಯೂ ಇರಲಿಲ್ಲ. ಕುಹೂ ಅಂತ ಕ್ಯಾಕಿ ಹೊಡ್ಕೊಂಡು ಸುತ್ತಲಿನ ಸೌಂದರ್ಯ ಆಸ್ವಾದಿಸೋಣವೆಂದರೆ ಈ ರಕ್ತ ಸಂಬಂಧಿಗಳು ಬಿಡಬೇಕಲ್ಲ?

ಉಬ್ಬುತಗ್ಗುಗಳನ್ನೇರುತ್ತಾ ಎರಡುಮೂರು ಕಿ.ಮೀ. ದೂರ ಸಾಗುತ್ತಿದ್ದಂತೆ ಹೊರಟ ದಾರಿ, ಬಂದ ದಾರಿ ಎಲ್ಲಾ ಮರೆತಿತ್ತು. ಮನದ ತುಂಬಾ ಜಿಗಣೆಗಳೇ ತುಂಬಿಕೊಂಡಿದ್ದವು. ಪಾಪ, ಬೂಟಿನ ಒಳ ಸೇರಿ ಒಂದೇ ಒಂದು ಜಿಗಣೆ ರಕ್ತ ಹೀರಿರದಿದ್ದರೂ ಮೈಯೆಲ್ಲಿನ ರಕ್ತವೆಲ್ಲ ಬಸಿದು ನಿತ್ರಾಣವಾದಂಥ ಸ್ಥಿತಿ ನಮ್ಮದಾಗಿತ್ತು.

ನಕಾಶೆಯಲ್ಲಿದ್ದಂತೆ ಝರಿಯೇನೋ ಸಿಕ್ಕಿತು. ಅಲ್ಲಿಂದ ಮುಂದಿನ ದಾರಿ ನಕಾಶೆಯಲ್ಲಿದ್ದಂತೆ ಇರಲಿಲ್ಲ. ಯಾಕಂದ್ರೆ ಅಲ್ಲಿಂದ ಮುಂದೆ ಕಾಲುದಾರಿ ಇರಲೇ ಇಲ್ಲ. ಝರಿಯ ಬಳಿ ಕುಳಿತುಕೊಂಡೆವು. ಬರುವ ದಾರಿಯಲ್ಲಿ ಕಾಲಿಟ್ಟಲ್ಲೆಲ್ಲ ಜಿಗಣೆಗಳಿದ್ದರೆ ಹರಿವ ನೀರಿನ ಬಳಿ ಇದ್ದಿದ್ದಿಲ್ಲ. ಅದೇ ಸಮಾಧನದಿಂದ ಬಟ್ಟೆಯೆಲ್ಲ ಕಳಚಿ ಹರಿವ ನೀರಿಗೆ ಮೈಯೊಡ್ಡಿ ನಂತರ ಭಕ್ಕರಿ, ಗುರೆಳ್ಳು ಚಟ್ನಿಪುಡಿ, ಕೆಂಪು ಚಟ್ನಿ, ಹಸಿ ಈರುಳ್ಳಿ, ರೆಡಿಟುಈಟ್ ಹೊಟ್ಟೆಗಿಳಿಸಿದೆವು.

ಗೈಡ್ ಇದ್ದಿದ್ರೆ ಚೆನ್ನಾಗಿತ್ತು ಅಂದ್ಕೊಂಡು ವಾಪಸು ಬಂದೆವು. ಸುರೇಶ್ ಅವರನ್ನು ಈ ಬಗ್ಗೆ ವಿಚಾರಿಸಿದಾಗ ಅಲ್ಲಿಂದಲೂ ಹೋಗಬಹುದು ಆದರೆ ಯಾರೂ ಆಬದಿಯಿಂದ ಸುಮಾರು ದಿನಗಳಿಂದ ಹೋಗದ ಕಾರಣ ಕಾಲುದಾರಿ ಮುಚ್ಚಿರಬಹುದು. ಗೈಡ್ ತೊಗೊಂಡು ಹೋಗಿ ಸರಿದಾರಿಯಲ್ಲಿ ಕರ್ಕೊಂಡು ಹೋಗುತ್ತಾರೆ ಅಂದ್ರು. ಸುರೇಶ್ ಅವರೊಂದಿಗೆ ಮಾತು ಮುಗಿಸುವ ಹೊತ್ತಿಗೆ ಮಳೆ ಹಚ್ಚಿ ಹೊಡೆಯುತ್ತಿತ್ತು.

ಅಂದು ಕಂಡಿದ್ದೇನು ಗೊತ್ತೆ? : ಮರುದಿನ ಗೈಡ್‌ನೊಂದಿಗೆ ಸುರೇಶ್ ಅವರ ನಾಯಿ ಜೂಲಿ ಕೂಡ ನಮ್ಮ ಸಂಗಾತಿಯಾಯಿತು. ಈ ದಿನ ಸ್ವಲ್ಪ ಕ್ಲಿಷ್ಟವಾದರೂ ರಾಜಾ ಹಿಲ್ ಮೇಲಿಂದ ಹೋಗುವುದಾಗಿ ನಿಶ್ಚಯವಾಯಿತು.

ರೆಸಾರ್ಟ್ ಬಳಿಯ ರಾಜಾ ಹಿಲ್‌ನ ಕಡಿದಾದ ಬೆಟ್ಟ ಏರಿ ಇನ್ನೆರಡು ಗುಡ್ಡ ಹತ್ತಿ ಇಳಿದರೆ ಅಲ್ಲೊಂದು ಸಣ್ಣ ಕಾಡು ನಡುವೆ ಝರಿ. ಝರಿ ದಾಟಿ ಮತ್ತೊಂದು ಗುಡ್ಡವೇರಿ ಅನತಿ ದೂರ ಸಾಗಿದರೆ ಅಲ್ಲೊಂದು ಕೆರೆ. ಅದು ಅರ್ಧ ದಾರಿ ಕ್ರಮಿಸಿದಂತೆ, ಅಂದ್ರೆ 5ರಿಂದ 6 ಕಿ.ಮೀ. ದೂರ ಸಾಗಿದಂತೆ. ಬೆಳಿಗ್ಗೆ ಬೇಗನೆ ಹೊರಟರೆ 13 ಕಿ.ಮೀ. ದೂರದ ತಡಿಯಂಡಮೋಲ್ ಬೆಟ್ಟಕ್ಕೆ ಹೋಗಿ ಬರಲು ಸಾಯಂಕಾಲವೇ ಆಗುತ್ತದೆ ಎಂದ ಗೈಡ್ ಅಪ್ಪಣ್ಣ.

<strong>ತಡಿಯಂಡಮೋಲ್ ಚಾರಣ ಭಾಗ 3</strong>ತಡಿಯಂಡಮೋಲ್ ಚಾರಣ ಭಾಗ 3

English summary
Trekking has become a way of staying away from hectic city life these days. It is a different experience altogether when it is raining especially in Malenadu. Beautiful nature, refreshing atmosphere, deadly leaches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X