ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀತಾ ಕೇಶವ ಚೀನಾ ಪ್ರವಾಸ ಕಥನ

By Staff
|
Google Oneindia Kannada News

Seethe Keshava, Sydney
ಕಳೆದ ಓಲಿಂಪಿಕ್ಸ್ ನಲ್ಲಿ ಚಿನ್ನದ ಕೊಳ್ಳೆ ಹೊಡೆದ, ಭಾರತದಷ್ಟೇ ಪುರಾತನ ಇತಿಹಾಸ, ಭವ್ಯ ಸಂಸ್ಕೃತಿ ಹೊಂದಿರುವ ಚೀನಾ ಪ್ರವಾಸ ಮಾಡಬೇಕೆಂದು ಮೊದಲಿನಿಂದಲೂ ನಮಗೆ ಆಸೆಯಿತ್ತು. ಆ ಆಸೆ ಚೀನಾದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದಾಗ ಮತ್ತಷ್ಟು ಗಟ್ಟಿಯಾಗಿತ್ತು. ಸಿಡ್ನಿಯಿಂದ 'ವೈದ್ಯರ ತಂಡ', Blacktown Medical Practitioners Associationನವರು ಚೀನಾಗೆ ಹೋಗುವುದು ಗೊತ್ತಾದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ. ನಾನು ಮತ್ತು ನನ್ನ ಯಜಮಾನರೂ ಚೀನಾ ಪ್ರವಾಸಕ್ಕೆ ಹೋಗಲು ಹೆಸರು ನೊಂದಾಯಿಸಿಕೊಂಡೆವು.

ಅಕ್ಟೋಬರ್ 10ರಂದು 24 ಜನರ ಗುಂಪು ಸಿಡ್ನಿಯ ಏರ್ಪೋರ್ಟ್ ನಲ್ಲಿ 11.15ರ Qantasನಲ್ಲಿ ಬೀಜಿಂಗ್ ಗೆ ಹೊರಟೆವು. ವಿಮಾನ ತಡವಾಗುವುದೆಂದು ತಿಳಿದುಬಂದಿತು. 20 ಡಾಲರಿನ ಊಟ, ಬಹಳ ಸೊಗಸಾಗಿತ್ತು (ಪಾಸ್ತ, ಸೂಪ್, ಕಪುಚಿನೋ ಕಾಫಿ). ದೇವರ ದಯೆಯಿಂದ 2 ಗಂಟೆಗೆ ವಿಮಾನ ಹೊರಟೇಬಿಟ್ಟು, ಸಲೀಸಾಗಿ ಬೀಜಿಂಗ್ ರಾತ್ರಿ 10.50ಕ್ಕೆ ತಲುಪಿತು. ಅಲ್ಲಿ ನಮ್ಮ ಟೂರ್ ಗೈಡ್, ಐವಿ ನಮ್ಮನ್ನೆಲ್ಲಾ ಎದುರುಗೊಂಡು, ಒಂದು ಕೋಲಿಗೆ ಹಳದಿ ಬಣ್ಣದ China Bestours Flag ಹಿಡಿದು ನಗುಮುಖದಿಂದ ಸ್ವಾಗತಿಸಿದರು. ನಮ್ಮ 16 ದಿವಸದ ಪ್ರವಾಸದಲ್ಲಿ Yichang, Yangtzu Cruise, Chongqing, Xian, Suzhou, Shangai & Yellow Mountain ಇದ್ದವು. ಬೀಜಿಂಗ್, ಷಾಂಗಾಯ್ ಮತ್ತು Yangtze ಕ್ರೂಸ್ ಬಗ್ಗೆ ನನ್ನ ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳಬಯಸುತ್ತೇನೆ.

ಚೀನಾದೇಶ ಕೂಡ ಭಾರತ ದೇಶದಂತೆಯೇ ಭವ್ಯ ಚರಿತ್ರೆ, ಸಂಸ್ಕೃತಿ ಹೊಂದಿರುವ ರಾಷ್ಟ್ರ. ರಾಜ ಮಹಾರಾಜರುಗಳಾಳಿದ ದೇಶ. ಐತಿಹಾಸಿಕ Tianamen Square ವಿಸ್ತಾರವಾದ, ಹೂವಿನ ಜೋಡಣೆಗಳಿಂದ ಅಲಂಕರಿಸಿದ್ದು ತುಂಬಾ ಚೆನ್ನಾಗಿದೆ. ಎಲ್ಲೆಲ್ಲೂ ಜನ, ಜನ, ಜನ. ಇಲ್ಲಿರುವ ಇಂಪೀರಿಯಲ್ ಪ್ಯಾಲೇಸ್ ದೇಶದಲ್ಲಿಯೇ ಅತಿ ದೊಡ್ಡ ಅರಮನೆಯೆಂದು ಹೆಸರಾಗಿದೆ. ಮಿಂಗ್ ಮತ್ತು ಕಿಂಗ್ ವಂಶದವರು ಇದನ್ನು ಆಳಿರುವರು. 24 ರಾಜರುಗಳು ಸುಮಾರು 500 ವರ್ಷಗಳ ಕಾಲ ಈ ಅರಮನೆಯಲ್ಲಿ ರಾಜ್ಯಭಾರ ನಡೆಸಿದ್ದಾರೆ.

ಬೀಜಿಂಗ್ ಎಂದುಬಿಟ್ಟರೆ ವಿಶ್ವದ ಏಳು ಅದ್ಭುತಗಳಲ್ಲೊಂದಾಗಿರುವ ಗ್ರೇಟ್ ವಾಲ್ ಮರೆಯುವಹಾಗೇ ಇಲ್ಲ. ಜೇಡ್ ಕಾರ್ಖಾನೆಗೆ ಭೇಟಿಕೊಟ್ಟು, ನಂತರ ನಗರದಿಂದ 75 ಕಿ.ಮೀ.ನಲ್ಲಿರುವ, 'ಬಡಾಲಿಂಗ್'ಗೆ ಹೋಗಿ ಗ್ರೇಟ್ ವಾಲ್ ಹತ್ತಲು ಶುರುಮಾಡಿದೆವು. ನಾವಿಬ್ಬರೂ ಸುಮಾರು ಒಂದೂವರೆ ಗಂಟೆಯಲ್ಲಿ ಹತ್ತಿಬಂದುಬಿಟ್ಟೆವು. ಸಣ್ಣ, ದೊಡ್ಡ, ಕಡಿದಾದ, ಸರಿಯಾದ ಜೋಡಣೆಇಲ್ಲದ ಮೆಟ್ಟಲುಗಳನ್ನು ಹತ್ತಿಕೊಂಡು ಬಂದಾಗ ಕಂಡ ದೃಶ್ಯ ನೋಡಿ ಕಷ್ಟಪಟ್ಟು ಹತ್ತಿದ್ದು ಸಾರ್ಥಕ ಎನಿಸಿತು. ಮೇಲೆ ಬರಲು 1740 ಮೆಟ್ಟಲುಗಳು ಇರುವುದಾಗಿ ತಿಳಿದುಬಂತು. ಹತ್ತುವಾಗೇನೋ ಉತ್ಸಾಹವಿತ್ತು, ಆಮೇಲೆ ಕಾಲುಗಳು ಮಾತಾಡಲು ಪ್ರಾರಂಭಿಸಿದವು. ಸಮ್ಮರ್ ಪ್ಯಾಲೇಸ್ ಗೆ ಬಂದು ಇಂಪೀರಿಯಲ್ ಗಾರ್ಡನ್ ನಲ್ಲಿ, ಮನುಷ್ಯ ಮಾಡಿದ ಕೊಳ, ಹಳೆಯ ದೊಡ್ಡ ದೊಡ್ಡ ಕಟ್ಟಡಗಳು, ಅತಿ ಉದ್ದವಾದ ವರಾಂಡ ಎಲ್ಲ ನೋಡಿದೆವು. ಅಲ್ಲಿಂದ ಬರುವಾಗ ಒಲಿಂಪಿಕ್ ಸ್ಟೇಡಿಯಂ ನೋಡಿದೆವು. ಇತ್ತೀಚೆಗೆ ನಡೆದ ಓಲಿಂಪಿಕ್ ಕ್ರೀಡಾಕೂಟದಲ್ಲಿ ನಮ್ಮ ದೇಶದವರು ಚಿನ್ನ, ಬೆಳ್ಳಿ ಪದಕಗಳನ್ನು ಗೆದ್ದು ಮೆರೆದಾಡಿದ್ದು ನೆನಪಿಗೆ ಬಂದು ನನ್ನನ್ನು ಬೀಗುವಂತೆ ಮಾಡಿತು.

Seetha Keshava from Australia
ಮುಂದೆ ನಮ್ಮದು ಹಡಗು ಪ್ರವಾಸ. ಬೀಜಿಂಗ್ ನಿಂದ ಪ್ರದೇಶಿಕ ವಿಮಾನದಲ್ಲಿ ಈಚಾಂಗ್ ಊರಿಗೆ ಬಂದು ನಮ್ಮ ಹಡಗು ಇರುವ ಜಾಗಕ್ಕೆ ಬಸ್ಸಿನಲ್ಲಿ ಹೋದೆವು. ಈಚಾಂಗ್ ಸಣ್ಣ ಊರಾದರೂ ಜನಸಂಖ್ಯೆ ನಾಲ್ಕು ಮಿಲಿಯನ್! ನಾವು 'ಡೈಮಂಡ್ ಕ್ರೂಸ್'ನಲ್ಲಿ ನಾಲ್ಕು ದಿವಸಕ್ಕೆ ಹೋಗಿದ್ದೆವು. ಅದರಲ್ಲಿ ಮೊದಲನೆ ದಿವಸ Three Gorges Dam ನೋಡಲು ಹೋದೆವು. ಚೀನಾ, ಡಚ್ ಮತ್ತು ಜರ್ಮನ್ ಇಂಜಿನೀಯರುಗಳು ಸೇರಿ ಮಾಡಿರುವ ಬೃಹತ್ ಅಣೆಕಟ್ಟು ಕಟ್ಟಿದ್ದಾರೆ. ಈ ಯೋಜನೆಯಿಂದ ಚೀನಾದ ಶೇ.80ರಷ್ಟು ಭಾಗಕ್ಕೆ ವಿದ್ಯುತ್ ಪೂರೈಕೆಯಾಗುತ್ತದೆ. ಯಾಟ್ ಜೀ ನದಿ ಹಿಮಾಲಯ ಪರ್ವತದಲ್ಲಿ ಹುಟ್ಟಿ, ಚೀನಾದೇಶದಲ್ಲಿ ಸಾವಿರ ಮೈಲಿಗಳಷ್ಟು ಚಲಿಸಿ ಸಮುದ್ರ ಸೇರುವುದು. ನಮ್ಮ ಹಡಗು ಸುಮಾರು 650 ಕಿ. ಮಿಗಳನ್ನು ನದಿಯಲ್ಲಿ ಚಲಿಸಿತು. ಈ Gorgesಗಳನ್ನು, ಡ್ರಾಗನ್, ಮಿಸ್ಟಿ ಮತ್ತು ಎಮರಾಲ್ಡ್ ಎಂದು ಕರೆಯುತ್ತಾರೆ.

ಫೆಗ್ಡುನಲ್ಲಿ ಸ್ನೋ ಜೇಡ್ ಗುಹೆ ನೋಡಲು ಹೋದೆವು. ಈ ಗುಹೆಯನ್ನು ಅಲ್ಲಿನ ಒಬ್ಬ ರೈತ ಆಕಸ್ಮಿಕವಾಗಿ 1997ರಲ್ಲಿ ಕಂಡುಹಿಡಿದ. ಗುಹೆಯ ಒಳಗೆ 500 ಮೆಟ್ಟಲುಗಳಿವೆ. ತೊಟ್ಟಿಕ್ಕುವ ನೀರಿನಿಂದ ಉದ್ಭವವಾಗಿರುವ ಸುಂದರ ದೃಶ್ಯಗಳನ್ನು ನೋಡಲು ಬಲು ಚೆನ್ನಾಗಿತ್ತು. ಹಡಗಿನ ಪ್ರಯಾಣ ಮುಗಿಸಿ, ಚಾಂಗಿಂಗ್ ಊರು ನೋಡಲು ಹೊರಟೆವು. ಅತಿ ಹೆಚ್ಚಿನ ಜನಸಂಖ್ಯೆ ಹಾಗೂ ಪರ್ವತ ಶ್ರೇಣಿಯ ಜಾಗ. ಊರಿನ ಮೇಲುಭಾಗದಲ್ಲಿರುವ, 'ಎಲಿಂಗ್ ಪಾರ್ಕ್', ದ್ವಿತೀಯ ವಿಶ್ವಯುದ್ಧದಲ್ಲಿ ಜಪಾನ್, ಚೀನಾದ ಮೇಲೆ ಮಾಡಿದ ಬಾಂಬ್ ದಾಳಿಯನ್ನು ತಡೆದ ಒಂದು ಹೆರಿಟೇಜ್ ಕಟ್ಟಡ.

ಜಿಯಾನ್ ಊರಿಗೆ 2000 ವರ್ಷಗಳ ಚರಿತ್ರೆ ಇದಕ್ಕೆ. 600 ವರ್ಷಗಳ ಹಿಂದೆ ಕಟ್ಟಿದ 14 ಮೈಲಿ ಸುತ್ತಳತೆ ಇರುವ ಅದ್ಭುತವಾದ ಕೋಟೆ ಮನಸೆಳೆಯುತ್ತದೆ. ಸಿಲ್ಕ್ ಕಾರ್ಖಾನೆ ವೀಕ್ಷಿಸಿ ಟೆರ್ರಾಕೋಟ ವಾರಿಯರ್ಸ್ ಅಚ್ಚುಗಳನ್ನು ಮಾಡುವ ಸ್ಥಳ ನೋಡಿದೆವು. ಇಲ್ಲಿ ಸುಮಾರು 8000 ವಿಗ್ರಹಗಳಿದ್ದು ಮತ್ತು ಎಲ್ಲಾ ವಿಗ್ರಹಗಳೂ ವಿಭಿನ್ನವಾಗಿವೆ. ಒಂದರಂತೆ ಇನ್ನೊಂದು ಇರುವುದು ತೋರಿಸಿಕೊಟ್ಟವರಿಗೆ ಸಾವಿರಾರು ಡಾಲರುಗಳು ಬಹುಮಾನವಾಗಿ ಕೊಡುವುದಾಗಿ ಪ್ರಕಟಿಸಿದ್ದಾರೆ. ನಮ್ಮ ತಂಡದಲ್ಲಿ ಯಾರೂ ಅದರ ಬಗ್ಗೆ ಉತ್ಸಾಹ ತೋರಿಸಲಿಲ್ಲ. Yellow mountain ಹೆಸರು ಕೇಳಿದಾಕ್ಷಣ ಇದು ಹಳದಿ ಬೆಟ್ಟವೆಂದು ಎಲ್ಲರೂ ಊಹಿಸುತ್ತಾರೆ. ಆದರೆ ಇಲ್ಲಿ ನೋಡಿದ್ದು ಬೂದು ಬಣ್ಣ ಮತ್ತು ಮಣ್ಣಿನ ಬಣ್ಣದ ಪರ್ವತ. ಹಾಟ್ ಸ್ಪ್ರಿಂಗ್ಸ್, ನಾನಾತರಹದ ಪೈನ್ ಮರಗಳು ಮತ್ತು ಬಂಡೆಯಲ್ಲಿ ಎದ್ದು ಕಾಣುವ Rhinoceros Watching Moon ಕಾಣಸಿಕ್ಕವು.

ಇಲ್ಲಂತೂ ನೀರಿಗೆ ಕೂಡಾ ಸ್ವಲ್ಪವೂ ಅಭಾವವೇ ಇಲ್ಲ. ರಸ್ತೆಗಳನ್ನೆಲ್ಲಾ ನೀರು ಹಾಕಿ ತೊಳೆದು ಚೊಕ್ಕಟಮಾಡುತ್ತಿದ್ದನ್ನ ನೋಡಿ ಖುಶಿಯಾಯಿತು. ನಮ್ಮ ಸಸ್ಯಾಹಾರಿಗಳಿಗೆ ಊಟ, ತಿಂಡಿಯಲ್ಲಿ ಯಾವ ತರಹದ ತೊಂದರೆಯೂ ಆಗಲಿಲ್ಲ. ಭಾಷೆಯದೇ ಕಷ್ಟ ಮತ್ತು 'ಚಾಪ್ ಸ್ಟಿಕ್'ನಲ್ಲಿ ಊಟ ಮಾಡುವುದು ಬಹಳ ಕಷ್ಟದ ಕೆಲಸ. ನಾವು ಯಾವಾಗಲೂ 'ಫೋರ್ಕ್' ಕೇಳಿ ತೆಗೆದುಕೊಳ್ಳುತ್ತಿದ್ದೆವು. ಹಡಗಿನಲ್ಲಿ ಪ್ರತಿದಿವಸ ರಾತ್ರಿ, ಮನರಂಜನೆ ಕಾರ್ಯಕ್ರಮವಾಗುತ್ತಿತ್ತು. ಒಂದುದಿವಸ ರಾತ್ರಿ, ಇದ್ದಕ್ಕಿದ್ದಂತೆ ನಮ್ಮ ಹತ್ತಿರಬಂದು ನೀವು 10 ನಿಮಿಷದ ವೇಳೆಗೆ ಕಾರ್ಯಕ್ರಮಕೊಡಿ ಎಂದು ಕೇಳಿದ್ದೇ ಸಾಕಾಗಿ, ಚಾಪ್ ಸ್ಟಿಕ್ ಉಪಯೋಗಿಸಿ, 'ಚೆಲುವಯ್ಯಾ ಚೆಲುವೋ' ಹಾಡಿಗೆ ಕೋಲಾಟ ಮಾಡಿ ತೋರಿಸಿಯೇ ಬಿಟ್ಟು, ಪ್ರಶಂಸೆ ಪದಕವನ್ನೂ ಗಿಟ್ಟಿಸಿಬಿಟ್ಟೆವು! ನಾವು ಕನ್ನಡದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದೆವು! ಹಡಗಿನ ಕ್ಯಾಪ್ಟನ್ ಪ್ರತಿಸಲದ ವಾರ್ತೆ ಹೇಳುವಾಗಲೂ, Welcome you beautiful people ಎಂದೇ ಹೇಳುತ್ತಿದ್ದುದು ಹೆಮ್ಮೆ ಹೆಚ್ಚಿಸುತ್ತಿತ್ತು.

ನಮ್ಮಲ್ಲಿ ಪುಣ್ಯಕ್ಷೇತ್ರ, ಪ್ರಸಿದ್ಧ ದೇವಸ್ಥಾನಗಳಲ್ಲಿ ಮದುವೆಯಾಗದವರು, ಮಕ್ಕಳಿಲ್ಲದವರು ಹರಕೆ ಹೊತ್ತು ಅರಳಿಮರಕ್ಕೆ ದಾರ, ಬಟ್ಟೆ ಇತ್ಯಾದಿ ಕಟ್ಟುವಂತೆ, ಚೀನಿಯರಲ್ಲಿ ಪ್ರೇಮಿಗಳು, ಮದುವೆಯಾದವರು ಎಲ್ಲಾ ಕಡೆ "ಬೀಗ"ವನ್ನು ಕಟ್ಟಿರುತ್ತಾರೆ. ಷಾಂಗಾಯ್ ನಲ್ಲಿ ಅಲ್ಲಿನ ಜನರನ್ನು 'ಶೆನ್' ಅಥವ 'ಹು' ಎಂದು ಕರೆಯುವರು. Yangtze ನದಿ ಸಮುದ್ರ ಸೇರುವ ದಡದಲ್ಲಿದ್ದು, ಜನ ಸಂಖ್ಯೆ 14 ಮಿಲಿಯನ್ ಯಿಂದ ಕೂಡಿದೆ. Jin Mao Observatory ನೋಡಲು ಹೋದೆವು. ಇದರ ಪಕ್ಕದ ಕಟ್ಟಡವೇ "ಬಾಟಲ್ ಓಪನರ್" ಮಾದರಿಯ ಅತಿ ಎತ್ತರದ ಕಟ್ಟಡವಿದೆ.

ಷಾಂಗಾಯ್ ಬಿಡುವ ಮುಂಚೆ, ನಾವಿದ್ದ ರಾಯಲ್ ಮೆರಿಡಿಯನ್ ಹೋಟೆಲ್ ನಿಂದ ಹತ್ತಿರವಿದ್ದ ನಾನ್ಜಿಂಗ್ ರೋಡ್ ಈಸ್ಟ್ ನಲ್ಲಿ ಶಾಪಿಂಗ್ ಸುತ್ತಾಡಿದ್ದಾಯಿತು. 25ರಂದು ಹೊಟೆಲ್ ನಿಂದ ಬಸ್ಸಿನಲ್ಲಿ Long Yang Road Station ಬಂದು ಗಂಟೆಗೆ 451 ಕಿ ಮೀ. ವೇಗದಲ್ಲಿ ಚಲಿಸುವ ಮಾಗ್ನೆಟಿಕ್ ಸಸ್ಪೆನ್ಶನ್ ಟ್ರೈನ್ ನಲ್ಲಿ ಕೂತು ಎಂಟು ನಿಮಿಷದಲ್ಲಿ ಏರ್ಪೋರ್ಟ್ ತಲುಪಿದೆವು. ನಂತರ Qantas ಹಿಡಿದು ಸಿಡ್ನಿಗೆ ಸುಖವಾಗಿ ಬಂದು ಸೇರಿದೆವು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X