ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ವಿ ಯಾಕ್ ಮಾಡ್ಕೊತಾರ? ಅದೂ ಗುಲ್ಬರ್ಗಾದಾಗ!

By Staff
|
Google Oneindia Kannada News

Mahesh Deshpande
ಮದವಿ ಯಾಕ್ ಆಗ್ತಾರ? ಆಗೋದ ಖರೆ ಆದ್ರ ಗುಲ್ಬರ್ಗಾದಾಗ ಯಾಕ್ ಆಗ್ತಾರ? ಮುಂದಿನ ದಪ ಮದ್ವಿಗೆ ಪತ್ರಿಕೆ ಕಳಿಸೋ ಮುಂಚೆ ಎಸಿ ರೂಮ್ ಬುಕ್ ಮಾಡಿ ಕರೀರಲಾ.. ಎಂದು ಬೇಡಿಕೊಳ್ಳುವ ಒಂದು ಬೆವರಿಳಿಸುವ ಪ್ರವಾಸ ಕಥನ.

* ಮಹೇಶ್ ದೇಶಪಾಂಡೆ, ಬೆಂಗಳೂರು

"ಮಳೆ ಬಂತು ರಪಾ ರಪಾ, ಗಿಡಗಳು ತೊಯ್ದು ತಪಾ ತಪಾ, ಅಂಗಳವೆಲ್ಲಾ ನೀರಾಯ್ತು, ಹೂವಿನ ತೋಟಕ್ಕೆ ಖುಷಿಯಾಯ್ತು" ಅಂತ ನನ್ನ ತಂಗಿ ಮಗ ಸಮರ್ಥ ಹಾಡಿ ಕುಣದಿದ್ದು ನೋಡಿದ್ದೆ. ಇದರ ತದ್ವಿರುದ್ಧ ಅನುಭವ ನಮಾಗಾಗಿದ್ದು "ಗುಲ್ಬರ್ಗಾ - ಬಿಸಿಲು ಧಾಮ" ದಲ್ಲಿ, "ಬಿಸಿಲು ಹೊಡಿತು ರಪಾ ರಪಾ, ಮುಖಗಳು ತೊಯ್ದು ತಪಾ ತಪಾ, ಎಲ್ಲಾ ತಂಪು ನೀರು ಖಾಲಿಯಾಯ್ತು, ದೇಹ, ಕಿಸೆ ಖಾಲಿಯಾಯ್ತು" ಎಂದು ಹಾಡಿ ಹಾಡಿ ಹೇಳುವ ಕಥನ ಇದು.

ಜನ ಅದ್ಯಾಕೆ ಮದುವೆ ಆಗ್ತಾರೆ ಅಂತಾನೆ ಅರ್ಥ ಆಗಿಲ್ಲ, ಇನ್ನೂ ಗುಲ್ಬರ್ಗಾದ ಎಪ್ರಿಲ್ ಬಿಸಿಲನಾಗ ಮದುವೆ ಮಾಡ್ಕೊಳ್ಳೊ ನಿರ್ಧಾರ ನನ್ನ ಗೆಳೆಯ ವಾದಿ ಅದ್ಯಾಕೆ ಮಾಡಿದ್ನೋ ನಂಗೊತ್ತಿಲ್ಲ. ಆದರೆ ಅವನ ಮದುವೆಗೆ ಹೋಗಿ, ಇನ್ನೊಮ್ಮೆ ಗುಲ್ಬರ್ಗಾಕ ಹೋಗಬಾರ್ದು ಅಂತ ನಿರ್ಧಾರ ಮಾಡಿದೀನಿ. ವಾದಿ ತನ್ನ ಮದುವೆಗೆ ಕರೆಯೋಕೆ ಹೋದಾಗ ಯಾರೊ ಅಂದಿದ್ರಂತೆ, "ಇನ್ನೊಂದು ತಿಂಗಳ ಮೊದಲೆ ಮದುವೆ ಮಾಡ್ಕೊಬೇಕಿತ್ತು, ಹೋಳಿಹುಣ್ಣವಿಗೂ ಆಯ್ತು, ಬಿಸಿಲಿಗೂ ಆಯ್ತು, ಒಮ್ಮೆ ಹೊಡ್ಕೊತಿದ್ವೀ" ಅಂತ.

ಈ ಹೇಳಿಕೆ ಅನುಭವ ಆಗಿದ್ದು 2009ರ, ಎಪ್ರಿಲ್ 19, 20ರಂದು. ಹೋಗೊದು, ಬರೋದಕ್ಕೆಲ್ಲಾ ಮೊದಲೆ ರೇಲ್ವೆ ರಿಸರ್ವೇಷನ ಮಾಡಸ್ಕೊಂಡಿದ್ವೀ". ನನ್ನ ಮಡದಿ ವಿದ್ಯಾ ಸಾರಿ ಸಾರಿ ಹೇಳಿದ್ಲು, ಮೊದಲೆ ಎ.ಸಿ. ರೂಮ ಬುಕ್ ಮಾಡ್ರಿ ಮಾಡ್ರಿ ಅಂತ, ಮಾಡದೆ ಹೋಗಿದ್ದಕ್ಕೆ ಅವಳಿಗೆ ನಾನು ಸಾರಿ ಸಾರಿ"ಹೇಳಬೇಕಾಯ್ತು. ಗುಲ್ಬರ್ಗಾದಾಗ ಯಾಂವ ಎ.ಸಿ. ರೂಮ ಬುಕ್ ಮಾಡ್ತಾನ್ ಅಂದುಕೊಂಡೆ, ಅದು ಅಲ್ಲದೆ ವಾದಿನು ಎ.ಸಿ. ರೂಮ ಬುಕ್ ಮಾಡೀನಿ ಅಂತ ಹೇಳಿದ್ದ, ಅದಕ್ಕೆ ಹಾಗೇ ಹೋದ್ವಿ.

ಮದುವೇ ಕಾರ್ಯಕ್ರಮ ಸಾಯಂಕಾಲ ಪ್ರಾರಂಭ ಆಗೋದ್ರಿಂದ, ಎ.ಸಿ. ಕಾರ ಬುಕ್ ಮಾಡಕೊಂಡು ಮಳಖೇಡಕ್ಕೆ ಹೋಗಿ ಬಂದವಿ. ಮತ್ತೆ ಗುಲ್ಬರ್ಗಾಕ್ಕೆ ಬಂದಾಗ ಮೂರು ಗಂಟೆ. ವಾದಿ ಬುಕ್ ಮಾಡಿದ್ದ ರೂಮಗೆ ಹೋದ್ವಿ. ಗರ ಗರ ಅಂತ ಫಂಕ ತಿರಗ್ದಂಗ ತಿರಗ್ದಂಗ ಬಿಸಿ ಗಾಳಿ ಬರೋಕೆ ಶುರುವಾಯ್ತು. ಹೊರಗಡೆ ಬಿಸಿಲು ಬೇಕಾಯ್ತು ಒಳಗಡೆ ಶೆಕೆ ಬೇಡಾಯ್ತು. ಲಾಡ್ಜ ಮಾಲಿಕಗೆ ಕೇಳಕೊಂಡೆ "ನಮಗೊಂದು ಎ.ಸಿ. ರೂಮ ಕೊಡ್ರಿ, ಎಷ್ಟು ರೊಕ್ಕ ಆದ್ರು ನಾನು ಕೊಡ್ತೇನಿ, ವಾದಿಗೇನು ಕೇಳೊದು ಬೇಡ ಅಂತ", ಅದಕ್ಕೆ ಮಾಲಿಕ ಹೇಳ್ದ "ನನ್ನ ಜೀವ ಕೇಳ್ರಿ ಕೊಡ್ತೀನಿ ಖರೆ ನಿಮಗ ಕೊಡ್ಲಿಕ್ಕೆ ಎ.ಸಿ. ರೂಮ ಇಲ್ಲ".

ಗುಲ್ಬರ್ಗಾದಾಗ ಮತ್ತ ಯಾವ್ಯಾವ ಎ.ಸಿ. ರೂಮ ಇರೊ ಲಾಡ್ಜ್ ಅವ ಅಂತ ಕೇಳಿದ್ವಿ, ಇಂಟರ್ನೆಟ್ ಇಂದಾನೂ ಕೆಲವೊಂದು ಲಾಡ್ಜ್ ಮಾಹಿತಿ ತುಗೊಂಡಿದ್ವಿ. ವಿದ್ಯಾನ ಅದೇ ರೂಮಲ್ಲಿ ಕೂಡಿಸಿ, ನಾನು ಪ್ರಶಾಂತ ಊರ ಬಿಸಲಾಗ ತಂಪು ಹುಡಕೋ ಹುಚ್ಚ ನಿರ್ಧಾರ ಮಾಡಿದ್ವಿ. ಇನ್ನೂ ಮಳಖೇಡಕ್ಕ ಬುಕ್ ಮಾಡಿದ್ದ ಎ.ಸಿ. ಕಾರ್ ಡ್ರೈವರ್ ಗೆ ದುಡ್ಡು ಕೊಟ್ಟಿರಲಿಲ್ಲ, ಅವನ ಕರಕೊಂಡ ಬೇರೆ ಲಾಡ್ಜ್ ಹುಡಕೋ ಸವಾರಿ ಪ್ರಾರಂಭಾಯ್ತು. ಎಲ್ಲ ಕಡೆ ಹೋದ ತಕ್ಷಣನೇ ಹೇಳ್ತಿದ್ರು "ಎ.ಸಿ. ಏನೂ, ಯಾವ ರೊಮೂ ಇಲ್ಲ". ಒಬ್ಬ ಲಾಡ್ಜ ಮಾಲಿಕ ಹೇಳ್ದ "ಸಂಜೀಕ ಫೋನ್ ಮಾಡ್ರಿ, ಇಲ್ಲಿ ಬುಕ್ ಮಾಡಿರೋ ಒಬ್ರಿಗೆ ಆರಾಮ ಇಲ್ಲ, ಆರಾಮ ಆಗಲಿಲ್ಲ ಅಂದ್ರ ಅವರು ಬೆಂಗಳೂರಿಗೆ ಹೋಗ್ತಾರಂತ, ಆಗ ರೂಮ್ ಖಾಲಿ ಆದ್ರ ನಿಮಗ ಕೊಡ್ತೀನಿ" ಅಂದ. ಆ ಬಿಸಿಲ ನೋಡಿ, ಸ್ವಾರ್ಥಿ ಆಗಿ, ಅವರಿಗೆ ಆರಾಮ ಆಗೋದೇ ಬೇಡ ಅಂತ ಅಂದುಕೊಂಡ್ವಿ.

ಒಂದ ಕಡೆ ಎ.ಸಿ. ರೂಮ ಇತ್ತು, ಅದು ಹೇಗೆ ಈ ರೂಮ್ ಉಳಕೊಂಡಿದೆ ಅಂತ ಆಶ್ಚರ್ಯ ಆದರೂ, ತುಂಬಾ ಖುಷಿ ಆಗಿ ರೂಮ ಹೋಗಿ ನೋಡಿದ್ವಿ, ಅಲ್ಲಿ ಎ. ಸಿ. ಮಾತ್ರಾ ಇತ್ತು. ಎರಡು ದಿಂಬಿಗೆ ಎರಡೇ ತೂತು, ಹಾಸಿಗೆಗೆ ಮೂರ್ನಾಲ್ಕು ತೂತುಗಳು, ಗೋಡೆಗೆ ಖ್ಯಾಕರಿಸಿ ಉಗಳಿರೋ ಗುರುತುಗಳು, ಬಸ್‌ಸ್ಟ್ಯಾಂಡಿಗಿಂತನೂ ಕೆಟ್ಟದಾಗಿರೋ ವಿಸರ್ಜನೆ ಕೇಂದ್ರಗಳು. "ಸರ್, ಎ. ಸಿ. ಅದರೀ, ಇದೆಲ್ಲಾ ಸಣ್ಣ ಸಣ್ಣ ಪ್ರಾಬ್ಲೆಮ್, ಹೊಂದ್ಕೋಳ್ರೆಲ್ಲಾ!!" ಅಂದ, ಅದಕ್ಕೂ ಹೂ ಅನ್ನೋದ್ರಲ್ಲಿ ಇದ್ದೆ, ಅಷ್ಟರಲ್ಲಿ ಬೇರೆ ರೂಮಲ್ಲಿ ಇರುವವನು ಕೂಗಿ ಹೇಳಿದ, "ಸ್ವಾಮಿ, ಏನು ವರ್ಕ ಆಗಲ್ಲ ಕಣ್ರೀ, ಎ.ಸಿ. ಬಾಕ್ಸ ಮಾತ್ರ ಇರೋದು, ಅದರಲ್ಲಿ ಏನು ಇಲ್ಲ, ದುಡ್ಡು ಕೊಟ್ಟು ಬೇಜಾರ ಮಾಡಕೊಬೇಡಿ ಆಮೇಲೆ" ಅಂದ. ಬೆಂಗಳೂರಿನಿಂದ ಬಂದು ಪರದಾಡ್ತಿರೋದು ನಾವೋಬ್ಬರೆ ಅಲ್ಲ ಅಂತ ಗೊತ್ತಾಯ್ತು.

ಸಾಕಪ್ಪಾ ಸಾಕು ಅಂತ ಬೆವರು ಸುರಸ್ಕೊಂಡು ಹೊರಟಾಗ, ನಮ್ಮ ಕಾರ್ ಡ್ರೈವರ್ "ಸರ್ ಇಲ್ಲೆ ಒಂದು ಲಾಡ್ಜ ಐತಂತ್ರೀ, ಸ್ವಲ್ಪ ಒಳಗದಂತ್ರೀ, ಹೋಗುಣೇನ್ರೀ" ಅಂತ ಕೇಳ್ದ, ಆಯ್ತುಪಾ ಅದು ಒಂದು ಆಗೇ ಬಿಡ್ಲಿ ಅಂತ ಹೊರಟವಿ, ಲಾಡ್ಜ ಎಲ್ಲ ರಿಪೇರಿ ಆಗತಿತ್ತು. ಎಲ್ಲ ಕಡೆ ಬಣ್ಣ, ಸುಣ್ಣ ಮತ್ತು ಮಣ್ಣು. ಅದನ್ನ ನೋಡಿನೂ ಎ. ಸಿ. ರೂಮ್ ಒಳಗಡೆ ಇರಬಹುದು ಅಂತ ಅನಕೊಂಡು ಹೊರಟ್ರೇ, ಆ ಲಾಡ್ಜ ಮಾಲಿಕ ಅಂದ "ಏನ್ ಜನಾರೀ ಇವ್ರು, ಕಣ್ಣರೇ ಕಾಣತಾವೋ ಇಲ್ಲವೋ, ಹಂಗ ಬರಾಗತ್ತಾರಲ್ಲ..", "ಸರ್, ಬೆಂಗಳೂರೇನ್ರಿ ನಿಮ್ದು??, ಯಾವ ರೂಮು ಇಲ್ರೀ, ನೀವು ಹತ್ತನೆಯವರು ಬಂದು ಹೋಗತಿರುವವರು.." ಅಂದ. ನಾವು ಹೊರಗೆ ಹೊರಟಾಗ ಗೊಣಗಿದ "ಎ. ಸಿ. ರೂಮನಾಗ ಕೂತು ಕೆಲಸ ಮಾಡ್ತಾವ್, ಶಿಕ್ಕಾಪಟ್ಟಿ ಸೂಕ್ಷ್ಮ, ಎಲ್ಲಾಕಡೆ ಎ. ಸಿ. ಬೇಕು ಅಂತಾವ". ಅದೂ ನಿಜಾ ಅನಸಿದ್ರೂ ಏನೋ ಗೊಣಕೊಂಡು ನಾವು ಅಲ್ಲಿಂದ ಹೊರಟವಿ.

ಹೀಗೆ ಒಂದು ಹತ್ತು ಲಾಡ್ಜ ವೀಕ್ಷಿಸಿ, ಒಂದೇ ಒಂದು ಸ್ಟಾರ್ ಹೋಟಲ್ ಉಳಕೊಂಡಿತ್ತು. ಎಷ್ಟೇ ದುಡ್ಡು ಖರ್ಚಾದ್ರೂ ತೊಂದರೆ ಇಲ್ಲ ಅಂತ ಹೋದ್ರೆ, "25ನೇ ತಾರಿಖಿನಿ ತನಕ ಯಾವು ರೊಮು ಸಿಗಂಗಿಲ್ರೀ, ಎಲ್ಲ ನಮ್ಮ ಖರ್ಗೆ ಸಾಹೇಬ್ರು ಹಿಡದಾರೀ" ಅಂತ ಸೆಕ್ಯುರಿಟಿನೇ ಹೇಳಿ ಕಳಸ್ದ. ಆಗ ಗೊತ್ತಾಗಿದ್ದು ಎಲ್ಲ ಲಾಡ್ಜ ಬುಕ್ ಆಗಿರೋದು ಚುನಾವಣೆ ಇಂದ ಅಂತ. ಊರ ಬಿಸಲಾಗ ತಂಪು ಹುಡ್ಕೊಂಡು ಹೋದವರು ನಾವೇ ಮೂರ್ಖರು ಅಂತರಿತು ವಾದಿ ಬುಕ್ ಮಾಡಿದ ಲಾಡ್ಜಗೆ ವಿಧಿ ಇಲ್ಲದೆ ಮರಳಿದೇವು.

2 ಘಂಟೆ ಮೊದಲು ಹೇಗೆ ಬಿಟ್ಟು ಹೋಗಿದ್ವೋ ಅದೇ ಸ್ಥಿತಿಯಲ್ಲಿ ವಿದ್ಯಾ ಕುಳತಿದ್ಲು. ಬಿಜಾಪುರದಾಗ ಹುಟ್ಟಿ ಬೆಳದವ ನನಗೆ ಆ ಬಿಸಿಲು ಕಷ್ಟ ಆಗಬೇಕಾದ್ರೆ, ಇನ್ನೂ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ವಿದ್ಯಾನ ಪರಸ್ಥಿತಿ ದೇವರಿಗೆ ಗೊತ್ತು. ಅವಳ ಮುಖ ನೋಡಿ ಮದುವೆ ಆಗ್ತೀರೋ ವಾದಿ ಮೇಲೆ ಬರಬಾರದ ಸಿಟ್ಟು ಬಂತು. ಅಷ್ಟರಲ್ಲಿ ಅವಳ ಪಾದದಲ್ಲಿ ಆಗೀರೊ ಬಿರಕು ಗಮನಸಿ ಬಿಸಿಯಾದ ತಲೆ ಕೆಟ್ಟೂ ಹೊಯ್ತು. ಈ ಬಿಸಿಲು, "ಎಲ್ಲಾ ಕಡೆ ಬಿಸಿ ಗಾಳಿ, 5 ನಿಮಿಷ ಹಿಂದೆ ತಗೊಂಡಿರೋ ಬಿಸ್ಲೇರ್ ನೀರು ಕೂಡಾ ಬಿಸಿ, ನಮ್ಮ ಉಸಿರೂ ಬಿಸಿ.." ಹೀಗೆ ಅನುಭವಿಸ್ತೀರೋ ನಮ್ಮನ್ನ ಬಿಸಿ ಕೆಂಡದಲ್ಲಿ ಕೂಡಸಿರೋ ಹಾಗಿತ್ತು. ನಾನೇನೊ ಸರಿ, ನಿಮಿಷದಿಂದ ನಿಮಿಷ ವಿದ್ಯಾನ ಪರಸ್ಥಿತಿ ಕೆಡತಿರೋದು ನೋಡಿ ಏನು ಮಾಡಬೇಕು ಅಂತ ತಿಳಿತಿರಲಿಲ್ಲ. ಕೊನೆಗೆ, ಎ. ಸಿ. ಬಸ್ ಸಿಕ್ಕರೆ ವಿದ್ಯಾನ ಬೆಂಗಳೂರಿಗೆ ಕಳಿಸಿ ಬಿಡೋ ವಿಚಾರ ಮಾಡಿ ವ್ಹಿ.ಆರ್.ಎಲ್. ಗೆ ಹೋದೆ, ಸೀಟು ಸಿಕ್ತು. ಮದುವೇಗೆ ಅಂತ ಬಂದು ಮದುವೇ ನೋಡದೇ ನನ್ನ ಪತ್ನಿ ವಿದ್ಯಾ ಬೆಂಗಳೂರಿಗೆ ಮರಳಿದಳು.

ರಾತ್ರಿ ಆದ್ರೂ ಬಿಸಿಗಾಳಿ ಕಡಿಮೇ ಆಗಲಿಲ್ಲ. "ಬಿಸಿ ಗಾಳಿ, ಬಿಸಿ ಗಾಳಿ ಎಲ್ಲೆಲ್ಲೂ ಬೀಸೂತಿದೆ.. ಈ ಚಿಕ್ಕ ವಸ್ತ್ರ ಒಂದೇ ಸಾಕು.." ಅಂತ ಹಾಡಕೊಂಡು ಮಹಾಭಾರತದಲ್ಲಿ ಗಾಂಧಾರಿ ಕಣ್ಣು ತೆಗೆದಾಗ ದುರ್ಯೋಧನ ಹೋಗಿರೋ ಸ್ಥಿತಿಯಲ್ಲಿ ಮಲಗಿದೆವು. ನಸುಕಲ್ಲಿ ಕಣ್ಣ ತೆಗೆಯುವ ಮೊದಲೇ ಸೂರ್ಯ ಬಂದಿದ್ದ. ಸೂರ್ಯ ನಮ್ಮ ಜೊತೆ ನಮ್ಮ ರೂಮಲ್ಲೇ ಇದ್ದೀರೋ ಹಾಗಿತ್ತು ಬಿಸಿಲು. ಗೀಜರ್ ಇರದೇ ಬಿಸಿನೀರು ಬರತಾ ಇತ್ತು, ಬೆರಸೋಕೆ ತಣ್ಣೀರು ಇಲ್ಲ, ಮತ್ತೆ ಬಿಸ್ಲೇರಿ ತಂದು ಬೆರಸಿ ಸ್ನಾನ ಮಾಡೋದಾಯ್ತು. ಆ ಬೆಳಗಿನ ಬಿಸಿಲಿನ ಪ್ರಮಾಣ ನೋಡಿದರೆ, ವಿದ್ಯಾನ ಬೆಂಗಳೂರಿಗೆ ಮರಳಿ ಕಳಿಸಿದ್ದು ನನ್ನ ಜೀವನದ ಅತ್ಯಂತ ಛಲೋ ನಿರ್ಧಾರ.

ಮದುವೆ ಮಂಟಪಕ್ಕೆ ಹೋದಾಗ ಎಲ್ಲರೂ ಒಂದಿಲ್ಲ ಒಂದು ಗುಂಪಿನಲ್ಲಿ ಕುಳತಿದ್ರು. ಅದನ್ನು ನೋಡಿ, ದೂರ ದೂರಿಂದ ಬಂಧುಗಳನ್ನ ಸೇರಿಸಲು ಮದುವೆ ಒಳ್ಳೆ ಕಾರಣ, ಅದಕ್ಕೆ ಎಲ್ಲರೂ ಸೇರಿ ಹರಟೆ ಹೊಡಿತಿದಾರೆ ಅನಕೊಂಡೆ, ಆದರೆ ಯಾರೂ ಒಬ್ಬರಿಗೊಬ್ಬರು ಮಾತಾಡ್ತಿರಲಿಲ್ಲ, ಆದರೆ ಗುಂಪಲ್ಲಿ ಕುಳತಿದಾರೆ, ಅಮೇಲೆ ಮೇಲೆ ನೋಡದೆ. ಆಗ ಗೊತ್ತಾಯ್ತು ಎಲ್ಲೆಲ್ಲಿ ಫಂಕ ಇದೆಯೋ ಅಲ್ಲಲ್ಲಿ ಗುಂಪು ಮಾಡಿಕೊಂಡು ಕುಳತಿದ್ರು. ಫಂಕದ ಹತ್ರ ಜಗ ಸಿಗದೇ ಇದ್ದವೃ ಕೈವಸ್ತ್ರ, ದಿನಪತ್ರಿಕೆ, ಪುಸ್ತಕ, ಮದುವೆ ಆಮಂತ್ರಣ ಪತ್ರಿಕೆ, ಬಿಸ್ಲೇರಿ ಬಾಟಲಿ, ವ್ಯಾನಟಿ ಬ್ಯಾಗ್, ಉಡಗೊರೆ ಇತ್ಯಾದಿ ಇತ್ಯಾದಿಗಳಿಂದ ಗಾಳಿ ಹಾಕೋತಾ ಇದ್ದರು. ಯಾವ ಗಂಡಸರ ಅಂಗಿಯ ಮೇಲಿನ ಬಟನಗಳು ಹಾಕಿರಲಿಲ್ಲ. ಮದುವೆ ಮಂಟಪದ ಹಾಲ್‌ಕಿಂತ ಜಾಸ್ತಿ ಜನ ಹೊರಗಡೆನೆ ಅಲ್ಲಿ ಇಲ್ಲಿ ಗಿಡಗಳ ಕೆಳಗೆ ಗಾಳಿ ಹೊಡಕೊಂಡು, ಬಿಸ್ಲೇರಿ ನೀರು ಕುಡಕೊಂಡು ಕುಳತಿದ್ದರು. ಮದುವೆ ಮಂಟಪ ರೋಡಲ್ಲಿರೋ ಅಂಗಡಿಗಳಿಂದ ಅರ್ಧ ಕಿಲೋಮಿಟರ ದೂರ ಇತ್ತು. ಹೀಗಾಗಿ ಆ ರೋಡಕಡೆ ಯಾರದರು ಹೊರಟರೆ, ಎಲ್ಲರೂ ತಮಗೊಂದು ಬಿಸ್ಲೇರಿ ಬಾಟಲಿ ತರೋದಕ್ಕೆ ಹೇಳಲೇಬೇಕಾದಂತಹ ಬಿಸಲದು.

ಭಾರಿ ಪ್ರಮಾಣದ ಬಿಸಿಲಲ್ಲಿ ಬಿಸಿ ಬಿಸಿ ಊಟಾನೂ ಮಾಡಿದೆವು. ಊಟಾಗಿದ್ದು 1 ಗಂಟೆಗೆ, ಚಿತ್ತಾಪುರದಿಂದ 4 ಗಂಟೆಗೆ ರೇಲ್ವೆ ಇತ್ತು. ಗುಲ್ಬರ್ಗದಿಂದ ಚಿತ್ತಾಪುರ ಎರಡು ಗಂಟೆ ದಾರಿ, ಅದನ್ನು ನಾವು ಸೂರ್ಯನ ಪ್ರತಿಯೊಂದು ಕಿರಣನ್ನು ಯಾತ್ರಿಕರಿಗೆ ಮುಟ್ಟಿಸುವಂತಹ ಕೆಂಪು ಬಸ್‌ದಲ್ಲಿ ಹೋಗಬೇಕಿತ್ತು. ಈ ಎರಡು ದಿನದ ಯುದ್ಧದ ಕೊನೆಯ ಭಾರಿ ಪ್ರಮಾಣದ ಸಮಸ್ಯೆ ಎಂದರಿತ ನಾವು ಪ್ರತಿಯೊಬ್ಬರು 4,5 ತಂಪು ನೀರಿನ ಪಾಕೀಟ ತಂದು ಇಟ್ಟಿದ್ದೆವು. ಬಿರಿ ಬಿರಿ ಬಿಸಲು ಮುಖಕ್ಕೆ ಬಡಿತಿತ್ತು, ಬೇಗ ಬಸ್ ಹೊರಟರೆ ಮಾತ್ರ ಚಿತ್ತಾಪುರ ತಲಪುವ ಸಂಭವ ಇತ್ತು. ಆದರೇ ಬಸ್ ಚಾಲಕರು ಊಟಕ್ಕೆ ಹೋದವರು ಮಾಯಾನೇ ಆಗಿದ್ದರು. ಕೊನೆಗೇ ಬಂದರು, ಬಸ್ ಹೊರಟಿತು. ಮಧ್ಯಾಹ್ನ 2 ಗಂಟೆಗೆ ಭುರ್ ಅಂತ ಬರತೀರೊ ಬಿಸಿಗಾಳಿಗೆ ತತ್ತರಿಸಿದೆವು. ಕುಡಿಯೋಕೆ ಅಂತ ತಂದಿರೋ ತಂಪು ನೀರಿನ ಪಾಕೀಟಿಗೆ ಒಂದು ಚಿಕ್ಕ ತೂತು ಹಾಕಿ, ನೀರನ್ನು ಮುಖದ ಮೇಲೆ ಸಿಂಪಡಿಸಿಕೊಳ್ಳಲು ಪ್ರಾರಂಭಿಸಿದೆವು.

ಬಸ್ ಅಲ್ಲಿ ಎಲ್ಲರೂ ನಮ್ಮನ್ನೆ ನೋಡುತಿದ್ದರು. ನೋಡಿ ನಕ್ಕವರೆನು ನಮಗೆ ಬಿಸಲಿಂದ ಜೀವ ಹೋದರೆ ಮರಳಿ ಕೊಡಸ್ತಾರಾ ಅಂದಕೊಂಡು ನಮ್ಮ ಸಿಂಪಡಿಸೋ ಕಾರ್ಯ ಮುಂದುವರೆಸಿದೆವು. ಮುಖ, ತಲೆ, ಎದೆ, ಅಂಗಿ ಕಾಲರ್‌ಲ್ಲಿ, ಕೊರಳಲ್ಲಿ ಹೀಗೆ ಸಾಧ್ಯವಾದಕಡೆಯಲ್ಲ ನೀರು ಸಿಂಪಡಿಸಿಕೊಂಡು 2 ಗಂಟೆ ಜೀವ ಉಳಸ್ಕೊಂಡಿವಿ. ಚಿತ್ತಾಪುರ ಬಸ್‌ಸ್ಟ್ಯಾಂಡಿನಲ್ಲಿ ಅಟೋ ಕೇಳೊದಕ್ಕೆ ಹೋದರೆ, ರೇಲ್ವೆ ಸ್ಟೇಷನ್ ಹತ್ರ ಇದೆ, ನಡಕೊಂಡು ಹೋಗಿ ಅಂದರು. ಅದೊಂದು ಆಗೇ ಬಿಡಲಿ ಅಂತ ನಡದು ನಡದು ಬಿಸಿಲಲ್ಲಿ ಸುಸ್ತಾದಿವಿ ಹೊರತು ಸ್ಟೇಷನ್ ಬರಲಿಲ್ಲ. ಮತ್ತೇ ಅಂಗಡಿಯಿಂದ ತಂಪು ಪಾನೀಯಗಳನ್ನು ಖರೀದಿಮಾಡಿ ಸೇವಿಸಿ, ಮರುಜೀವ ಪಡೆದು ಮತ್ತೆ ನಡೆದಾಗ ಸ್ಟೇಷನ್ ಸೇರಿದೆವು.

ಸ್ಟೇಷನಲ್ಲಿ ಮತ್ತೆ ಎರಡು ಬಿಸ್ಲೇರಿ ಬಾಟಲಿ ಖರೀದಿ ಮಾಡಿ ರೇಲ್ವೆ ಹತ್ತಿದೆವು, ಬೆಂಗಳೂರಿಗೆ ಬಂದು ನಿಟ್ಟುಸಿರು ಬಿಟ್ಟೆವು. ಹಣಕಾಸಿನ ಸಂಖ್ಯಾಶಾಸ್ತ್ರಕ್ಕೆ ಬಂದರೇ, ಗುಲ್ಬರ್ಗಾಕ್ಕೆ ಹೋಗಿ ಬರೋ ರೇಲ್ವೆ ಖರ್ಚಿಗಿಂತ ಬಿಸ್ಲೇರಿ ಬಾಟಲಿ ಖರ್ಚೆ ಜಾಸ್ತಿಯಾಗಿತ್ತು. ಬಹುಶಃ ಯಾರು ಬಿಸಿ(!) -ಪಾನೀಯಗಳೀಗೂ ಇಷ್ಟು ಕೊಡಲ್ಲ ಎಂಬುದು ನನ್ನ ಅನಿಸಿಕೆ. 2010ರ ಮೇದಲ್ಲಿ ಇನ್ನೊಬ್ಬ ಗೆಳೆಯ ವರದನ ಮದುವೇ ಇದೇ ಗುಲ್ಬರ್ಗಾದಲ್ಲಿದೆ, ಎ. ಸಿ. ರೂಮ್ ಬುಕ್ ಮಾಡಿ ಕೊಟ್ಟರೆ ಮಾತ್ರ ಮದುವೆಗೆ ಬರೋ ಧೈರ್ಯ ಮಾಡಬಲ್ಲೆವು ಅಂತ ಈಗಲೇ ಹೇಳಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X