• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವನಸಮುದ್ರದಲ್ಲಿ ಕಾವೇರಿ ಜಲನರ್ತನ...ನೋಡುವ ಬನ್ನಿ

By * ಬಿ.ಎಂ.ಲವಕುಮಾರ್, ಮೈಸೂರು
|

ಕೊಡಗಿನಲ್ಲಿ ಮಳೆಯಾಗುತ್ತಿದೆ ಎನ್ನುವ ಸುದ್ದಿ ಬರುತ್ತಿದ್ದಂತೆಯೇ ಶಿವನಸಮುದ್ರದಲ್ಲಿ ಕಾವೇರಿಯ ಜಲನರ್ತನವನ್ನು ನೋಡುವ ತವಕ ನಿಸರ್ಗ ಪ್ರೇಮಿಗಳಲ್ಲಿ ಮನೆಮಾಡುವುದು ಸಹಜ. ಏಕೆಂದರೆ ಕೊಡಗಿನಲ್ಲಿ ಮಳೆಯಾಗಿ ಕಾವೇರಿ ನದಿ ತುಂಬಿ ಹರಿದು ಶಿವನಸಮುದ್ರದ ಭರಚುಕ್ಕಿ ಮತ್ತು ಗಗನಚುಕ್ಕಿಯಲ್ಲಿ ಭೋರ್ಗರೆದು ಧುಮುಕುವಾಗ ಆ ರುದ್ರರಮಣೀಯ ದೃಶ್ಯವನ್ನು ನೋಡಲು ಎರಡು ಕಣ್ಣುಗಳೇ ಸಾಲದಾಗುತ್ತದೆ.

ಹಾಗೆನೋಡಿದರೆ ಶಿವನಸಮುದ್ರ ಎಂದಾಕ್ಷಣವೇ ಮೈಮನ ರೋಮಾಂಚನಗೊಳ್ಳುತ್ತದೆ. ಇಡೀ ಏಷ್ಯಾದಲ್ಲಿಯೇ ಪ್ರಪ್ರಥಮ ಜಲವಿದ್ಯುತ್ ಯೋಜನೆ ಸ್ಥಾಪನೆಗೊಂಡ ಹೆಗ್ಗಳಿಕೆ ಇಲ್ಲಿಗಿದೆ. ಗಗನಚುಕ್ಕಿ, ಭರಚುಕ್ಕಿಗಳ ಭೋರ್ಗರೆತ... ಅದರಿಂದ ಹಾರಿ ಬರುವ ಮಂಜಿನ ಸಿಂಚನ... ತಣ್ಣನೆ ಬೀಸುವ ತಂಗಾಳಿ... ಕಣ್ಣು ಹಾಯಿಸಿದೆಡೆಯಲ್ಲೆಲ್ಲಾ ಹಸಿರು ಹಚ್ಚಡದ ನಿಸರ್ಗ... ಒಬ್ಬ ಪ್ರವಾಸಿಗನಿಗೆ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ಇದಕ್ಕಿಂತ ಇನ್ನೇನು ಬೇಕು?

ಕಾವೇರಿಯ ನರ್ತನ: ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿ ಉಪ ನದಿಗಳೊಂದಿಗೆ ಸಂಗಮಗೊಂಡು ಕೆಆರ್‌ಎಸ್ ತಲುಪುತ್ತಾಳೆ. ಬಳಿಕ ಟಿ.ನರಸೀಪುರ ಬಳಿ ಕಬಿನಿ ಇತರೆ ಉಪನದಿಗಳು ಸಂಗಮವಾಗುತ್ತವೆ. ಈ ಸಂದರ್ಭ ಕಾವೇರಿ ರೌದ್ರತೆಯನ್ನು ತಾಳುತ್ತಾಳೆ. ಬೆಟ್ಟಗುಡ್ಡ, ಕಾಡುಮೇಡುಗಳನ್ನೆಲ್ಲಾ ಕ್ರಮಿಸುತ್ತಾ ಶಿವನಸಮುದ್ರ ತಲುಪುತ್ತಿದ್ದಂತೆಯೇ ಗಗನದೆತ್ತರದಿಂದ ಧುಮುಕಿ ಗಗನಚುಕ್ಕಿಯಾಗಿ, ಬಳಿಕ ಭರದಿಂದ ಹರಿದು ಭರಚುಕ್ಕಿಯಾಗಿ ಗಮನಸೆಳೆಯುತ್ತಾಳೆ. ನಿಸರ್ಗದ ನಡುವೆ ಹೆಬ್ಬಂಡೆಗಳ ಮೇಲೆ ಹಾಲ್ನೊರೆಯಾಗಿ ಧುಮುಕುತ್ತಾ ವೀಕ್ಷಕರ ಮನಕ್ಕೆ ಲಗ್ಗೆಯಿಡುವ ಈ ಜಲಧಾರೆಗಳು ಶಿವನಸಮುದ್ರದ ಮುಕುಟ ಮಣಿಗಳಾಗಿವೆ.

ಶಿವನಸಮುದ್ರದಲ್ಲಿ ಕಾವೇರಿ ನದಿ ಸುಮಾರು ನಾನೂರ ಹತ್ತೊಂಬತ್ತು ಅಡಿ ಎತ್ತರದಿಂದ ಕಂದಕಕ್ಕೆ ಧುಮುಕುವುದು ನೋಡುಗರಿಗೆ ವಿಸ್ಮಯ ಮೂಡಿಸುತ್ತಿತ್ತಾದರೂ ಅಂದಿನ ಮೈಸೂರು ರಾಜ್ಯದ ಉಪ ಮುಖ್ಯ ಇಂಜಿನಿಯರ್ ಎ.ಜೆ.ಡಿ. ಲಾಬಿನೀರ್ ಅವರಿಗೆ ಇದು ವಿದ್ಯುತ್ ತಯಾರಿಸಲು ಪ್ರೇರಣೆಯಾಯಿತು. ಅವತ್ತು ಶಿವನಸಮುದ್ರದಲ್ಲಿ ಸ್ಥಾಪನೆಯಾದ ವಿದ್ಯುತ್ ಘಟಕ ಇಂದು ಏಷ್ಯಾಖಂಡದಲ್ಲಿಯೇ ಪ್ರಥಮ ವಿದ್ಯುತ್ ಉತ್ಪಾದನಾ ಘಟಕವಾಗಿ ಹೆಸರುವಾಸಿಯಾಗಿದೆ. ಆದರೆ ಈ ವಿದ್ಯುತ್ ಘಟಕ ಸ್ಥಾಪನೆಯ ಹಿಂದಿನ ಕಥೆ ಮಾತ್ರ ರೋಚಕವಾಗಿದೆ.

ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ: ಈ ವಿದ್ಯುತ್ ಘಟಕದ ಸ್ಥಾಪನೆ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ಪಡೆಯಬೇಕಾದರೆ ನಾವು ಸುಮಾರು ನೂರಹದಿನೈದು ವರ್ಷಗಳ ಹಿಂದಿನ ದಿನಗಳಿಗೆ ಹೋಗಬೇಕು. ಅದು 1896-99ರ ದಿನಗಳು. ಅಂದಿನ ಮೈಸೂರು ರಾಜ್ಯದ ಉಪ ಮುಖ್ಯ ಇಂಜಿನಿಯರ್ ಎ.ಜಿ.ಡಿ.ಲಾಬಿನೀರ್ ಶಿವನಸಮುದ್ರಕ್ಕೆ ಭೇಟಿ ನೀಡಿದ್ದರು. ಅವರಿಗೆ ಇಲ್ಲಿ ಧುಮ್ಮಿಕ್ಕಿ ಹರಿಯುವ ಜಲಪಾತಗಳು ಮುದ ನೀಡಿದರೂ, ಕಾವೇರಿ ನದಿ ರೌದ್ರಾವತಾರ ತಾಳಿ ಕಂದಕಕ್ಕೆ ಧುಮುಕುತ್ತಿರುವ ದೃಶ್ಯ ನೋಡಿದ ಅವರಿಗೆ ಮನದಲ್ಲಿಯೇ ಬೆಳಕೊಂದು ಹಾದು ಹೋಗಿತ್ತು.

ಆಗಲೇ ಅವರಿಗೆ ಕಂದಕಕ್ಕೆ ಧುಮುಕುತ್ತಿರುವ ನೀರಿನಿಂದ ವಿದ್ಯುತ್ ತಯಾರಿಸುವ ಆಲೋಚನೆ ತಲೆಯಲ್ಲಿ ಹೊಳೆದಿತ್ತು. ಅಲ್ಲಿಂದ ಮೈಸೂರಿಗೆ ಹೋದವರೇ ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಭೇಟಿಯಾಗಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು. ಇದನ್ನು ಕೇಳಿದ ಒಡೆಯರ್‌ಗೆ ಉತ್ಸಾಹ ಮೂಡಿತ್ತು. ನಮ್ಮ ರಾಜ್ಯದಲ್ಲಿ ನೀರಿನಿಂದ ವಿದ್ಯುತ್ ತಯಾರಿಸಿ ಬೆಳಕು ಪಡೆಯುವುದೆಂದರೆ ಅದಕ್ಕಿಂತ ಸಂತೋಷ ಮತ್ತೇನಿದೆ? ಕೂಡಲೇ ಅವರು ಹಸಿರು ನಿಶಾನೆ ತೋರಿದರು.

ಇದೇ ಸಂದರ್ಭ ಇಂಜಿನಿಯರ್ ಲಾಬಿನೀರ್‌ಗೆ ಅಂದಿನ ದಿವಾನರಾಗಿದ್ದ ಸರ್.ಕೆ.ಶೇಷಾದ್ರಿ ಅಯ್ಯರ್ ಮಾರ್ಗದರ್ಶನ ನೀಡಿ ಏನು ಬೇಕೋ ಅದನ್ನೆಲ್ಲಾ ಒದಗಿಸುವ ಮೂಲಕ ಪ್ರೋತ್ಸಾಹಿಸಿದರು. ವಿದ್ಯುತ್ ಯೋಜನೆ ಸ್ಥಾಪನೆಯ ಕಾಮಗಾರಿ ಆರಂಭಗೊಂಡು ಭರದಿಂದ ಸಾಗತೊಡಗಿತು. ವಿದ್ಯುತ್ ಘಟಕ ಸ್ಥಾಪನೆಗೆ ಅಗತ್ಯವಿರುವಂತಹ ಯಂತ್ರೋಪಕರಣಗಳು ದೂರದ ಬ್ರಿಟನ್ ಹಾಗೂ ಅಮೆರಿಕಾದಿಂದ ತರಿಸಿಕೊಳ್ಳಲಾಯಿತು.

ಬಳಿಕ ಅವುಗಳನ್ನು ಆನೆ, ಕುದುರೆ, ಎತ್ತಿನಬಂಡಿ ಮೂಲಕ ಆಳವಾದ ಕಂದಕಕ್ಕೆ ಇಳಿಜಾರು ಮಾರ್ಗದಲ್ಲಿ ಕೊಂಡೊಯ್ದು ಜೋಡಿಸುವ ಮೂಲಕ ಸುಮಾರು ಏಳುನೂರು ಕಿಲೋವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು ನಿರ್ಮಿಸಲಾಯಿತು. ಇದು ಏಷ್ಯಾದಲ್ಲಿಯೇ ಪ್ರಪ್ರಥಮ ಜಲವಿದ್ಯುತ್ ಘಟಕ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಕೋಲಾರದ ಚಿನ್ನದ ಗಣಿಗೆ ಸಂಪರ್ಕ: ಈ ಜಲವಿದ್ಯುತ್ ಘಟಕಕ್ಕೆ 1902ರ ಜೂನ್ ೩೦ರಂದು ಅಂದಿನ ಮೈಸೂರು ರೆಸಿಡೆಂಟ್ ಜನರಲ್ ಡೋನಾಲ್ಡ್ ರಾಬರ್ಟ್‌ಸನ್‌ರವರು ಚಾಲನೆ ನೀಡಿದರು. ಇಲ್ಲಿಂದ ಕೋಲಾರದ ಚಿನ್ನದ ಗಣಿಗೆ ಸುಮಾರು ೩೫ ಕಿಲೋ ವೋಲ್ಟ್ ಸಾಮರ್ಥ್ಯದ 148 ಕಿ.ಮೀ. ಉದ್ದದ ಮಾರ್ಗಕ್ಕೆ ರಾಬರ್ಟ್‌ಸನ್‌ರವರ ಪತ್ನಿ ಶ್ರೀಮತಿ ರಾಬರ್ಟ್‌ಸನ್‌ರವರು ಚಾಲನೆ ನೀಡಿದರು. ಈ ಸಂಪರ್ಕ ಜಗತ್ತಿನಲ್ಲಿಯೇ ಅತಿ ಉದ್ದದ ಪ್ರಸರಣ ಮಾರ್ಗ ಎಂಬ ಖ್ಯಾತಿ ಪಡೆಯಿತು.

ಆ ನಂತರದ ವರ್ಷಗಳಲ್ಲಿ ಈ ವಿದ್ಯುತ್ ಘಟಕ ಆಧುನೀಕರಣಗೊಂಡು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಾ ಸಾಗಿತು. 1905ರಲ್ಲಿ ಬೆಂಗಳೂರಿಗೂ ಹಾಗೂ 1908ರಲ್ಲಿ ಮೈಸೂರಿಗೂ ಈ ಕೇಂದ್ರದಿಂದ ವಿದ್ಯುತ್ ಸಂಪರ್ಕವನ್ನು ಒದಗಿಸುವ ಮೂಲಕ ಕತ್ತಲೆಯಲ್ಲಿ ಮುಳುಗಿದ್ದ ನಗರಗಳು ಬೆಳಕು ಕಂಡವು. ಮುಂದೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಶಿವನಸಮುದ್ರದಲ್ಲಿ ೧೭.೨ ಮೆಗಾವ್ಯಾಟ್ ಸಾಮರ್ಥ್ಯದ ಎರಡು ವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಯಿತು. ಪ್ರಸ್ತುತ ಇದರ ನಿರ್ವಹಣೆಯನ್ನು ವಿಶ್ವೇಶ್ವರಯ್ಯ ವಿದ್ಯುತ್ ನಿಗಮ ನಿರ್ವಹಿಸುತ್ತಿದೆ. ಇಲ್ಲಿ ಏಟ್ರಿಯಾ ಬೃಂದಾವನ್ ಹಾಗೂ ಆಂಧ್ರಮೂಲದ ಸಂಸ್ಥೆಗಳು ಸೇರಿದಂತೆ ಹತ್ತು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ ಉತ್ತಮ ಮಳೆಯಾದಲ್ಲಿ ಸುಮಾರು ೧೮೦ಮಿಲಿಯನ್ ಯೂನಿಟ್‌ಗಳಷ್ಟು ವಿದ್ಯುತ್‌ನ್ನು ಈ ಘಟಕಗಳಿಂದ ಉತ್ಪಾದಿಸಲು ಸಾಧ್ಯವಾಗಿದೆ.

ರುದ್ರರಮಣೀಯ ಜಲಧಾರೆಗಳು: ಶಿವನಸಮುದ್ರದಲ್ಲಿರುವ ಎರಡು ಜಲಧಾರೆಗಳು ಕೆಲವೇ ಕೆಲವು ಕಿಲೋಮೀಟರ್ ದೂರದ ಅಂತರದಲ್ಲಿದ್ದರೂ ಇವು ಬೇರೆ, ಬೇರೆ ಜಿಲ್ಲೆಗಳಿಗೆ ಸೇರಿವೆ. ಭರಚುಕ್ಕಿ ಚಾಮರಾಜನಗರಕ್ಕೆ ಸೇರಿದರೆ, ಗಗನಚುಕ್ಕಿ ಮಂಡ್ಯ ಜಿಲ್ಲೆಗೆ ಸೇರಿದೆ. ಈ ಜಲಧಾರೆಗಳು ನಯನಮನೋಹರವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಹೀಗೆ ಬರುವ ಪ್ರವಾಸಿಗರು ವಿದ್ಯುತ್ ಉತ್ಪಾದನಾ ಘಟಕವನ್ನು ನೋಡಲು ಮುಗಿ ಬೀಳುತ್ತಾರೆ. ಹೀಗಾಗಿ ಈ ವಿದ್ಯುತ್ ಉತ್ಪಾದನಾ ಘಟಕಗಳನ್ನು ವೀಕ್ಷಿಸಲೆಂದೇ ಟ್ರಾಲಿಗಳನ್ನು ನಿರ್ಮಿಸಲಾಗಿದೆ. ಬಿಟೀಷರು ಶಿವನಸಮುದ್ರ ವಿದ್ಯುತ್ ಉತ್ಪಾದನಾ ಘಟಕವನ್ನು ಬ್ಲಫ್ ಎಂಬ ಹೆಸರಿನಿಂದ ಕರೆಯುತ್ತಿದ್ದರು.

ಶಿವನಸಮುದ್ರಕ್ಕೆ ಬೆಂಗಳೂರಿನಿಂದ ಬರುವುದಾದರೆ ರಾಮನಗರ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ ಮೂಲಕ ಹಾಗೂ ಮೈಸೂರಿನಿಂದ ಬನ್ನೂರು, ಮಳವಳ್ಳಿ ಅಥವಾ ಚಾಮರಾಜನಗರ, ಕೊಳ್ಳೆಗಾಲ ಮೂಲಕವೂ ಬರಬಹುದು. ಶಿವನಸಮುದ್ರಕ್ಕೆ ತೆರಳಿದರೆ ಸುತ್ತಮುತ್ತಲಿರುವ ತಲಕಾಡು, ಸೋಮನಾಥಪುರ ಮುಂತಾದ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ ಬರಬಹುದಾಗಿದೆ. ಇಲ್ಲಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಬಾಡಿಗೆ ಅಥವಾ ಸ್ವಂತ ವಾಹನಗಳಲ್ಲಿ ತೆರಳಬೇಕಾಗುತ್ತದೆ.

ಶಿವನಸಮುದ್ರಕ್ಕೆ ತೆರಳುವ ಪ್ರವಾಸಿಗರು ಇಲ್ಲಿರುವ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಧಾರೆಗಳನ್ನು ದೂರದಿಂದ ನೋಡಿ ಹಿಂತಿರುಗಿದರೆ ಕ್ಷೇಮ . ಅದು ಬಿಟ್ಟು ಜಲಧಾರೆಯ ಸೌಂದರ್ಯಕ್ಕೆ ಮನಸೋತು ಜಲಧಾರೆಯಲ್ಲಿ ಈಜುವ, ಸ್ನಾನ ಮಾಡುವ ಪ್ರಯತ್ನ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇಲ್ಲಿ ಪ್ರಾಣಕಳೆದುಕೊಂಡವರ ದೊಡ್ಡಪಟ್ಟಿಯೇ ಇದೆ.ಶಿವನಸಮುದ್ರದಲ್ಲಿ ಮಾರಮ್ಮನ ದೇವಾಲಯವಿದ್ದು ಇಲ್ಲಿ ಕೋಳಿ, ಕುರಿಗಳನ್ನು ಬಲಿಕೊಡಲಾಗುತ್ತದೆ. ದೂರದಿಂದ ತೆರಳುವ ಪ್ರವಾಸಿಗರಿಗೆ ಅಲ್ಲಿ ಉಳಿದುಕೊಳ್ಳಲು ಯಾವುದೇ ಸೌಲಭ್ಯವಿಲ್ಲ ಹಾಗಾಗಿ ಸಮೀಪದ ಪಟ್ಟಣಗಳಾದ ಕೊಳ್ಳೆಗಾಲ ಅಥವಾ ಮಳವಳ್ಳಿಗೆ ಹೋಗಬೇಕಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shivanasamudra is well known for waterfalls Gaganachukki and Bharachukki But, Shivanasamudra is situated on the banks of the river Kaveri and is also has the first Hydro-electric Power station in Asia, which was set up in the year 1902 and still functional. Here is the brief history of power generation station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more