ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಲ್ಲಾಪುರದಿ ‘ಶಿರ್ಲೆ’ಗಳು ಸಂಗೀತವಾ ಹಾಡಿವೆ!

By * ಸತೀಶ್ ಭಟ್, ಮಾಗೋಡು, ಯಲ್ಲಾಪುರ
|
Google Oneindia Kannada News

Shirle Falls, Yellapur
ಮತ್ತೆ ಮುಂಗಾರು ಅಬ್ಬರಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳಲ್ಲಿ ಹೊಸ ಸಂಚಾರ. ಒಂದೆಡೆ,ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದ ಜಲಪಾತಗಳತ್ತ ನಿಸರ್ಗ ಪ್ರಿಯರು ಭೇಟಿ ನೀಡಿ ಮುದಗೊಂಡು ರಮ್ಯತೆಯಲ್ಲಿ ಕಳೆದುಹೋಗುತ್ತಿದ್ದಾರೆ. ಇಂಥವುಗಳ ನಡುವೆ,ಅಜ್ಞಾತವಾಗಿದ್ದುಕೊಂಡೇ ಧುಮ್ಮಿಕ್ಕುವ ಜಲಪಾತಗಳಿಗೇನೂ ಕೊರತೆಯಿಲ್ಲ.ಅಂಥವುಗಳಲ್ಲಿ ವರ್ಷಾಂತ್ಯದವರೆಗೂ ನಿರಂತರ ಹರಿವು ಹೊಂದಿ ಧುಮುಕುವ ಜಲಪಾತ ಯಲ್ಲಾಪುರದ ಶಿರ್ಲೆ.

ಯಲ್ಲಾಪುರದಿಂದ ಕಾರವಾರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತ ಸುಮಾರು 20 ಕಿ.ಮೀ ಕ್ರಮಿಸಿದರೆ ಸಿಗುವದು ಶಿರಲೆ ಎಂಬ ನಾಲ್ಕಾರು ಮನೆಗಳಿರುವ ಪುಟ್ಟ ಗ್ರಾಮ.ಹೆದ್ದಾರಿಯ ಪಕ್ಕದಿಂದಲೇ ಇಳಿದು ಸಾಗಬೇಕು. ಚಿಕ್ಕದೊಂದು ಸೂಚನಾ ಫಲಕವನ್ನು ಬಿಟ್ಟರೆ, ಅಲ್ಲೊಂದು ಊರಿದೆಯೆಂದು ಸಾರಲು ಯಾವ ಕುರುಹೂ ಇಲ್ಲ. ಭೂರಮೆಯ ಹಸಿರು ಸೆರಗಿನಡಿ ಬಚ್ಚಿಟ್ಟುಕೊಂಡಿದೆಯಾ ಎಂಬ ಭ್ರಮೆ ಮೂಡಿಸುವಂತಿದೆ ಶಿರ್ಲೆ. ಇಲ್ಲಿಯ ತೋಟವೊಂದರ ಅಡಿಕೆ,ತೆಂಗು-ಕಂಗುಗಳ ನಡುವೆ 100 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ ಹಾಲ್ನೊರೆಯಂಥಹ ನೀರು.

ಹಾಗೆ ನೋಡಿದರೆ, ಈ ಜಲಪಾತ ಯಾವ ನದಿಯ ಕೂಸೂ ಅಲ್ಲ.ಎಲ್ಲೋ ಬೆಟ್ಟ-ಗುಡ್ಡಗಳ ಮೇಲಿಂದ ಹುಟ್ಟುವ ಒರತೆಯೇ ಇದರ ಮೂಲ.ಬೇಸಿಗೆಯಲ್ಲಿಯೂ ಇಂಗದೆ ಹರಿಯುತ್ತಲೇ ಇರುತ್ತದೆ. ಮಳೆಗಾಲ ಬಂತೆಂದರೆ ಮತ್ತೆ ಅಷ್ಟೇ ಗತ್ತಿನಿಂದ ನಾನ್ಯಾರಿಗೆ ಕಮ್ಮಿ? ಎನ್ನುತ್ತದೆ! ನೀರು ಬೀಳುವಲ್ಲಿಯೇ ಹೋಗಿ ತಲೆಯೊಡ್ಡಬಹುದು. ಅಂಥ ಅಪಾಯಕಾರಿ ಗುಂಡಿಗಳಿಲ್ಲ.ವಾರಾಂತ್ಯದಲ್ಲಿ ಕುಟುಂಬದೊಂದಿಗಿನ ಪ್ರವಾಸಕ್ಕೆ ಹೇಳಿದ ತಾಣ. ಇಷ್ಟೆಲ್ಲಾ ಇದ್ದರೂ, ಹಿಂದಿನ ಬೆಂಚಿನ ಮಕ್ಕಳು ನಾವು ಎಂಬಂತೆ, ಜಿಲ್ಲೆಯ ಜಲಪಾತಗಳ ಸಾಲಿನಿಂದ ಹಿಂದಕ್ಕೆ ಅಜ್ಞಾತವಾಗಿಯೇ ಉಳಿದುಕೊಳ್ಳುತ್ತದೆ.

ಯಲ್ಲಾಪುರ ನಗರದಿಂದ 19 ಕಿ.ಮಿ. ಇಡಗುಂದಿಯಿಂದ ನಾಲ್ಕು ಕಿ.ಮೀ ಸಾಗಿದ ನಂತರ ಎಡ ಭಾಗದ ಮರವೊಂದಕ್ಕೆ ಇರುವ ನಾಮ ಫಲಕವೇ ದೊಡ್ಡ ಗುರುತು. ಅಂದ ಹಾಗೆ, ಹೆದ್ದಾರಿಯಿಂದ ಹೊರಳಿ ಶಿರ್ಲೆಯ ಹಾದಿ ಹಿಡಿದ ನಂತರದ 2 ಕಿ.ಮೀ ಪ್ರಯಾಣ ಸ್ವಲ್ಪ ತ್ರಾಸದಾಯಕ. ಕೆಮ್ಮಣ್ಣಿನ ಅತೀ ಇಳಿಜಾರು ರಸ್ತೆ.ನಡೆದು ಸಾಗುವದೇ ಉತ್ತಮ.ದ್ವಿಚಕ್ರ ವಾಹನದಲ್ಲಿ ಸರ್ಕಸ್ ಮಾಡುವದಂತೂ ಬೇಡವೇ ಬೇಡ.

English summary
Karnataka Monsoon Tourism : Shirle Falls is around 20kms from Yellapur Karwar highway. The natural falls near Shirle village is about 100 ft in height. It is one the beautiful waterfalls in Uttar Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X