ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ತುಂಬ ನೋಡೋಣು ಬಾರಾ, ಕರ್ನಾಟಕದ ನಯಾಗರಾ

By * ಯಶ್
|
Google Oneindia Kannada News

Gokak falls in Belgaum district
ಗಿರಮಿಟ್ ಜೊತೆ ಗೋಕಾಕ್‌ನ ಗಲ್ಲಿಗಲ್ಲಿಯಲ್ಲಿಯೂ ಸಿಗುವ ಕರದಂಟನ್ನು ಮೆಲ್ಲುತ್ತ ಭೋರ್ಗರೆಯುವ ಜಲಪಾತ ನೋಡುತ್ತಿದ್ದರೆ ಕಣ್ಣಿಗೆ ಹಬ್ಬವೂ ಆಯಿತು ಬಾಯಿಗೆ ಸಿಹಿಯೂ ಆಯಿತು.

ಕರ್ನಾಟಕದ ಕರಾವಳಿ ಮತ್ತು ಮಲೆನಾಡಲ್ಲಿ ಧೋಧೋ ಮಳೆಯಾಗಿ ಒಂದು ಹಂತಕ್ಕೆ ಬಂದು ನಿಂತ ಮೇಲೆ ಟ್ರೆಕ್ಕಿಂಗ್‌ಗೆ ಅಣಿಯಾಗುವ ಸಾಹಸಿಗರ ಕಾಲುಗಳು ಚುರುಕಾಗಲು ಪ್ರಾರಂಭಿಸುತ್ತವೆ. ಹರಿದ್ವರ್ಣ ಕಾಡುಗಳಿಂದ ಕಂಗೊಳಿಸುವ ಚಾರಣಕ್ಕೆ ಹೇಳಿ ಮಾಡಿಸಿದಂತಹ ಮಡಿಕೇರಿಯಲ್ಲಿನ ತಡಿಯಂಡಮೋಲ್‌ ಬೆಟ್ಟಕ್ಕೆ ಹೋಗಬೇಕೆಂದರೆ ಕಾಲಿಟ್ಟಲ್ಲಿ ಜಿಗಣೆಗಳ ಕಾಟ.

ನಮ್ಮಷ್ಟಕ್ಕೇ ತಾವು ಗೆಳೆಯರ ಜೊತೆಗೂಡಿ ಯೂವಾಗಲೂ ಚಾರಣಕ್ಕೆ ಹೋಗುತ್ತಾರೆ, ನಮ್ಮನ್ನು ಮಕ್ಕಳನ್ನು ಪರಿಗಣಿಸುವುದೇ ಇಲ್ಲ ಎಂದು ಗೊಣಗುವ ಹೆಂಡತಿಯಿದ್ದರೆ ಸಂಸಾರ ಸಮೇತರಾಗಿ ಹೋಗಲು ನೆನಪಾಗುವ ತಾಣವೇ ಜಗತ್ಪ್ರಸಿದ್ಧ ಜೋಗದ ಜಲಪಾತ. ಎಷ್ಟು ಬಾರಿ ನೋಡಿದರೂ ಮನದಣಿಯದ ಉತ್ಸಾಹ ತುಂಬುವ ಧಬಧಬೆ. ಜೋಗ ನೋಡಿ ನೋಡಿ ಬೋರಾಗಿಬಿಟ್ಟಿದೆ ಮತ್ತ್ಯಾವುದಾದರೂ ಇದೆಯಾ ಅಂದ್ರೆ ಮತ್ತೆ ಒನ್ಸ್ ಅಗೇನ್ ಅಬ್ಬಿ, ಇಲ್ಲದಿದ್ದರೆ ಮಂಡ್ಯದ ಶಿವನಸಮುದ್ರ.

ಜೋಗದಷ್ಟು ಜಗತ್ಪ್ರಸಿದ್ಧವಲ್ಲದಿದ್ದರೂ ಜೋಗಕ್ಕಿಂತಲೂ ರುದ್ರರಮಣೀಯವಾದ ಜಲಪಾತ ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್. ಕರ್ನಾಟಕದ ನಯಾಗರಾ ಎಂದೇ ಪ್ರಸಿದ್ಧವಾಗಿರುವ ಈ ಜಲಪಾತವನ್ನು ಮಳೆಗಾಲದಲ್ಲಿ ನೋಡುವುದಕ್ಕೆ ಎರಡು ಕಣ್ಣು ಸಾಲದು. ಗಿರಮಿಟ್ ಜೊತೆ ಗೋಕಾಕ್‌ನ ಗಲ್ಲಿಗಲ್ಲಿಯಲ್ಲಿಯೂ ಸಿಗುವ ಕರದಂಟನ್ನು ಮೆಲ್ಲುತ್ತ ಭೋರ್ಗರೆಯುವ ಜಲಪಾತ ನೋಡುತ್ತಿದ್ದರೆ ಕಣ್ಣಿಗೆ ಹಬ್ಬವೂ ಆಯಿತು ಬಾಯಿಗೆ ಸಿಹಿಯೂ ಆಯಿತು.

ನೈಸರ್ಗಿಕವಾಗಿ ಕೊರೆದಿರುವ ಬಂಡೆಗಳ ಮೇಲಿಂದ 52 ಮೀಟರ್ ಕೆಳಗೆ ಧುಮ್ಮಿಕ್ಕುವ ಘಟಪ್ರಭಾ ನದಿಯ ರಭಸವನ್ನು ಸವಿಯಲು ಬೆಟ್ಟದ ಇಕ್ಕೆಲಗಳನ್ನು ಜೋಡಿಸುವ ತೂಗು ಸೇತುವೆಯನ್ನು ಕಟ್ಟಲಾಗಿದೆ. ಜುಲೈನಿಂದ ಸೆಪ್ಟೆಂಬರ್‌ವರೆಗೆ ಧಬಧಬಿಸುವ ಈ ಸೊಬಗನ್ನು ನೋಡಲು ಎಂಟೆದೆ ಬೇಕು. ಎಂಟೆದೆ ಏಕೆ ಬೇಕೆಂದರೆ ನದಿಯ ರಭಸ ಆ ಪರಿಯದು. ಜೋರಾಗಿ ಬೀಸುವ ಗಾಳಿಗೆ 177 ಮೀಟರ್ ಉದ್ದದ ಸೇತುವೆ ಅಕ್ಷರಶಃ ತೂಗುಯ್ಯಾಲೆಯಂತಾಗುತ್ತದೆ.

ತಲುಪುವುದು ಹೇಗೆ? : ಬಸ್‌ನಿಂದ ಸಾಗಿದರೆ ಬೆಳಗಾವಿಯಿಂದ ಬರೋಬ್ಬರಿ 60 ಕಿ.ಮೀ. ದೂರದಲ್ಲಿದೆ. ರೈಲಿನಲ್ಲಿ ಸಾಗುವ ಅನಕೂಲವೂ ಇದ್ದು,ಸ್ಟೇಷನ್‌ನಿಂದ ಜಲಪಾತಕ್ಕೆ ಸಾಗಲು ಮತ್ತೆ 7-8 ಕಿ.ಮೀ. ಮತ್ತೆ ಕ್ರಮಿಸಬೇಕು. ಗೋಕಾಕ ಶಹರದಿಂದ ಕೇವಲ 6 ಕಿ.ಮೀ. ದೂರದಲ್ಲಿರುವ ಜಲಪಾತದ ಸ್ಥಳದಲ್ಲಿ ವಾಸಕ್ಕೆ ಹೊಟೇಲ್‌ಗಳ ವ್ಯವಸ್ಥೆಯೂ ಇದೆ.

ಹೊಟೇಲ್‌ಗಳಿದ್ದರೂ ಒಂದೇ ದಿನದಲ್ಲಿ ಹೋಗಿ ಬರಬೇಕೆಂಬುವವರು ರುಚಿರುಚಿಯಾಗಿ ಬುತ್ತಿ ಕಟ್ಟಿಕೊಂಡು ಸುತ್ತಲೂ ಕುಳಿತುಕೊಂಡು ಅಂತ್ಯಾಕ್ಷರಿ ಹೇಳಿಕೊಳ್ಳುತ್ತ, ಜೋಕುಗಳನ್ನು ಕತ್ತರಿಸುತ್ತ, ಭೋರ್ಗರೆಯುವ ನದಿಯ ಸದ್ದನ್ನು ಕಿವಿಗಳಿಗೆ ತುಂಬಿಕೊಳ್ಳುತ್ತ ಊಟ ಮಾಡಿದರೆ ಎರಡು ತುತ್ತು ಜಾಸ್ತಿಯೇ ಇಳಿಯುತ್ತದೆ.

ಅಪಾಯಕಾರಿ ಸೆಳವು : ಮಳೆಗಾಲದಲ್ಲಿ ನದಿ ಯಾವ ಪರಿ ರಭಸದಿಂದ ನುಗ್ಗುತ್ತಿರುತ್ತದೆಂದರೆ ನದಿಯಲ್ಲಿ ಕೈಯಿಟ್ಟರೂ ಸಾಕು ತನ್ನತ್ತ ಸೆಳೆದುಕೊಂಡು ಬಿಡುತ್ತದೆ. ಆದ್ದರಿಂದ ಸ್ನಾನಕ್ಕಿಳಿಯುವ ಹುಂಬತನ ತೋರುವುದು ಬೇಡ. ಸ್ನಾನ ಮಾಡಲೇಬೇಕೆನ್ನುವ ಹಪಾಹಪಿಯಿದ್ದರೆ ನದಿಯ ಎಡಬದಿ ಕೆಲ ದೂರ ಸಾಗಿದರೆ ಅಲ್ಲೊಂದು ಸುರಕ್ಷಿತ ತಾಣವುಂಟು. ಅದಲ್ಲದೆ, ತೂಗು ಸೇತುವೆ ಮೇಲೆ ಹೋಗುವುದಕ್ಕೆ ವೇಳೆ ನಿಗದಿಪಡಿಸಿರುವುದರಿಂದ ಸೇತುವೆಗೆ ನದಿಯ ರಭಸದಂತೆ ಜನ ನುಗ್ಗುತ್ತಾರೆ. ಆದ್ದರಿಂದ ಚಿಕ್ಕ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿಯಿರಲಿ. ಒಂದು ಬಾರಿ ಜೋಗ್ ಜಲಪಾತವನ್ನು ಬದಿಗಿಟ್ಟು ಗೋಕಾಕ್ ಫಾಲ್ಸ್‌ಗೊಮ್ಮೆ ಹೋಗಿಬನ್ನಿ. [ಬೆಳಗಾವಿ ಸಮ್ಮೇಳನದ ಸುದ್ದಿಬಿಂಬ]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X