ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನಂದದ ಶಿಖರ ಮುಟ್ಟಿದ ಆಕ್ಷಣ!

By Staff
|
Google Oneindia Kannada News

Kannada flag on the top of Kilimanjaro
ನಿದ್ದೆ ಮಾಡಲು ಮಲಗಿದ್ದ ಯಾರಿಗೂ ನಿದ್ದೆ ಬಂದಿರಲಿಲ್ಲ. ರಾತ್ರಿಯ ಹತ್ತುವರೆ ಸಮಯ, ಎಲ್ಲರನ್ನು ಎಬ್ಬಿಸುತ್ತಿದ್ದರು. ಎದ್ದವರೆಲ್ಲರೂ ತಮ್ಮ ತಮ್ಮ ಬಟ್ಟೆಯ ಬ್ಯಾಗನ್ನು ತೆಗೆದು ಅದರಲ್ಲಿದ್ದ ಒಂದೊಂದೆ ಬಟ್ಟೆಯನ್ನು ಧರಿಸುತ್ತಿದ್ದರು. ಮೂರು ಜೊತೆ ಪ್ಯಾಂಟ್ - ಶರ್ಟ್ ಧರಿಸಿ ಅದರ ಮೇಲೆ ಉಣ್ಣೆಯ ಮತ್ತೊಂದು ಕವಚ ಇವೆಲ್ಲದರ ಮೇಲೆ ನೀರು ಹೋಗದ ಹಾಗೆ ನೀರು ನಿರೋಧಕ ಪ್ಯಾಂಟ್ ಮತ್ತು ಶರ್ಟ್. ಕೆಲವರ ಮೇಲಂತೂ ನಾಲ್ಕು ಜೊತೆ ಬಟ್ಟೆ, ಅದರ ಮೇಲೆ ಉಣ್ಣೆ ಬಟ್ಟೆ ಮತ್ತು ನೀರು ನಿರೋಧಕ ಕವಚ! ತಲೆಗೆ ಉಣ್ಣೆಯ ಟೋಪಿ ಅದರ ಮೇಲೆ ಮಂಕಿ ಟೋಪಿ, ಅದರ ಮೇಲೆ ತಲೆಗೆ ಟಾರ್ಚ್ ಸಿಕ್ಕಿಸಿಕೊಂಡೆವು. ಕೈಗೆ ಬಟ್ಟೆಯ ಎರಡು ಗ್ಲೌಸ್ ಅದರ ಮೇಲೆ ಮತ್ತೊಂದು ನೀರು ನಿರೋಧಕ ಗ್ಲೌಸ್. ಕಾಲಿಗೆ ಮೂರು ಜೊತೆ ಅಥವ ನಾಲ್ಕು ಜೊತೆ ಕಾಲು ಚೀಲ ಅದರ ಮೇಲೆ ಪರ್ವತವೇರುವ ಶೂಗಳನ್ನು ಧರಿಸುತ್ತಿದ್ದರು. ಇದೆಲ್ಲದರ ಮೇಲೆ ಕಾಲಿಗೆ ಮತ್ತೊಂದು ಕವಚ, ಅದು ಮಂಡಿಯಿಂದ ಹಿಡಿದು ಪಾದದ ತನಕ ನೀರಿನಿಂದ ಮತ್ತು ಸಣ್ಣ ಪುಟ್ಟ ಮುಳ್ಳುಗಳಿಂದ ರಕ್ಷಿಸಲು ಧರಿಸುವ ಒಂದು ಪ್ಲಾಷ್ಟಿಕ್ ಚೀಲ. ಇದನ್ನೆಲ್ಲ ಧರಿಸಿ ಊಟದ ಮನೆಗೆ ಹೋದರೆ ಎಲ್ಲರೂ ಅವರವರ ಆಕಾರವನ್ನು ಎರಡು ಪಟ್ಟು ಹೆಚ್ಚಿಸಿಕೊಂಡಿದ್ದರು. ಕುಳಿತು ಸಮಾಧಾನವಾಗಿ ಟೀ ಮತ್ತು ಬಿಸ್ಕತ್ತು ತಿಂದು ಮೊದಲನೆ ಗ್ರೂಪಿನಲ್ಲಿ ಹೋಗುವವರೆಲ್ಲಾ ಹೊರಗೆ ಹೋಗಿ ನಿಂತೆವು.

ಒಬ್ಬರ ಹಿಂದೆ ಒಬ್ಬರು, ಎಲ್ಲರ ಕೈಯಲ್ಲೂ ಕೋಲು, ತಲೆಯಲ್ಲಿ ಬೆಳಕು ಬೀರುವ ಟಾರ್ಚ್, ಕಣ್ಣು ಮತ್ತು ಬಾಯಿ ಮಾತ್ರ ಕಾಣುವ ಮುಸುಕು. ಯಾರ ಮುಖದಲ್ಲೂ ಮಂದಹಾಸವಿಲ್ಲ. ಏನೊ ಒಂದು ತರಹದ ಆತಂಕ, ನಿಂತಿದ್ದ ಜಾಗದಿಂದ ಕೇಲವ ಎರಡು ಮೀಟರ್ ನಷ್ಟು ಮಾತ್ರ ಕಾಣಿಸುತ್ತಿತ್ತು, ಮಿಕ್ಕೆಲ್ಲಾ ಕತ್ತಲು. ನಮ್ಮನ್ನೆಲ್ಲಾ ಒಬ್ಬರ ಹಿಂದ ಒಬ್ಬರಂತೆ ನಿಲ್ಲಿಸಿ, ನಮ್ಮ ಮುಂದೆ, ಮಧ್ಯ ಮತ್ತು ಹಿಂದೆ ಎನ್ನುವಂತೆ ಮೂರು ಜನ ಗೈಡ್. ಸರಿಯಾಗಿ ರಾತ್ರಿಯ ಸಮಯ ಹನ್ನೊಂದುವರೆ ನಮ್ಮನ್ನು ಮುಂದೆ ನಿಂತಿರುವ ಗೈಡ್‌ನನ್ನು ಹಿಂಬಾಲಿಸುವಂತೆ ತಿಳಿಸಿದರು. ಯಾರೂ ಕೂಡ ಜಾಸ್ತಿ ತಲೆ ಉಪಯೋಗಿಸುವ ಹಾಗಿಲ್ಲ, ಗೈಡ್ ಹೇಗೆ ಹೇಳುತ್ತಾರೊ ಹಾಗೆ ನಡೆದುಕೊಳ್ಳಬೇಕೆಂದು ಮತ್ತೊಮ್ಮೆ ನೆನಪಿಸಿದರು. ನಮ್ಮ ಗುಂಪಿನ ಪ್ರಮುಖ ಗೈಡ್ ಬಂದು ಹೊರಡುವಂತೆ ಆಜ್ಞೆ ಮಾಡಿದ. ಹಿಂದಿನ ಗುಂಪಿನ ಉಳಿದವರು ಬಂದು ನಮಗೆ ಶುಭಾಶಯ ಹೇಳಿ ಕಳುಹಿಸಿದರು.

ಇರುವೆಗಳಂತೆ ಒಬ್ಬರ ಹಿಂದೆ ಇನ್ನೊಬ್ಬರು ತಲೆ ಬಗ್ಗಿಸಿ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ನಡೆಯುತ್ತಿದ್ದೆವು. ಹೊರಗಿನ ತಾಪಮಾನ ಸುಮಾರು ಮೈನಸ್ ಎರಡು ಡಿಗ್ರಿ ಇದ್ದರೂ ಒಂದರಮೇಲೊಂದು ಧರಿಸಿದ ಬಟ್ಟೆಗಳು ನಮ್ಮನ್ನು ಬೆಚ್ಚಗೆ ಇಟ್ಟಿದ್ದವು. ನಮ್ಮ ನಡುಗೆ ಬಹಳ ನಿಧಾನವಾಗಿತ್ತು. ಸುಸ್ತಾಗುವಷ್ಟು ನಡೆದಿರಲಿಲ್ಲ ಆದರೂ ಎಲ್ಲರ ಮುಖದಲ್ಲಿ ಸುಸ್ತು ಕಾಣಿಸುತ್ತಿತ್ತು. ಯಾರಿಗೂ ದಾರಿ ಕಾಣಿಸುತ್ತಿರಲಿಲ್ಲ, ಸುಮ್ಮನೆ ಮುಂದುಗಡೆ ಇದ್ದವರನ್ನು ಹಿಂಬಾಲಿಸುತ್ತಾ ನಡೆಯುತ್ತಿದ್ದೆವು. ಬುಸ್ ಉಸ್ ಅಂತ ಎಲ್ಲರ ಉಸಿರಾಟದ ಶಬ್ದ ಕೇಳಿಸುತ್ತಿತ್ತೆ ಹೊರತು ಯಾರಿಂದಲೂ ಮಾತು ಹೊರಡುತ್ತಿರಲಿಲ್ಲ. ಸುಮಾರು ಒಂದು ಗಂಟೆಯ ನಂತರ ಸುಮ್ಮನೆ ಹಾಗೆ ಹಿಂತಿರುಗಿ ನೋಡಿದರೆ ಕೂಗಳತೆ ದೂರದಲ್ಲಿ ನಾವು ತಂಗಿದ್ದ ಗುಡಿಸಲು ಕಾಣಿಸುತ್ತಿತ್ತು, ಆಗ ತಾನೆ ಹೊರಟಿದ್ದ ಇನ್ನೊಂದು ಗುಂಪು ನಮ್ಮ ಹಿಂದೆಯೆ ಬರುತ್ತಿತ್ತು. ಹೀಗೆ ನಮ್ಮ ಪಯಣ ಮತ್ತೊಂದು ಗಂಟೆ ಸಾಗಿತು, ಅಷ್ಟರೊಳಗೆ ನಮ್ಮ ಹಿಂದಿನ ಗುಂಪು ನಮ್ಮನ್ನು ಸೇರಿಕೊಂಡಿತ್ತು. ಒಬ್ಬೊಬ್ಬರಾಗೆ ಸುಸ್ತಾಗಿ ಬೀಳಲು ಶುರುಮಾಡಿದರು, ಕೆಲವರು ವಾಂತಿ ಮಾಡಿಕೊಳ್ಳುತ್ತಿದ್ದರು. ಹೊರಟಿದ್ದ ಇಪ್ಪಾತ್ಮೂರು ಜನರಲ್ಲಿ ಹತ್ತಕ್ಕೂ ಹೆಚ್ಚು ಜನ ಜಾಸ್ತಿ ನಡೆಯಲಾರದಷ್ಟು ಸುಸ್ತಾಗಿದ್ದರು. ಇನ್ನೊಂದು ಗಂಟೆ ನಡೆದರೆ ಒಂದು ಗುಹೆ ಸಿಗುತ್ತದೆ ಅಲ್ಲಿಯ ತನಕ ಯಾರೂ ಸುಧಾರಿಸಿಕೊಳ್ಳುವ ಹಾಗಿಲ್ಲ ಎಂದು ತಿಳಿಸಿದರು. ಅದನ್ನು ಕೇಳಿ ಸುಮಾರು ಜನ ನಿಂತಲ್ಲಿಯೆ ಕುಸಿದರು, ಅವರನ್ನು ಹಿಂದಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದರು. ಉಳಿದವರ ಪ್ರಯಾಣ ಹಾಗೆ ಮುಂದುವರೆಯಿತು.

ಸತತವಾಗಿ ನಾಲ್ಕು ಗಂಟೆಗಳ ಪ್ರಯಾಣದ ನಂತರ ಸಿಕ್ಕಿತು ಹನ್ಸ್ ಮೇಯರ್ ಗುಹೆ. ಹನ್ಸ್ ಮೇಯರ್ ಎಂಬುವ ವ್ಯಕ್ತಿ, ಈ ಪರ್ವತವನ್ನು ಮೊದಲ ಬಾರಿಗೆ ಹತ್ತಿದವನು. ಅವನು ಈ ಪರ್ವತವನ್ನು ಹತ್ತುವಾಗ ಈ ನೈಸರ್ಗಿಕ ಗುಹೆಯಲ್ಲಿ ಮೂರು ದಿನ ಉಳಿದುಕೊಂಡಿದ್ದನಂತೆ. ಆದುದರಿಂದ ಈ ಗುಹೆಯನ್ನು ಹನ್ಸ್ ಮೇಯರ್ ಗುಹೆ ಎಂದು ಕರೆಯುತ್ತಾರೆ. ಈ ಗುಹೆ ಮತ್ತು ಮವೇನ್‌ಜಿ ಎನ್ನುವ ಮತ್ತೊಂದು ಶಿಖರ ಎರಡೂ ಒಂದೆ ಎತ್ತರದಲ್ಲಿದೆ ಎಂದು ತಿಳಿಸಿದರು. ಅಷ್ಟೊಂದು ವಿಶಾಲವಾಗಿರದ ಈ ಗುಹೆಯಲ್ಲಿ ಬಹಳ ಹೊತ್ತು ಕೂರಲು ಅವಕಾಶ ಕೊಡಲಿಲ್ಲ. ಎಲ್ಲಿ ನಿದ್ದೆ ಮಾಡುತ್ತಾರೊ ಎನ್ನುವ ಭಯದಿಂದ ಸ್ವಲ್ಪ ಹೊತ್ತು ಸುಧಾರಿಸಿಕೊಳ್ಳಲು ಮಾತ್ರ ಅವಕಾಶ ಕೊಟ್ಟು, ಹೊರಡಲು ಹೇಳಿದರು. ನಾವು ತಲುಪಬೇಕಾದ ಸ್ಥಳ ಮತ್ತು ಉಳಿದುಕೊಂಡಿದ್ದ ಗುಡಿಸಲಿಗೂ ಈ ಗುಹೆ ಮಧ್ಯದಲ್ಲಿದೆ ಎಂದು ತಿಳಿಸಿದರು. ನಮಗೆ ಇನ್ನೂ ಬಹಳ ದೂರದವರೆಗೆ ಹೋಗಬೇಕು ಎಂದಷ್ಟೆ ತಿಳಿಯಿತು. ನಿಜ ಏನೆಂದರೆ ಈ ಗುಹೆಗೆ ನಾವು ನಡೆದುಬಂದಿದ್ದ ಮಾರ್ಗದ ನಾಲ್ಕು ಪಟ್ಟು ಕಠಿಣ ಮಾರ್ಗ ನಮ್ಮ ಮುಂದಿದೆ ಎಂದು ನಮಗೆ ತಿಳಿದಿರಲಿಲ್ಲ!

ನಮ್ಮ ಪ್ರಯಾಣ ಮುಂದುವರೆಯಿತು. ಎಲ್ಲರೂ ನಿಧಾನವಾಗಿ ತಮ್ಮ ತಮ್ಮ ಪೃಷ್ಠಯನ್ನು ಕೊಡವಿಕೊಂಡು ಬ್ಯಾಗನ್ನು ಹೆಗಲಿಗೆ ಏರಿಸಿಕೊಂಡು ನಡೆಯಲು ಶುರುಮಾಡಿದರು. ಈಗ ನಮ್ಮ ಮುಂದಿದ್ದ ದಾರಿ ಮಾತ್ರ ನಮ್ಮ ಊಹೆಗೂ ಮೀರಿತ್ತು ಅಥವಾ ಊಹಿಸಲೇ ಸಾಧ್ಯವಿಲ್ಲದಂತಿತ್ತು. ನೇರವಾಗಿ ಹತ್ತಲಾಗದ ಬೆಟ್ಟವನ್ನು ಜಿಗ್-ಜಾಗ್ ಮಾದರಿಯಲ್ಲಿ ಹತ್ತಲು ಶುರುಮಾಡಿದೆವು. ಎರಡು ಹೆಜ್ಜೆ ಇಟ್ಟು ಹತ್ತಬಹುದಾದ ಮಾರ್ಗವನ್ನು ಸುಮಾರು ಹನ್ನೆರಡು ಹೆಜ್ಜೆ ಇಟ್ಟು ಹತ್ತುತ್ತಿದ್ದೆವು. ಬೂದಿಯಂತಹ ಮಣ್ಣಿನಿಂದ ಕೂಡಿದ ಈ ದಾರಿಯನ್ನು ನೇರವಾಗಿ ಹತ್ತುವುದು ಅಸಾಧ್ಯದ ಕಾರ್ಯವಾಗಿತ್ತು. ಕೇವಲ ನೂರು ಮೀಟರ್‌ನಷ್ಟು ಬೆಟ್ಟವನ್ನು ಹತ್ತಲು ಸುಮಾರು ಒಂದು ಗಂಟೆ ತೆಗೆದುಕೊಂಡೆವು. ಒಂದೊಂದು ಹೆಜ್ಜೆ ಇಡಬೇಕಾದರೂ ಯಾಕಾದರೂ ಈ ಪರ್ವತ ಹತ್ತಲು ಬಂದೆವೊ ಎಂದು ನಮ್ಮನ್ನು ನಾವೆ ಬೈದುಕೊಳ್ಳುತ್ತಿದ್ದೆವು. ಒಬ್ಬರ ಹಿಂದೆ ಒಬ್ಬರು ಬರುತ್ತಿದ್ದ ನಾವು, ಒಬ್ಬರನ್ನೊಬ್ಬರು ಕಾಣದಷ್ಟು ಅಂತರವನ್ನು ಬೆಳೆಸಿಕೊಂಡಿದ್ದೆವು. ನಮ್ಮಲ್ಲಿ ಗೈಡ್ ಗಳು ಕಡಿಮೆ ಇದ್ದರು, ಕೆಲ ಗೈಡ್‌ಗಳು ಸುಸ್ತಾದವರನ್ನು ಹಿಂದಕ್ಕೆ ಬಿಡಲು ಹೋಗಿದ್ದರು, ಹಾಗಾಗಿ ನಾನು ಒಬ್ಬ ಚೈನೀಸ್ ಹುಡುಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಬೇರೆ ಯಾರೊ ಗೈಡ್‌ನನ್ನು ಹಿಂಬಾಲಿಸುತ್ತಾ ಹೊರಟೆ. ಎಲ್ಲೆಲ್ಲಿ ಆ ಚೈನೀಸ್ ಹುಡುಗಿ ಸುಸ್ತಾಗಿ ಕೂರುತ್ತಿದ್ದಳೊ ನಾನು ಅಲ್ಲೆ ಕೂರುತ್ತಿದ್ದೆ. ನಾಲ್ಕೈದು ಕಡೆ ಅವಳು ವಾಂತಿ ಮಾಡುತ್ತಿದ್ದಾಗ ನಾನು ದೂರದಲ್ಲೆ ಕುಳಿತು ಅವಳು ಹೊರಟ ತಕ್ಷಣ ವೇಗವಾಗಿ ಹೋಗಿ ಅವರನ್ನು ಕೂಡಿಕೊಳ್ಳುತ್ತಿದ್ದೆ. ಆಮ್ಲಜನಕ ಬಹಳ ಕಡಿಮೆ ಇದ್ದಕಾರಣ ಉಸಿರಾಟದ ತೊಂದರೆ ಬಹಳವಾಗಿತ್ತು. ಏನೂ ಕೆಲಸ ಮಾಡದೆ ಸುಸ್ತಾಗುವ ಅಂತಹ ಜಾಗದಲ್ಲಿ ಪರ್ವತ ಹತ್ತುವಂತಹ ಕಠಿಣ ಕಾರ್ಯ ಬಹಳ ಆಯಾಸದಾಯಕ.

ನನ್ನ ಹಿಂದೆ ನಮ್ಮ ಗುಂಪಿನ ಇನ್ನೊಬ್ಬ ಹುಡುಗ ಬಂದ. ನಾನು ಅವನನ್ನು ನೋಡಿ ಸ್ವಲ್ಪ ನಿಧಾನವಾಗಿ ಚಲಿಸತೊಡಗಿದೆ. ಸ್ವಲ್ಪೆ ದೂರದಲ್ಲಿ ಹತ್ತಿಯ ಹಾಸಿಗೆಯಂತೆ ಕಾಣಿಸತೊಡಗಿತು. ಅದು ಮಂಜುಗಡ್ಡೆಯಿರಬೇಕು ಎಂದು ಅನ್ನಿಸಿದರೂ ಅಂತಹ ಖುಷಿ ಅನ್ನಿಸಲಿಲ್ಲ. ಈ ಪರ್ವತ ಹತ್ತುವ ಮೊದಲು, ಕೆಳಗಿನಿಂದ ಮಂಜುಗಡ್ಡೆಯನ್ನು ನೋಡುತ್ತಿದ್ದ ನಾನು, ಮೊದಲ ಬಾರಿ ಮಂಜುಗಡ್ಡೆಯ ಮೇಲೆ ಹೋದಮೇಲೆ ಹತ್ತಿ ಕುಣಿಯುತ್ತೇನೆ, ಅದನ್ನು ಉಂಡೆ ಮಾಡಿ ಬೇರೆಯವರಿಗೆ ಹೊಡೆಯುತ್ತೇನೆ ಎಂದು ಊಹಿಸಿಕೊಂಡಿದ್ದೆ. ಆದರೆ ಈಗ ನನ್ನ ಕಾಲಿನ ಪಕ್ಕದಲ್ಲೆ ಮಂಜಿನ ಹಾಸಿಗೆ ಬಿದ್ದಿದ್ದೆ, ಅದನ್ನು ಮುಟ್ಟುವ ಆಸೆ ಕೂಡಾ ನನ್ನಲ್ಲಿ ಉಳಿದಿರಲಿಲ್ಲ. ಹಿಂದೆ ಬರುತ್ತಿದ್ದ ನನ್ನ ಸ್ನೇಹಿತನಿಗೆ ಹೇಳಿದೆ. ಅದಕ್ಕೆ ಅವನು ಅದನ್ನು ನೋಡುವ ಆಸಕ್ತಿ ನನ್ನಲ್ಲಿ ಉಳಿದಿಲ್ಲ, ಬೇಕಿದ್ದರೆ ನೀನೆ ಮುಟ್ಟಿ ನೋಡು ಎಂದು ಹೇಳಿ ನನ್ನ ಹತ್ತಿರ ಬಂದು ನಿಂತುಕೊಂಡ. ನಮಗೆ ಎಷ್ಟು ಸುಸ್ತಾಗಿತ್ತೆಂದರೆ, ಮಂಜನ್ನು ಮುಟ್ಟಲು ಎರಡು ಹೆಜ್ಜೆ ಮುಂದೆ ಹೋಗಬೇಕಿತ್ತು, ಹೋದರೆ ಮತ್ತೆ ಎರಡು ಹೆಜ್ಜೆ ಹಿಂದೆ ಬರಬೇಕು ಎಲ್ಲಾ ಸೇರಿ ನಾಲ್ಕು ಹೆಜ್ಜೆ. ಮಂಜನ್ನು ಮುಟ್ಟುವ ಖುಷಿಗಿಂತ ನಾಲ್ಕು ಹೆಜ್ಜೆ ಉಳಿಸಿದ ಖುಷಿ ಜಾಸ್ತಿ ಎನಿಸಿ ಸುಮ್ಮನೆ ಮುಂದುವರೆದೆವು. ಅಂತು ನಮ್ಮ ಜಿಗ್-ಜಾಗ್ ಮಾದರಿಯ ಪ್ರಯಾಣ ಮುಗಿಯಿತು ಮತ್ತು ಮುಂದೆ ಕಲ್ಲು ಬಂಡೆಗಳು ಶುರುವಾದವು.

ನಮ್ಮ ಕೈಲಿದ್ದ ಕೋಲುಗಳನ್ನು ಮಡಿಚಿ ಬಂಡೆಗಳನ್ನು ಹಿಡಿದು ಹತ್ತಲು ಶುರುಮಾಡಿದೆವು. ಹಿಂತಿರುಗಿ ನೋಡಿದರೆ ನಮ್ಮ ಸಹಪಾಟಿಗಳು ಬಹಳ ದೂರದಲ್ಲಿ ಬರುತ್ತಿದ್ದರು. ಕೂತರೆ ಅಲ್ಲಿಯ ಚಳಿಗೆ ಮತ್ತು ಕಡಿಮೆ ಆಮ್ಲಜನಕಕ್ಕೆ ಇನ್ನೂ ಸುಸ್ತಾಗುತ್ತಿದ್ದೆವು, ಹಾಗಾಗಿ ಪ್ರಯಾಣವನ್ನು ಮುಂದುವರೆಸಿದೆವು. ಕೆಲವು ಬಂಡೆಗಳನ್ನು ಹತ್ತುವಾಗ ತೆವಳಿ ಹತ್ತುತ್ತಿದ್ದರೆ ಮತ್ತೆ ಕೆಲವು ಕಡೆ ಪೂರ್ತಿಯಾಗಿ ಮಲಗಿ ಹತ್ತಬೇಕಾಗಿತ್ತು. ಎಲ್ಲಿಗೆ ಹೋಗುತ್ತಿದ್ದೇವೆ, ನಮ್ಮ ದಾರಿ ಸರಿ ಇದೆಯಾ ಎನ್ನುವುದೆ ನಮಗೆ ತಿಳಿಯದಂತಾಗಿತ್ತು. ನನ್ನ ಸ್ನೇಹಿತ ಸ್ವಲ್ಪ ಹಿಂದೆ ಉಳಿದುಕೊಂಡ ಅವನಿಗಾಗಿ ಕಾದ ನನಗೆ ಚೈನೀಸ್ ಹುಡುಗಿ ಮತ್ತು ಅವಳ ಗೈಡ್ ಕೂಡ ಕಾಣಿಸದಾದರು, ಆದರೂ ಅಲ್ಲಿ ದಾರಿಯಂತೆ ಕಾಣಿಸುತ್ತಿದ್ದ ಮಾರ್ಗದಲ್ಲಿ ನಡೆಯುತ್ತಾ ಹೋದೆ. ಎಲ್ಲೊ ಒಂದುಕಡೆ ಅವರುಗಳು ಹೋಗುತ್ತಿದ್ದುದು ಕಾಣಿಸಿತು. ವೇಗವಾಗಿ ಹೋದರೆ ಮತ್ತೆ ಅವರು ಕಾಣಿಸುತ್ತಿರಲಿಲ್ಲ. ಸ್ವಲ್ಪ ಸುಧಾರಿಸಿಕೊಳ್ಳಲು ಒಂದು ಬಂಡೆಗೆ ಬೆನ್ನು ತಾಗಿಸಿ ಕುಳಿತರೆ ಕೈ ಮತ್ತು ಕಾಲುಗಳು ಉರಿಯತೊಡಗಿದವು. ಕೊರೆಯುವ ಚಳಿಯಲ್ಲಿ ಕೈ ಮತ್ತು ಪಾದಗಳು ಬೆಂಕಿಯಲ್ಲಿಟ್ಟಂತೆ ಉರಿಯುತ್ತಿವೆ. ಕೂತರೆ ಕೆಲಸ ಕೆಡುತ್ತದೆ ಎಂದು ಮತ್ತೆ ನಡೆಯಲು ಶುರುಮಾಡಿದೆ. ಒಂದು ಕವಲುದಾರಿಯಲ್ಲಿ ತಪ್ಪು ದಾರಿ ಹಿಡಿದು ಹೊರಟೆ. ಹೋಗುತ್ತಾ ಹೋಗುತ್ತ ಕಣಿವೆಯ ತುದಿ ಮುಟ್ಟಿದೆ. ಅಲ್ಲಿ ಮುಂದೆ ನನಗೆ ಮಾರ್ಗವೆ ಇಲ್ಲ ಇನ್ನು ಮುಂದೆ ಹೋದರೆ ಕಣಿವೆಗೆ ಬೀಳುತ್ತೇನೆ, ಮೇಲೆ ಹತ್ತಲು ದಾರಿ ಎನ್ನುವುದೆ ಇಲ್ಲ. ಹಿಂದೆ ಹೋಗಲು ಮತ್ತೆ ದಾರಿ ಸರಿಯಾಗಿ ನೆನಪಾಗುತ್ತಿಲ್ಲ. ಹೆದರಿ ಸುತ್ತಲೂ ನೋಡಿತ್ತಿದ್ದೆ, ಅಲ್ಲೆ ಒಂದು ಬಂಡೆಯ ಮೇಲೆ ಇಬ್ಬರು ನಿಂತಿದ್ದರು. ಒಬ್ಬ ತಲೆಯ ಮೇಲಿದ್ದ ಟಾರ್ಚ್ ಅಪಾಯದ ಸೂಚನೆಯಂತೆ ಮಿಣುಕಿಸಿದ. ಅಲ್ಲಿಂದ ಜೋರಾಗಿ ಕೂಗಿ ಕೇಳಿದೆ, ಅಲ್ಲಿಗೆ ಬರಲು ದಾರಿಯಾವುದು? ಅದಕ್ಕೆ ಉತ್ತರಿಸುತ್ತ ಅವನು ಹೇಳಿದ, ಹಾಗೆ ಬಂಡೆಯನ್ನು ಹಿಡಿದು ಮೇಲಕ್ಕೆ ಬಾ, ಯಾವುದೆ ಕಾರಣಕ್ಕು ಬಲಗಡೆಗೆ ಹೋಗಬೇಡ. ಅವನು ಹೇಳಿದ್ದು ಏಕೆ ಎಂದು ನಾನು ಮೇಲೆ ಹೋದ ಮೇಲೆ ಬೆಳಕಿನಲ್ಲಿ ನೋಡಿ ತಿಳಿಯಿತು. ಅದೊಂದು ದೊಡ್ಡ ಪ್ರಪಾತ, ಅದರ ತುಂಬ ಮಂಜುಗಡ್ಡೆ ತುಂಬಿದೆ. ಅದರ ಆಳ ಗೊತ್ತಿಲ್ಲ, ಹತ್ತಲು ಕಲ್ಲು ಬಂಡೆಯಿಲ್ಲ. ಸತ್ತು ಬದುಕಿದೆ ಎಂದು ಮನಸ್ಸಿನಲ್ಲೆ ಅಂದುಕೊಂಡೆ. ನನಗೆ ಸೂಚನೆ ಕೊಟ್ಟು ಕರೆಸಿಕೊಂಡ ಆ ಜಾಗದ ಹೆಸರು ಗಿಲ್ಮನ್ಸ್ ಪಾಯಿಂಟ್. ಅದನ್ನು ಕೂಡ ಈ ಪರ್ವತದ ಒಂದು ಉನ್ನತ ತುದಿ ಎಂದು ಹೇಳುತ್ತಾರೆ. ಅಲ್ಲಿಂದ ಕೇವಲ ಮೂರು ನೂರು ಮೀಟರ್ ನಂತರ ಸಿಗುವುದೆ ಉಹುರು ತುದಿ, ಆಫ್ರಿಕಾದ ಅತೀ ಎತ್ತರವಾದ ಜಾಗ. ನಮ್ಮ ಗುಂಪಿನಲ್ಲಿ ಬಂದ ಬಹುತೇಕ ಜನ ಗಿಲ್ಮನ್ಸ್ ಪಾಯಿಂಟ್ ಮುಟ್ಟಿ ಹಿಂತಿರುಗಿದ್ದರು.

ನಾನು ಗಿಲ್ಮನ್ಸ್ ಪಾಯಿಂಟ್‌ಗೆ ತಲುಪಿದ ತಕ್ಷಣ ಅಲ್ಲಿದ್ದ ಆ ಚೈನೀಸ್ ಹುಡುಗಿ ಮತ್ತು ಅವಳ ಗೈಡ್ ತಮ್ಮ ಪ್ರಯಾಣ ಮುಂದುವರೆಸಿದರು. ನನ್ನ ಸಹಪಾಟಿ ಯಾರಾದರೂ ಬರಲಿ ಎಂದು ನಾನು ಅಲ್ಲೆ ಕುಳಿತೆ. ಕುಳಿತ ಎರಡೆ ನಿಮಿಷದಲ್ಲಿ ಮತ್ತೆ ಕೈ ಕಾಲುಗಳು ಉರಿಯಲಾರಂಬಿಸಿದವು. ಏನೂ ಮಾಡಲಾಗದ ಸ್ಥಿತಿ ನನ್ನದಾಗಿತ್ತು. ಅಲ್ಲಿ ಕಾಯುತ್ತಿದ್ದ ನನಗೆ ಇನ್ನೊಬ್ಬ ಸಹಪಾಠಿಯನ್ನು ನೋಡುವ ತನಕ ಬದುಕುತ್ತೇನೆ ಎನ್ನುವ ಭರವಸೆ ಇಲ್ಲದಾಗಿತ್ತು. ಅವನನ್ನು ನೋಡಿ ನನ್ನ ಕಷ್ಟ ಹೇಳಿಕೊಂಡರೆ ಅವನು ನನಗಿಂತ ಕಷ್ಟದ ಸ್ಥಿತಿಯಲ್ಲಿದ್ದ! ಹೀಗೆ ಕೂತರೆ ನಾವು ಮಂಜುಗಡ್ಡೆಯಂತೆ ಕಲ್ಲಾಗುತ್ತೇವೆ, ನಮ್ಮ ಪ್ರಯಾಣ ಮುಂದುವರೆಸೋಣ ಎಂದು ತೀರ್ಮಾನಿಸಿ ಇಬ್ಬರೂ ಹೊರಟೆವು. ಇಲ್ಲಿಂದ ಮುಂದಿನ ಮಾರ್ಗ ಅಷ್ಟೊಂದು ಸುಲಭವಾಗಿರಲಿಲ್ಲ. ಒಂದು ಕಡೆ ಕಂದರ ಮತ್ತೊಂದು ಕಡೆ ಬಂಡೆ. ಕಾಲ ಕೆಳಗೆ ಮಂಜು ಗಡ್ಡೆ. ಸ್ವಲ್ಪ ಏಮಾರಿದರೂ ಜಾರಿ ಮಂಜಿನ ಕಂದರಕ್ಕೆ ಹೋಗುವ ಅವಕಾಶ ಜಾಸ್ತಿ. ಹಾಗೆ ನಡೆಯುತ್ತಾ ಸುಮಾರು ದೂರ ಹೋಗಿದ್ದೆವು, ಯಾರೋ ಕೂಗಿದ ಹಾಗಾಯಿತು. ತಿರುಗಿ ನೋಡಿದರೆ ನಮ್ಮ ಗುಂಪಿನ ಹುಡುಗ. ನಮ್ಮನ್ನು ಇಲ್ಲೆ ಇರುವಂತೆ ತಿಳಿಸಿದ್ದಾರೆ, ಮುಂದೆ ಹೋಗಬಾರದಂತೆ ಎಂದು ವಾಪಸ್ ಕರೆದ. ನಾವು ಗಿಲ್ಮನ್ಸ್ ಪಾಯಿಂಟ್‌ಗೆ ವಾಪಸ್ ಬಂದೆವು. ಕೊರೆಯುವ ಚಳಿಯಲ್ಲಿ ಕೈ ಮತ್ತು ಕಾಲಿನ ಪಾದ ಉರಿಯುತ್ತಿತ್ತು. ನನ್ನ ಕಷ್ಟ ಹೇಳಿಕೊಂಡರೂ ಅದರ ಬಗ್ಗೆ ಕನಿಕರಿಸುವವರು ಯಾರೂ ಇರಲಿಲ್ಲ. ಏಕೆಂದರೆ ಉಳಿದವರ ಪಾಡು ನನಗಿಂತ ಬೇರೆ ಏನಿರಲಿಲ್ಲ. ನನ್ನ ಕೈ ಉರಿಯುತ್ತಿದ್ದ ಕಾರಣ ಎರಡು ಕೈಯನ್ನು ಉಜ್ಜಿಕೊಳ್ಳೊಣ ಎಂದು ಹಾಕಿದ್ದ ಗ್ಲೌಸ್ ತೆಗೆಯುತ್ತಿದ್ದೆ, ಅಲ್ಲೆ ದೂರದಲ್ಲಿ ನಿಂತಿದ್ದ ಇನ್ನೊಬ್ಬ ಕಿರುಚಿದ, ಯಾವುದೇ ಕಾರಣಕ್ಕು ಗ್ಲೌಸ್ ತೆಗೆಯಬೇಡ, ರಕ್ತ ಹೆಪ್ಪು ಗಟ್ಟಿ ಅಥವ ಚರ್ಮ ಕಿತ್ತು ಬಂದರೆ ಏನು ಮಾಡುತ್ತೀಯ ಎಂದು ಹೆದರಿಸಿದ. ಸತ್ಯ ಅಸತ್ಯದ ವಿಚಾರಕ್ಕೆ ಹೋಗದೆ ಸುಮ್ಮನೆ ನನ್ನ ಕಷ್ಟವನ್ನು ಸಹಿಸಿಕೊಂಡೆ. ಯಾಕಾದರೂ ಈ ಪರ್ವತ ಹತ್ತಲು ಬಂದೆನೊ ಎಂದು ಮನಸ್ಸಿನಲ್ಲಿಯೆ ಗೊಣಗುತ್ತಿದ್ದೆ.

ಸುಮಾರು ಜನ ಬಂದು ನಮ್ಮನ್ನು ಸೇರಿದರು. ಕೆಲವರು ಚಳಿಯಿಂದಾಗುವ ತೊಂದರೆಗೆ ಅಳುತ್ತಿದ್ದರೆ ಕೆಲವರು ನಡೆಯಲಾಗದು ಎಂದು ಕುಳಿತಲ್ಲಿಂದ ಮೇಲೇಳಲೆ ಇಲ್ಲ. ಅಂತು ನಮ್ಮ ಮುಖ್ಯ ಗೈಡ್ ನಮ್ಮನ್ನೆಲ್ಲ ಮುಂದುವರೆಯುವಂತೆ ಸೂಚಿಸಿದ. ಅಲ್ಲಿಂದ ಸುಮಾರು ಎರಡು ನೂರು ಮೀಟರ್ ದೂರದ ದಾರಿಯನ್ನು ಕ್ರಮಿಸಲು ಎರಡು ಗಂಟೆಗಳು ಬೇಕಾಗುತ್ತದೆ ಎಂದು ತಿಳಿಸಿದರು. ಮಂಜುಗಡ್ಡೆಯ ಕಿರಿದಾದ ಹೆದ್ದಾರಿಯಲ್ಲಿ ನಮ್ಮ ಪ್ರಯಾಣ ಶುರುವಾಯಿತು. ನಡೆಯುತ್ತಾ ನಡೆಯುತ್ತ ಬೆಳಕು ಹರಿಯಿತು, ಸುತ್ತಲೂ ಏನಿದೆ ಎಂದು ಕಾಣಿಸುತ್ತಿತ್ತು. ಸ್ವರ್ಗ ಎಂದರೆ ಹೀಗೆ ಇರುತ್ತದೆ ಎಂದು ಆಗ ತಿಳಿಯಿತು. ಸುತ್ತಲೂ ಬೆಳಕು, ಬಣ್ಣ ಎನ್ನುವುದಿದ್ದರೆ ಅದು ಬಿಳಿ ಮಾತ್ರ. ಆಗಸಕ್ಕು, ಭೂಮಿಗೂ, ಮಂಜುಗೆಡ್ಡೆಗೂ ಏನೂ ವ್ಯತ್ಯಾಸವೆ ಇಲ್ಲ ಯಾವುದು ಆಗಸ, ಯಾವುದು ಭೂಮಿ ಎಂದು ತಿಳಿಯಲಾಗದ ಅನುಭವ. ಸುತ್ತಲೂ ಮಂಜುಗಡ್ಡೆ, ದೂರ ದೂರದವರೆಗೂ ತನ್ನದೇ ಆದ ಸೌಂದರ್ಯವನ್ನು ಮಂಜುಗಡ್ಡೆ ತೋರಿಸುತ್ತಿತ್ತು. ನಮ್ಮಲ್ಲಿದ್ದ ಎಲ್ಲಾ ಶ್ರಮ ಕಾಣೆಯಾಯಿತು. ನಾನು ಮತ್ತು ಇನ್ನೊಬ್ಬ ಸ್ನೇಹಿತ ನಡೆಯುತ್ತ ಮುಂದುವರಿದೆವು, ಹಿಂದೆ ಯಾರು ಬರುತ್ತಿದ್ದಾರೆ ಎಂದು ಯೋಚಿಸುವುದಕ್ಕೂ ಆಗದಷ್ಟು ಸಂತೋಷ ನಮ್ಮಲ್ಲಿತ್ತು ಬಹಳ ದೂರ ಬಂದ ಮೇಲೆ ನೋಡಿದರೆ ಅಲ್ಲಿದ್ದವರು ನಾವಿಬ್ಬರೆ. ಆಮೇಲೆ ತಿಳಿಯಿತು ಬಹಳಷ್ಟು ಜನ ಸುಸ್ತಾಗಿ ವಾಪಸ್ ಹೋದರು ಮತ್ತೆ ಕೆಲವರು ನಡೆಯಲಾಗದೆ ಅಲ್ಲೆ ಬಿದ್ದು, ಅವರನ್ನು ಉಳಿದವರು ಎತ್ತಿಕೊಂಡು ಹೋದರು ಎಂದು. ನಾವು ಇಬ್ಬರು ಮಾತ್ರ ನಿಧಾನವಾಗಿ ನಡೆಯುತ್ತಾ ಅಲ್ಲಲ್ಲಿ ಮಂಜಿನ ಗೆಡ್ಡೆಯನ್ನು ಕಡಿದು ತಿನ್ನುತ್ತಾ ಹೋಗುತ್ತಿದ್ದಾಗ ದೂರದಲ್ಲಿ ಬಣ್ಣ ಬಣ್ಣದ ಬಟ್ಟೆ ಕಟ್ಟಿದ್ದ ಕೆಲವು ಕಟ್ಟಿಗೆಗಳು ಕಾಣಿಸಿದವು. ಅದೆ ನಾವು ತಲುಪಬೇಕಾದ ಉಹುರು ತುದಿ ಎಂದು ತಿಳಿಯಿತು. ಬಹಳ ಸುಸ್ತಾಗಿದ್ದ ನಮಗೆ ಓಡಿ ಹೋಗುವಷ್ಟು ಶಕ್ತಿ ಇರಲಿಲ್ಲ. ನಿಧಾನವಾಗಿಯೆ ಹೋಗಿ ಅದನ್ನು ಮುಟ್ಟಿದೆವು, ಅಪ್ಪಿದೆವು ಅದಕ್ಕೆ ಮುತ್ತಿಟ್ಟೆವು. ನಮಗೆ ಸ್ವರ್ಗ ಮೂರೆ ಗೇಣಾಗಿರಲಿಲ್ಲ. ನಾವು ಸ್ವರ್ಗದಲ್ಲೆ ಇದ್ದೆವು. ದೂರ ದೂರದವರೆಗೂ ಕಾಣಿಸುತ್ತಿದ್ದ ಮಂಜಿನ ಬೆಟ್ಟಗಳು, ಅಲ್ಲಲ್ಲಿ ಮಂಜಿನ ಕಲಾಕೃತಿಗಳು, ಮಂಜಿನಿಂದ ನಿರ್ಮಿತವಾಗಿರುವ ಬಹಳಷ್ಟು ವಿಸ್ಮಯಗಳನ್ನು ನೋಡಿ ಆನಂದಿಸಿದೆವು.

ನಾನು ತೆಗೆದುಕೊಂಡು ಹೋಗಿದ್ದ ಕರ್ನಾಟಕದ ಬಾವುಟವನ್ನು ಬ್ಯಾಗಿನಿಂದ ತೆಗೆದು, ಕೋಲಿಗೆ ಸಿಕ್ಕಿಸಿ, ಜಗತ್ತಿನ ಅತೀ ಎತ್ತರದ ಸ್ವಾವಲಂಬಿ ಪರ್ವತದ ಮೇಲೆ ಹಾರಿಸಿದೆ. ಆಫ್ರಿಕಾದ ಅತೀ ಎತ್ತರದ ಸ್ಥಾನದಲ್ಲಿ ನಿಂತು ಒಂದು ಪೂರ್ತಿ ಖಂಡವನ್ನು ಮೆಟ್ಟಿ ನಿಂತ ಅನುಭವ ಏನೇ ಹೇಳಿದರೂ ಕಡಿಮೆ ಅನ್ನಿಸುವಷ್ಟು ದೊಡ್ಡದು. ನಾಲ್ಕು ದಿನದ ದಣಿವು ನೀರು ಚುಮುಕಿಸುವ ಹಾಗೆ ಕ್ಷಣಿಕವಾಗಿ ನಮ್ಮ ದೇಹದಿಂದ ಬಿದ್ದು ಹೋಗಿತ್ತು. ನಾವು ತಲುಪಿ ಮುವತ್ತು ನಿಮಿಷಗಳ ನಂತರ ಇನ್ನಿಬ್ಬರು ಬಂದರು. ಸುಮಾರು ನಲವತ್ತು ನಿಮಿಷಗಳನ್ನು ಪರ್ವತದ ತುದಿಯಲ್ಲಿ ಕಳೆದು ನಂತರ ಕೆಳಕ್ಕೆ ಇಳಿಯಲು ಶುರುಮಾಡಿದೆವು. ಸೂರ್ಯ ಮೇಲೆ ಬರುವ ಮೊದಲು ನಾವು ಇಳಿಯಬೇಕು, ಹಾಗಾಗಿ ಪರ್ವತದ ತುದಿಯಲ್ಲಿ ಜಾಸ್ತಿ ಹೊತ್ತು ನಿಲ್ಲಲು ಆಗುವುದಿಲ್ಲ. ಕೆಲವು ಸಾರಿ ವಾತಾವರಣ ಸರಿ ಇಲ್ಲದಿದ್ದಾಗ ಕೇವಲ ಐದು ನಿಮಿಷ ಮಾತ್ರ ಇರಲು ಅವಕಾಶ ಇರುತ್ತದೆ. ನಮ್ಮ ಪುಣ್ಯ ಎಲ್ಲವೂ ನಮಗೆ ಅನುಕೂಲಕರವಾಗಿಯೆ ಇತ್ತು. ಹಾಗಾಗಿ ನಾವು ಸುಮಾರು ನಲವತ್ತು ನಿಮಿಷಗಳನ್ನು ಆಫ್ರಿಕಾದ ಛಾವಣಿಯ ಮೇಲೆ ಕಳೆದು ಬಂದೆವು.

ಇಷ್ಟೆಲ್ಲಾ ಕಷ್ಟವಿದ್ದ ಈ ಪ್ರಯಾಣವನ್ನು ನನ್ನ ಮಡದಿ ಮಾಡಿರಲು ಸಾಧ್ಯವೆ ಇಲ್ಲ ಎನ್ನುವಂತಹ ನಂಬಿಕೆ ನನ್ನಲ್ಲಿತ್ತು. ಅವಳ ಶಕ್ತಿಯನುಸಾರವಾಗಿ ಜಾಸ್ತಿ ಎಂದರೆ ಹನ್ಸ್ ಮೇಯರ್ ಗುಹೆ ತನಕ ಮಾತ್ರ ಹತ್ತಬಹುದು ಎಂದುಕೊಂಡು ವಾಪಸ್ ಹೋಗುತ್ತಿದ್ದೆ. ಎದುರಿಗೆ ಸಿಕ್ಕ ಸಸ್ಯಶಾಸ್ತ್ರದ ಪ್ರಾಧ್ಯಾಪಕರು ನನಗೆ ಕರೆದು ಹೇಳಿದರು, ಈ ಪರ್ವತ ಹತ್ತುವುದು ಒಂದು ವಿಸ್ಮಯ, ಆದರೆ ಶ್ರೀಮತಿ ಪ್ರಶಾಂತ್ ಗಿಲ್ಮನ್ಸ್ ಪಾಯಿಂಟ್ ಮುಟ್ಟಿದ್ದು ಎಲ್ಲಕ್ಕಿಂತ ವಿಸ್ಮಯ. ಈ ಮಾತು ಕೇಳಿ ನನಗೆ ನಂಬಲು ಆಗಲೆ ಇಲ್ಲ. ಮತ್ತೊಮ್ಮೆ ಅವರೊಂದಿಗೆ ಖಚಿತಪಡಿಸಿಕೊಂಡೆ. ಹೆಂಡತಿಯನ್ನು ಯಾವತ್ತೂ ಕಡಿಮೆ ಎಂದು ತಿಳಿಯಬಾರದು ಎಂದು ಪರ್ವತದ ಮೇಲೆ ಜ್ಞಾನೋದಯವಾಯಿತು.

ಜೀವನದ ಅತೀ ತ್ರಾಸದಾಯಕ ಪ್ರಯಾಣ ಮತ್ತು ಅತೀ ಆನಂದದಾಯಕ ಕ್ಷಣ ಎನ್ನಬಹುದಾದ ಒಂದು ವಿಚಿತ್ರ ಅನುಭವ ಈ ಪರ್ವತ ಹತ್ತುವುದು. ಪರ್ವತಾರೋಹಣ ಎನ್ನುವ ಹುಚ್ಚು ಇರುವ ಯಾರಿಗಾದರೂ ಇದು ಸ್ವರ್ಗ. ಜೀವನದಲ್ಲಿ ಒಮ್ಮೆ ಬದುಕಿದ್ದಾಗಲೆ ಸಿಗುವ ಸ್ವರ್ಗ ಸುಖ.

« ಆಫ್ರಿಕಾದ ಕಿಲಿಮಂಜಾರೋ ಪರ್ವತಾರೋಹಣ (ಭಾಗ 1)
« ಆಫ್ರಿಕಾದ ಕಿಲಿಮಂಜಾರೋ ಪರ್ವತಾರೋಹಣ (ಭಾಗ 2)
« ಆಫ್ರಿಕಾದ ಕಿಲಿಮಂಜಾರೋ ಪರ್ವತಾರೋಹಣ (ಭಾಗ 3)
« ಆಫ್ರಿಕಾದ ಕಿಲಿಮಂಜಾರೋ ಪರ್ವತಾರೋಹಣ (ಭಾಗ 4)
ಕಿಲಿಮಂಜಾರೋ ಪರ್ವತಾಹೋಹಣ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X