ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚನ್ನೆಕಲ್, ಚಂಡೆಮನೆ ಎಂಬ ಮಳೆಗಾಲದ ಜಲಪಾತ

By Super Admin
|
Google Oneindia Kannada News

Chandemane falls
ಆಗಸದಲಿ ಆಷಾಢದ ಕಾರ್ಮೋಡಗಳ ಕವಿಯುತ್ತಿದ್ದಂತೆ ಮಲೆನಾಡುಗಳಲ್ಲಿ ಜಲಪಾತಗಳ ಧುಮ್ಮಿಕ್ಕುವಿಕೆಗೆ ಏನೋ ಆವೇಗ. ಕಣ್ಮನ ತಣಿಸಿಕೊಳ್ಳಲು ಜೋಗಕ್ಕೆ ಧಾವಿಸುವ ಜನರಿಗೆ ಪಕ್ಕದಲ್ಲೇ ಇರುವ ಇನ್ನೆರಡು ಮೋಹಕ ಜಲಧಾರೆಗಳ ಬಗ್ಗೆ ಗೊತ್ತೇ ಇರುವುದಿಲ್ಲ. ಜೋಗದಲ್ಲಿ ಮನಕ್ಕೆ ಆನಂದ ಸಿಕ್ಕರೆ, ಚಂಡೆಮನೆ ಮತ್ತು ಚನ್ನೆಕಲ್ ಜಲಪಾತದಲ್ಲಿ ದೇಹಕ್ಕೂ ಭರ್ಜರಿ ನೈಸರ್ಗಿಕ ಮಸಾಜ್.

ಬರಹ : ಆರ್.ಶರ್ಮಾ, ತಲವಾಟ
ಚಿತ್ರ : ಅರವಿಂದ ಗುಂಡೂಮನೆ ಬೆಂಗಳೂರು

ನೀರು ಮತ್ತು ಮನುಷ್ಯನಿಗೆ ಅವಿನಾಭಾವ ಸಂಬಂಧ. ಜುಳು ಜುಳು ಸದ್ದಿನೊಂದಿಗೆ ಸ್ವಚ್ಛವಾದ ಹರಿಯುವ ನೀರು ಕಂಡೊಡನೆ ಮನಸ್ಸು ಪುಳಕಗೊಳ್ಳುವುದು ಸಹಜ. ಕವಿಗಳು ನೀರಿನ ಮೇಲೆ ರಚಿಸಿದ ಕವಿತೆಗಳು ಲೆಕ್ಕವಿಲ್ಲದಷ್ಟು. ಹರಿವ ನದಿ ಜಲಪಾತವಾಗಿ ಬೀಳುವುದನ್ನು ಕಂಡು ರಚಿತವಾದ ಕವನಗಳ ಸಂಖ್ಯೆ ಅಗಣಿತ. ಜಲಪಾತಗಳ ಸೊಬಗು ಅಂತಹದ್ದು. ನೊರೆ ನೊರೆ ಹಾಲಿನಂತೆ ಧರೆಯಿಂದ ತೊರೆಗೆ ಬೀಳುವ ಜಲಪಾತದ ಸೊಬಗನ್ನ ಆಸ್ವಾದಿಸದಿರುವವರ ಸಂಖ್ಯೆ ಕಡಿಮೆ.

ಗುಡ್ಡ ಬೆಟ್ಟಗಳ ನಾಡು ಮಲೆನಾಡಿನಲ್ಲಿ ಜಲಪಾತಗಳ ಸಂಖ್ಯೆ ಅತಿ ಹೆಚ್ಚು. ವರ್ಷಪೂರ್ತಿ ಸೊಬಗನ್ನು ನೀಡುವ ಜಲಪಾತಗಳು ಒಂದೆಡೆಯಾದರೆ ಮಳೆಗಾಲ ಮತ್ತು ನಂತರದ ಮೂರ್ನಾಲ್ಕು ತಿಂಗಳುಗಳ ಕಾಲ ಬೀಳುವ ಜಲಪಾತದ ಸೊಬಗು ಮತ್ತೊಂದೆಡೆ. ಈ ವರ್ಷ ಶರಾವತಿ ಉಕ್ಕಿ ಹರಿದು ಸಮುದ್ರ ಸೇರುವ ತವಕದಲ್ಲಿದ್ದಾಗ ಜೋಗ ಜಲಪಾತದ ವೈಭವ ವರ್ಣಿಸಲಸದಳ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜೋಗದ ಸೊಬಗನ್ನು ಸವಿದ ಜನರು ತಮ್ಮ ನೆನಪಿನಾಳದಲ್ಲಿ ಉಳಿಸಿಕೊಂಡಿದ್ದಾರೆ. ಬಿಳಿ ಹಾಲಿನ ಜಲಪಾತಕ್ಕೆ ತಲೆ ಒಡ್ಡಿ ಕುಳಿತುಕೊಳ್ಳುವ ಆಸೆ ಎಲ್ಲರಿಗೂ. ಆದರೆ ಈ ವರ್ಷದ ಅಬ್ಬರದ ಮಳೆಗಾಲದಿಂದ ಜೋಗ ಜಲಪಾತದ ರುದ್ರ ನರ್ತನ ಪ್ರವಾಸಿಗರನ್ನು ತನ್ನ ಹತ್ತಿರ ಬಿಟ್ಟುಕೊಳ್ಳಲಾರದಷ್ಟು ರಭಸ. ಜಲಪಾತ ನೀರಿನ ರಭಸಕ್ಕೆ ತಲೆಯೊಡ್ಡುವ ಆಸೆಯನ್ನು ಪೂರ್ಣಗೊಳಿಸಲೆಂಬಂತೆ ಜೋಗದಿಂದ ಭಟ್ಕಳ ತೆರೆಳುವ ಮಾರ್ಗದಲ್ಲಿ ಎರಡು ಜಲಪಾತಗಳನ್ನು ಪ್ರಕೃತಿ ನಿರ್ಮಿಸಿದೆ. ಆದರೆ ಮಾಹಿತಿಯ ಕೊರತೆಯಿಂದಾಗಿ ಅಲ್ಲಿಗೆ ತೆರೆಳುವವರ ಸಂಖ್ಯೆ ಕಡಿಮೆ. ಆ ಜಲಪಾತದ ಹೆಸರು ಚನ್ನೆಕಲ್ ಹಾಗೂ ಚಂಡೆಮನೆ ಫಾಲ್ಸ್.

Chandemane falls
ಎಲ್ಲಿವೆ ಈ ಜಲಪಾತಗಳು : ಜೋಗದಿಂದ ಭಟ್ಕಳಕ್ಕೆ ತೆರಳುವ ಮಾರ್ಗದಲ್ಲಿ ರಸ್ತೆಯಂಚಿನಲ್ಲಿಯೇ ಈ ಎರಡು ಮಳೆಗಾಲದ ಜಲಪಾತ ಪವಡಿಸಿದೆ. ಜೋಗದಿಂದ ಕೇವಲ 38 ಕಿಲೋಮೀಟರ್ ದೂರದಲ್ಲಿ ವರ್ಷಪೂರ್ತಿ ನೀರಿರುವ ದಬ್ಬೆ ಜಲಪಾತ ಇದ್ದರೂ ಮುಖ್ಯರಸ್ತೆಯಿಂದ ಜಲಪಾತಕ್ಕೆ ಸಾಗುವಾಗ ಜಿಗಣೆಗಳ ಕಾಟ ಹಾಗೂ ಉತ್ತಮ ರಸ್ತೆಯಿಲ್ಲದ ಕಾರಣ ಪ್ರವಾಸಿಗರು ಅಲ್ಲಿಗೆ ಮಳೆಗಾಲದಲ್ಲಿ ತಲುಪುವುದು ಕಷ್ಟವಾಗುತ್ತದೆ. ಅಲ್ಲಿಂದ 8 ಕಿಲೋಮೀಟರ್ ದೂರದಲ್ಲಿ ಚನ್ನೇಕಲ್ ಹಾಗೂ ಚಂಡೆ ಮನೆ ಫಾಲ್ಸ್ ಕಾಣಸಿಗುತ್ತದೆ.

ರಸ್ತೆಯಂಚಿನಲ್ಲಿ ಬಿಳಿ ಹಾಲಿನಂತೆ ನೊರೆ ನೊರೆಯಾಗಿ ಹರಿಯುವ ಮೂರು ಕಿಲೋಮೀಟರ್ ಅಂತರದಲ್ಲಿರುವ ಈ ಎರಡೂ ಜಲಪಾತಗಳ ವೀಕ್ಷಣೆ ಅತ್ಯಂತ ಸುಲಭ. ರಸ್ತೆಯಂಚಿನಲ್ಲಿಯೇ ಇವುಗಳ ವೀಕ್ಷಣೆ ಸಾಧ್ಯ. ಕಲ್ಲು ಬಂಡೆಗೆ ತಲೆ ಆನಿಸಿ ಗಂಟೆಗಟ್ಟಲೆ ಕುಳಿತುಕೊಳ್ಳಬಹುದು. ಮಳೆಗಾಲದ ಜಲಪಾತವಾದ್ದರಿಂದ ಸಪ್ಟೆಂಬರ್ ಅಂತ್ಯದವರೆಗೆ ಮಾತ್ರ ಆಸ್ವಾದಿಸಬಹುದು. ಜೋಗದಲ್ಲಿನ ಜಲಪಾತ ಕೈಯಲ್ಲಿ ಹಿಡಿಯುವ ಆಸೆಯನ್ನು ಇಲ್ಲಿ ಸುಲಭದಲ್ಲಿ ಈಡೇರಿಸಿಕೊಳ್ಳಬಹುದು. ಬಂಡೆಗಳನ್ನು ಹತ್ತುವ ಆಸೆಯಿದ್ದವರು ಜಲಪಾತದ ಮೂಲಕ್ಕೂ ತೆರಳಬಹುದು. ಪೋಟೊ ತೆಗೆಯಲು ಮಾತ್ರ ಸ್ವಲ್ಪ ಪರದಾಟಬೇಕಾಗುತ್ತದೆ. ಎಷ್ಟೆ ಹರಸಾಹಸ ಮಾಡಿದರೂ ಜಲಪಾತದ ಸಂಪೂರ್ಣ ದೃಶ್ಯವನ್ನು ಸೆರೆಹಿಡಿಯಲು ಕಂದಕ ಅಡ್ಡಿಯುಂಟು ಮಾಡುತ್ತದೆ ಎಂಬ ಒಂದು ಕಾರಣ ಹೊರತುಪಡಿಸಿದರೆ ಇವೆರಡು ಅವಳಿ ಜಲಪಾತ ನೋಡಲು ಜೋಗದಿಂದ 44 ಕಿಲೋಮೀಟರ್ ಬಂದಿರುವ ಸಾರ್ಥಕ ಭಾವದೊಂದಿಗೆ ತೆರಳಬಹುದು.

ಕರ್ನಾಟಕದ ಪ್ರಸಿದ್ಧ ಜಲಪಾತಗಳ ಛಾಯಾಂಕಣ

;
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X