ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ಕಾವೇರಿ ಮೇಲೆ ಸವಾರಿ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

River Rafting in Coorg
ಕೊಡಗಿನವರು ಕ್ರೀಡಾಪ್ರೇಮಿಗಳು. ಹಾಗಾಗಿಯೇ ಇಲ್ಲಿ ವರ್ಷ ಪೂರ್ತಿ ಒಂದಲ್ಲಾ ಒಂದು ಕ್ರೀಡೆಗಳು ನಡೆಯುತ್ತಲೇ ಇರುತ್ತವೆ. ಬೇಸಿಗೆಯಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿ, ಸ್ಪರ್ಧಿಸಿ ಸಂಭ್ರಮಿಸಿದರೆ, ಮಳೆಗಾಲ ಬಂತೆಂದರೆ ಕೈಕಟ್ಟಿ ಕೂರುವ ಜಾಯಮಾನ ಇವರದ್ದಲ್ಲ.

ಹೀಗಾಗಿ ಸುರಿಯುವ ಮಳೆಯಲ್ಲಿಯೇ ಕೆಸರುಗದ್ದೆಯನ್ನು ಮೈದಾನವನ್ನಾಗಿಸಿ ಕೆಸರುಗದ್ದೆ ಕ್ರೀಡಾಕೂಟ ನಡೆಸುತ್ತಾರೆ. ಅಷ್ಟೇ ಅಲ್ಲ ಮತ್ತೊಂದೆಡೆ ಧುಮ್ಮಿಕ್ಕಿ ಹರಿಯವ ಕಾವೇರಿ ನದಿಯಲ್ಲಿಯೇ ರಿವರ್ ರ‌್ಯಾಫ್ಟಿಂಗ್ ನಂತಹ ಸಾಹಸಮಯ ಕ್ರೀಡೆಯನ್ನಾಡಲು ಮುಂದಾಗುತ್ತಾರೆ.

ಹಾಗೆನೋಡಿದರೆ ಕೊಡಗಿನ ಮಳೆ ಇತರೆಡೆಗೆ ಹೋಲಿಸಿದರೆ ಸ್ವಲ್ಪ ಭಿನ್ನ ಎಂದರೆ ತಪ್ಪಾಗಲಾರದು. ಏಕೆಂದರೆ ಒಮ್ಮೆ ಪ್ರಾರಂಭವಾಯಿತೆಂದರೆ ಧೋ... ಎಂದು ಇಲ್ಲವೆ ಜಿಟಿ...ಜಿಟಿ...ಸುರಿಯುತ್ತಲೇ ಇರುತ್ತದೆ. ಈ ಮಳೆಗೆ ಮನೆಯಿಂದ ಹೊರಬರುವುದೇ ಒಂದು ಸಾಹಸ ಅದರಲ್ಲಿಯೂ ಮಳೆಗೆ ಆಟವಾಡುವುದೆಂದರೆ ಸುಲಭದ ಮಾತಲ್ಲ.

ಆದರೆ ಕೊಡಗಿನವರು ಹಾಗಲ್ಲ ಸುರಿಯುವ ಮಳೆಗೆ, ಬೀಸುವ ಗಾಳಿಗೆ, ಕೊರೆಯುವ ಚಳಿಗೆ ಮನೆಯೊಳಗೆ ಕಂಬಳಿ ಹೊದ್ದು ಕೂರುವವರಲ್ಲ. ಏನಾದರೊಂದು ಸಾಹಸಮಯ ಕಾರ್ಯ ಮಾಡುತ್ತಲೇ ಇರುತ್ತಾರೆ. ಈಗ ನೋಡಿ ಕೊಡಗಿನಲ್ಲಿ ಸುರಿಯತ್ತಿರುವ ಮಳೆಗೆ ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ. ಉಕ್ಕಿ ಹರಿಯುವ ನದಿಯಲ್ಲಿಯೇ ಇಲ್ಲಿನವರು ರಿವರ್ ರ‌್ಯಾಫ್ಟಿಂಗ್ ನಂತಹ ಜಲಕ್ರೀಡೆಯನ್ನಾಡಲು ಮುಂದಾಗಿದ್ದಾರೆ.

ಸಾಹಸಿ ಕ್ರೀಡಾಪ್ರೇಮಿಗಳಿಗಾಗಿಯೇ ಕುಶಾಲನಗರ ಸಮೀಪದ ದುಬಾರೆಯ ಆನೆ ಶಿಬಿರದ ಬಳಿ ರಿವರ್ ರ‌್ಯಾಫ್ಟಿಂಗ್ ಪ್ರಾರಂಭವಾಗಿದೆ. ಸುರಿಯುವ ಮಳೆಗೆ ಮೈಯೊಡ್ಡಿ, ಉಕ್ಕಿಹರಿಯುವ ನದಿಯಲ್ಲಿ ತೇಲಾಡುತ್ತಾ... ಏಳುತ್ತಾ....ಬೀಳುತ್ತಾ.... ಸಾಗುವ ರ‌್ಯಾಫ್ಟಿಂಗ್ ನ್ನು ದೂರದಿಂದ ನೋಡುವಾಗಲೇ ಮೈ ರೋಮಾಂಚನಗೊಳ್ಳುತ್ತದೆ.

ಗ್ಯಾಲರಿ:
ಕೊಡಗಿನ ಜಲಕ್ರೀಡೆ ಸಾಹಸದಾಟದ ದೃಶ್ಯ | ಕೊಡಗಿನಲ್ಲಿ ಭರ್ಜರಿ ಮಳೆ |

ಇನ್ನು ತಾವೇ ಕುಳಿತು ಸಾಗುವುದೆಂದರೆ ಅದು ಮರೆಯಲಾರದ ರಸಾನುಭವ. ಕಳೆದ ಕೆಲವು ವರ್ಷಗಳ ಹಿಂದೆ ಮೊದಲ ಬಾರಿಗೆ ಬಿಟ್ಟಂಗಾಲದ ಕೂರ್ಗ್ ಅಡ್ವೆಂಚರ್ ಕ್ಲಬ್ ದುಬಾರೆಯಲ್ಲಿ ರಿವರ್ ರ‌್ಯಾಫ್ಟಿಂಗ್ ಆರಂಭಿಸಿದಾಗ ಇದಕ್ಕೆ ಜಂಗಲ್ ಲಾಡ್ಜ್‌ನ ಸಹಕಾರವೂ ದೊರೆತಿತ್ತು.

ಆರಂಭದಲ್ಲಿ ಪ್ರಚಾರದ ಕೊರತೆ, ಮತ್ತಿತರ ಕಾರಣಗಳಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಅದು ನಡೆಯಲಿಲ್ಲ. ಆದರೆ ನಂತರದ ವರ್ಷಗಳಲ್ಲಿ ಇದು ಜನಪ್ರಿಯವಾಗತೊಡಗಿತು. ಮೊದಲ ವರ್ಷದಲ್ಲಿ ನೂರರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಂದಿ ಇತ್ತೀಚಿಗಿನ ವರ್ಷಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ಸಾಗಿದೆ.

ದುಬಾರೆಯ ಆನೆ ಕ್ಯಾಂಪ್‌ಗೆ ಬರುವವರು ಹಾಗೆಯೇ ರಿವರ್ ರ‌್ಯಾಫ್ಟಿಂಗ್ ನ ಮಜಾವನ್ನು ಕೂಡ ಪಡೆಯಬಹುದಾಗಿದೆ. ಇಲ್ಲಿನ ಆನೆ ಶಿಬಿರದಿಂದ ಪ್ರಾರಂಭವಾಗುವ ರ‌್ಯಾಫ್ಟಿಂಗ್ ಹೊಸಪಟ್ಟಣ, ಗುಡ್ಡೆಹೊಸೂರು, ಕಾವೇರಿ ನಿಸರ್ಗಧಾಮದ ಮೂಲಕ ಸಾಗಿ ಪಾಲಿಟೆಕ್ನಿಕ್ ಬಳಿ ಅಂತ್ಯಗೊಳ್ಳುತ್ತದೆ.

ಅಂದರೆ ಬರೋಬ್ಬರಿ ಹನ್ನೊಂದು ಕಿ.ಮೀ. ದೂರವನ್ನು ಉಕ್ಕಿಹರಿಯುವ ನದಿಯಲ್ಲಿ ಕ್ರಮಿಸುವುದೆಂದರೆ ಹುಡುಗಾಟದ ಮಾತಲ್ಲ ಇದಕ್ಕೆ ಧೈರ್ಯ ಬೇಕು. ರ್‍ಯಾಫ್ಟೊಂದರಲ್ಲಿ ಆರು ಮಂದಿ ಒಮ್ಮೆಗೆ ಕುಳಿತು ರ‌್ಯಾಫ್ಟಿಂಗ್ ಮಾಡಬಹುದಾಗಿದೆ. ರ‌್ಯಾಫ್ಟಿಂಗ್ ಮಾಡುವ ಸಂದರ್ಭ ಜೊತೆಯಲ್ಲಿ ಪರಿಣಿತರು ಇರುವುದರಿಂದ ಭಯಪಡಬೇಕಾಗಿಲ್ಲ.

ರಿವರ್ ರ‌್ಯಾಫ್ಟಿಂಗ್ ಮಾಡುವವರಿಗೆ ಮೊದಲಿಗೆ ಜೀವರಕ್ಷಕ ಜಾಕಿಟ್ ತೊಡಿಸಲಾಗುತ್ತದೆ. ಜೊತೆಗೆ ಹೆಲ್ಮೆಟ್ ನೀಡಲಾಗುತ್ತದೆ. ಇಲ್ಲಿ ಪುರುಷರು, ಮಹಿಳೆಯರು ಎಲ್ಲರೂ ಪಾಲ್ಗೊಳ್ಳಬಹುದಾಗಿದೆ.

ರಿವರ್ ರ‌್ಯಾಫ್ಟಿಂಗ್ ಆರಂಭವಾದ ಬಳಿಕ ಮಳೆಗಾಲದಲ್ಲಿಯೂ ದುಬಾರೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಇದು ಪ್ರವಾಸೋದ್ಯಮದ ಅಭಿವೃದ್ಧಿಗೂ ಸಹಕಾರಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಮಳೆಗಾಲದ ವಿಶೇಷ ಕ್ರೀಡೆಯಾಗಿ ಗಮನ ಸೆಳೆಯುತ್ತಿರುವ "ರಿವರ್ ರ‌್ಯಾಫ್ಟಿಂಗ್" ಮಳೆಗಾಲದ ಅಂತ್ಯದವರೆಗೂ ನಡೆಯುತ್ತದೆ.

ಕೊಡಗಿನ ಮಳೆಗೆ ಮೈಯೊಡ್ಡಿ, ಧುಮ್ಮಿಕ್ಕಿ ಹರಿಯುವ ಕಾವೇರಿ ಮೇಲೆ ಸವಾರಿ ಮಾಡಬೇಕೆನಿಸಿದರೆ ತಪ್ಪದೆ ದುಬಾರೆಗೆ ಬನ್ನಿ... ಹೆಚ್ಚಿನ ಮಾಹಿತಿಗೆ ಮುರುಳಿ: 94492 42477 ಸಂಪರ್ಕಿಸಿ.

<br>ನಿಮ್ಮ ಮೊಬೈಲಿನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ!
ನಿಮ್ಮ ಮೊಬೈಲಿನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X