ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಭಾರತದ ತಾಜ್ ಮಹಲ್ ಇಬ್ರಾಹಿಂ ರೋಝಾ

By Staff
|
Google Oneindia Kannada News

Ibrahim Adil Shah
ಐದು ನದಿಗಳ ನಾಡಾದ ಬಿಜಾಪುರ ಜಿಲ್ಲೆ ಹಲವು ಭಾಷೆ, ಕಲೆ, ಸಂಸ್ಕೃತಿ, ಭಾವೈಕ್ಯತೆಯ ಸಂಗಮ. ಆದಿಲ್ ಶಾಹ್ ಆಡಳಿತದಲ್ಲಿ ಕಲಾ ಕ್ಷೇತ್ರದಲ್ಲಿ ಅತ್ಯಂತ ಫಲವತ್ತತೆ ಕಂಡಿದ್ದ ಜಿಲ್ಲೆ ಇಂದು ಹಾಳು ಹಂಪಿಯಂತೆ ಪಳಿಯುಳಿಕೆಗಳ ನಾಡಾಗಿ ಉಳಿದಿದೆ. 16ನೇ ಶತಮಾನದಲ್ಲಿ ಬಿಜಾಪುರವನ್ನು ಆಳಿದ ಇಬ್ರಾಹಿಂ ಆದಿಲ್ ಶಾಹ್ ಭಾವೈಕ್ಯತೆಯ ಹರಿಕಾರನಾಗಿದ್ದ. ಎಲ್ಲ ಭಾಷೆ ಕುಲ ಪಂಗಡಗಳಿಗೆ ಸಮನಾದ ಪ್ರಾಮುಖ್ಯತೆ ನೀಡಿದ್ದ. ಫಲವತ್ತಾದ ಬಿಜಾಪುರವನ್ನು ನೋಡಿರದಿದ್ದರೆ ಒಮ್ಮೆ ಹೋಗಿಬನ್ನಿ.

* ವಸಂತ ಕುಲಕರ್ಣಿ, ಸಿಂಗಪುರ

ಕಳೆದ ವರ್ಷ ನಾನು ವಾರ್ಷಿಕ ರಜೆಯಲ್ಲಿ ಮಕ್ಕಳನ್ನು ನನ್ನ ಹುಟ್ಟೂರಾದ ವಿಜಾಪುರಕ್ಕೆ ಕರೆದುಕೊಂಡು ಹೋಗಿದ್ದೆ. ಅವರಿಗೆ ತೊರವಿಯ ಪುರಾತನ ನರಸಿಂಹ ದೇವಸ್ಥಾನ, ಸುಪ್ರಸಿದ್ಧ ಗೋಳ ಗುಮ್ಮಟ ಇತ್ಯಾದಿ ಸ್ಥಳಗಳನ್ನು ತೋರಿಸುವ ಉದ್ದೇಶವಿತ್ತು. ಎರಡು ದಿನಗಳಲ್ಲಿ ಸಾಧ್ಯವಾದಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದೆವು. ಅವುಗಳಲ್ಲಿ ಇಬ್ರಾಹಿಂ ರೋಝಾ ಕೂಡ ಒಂದು.

ಮೊಹಮ್ಮದ್ ಆದಿಲ್ ಶಾಹ್‌ನು ಕಟ್ಟಿದ ಗೋಳ ಗುಮ್ಮಟ ತನ್ನ ಭವ್ಯತೆಯಿಂದ ಮನವನ್ನು ರಂಜಿಸಿದರೆ, ಇಬ್ರಾಹಿಂ ರೋಝಾ ತನ್ನ ಕಲಾತ್ಮಕ ನಿರ್ಮಾಣದಿಂದ ಮನಸೆಳೆಯುತ್ತದೆ. ಅಲ್ಲಿಯ ಪ್ರವಾಸಿ ಮಾರ್ಗದರ್ಶಕರಾದ ಸಲೀಮ್ ಸಾಹೇಬರು ಇಬ್ರಾಹಿಂ ರೋಝಾದ ಬಗ್ಗೆ ಹೇಳುತ್ತಾ ಅದರ ನಿರ್ಮಾತೃವಾದ ವಿಜಾಪುರದ ಪ್ರಸಿದ್ಧ ರಾಜ ಎರಡನೇ ಇಬ್ರಾಹಿಮ್ ಆದಿಲ್ ಶಾಹ್‌ನ ವ್ಯಕ್ತಿತ್ವ ಮತ್ತು ಕಲಾಪ್ರಿಯತೆಯ ಬಗ್ಗೆ ನನ್ನ ಗಮನ ಸೆಳೆದರು. ಈತನ ಕಾಲದ ಆಡಳಿತವನ್ನು ನೆನೆಸಿಕೊಂಡು ಸಧ್ಯದ ಸ್ಥಿತಿಗೆ ಮರುಗಿದರು.

ಎರಡನೇ ಇಬ್ರಾಹಿಮ್ ಆದಿಲ್ ಶಾಹ್ ಬಿಜಾಪುರದ ಅರಸರಲ್ಲೆಲ್ಲಾ ಅತ್ಯಂತ ಪ್ರಸಿದ್ಧಿ ಪಡೆದವನು. ಅಲಿ ಆದಿಲ್ ಶಾಹ್‌ನ ಕಾಲವಾದ ನಂತರ ಆತನ ತಮ್ಮ ತಹಾಮ್ ಅಸಫ್ ಆದಿಲ್ ಶಾಹ್‌ನ ಮಗ ಇಬ್ರಾಹಿಮ್ ಆದಿಲ್ ಶಾಹ್ 1580ರಲ್ಲಿ ಪಟ್ಟಕ್ಕೇರಿದಾಗ, ಆತ ಇನ್ನೂ ಒಂಭತ್ತು ವರ್ಷದ ಚಿಕ್ಕ ಹುಡುಗ. ಇವನ ಪರವಾಗಿ ಈತನ ದೊಡ್ಡಮ್ಮ ಚಾಂದ್ ಬೀಬಿ ಸುಲ್ತಾನಳು ಸಮರ್ಥವಾಗಿ ರಾಜ್ಯ ಭಾರ ನಡೆಸಿದಳು.

ಇಬ್ರಾಹಿಮ್ ಆದಿಲ್ ಶಾಹ್ ಪಟ್ಟಕ್ಕೇರಿದ ನಂತರ ತನ್ನ ಜ್ಞಾನ ದಾಹ, ಪರಮತ ಸಹಿಷ್ಣುತೆ, ಕಲೋಪಾಸನೆ ಮತ್ತು ಅಧ್ಯಾತ್ಮಿಕ ಒಲವಿನಿಂದ ಎಲ್ಲಿಲ್ಲದ ಎತ್ತರಕ್ಕೆ ಬೆಳೆದು ನಿಂತು, "ಜಗದ್ಗುರು" ಎಂದೆನಿಸಿಕೊಂಡ. 1580ರಿಂದ 1626ರವರೆಗೆ ರಾಜ್ಯಭಾರ ನಡೆಸಿದ ಈತ, ಮೊಘಲ ದೊರೆ ಅಕ್ಬರನ ಸಮಕಾಲೀನ ಎನ್ನುವದು ಗಮನಾರ್ಹ. ಒಂದೇ ಕಾಲದಲ್ಲಿ ಭಾರತದ ಉತ್ತರ ಮತ್ತು ದಕ್ಷಿಣಗಳೆರಡರಲ್ಲೂ ಪರಮತ ಸಹಿಷ್ಣುತೆಗೆ ಹೆಸರಾದ ಸುಲ್ತಾನರು ರಾಜ್ಯಭಾರ ನಡೆಸಿದ್ದು ಕಾಕತಾಳೀಯವೇನೋ?

ಇಬ್ರಾಹಿಮ್ ಆದಿಲ್ ಶಾಹ್ ಪಟ್ಟಕ್ಕೇರಿದಾಗ ವಿಜಾಪುರ ರಾಜ್ಯ ಸುರಕ್ಷಿತವಾಗೇನೂ ಇರಲಿಲ್ಲ. ಅದು ಗೊಲ್ಕೊಂಡ, ಅಹಮದ್ ನಗರದ ಸುಲ್ತಾನರು ಮತ್ತು ಮೊಘಲರ ದಾಳಿಗೆ ತುತ್ತಾಗುವದರಲ್ಲಿತ್ತು. ತನ್ನ ಮುತ್ಸದ್ದಿತನದಿಂದ ಸುತ್ತಲಿನ ರಾಜ್ಯಗಳ ಗೆಳೆತನ ಬೆಳೆಸಿ ವಿಜಾಪುರದಲ್ಲಿ ಶಾಂತಿಯನ್ನು ಕಾಯ್ದುಕೊಂಡ. ಆತ ತನ್ನ ಮುಸ್ಲಿಂ ಸರದಾರರು ಮತ್ತು ಪ್ರಜೆಗಳಲ್ಲದೇ, ತನ್ನ ಪ್ರಜಾಹಿತ ಕಾರ್ಯಕ್ರಮಗಳಿಂದ ರಾಜ್ಯದ ಬಹುಸಂಖ್ಯಾತ ಪ್ರಜೆಗಳಾದ ಹಿಂದುಗಳ ವಿಶ್ವಾಸವನ್ನು ಕೂಡ ಗಳಿಸಿದ.

ಇಬ್ರಾಹಿಮ್ ಕಲೋಪಾಸಕನಾಗಿದ್ದನಲ್ಲದೇ ಸ್ವತಃ ಒಬ್ಬ ಕಲಾವಿದನಾಗಿದ್ದ ಕೂಡ. ಆತ ಅನೇಕ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದ ಮತ್ತು ಹಾಡುತ್ತಿದ್ದ. ಆ ಕಾಲದಲ್ಲಿ ದೊರೆತ ಚಿತ್ರಗಳಲ್ಲಿ ಇಬ್ರಾಹಿಮ್‌ನನ್ನು ಸರೋದ್ ನುಡಿಸುತ್ತಿರುವಂತೆ ಚಿತ್ರಿಸಲಾಗಿದೆ. ಈತ ಕವಿಯೂ ಹೌದು. ಅನೇಕ ಹಾಡುಗಳನ್ನು ರಚಿಸಿದ್ದಾನೆ. ಈತನ ಮುಖ್ಯ ಗ್ರಂಥ ಕಿತಾಬ್ ಏ ನವರಸ್ (ಒಂಭತ್ತು ರಸಗಳ ಪುಸ್ತಕ), ಒಂದು ಕವನ ಸಂಕಲನ. ಇದು ಈಗಲೂ ಲಭ್ಯವಿದೆ. ಈ ಪುಸ್ತಕದಲ್ಲಿ ಸುಮಾರು ಅರವತ್ತು ಪದ್ಯಗಳಿವೆ. ಈ ಪದ್ಯಗಳಲ್ಲಿ ಹಾಸ್ಯ, ಶೃಂಗಾರ, ಕರುಣ ಮತ್ತು ಶಾಂತ ರಸಗಳ ವರ್ಣನೆಯಿದೆ. ಈ ಪುಸ್ತಕಕ್ಕೆ ಮುನ್ನುಡಿ ಬರೆದ ಈತನ ಆಸ್ಥಾನ ಕವಿ ಜೋಹರಿ, ಈ ಪುಸ್ತಕವನ್ನು ಇಬ್ರಾಹಿಮ್‌ನು ಭಾರತದ ನವರಸ ಸೌಂದರ್ಯ ಲಹರಿಯನ್ನು ಪರ್ಶಿಯನ್ ಭಾಷಿಕರಿಗೆ ಪರಿಚಯಿಸಲು ಬರೆದಿದ್ದಾನೆ ಎಂದು ಹೇಳಿದ್ದಾನೆ. ದಕ್ಷಿಣದಲ್ಲಿ ಹಿಂದೂಸ್ತಾನಿ ಸಂಗೀತವನ್ನು ಪ್ರೋತ್ಸಾಹಿಸಿದ ಮೊಟ್ಟ ಮೊದಲ ಅರಸು ಈತನೇ ಇರಬೇಕು.

ತನ್ನ ಪ್ರಜೆಗಳಲ್ಲಿ ಭಾವೈಕ್ಯತೆಯನ್ನು ಮೂಡಿಸುವದು ಈತನ ಮೂಲ ಉದ್ದೇಶವಾಗಿತ್ತು ಎಂಬುದು ಈತನ ಅನೇಕ ಕಾರ್ಯಗಳಿಂದ ತಿಳಿದುಬರುತ್ತದೆ. ತನ್ನ ಪುಸ್ತಕ ಕಿತಾಬ್ ಏ ನವರಸ್ ಅನ್ನು ಈತ ಹಿಂದು ದೇವತೆ ಸರಸ್ವತಿ ಮಾತೆಯ ವಂದನೆಯೊಂದಿಗೆ ಆರಂಭಿಸುತ್ತಾನೆ. ಆ ಪದ್ಯ ಹೀಗಿದೆ:

"ನೌರಸ ಸೂರ ಜಗ ಜೋತಿ ಅಣಿ ಸರೋಗುಣಿ ಯುಸತ ಸರಸುತಿ ಮಾತಾ ಇಬ್ರಾಹಿಮ್ ಪರಸಾದ ಭಾಯಿ ದೂನಿ" ಈ ಕವನದ ಅರ್ಥ "ಏ ಮಾತೆ ಸರಸ್ವತಿಯೇ, ನೀನು ಆಶೀರ್ವದಿಸಿರುವದರಿಂದ ನವರಸಗಳ ಕುರಿತಾದ ಈ ಪುಸ್ತಕ ಬಹಳ ಕಾಲ ಉಳಿಯಲಿದೆ".

ಮರಾಠಿ, ದಖ್ಖನಿ ಉರ್ದು ಮತ್ತು ಪರ್ಶಿಯನ್ ಭಾಷೆಯ ಸಂಗಮ ಭಾಷೆಯಲ್ಲಿರುವ ಈ ಪುಸ್ತಕದಲ್ಲಿ ಗಣಪತಿಯ ಕುರಿತ ಭಕ್ತಿ ಗೀತೆ ಕೂಡ ಉಂಟು. ತನ್ನ ಪತ್ನಿ, ಮೋತಿ ಖಾನ್ ಎಂಬ ಹೆಸರಿನ ತಂಬೂರಿ ಹಾಗೂ ಆತಿಷ್ ಖಾನ್ ಎಂಬ ಹೆಸರಿನ ಆನೆಯ ಬಗ್ಗೆ ಕೂಡ ಪದ್ಯಗಳನ್ನು ಬರೆದಿದ್ದಾನೆ. ಸಂಗೀತದಿಂದ ಸಮಾಜದಲ್ಲಿರುವ ಭಿನ್ನತೆಗಳನ್ನು ದೂರ ಮಾಡಿ, ಹಿಂದು ಮತ್ತು ಮುಸ್ಲಿಂರನ್ನು ಒಗ್ಗೂಡಿಸಬಹುದು ಎಂದು ಈತ ನಂಬಿದ್ದ ಮತ್ತು ಈ ದಿಶೆಯಲ್ಲಿ ಪ್ರಯತ್ನಿಸಿದ ಎಂದು ತಿಳಿದು ಬಂದಿದೆ.

ಜನಾನುರಾಗಿಯಾಗಿದ್ದ ಈ ಅರಸ ತನ್ನ ಆಸ್ಥಾನದಲ್ಲಿ ಅನೇಕ ವಿದ್ವಾಂಸರುಗಳಿದೆ ಆಶ್ರಯ ಕಲ್ಪಿಸಿದ್ದ ಎಂದು ಹೇಳಲಾಗಿದೆ. ಈತ ವಿಜಾಪುರದ ನಾಥ ಪಂಗಡದ ಗುರುಗಳಾದ ರುಕ್ಮಾಂಗದ ಪಂಡಿತರನ್ನು ಸತ್ಕರಿಸಿ ಗೌರವಿಸಿದ್ದ ಎಂದು ತಿಳಿದು ಬಂದಿದೆ. ಸಂತ ಮಹಿಪತಿದಾಸರು ಕೂಡ ಈತನ ಆಸ್ಥಾನದಲ್ಲಿ ಕೋಶಾಧಿಕಾರಿಗಳಾಗಿದ್ದರು ಎಂಬ ನಂಬಿಕೆಯಿದೆ. ತನ್ನ ಕೇವಲ ಆಶಯವೆಂದರೆ ವಿದ್ಯೆ, ಸಂಗೀತ ಮತ್ತು ಗುರುಸೇವೆ ಎಂದು ಘೋಷಿಸಿದ್ದ. ಚಿತ್ರಕಲೆಗೂ ತುಂಬ ಪ್ರೋತ್ಸಾಹ ನೀಡಿದ ಈತ "ರಾಗ ಮಾಲಾ" ಚಿತ್ರಕಲೆಯನ್ನು ಪೋಷಿಸಿ ಬೆಳೆಸಿದ. ವಿಶಿಷ್ಟ ಶೈಲಿಯ, ಈ ಚಿತ್ರಕಲೆಯನ್ನು ಊರ್ಜಿತಗೊಳಿಸಿ ಪ್ರೋತ್ಸಾಹಿಸಲು ಸರಕಾರ ಮುಂದೆ ಬರಬೇಕಾಗಿದೆ. ಈತ ಗುಲಬರ್ಗಾದ ಸೂಫಿ ಸಂತ ಹಜರತ್ ಖ್ವಾಜ ಬಂದೇ ನವಾಜ್‌ರಿಂದ ಪ್ರಭಾವಿತನಾಗಿದ್ದ. ಕನ್ನಡ, ಮರಾಠಿ, ಉರ್ದು ಮತ್ತು ಪರ್ಶಿಯನ್ ಭಾಷೆಗಳಲ್ಲಿ ಪ್ರವೀಣನಾಗಿದ್ದ.

ಈತನ ಕಲಾಭಿರುಚಿಗೆ ಮತ್ತೊಂದು ಜೀವಂತ ಉದಾಹರಣೆ ಎಂದರೆ ಇಬ್ರಾಹಿಮ್ ರೋಝಾದ ಕಟ್ಟಡಗಳು. ಬಿಜಾಪುರದ ಜೋಹ್ರಾಪುರದ ಬಡಾವಣೆಯಲ್ಲಿರುವ ಈ ಕಟ್ಟಡಗಳ ಸೌಂದರ್ಯ ಅವಕ್ಕೆ ದಕ್ಷಿಣ ಭಾರತದ ತಾಜ್‌ಮಹಲ್ ಎಂಬ ಹೆಸರನ್ನು ತಂದಿದೆ. ಇಬ್ರಾಹಿಮ್ ರೋಝಾದಲ್ಲಿ ಒಂದು ಪ್ರಾರ್ಥನಾ ಮಂದಿರ ಮತ್ತು ಇನ್ನೊಂದು ಸಮಾಧಿ. ಇಬ್ರಾಹಿಮ್ ಈ ಕಟ್ಟಡವನ್ನು ತನ್ನ ಪತ್ನಿ ತಾಜ್ ಸುಲ್ತಾನಳಿಗಾಗಿ ಕಟ್ಟಿದ್ದ, ಆದರೆ ಅವಳಗಿಂತ ಮುಂಚೆ ಇಬ್ರಾಹಿಮ್‌ನ ನಿಧನವಾಗಿದ್ದರಿಂದ ಆತನನ್ನು ಇಲ್ಲಿ ಸಮಾಧಿಗೊಳಿಸಲಾಯಿತು. ಇಲ್ಲಿಯ ಸುಂದರ ಕುಸುರಿ ಕೆಲಸ, ಶಿಲ್ಪಕಲೆ, ಅನುರೂಪದಲ್ಲಿ ಕಟ್ಟಿದ ಕಮಾನುಗಳು ಮತ್ತು ಸುಂದರ ಮಿನಾರಗಳು ನಮ್ಮನ್ನು ಆಕರ್ಷಿಸುತ್ತವೆ. ಇಲ್ಲಿಯ ಶಾಂತ ವಾತಾವರಣ, ಸುತ್ತಲಿರುವ ಸುಂದರ ಉದ್ಯಾನವನ ಮನಸ್ಸನ್ನು ಆಹ್ಲಾದಗೊಳಿಸುತ್ತವೆ.

ಇಬ್ರಾಹಿಮ್ ರೊಝಾ ಅಲ್ಲದೇ, ತಾಜ್ ಬಾವಡಿ (ಬಾವಿ), ಸಾತ್ ಮಂಜಿಲ್ ಮತ್ತು ಮಲಿಕ್ ಜಹಾನ್ ಮಸೀದಿಗಳನ್ನು ಕೂಡ ಕಟ್ಟಿಸಿದ. ಮುಖ್ಯವಾಗಿ ಈತ ತನ್ನ ನವರಸದ ಕಲ್ಪನೆಯನ್ನು ಸಾಕಾರಗೊಳಿಸಲು ವಿಜಾಪುರ ತೊರವಿ ಮಾರ್ಗದಲ್ಲಿ ನವರಸಪುರ ಎಂಬ ಹೊಸ ಸಂಗೀತಮಯ ಪಟ್ಟಣವನ್ನು ಕಟ್ಟಿಸಿದ. ಸಂಗೀತ, ಸೌಂದರ್ಯ ಮತ್ತು ಮಾಧುರ್ಯಗಳನ್ನು ಹೊಂದಿದ ಕನಸಿನ ನಗರವನ್ನು ಇಲ್ಲಿ ಪ್ರತಿಷ್ಠಾಪಿಸುವದು ಇಬ್ರಾಹಿಮ್‌ನ ಕನಸಾಗಿತ್ತು. ಈ ಹೊಸ ಪಟ್ಟಣದಲ್ಲಿ ತನ್ನ ಅರಮನೆಯ ಹತ್ತಿರ ದೇವರ ಗುಡಿಯೊಂದನ್ನು ಕೂಡ ಕಟ್ಟಿಸಿದ ಎಂದು ಹೇಳಲಾಗಿದೆ. ಈತನ ಶಾಂತಿಯುತ ಪರಿಪಾಲನೆಯಿಂದ ವಿಜಾಪುರ ನಗರಕ್ಕೆ ಅನೇಕರು ವಲಸೆ ಬಂದು ಆಗಿನ ಕಾಲದಲ್ಲಿ ನಗರದ ಜನಸಂಖ್ಯೆ ಸುಮಾರು ಹತ್ತು ಲಕ್ಷಕ್ಕೆ ಮುಟ್ಟಿತು ಎಂದು ಹೇಳಲಾಗಿದೆ.

ಕನ್ನಡ ಸಂಸ್ಕೃತಿ ಇಲಾಖೆ ನವರಸಪುರದಲ್ಲಿ 1990ರಿಂದ ಪ್ರತಿ ವರ್ಷ ನವರಸಪುರ ಸಂಗೀತ ಉತ್ಸವವನ್ನು ನಡೆಸಿದ್ದು ಇಬ್ರಾಹಿಮ್‌ನ ಈ ಉದ್ದೇಶವನ್ನು ಪೂರೈಸುವ ಕಾರ್ಯದಲ್ಲಿ ತೊಡಗಿದೆ. ಇದು ಅತ್ಯಂತ ಶ್ಲಾಘನೀಯ. ಆದರೆ ಈತನ ಮತ್ತು ಈತನ ಆಡಳಿತದ ಬಗ್ಗೆ ಗಹನ ಸಂಶೋಧನೆ ಆಗಬೇಕಾಗಿದೆ ಎಂದು ಕಂಡು ಬರುತ್ತದೆ. ಕರ್ನಾಟಕದ ವಿಶ್ವ ವಿದ್ಯಾಲಯಗಳು ಈ ವಿಷಯದಲ್ಲಿ ಆಸಕ್ತಿ ವಹಿಸುವವು ಎಂಬ ಆಶಯ.

"ಭಕ್ತ ನ್ಯಾರಿ ನ್ಯಾರಿ ಭಾವ ಏಕ ಕಹ ತುರುಕ ಕಹ ಬ್ರಾಹ್ಮಣ" (ಮುಸ್ಲಿಂನೇ ಆಗಿರಲಿ ಬ್ರಾಹ್ಮಣನೇ ಆಗಿರಲಿ, ಇಬ್ಬರ ಭಾಷೆ ಬೇರೆಯಿದ್ದರೂ, ಭಕ್ತಿ ಭಾವ ಒಂದೇ ಆಗಿರುತ್ತದೆ) ಎಂದು ಜಗತ್ತಿಗೇ ಪಾಠ ಹೇಳಿದ ಈ ಜಗದ್ಗುರುವನ್ನು ನೆನೆಸಿಕೊಂಡು, ಭಿನ್ನ ಭಿನ್ನವಾದ ನಮ್ಮ ಭಾರತೀಯರ ಮನಸ್ಸುಗಳನ್ನು ಒಂದುಗೂಡಿಸಲು ಮತ್ತೊಬ್ಬ ಇಂತಹ ಮಹಾತ್ಮ ಹುಟ್ಟಿ ಬರುತ್ತಾನೆ ಎಂದು ಆಶಿಸೋಣವೆ?

ಆಕರ ಗ್ರಂಥಗಳು / ಅಂತರ್ಜಾಲ ತಾಣಗಳು:

1. www.Golgumbaz.com
2. ಕಾಖಂಡಕಿ ಮಹಿಪತಿ ದಾಸರು - ಕೃಷ್ಣ ಕೊಲ್ಹಾರ ಕುಲಕರ್ಣಿ
3. www.wikipedia.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X