• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂಗಾರಿನಲ್ಲಿ ನೋಡ ಬನ್ನಿ ಅಬ್ಬಿ ಜಲಪಾತ...

By * ಬಿಎಂ ಲವಕುಮಾರ್, ಮೈಸೂರು
|

ಕೊಡಗಿನಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆಯೇ ನಿಸರ್ಗ ಹಸಿರ ಹೊದಿಕೆಯನ್ನೊದ್ದು ಥಳಥಳಿಸುತ್ತಿದ್ದರೆ ಬೆಟ್ಟದ ಮೇಲಿನ ಗುಡ್ಡದ ಕೆಳಗಿನ ಹೆಬ್ಬಂಡೆಗಳ ಮೇಲೆ ಜಲಪಾತಗಳು ಮೈಕೈ ತುಂಬಿಕೊಂಡ ಬೆಡಗಿಯರಂತೆ ವಯ್ಯಾರದಿಂದ ಬಳುಕುತ್ತವೆ.

ಕೊಡಗಿನಲ್ಲಿ ಹಲವಾರು ರುದ್ರರಮಣೀಯ ಜಲಪಾತಗಳಿವೆ. ಇವುಗಳ ಪೈಕಿ ಅಬ್ಬಿ ಜಲಪಾತ ಒಂದಾಗಿದ್ದು, ಮಡಿಕೇರಿಗೆ ಸಮೀಪವಿರುವುದರಿಂದ ಪ್ರಮುಖ ಪ್ರವಾಸಿ ತಾಣವಾಗಿ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಸಾಮಾನ್ಯವಾಗಿ ಕೊಡಗಿನಲ್ಲಿ ಮಳೆ ಬೀಳುತ್ತಿದ್ದಂತೆಯೇ ಬೇಸಿಗೆಯ ಬಿಸಿಲಿಗೆ ಸೊರಗಿ ಹೆಬ್ಬಂಡೆಯ ಮಧ್ಯೆ ಅದೃಶ್ಯವಾಗಿ ಹೋದ ಎಲ್ಲಾ ಜಲಧಾರೆಗಳು ಮರುಜೀವ ಪಡೆಯುತ್ತವೆ. ಈ ಸಂದರ್ಭ ನೋಡಿದರೆ ಹೆಬ್ಬಂಡೆಯ ಮೇಲೆ ಬೆಳ್ಳಿ ಕರಗಿ ಸುರಿಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ.

ಹಾಗೆನೋಡಿದರೆ ಮಡಿಕೇರಿಯಲ್ಲಿ ಮಳೆ ಸುರಿದರೆ ಅಬ್ಬಿ ಜಲಪಾತ ಭೋರ್ಗರೆಯುತ್ತದೆ. ಅದಕ್ಕೆ ಕಾರಣವೂ ಇದೆ ಮಡಿಕೇರಿಯಲ್ಲಿ ಬಿದ್ದ ಮಳೆನೀರೆಲ್ಲಾ ಒಟ್ಟಾಗಿ ಹರಿದು ಈ ಜಲಪಾತವನ್ನು ಸೇರುತ್ತದೆ.

ಮೋಹಕ ಜಲಪಾತ: ಮಡಿಕೇರಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಅಬ್ಬಿ ಜಲಪಾತ ನಿಜಕ್ಕೂ ಒಂದು ಮೋಹಕ ಜಲಪಾತವೇ... ಈ ಜಲಪಾತವನ್ನು ನೋಡಲು ತೆರಳುವವರಿಗೆ ಮಡಿಕೇರಿಯಿಂದ ಜಲಪಾತದವರೆಗೆ ಯಾವುದೇ ಬಸ್ ಸೌಕರ್ಯವಿಲ್ಲ. ಹಾಗಾಗಿ ಮಡಿಕೇರಿಯಿಂದ ಬಾಡಿಗೆಗೆ ಆಟೋ, ಜೀಪು ಅಥವಾ ಸ್ವಂತ ವಾಹನಗಳಲ್ಲಿ ತೆರಳಬಹುದು. ನಡೆದೇ ಹೋಗುವುದಾದರೆ ಅದರ ಮಜಾವೇ ಬೇರೆ...

ಅಂಕುಡೊಂಕಾದ ರಸ್ತೆಯಲ್ಲಿ ಕಾಡು, ಕಾಫಿ, ಏಲಕ್ಕಿ ತೋಟದ ನಡುವೆ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿದ್ದರೆ ದಾರಿ ಸಾಗುವುದೇ ಗೊತ್ತಾಗುವುದಿಲ್ಲ. ಇನ್ನೇನು ಕೆಲವೇ ಕಿ.ಮೀ. ಅಂತರಗಳಲ್ಲಿ ಜಲಪಾತ ಇದೆ ಎನ್ನುವುದು ಭೋರ್ಗರೆಯುವ ಸದ್ದಿಗೆ ಗೊತ್ತಾಗಿ ಬಿಡುತ್ತದೆ. ಗುಡ್ಡದಲ್ಲಿ ತೋಟದ ನಡುವೆ ರಭಸದಿಂದ ಭೋರ್ಗರೆಯುತ್ತಾ ಹರಿಯುವ ನದಿ ನಮಗೆ ರಸ್ತೆಯಿಂದಲೇ ಕಾಣಸಿಗುತ್ತದೆ.

ಅಲ್ಲಿಂದ ಮುಂದೆ ಇಳಿಜಾರು ರಸ್ತೆಯಲ್ಲಿ ಸಾಗಿದರೆ ನಮಗೆ ಸಮತಟ್ಟಾದ ವಾಹನ ನಿಲುಗಡೆಯ ಸ್ಥಳ ಕಾಣಸಿಗುತ್ತದೆ. ಅಲ್ಲಿಂದ ಎಡಕ್ಕೆ ಕಾಫಿ ತೋಟದ ಮಧ್ಯೆ ನಡೆಯುತ್ತಾ ಹೋದರೆ ಜಲಪಾತದ ಭೋರ್ಗರೆತ ಕಿವಿಗೆ ಬಡಿಯುತ್ತದೆ. ಆ ನಂತರ ಕೆಳಕ್ಕೆ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದರೆ ಅಬ್ಬಿ ಜಲಪಾತದ ಸನಿಹಕ್ಕೆ ಹೋಗಬಹುದು.

ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲಿಯೂ ಮಳೆಗಾಲದಲ್ಲಿ ಇದರ ರೌದ್ರಾವತಾರವನ್ನು ಹತ್ತಿರದಿಂದ ನೋಡಿದರೆ ಆ ಸುಂದರ ಕ್ಷಣಗಳನ್ನು ಖಂಡಿತಾ ಮರೆಯಲಾರರು. ಜಲಪಾತದ ಸೊಬಗನ್ನು ಹತ್ತಿರದಿಂದ ಸವಿಯಲೆಂದೇ ಇತ್ತೀಚೆಗೆ ಅಡ್ಡಲಾಗಿ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ನಿಂತು ಜಲಪಾತದ ಸೌಂದರ್ಯವನ್ನು ಮನದಣಿಯೆ ಸವಿಯಬಹುದು.

ಜೆಸ್ಸಿ ಫಾಲ್ಸ್ : ಈ ಜಲಪಾತ ನೆರವಂಡ ನಾಣಯ್ಯ ಎಂಬುವರ ಕಾಫಿ, ಏಲಕ್ಕಿ ತೋಟಗಳ ನಡುವೆ ನಿರ್ಮಿತಗೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಗೆ ಭೇಟಿ ನೀಡಿದ ಬ್ರಿಟೀಷರು ಇದರ ಸೌಂದರ್ಯವನ್ನು ನೋಡಿ ಆನಂದಪಟ್ಟು ಜೆಸ್ಸಿ ಫಾಲ್ಸ್ ಎಂಬ ಹೆಸರನ್ನಿಟ್ಟು ಕರೆದಿದ್ದರು. ಆದರೆ ಸ್ಥಳೀಯರು ಮಾತ್ರ ಅಂದಿನಿಂದ ಇಂದಿನವರೆಗೂ ಅಬ್ಬಿಫಾಲ್ಸ್ ಎಂದೇ ಹೇಳುತ್ತಾರೆ.

ಮಳೆಗಾಲದಲ್ಲಿ ಕುಂಬದ್ರೋಣ ಮಳೆ ಸುರಿದು ನದಿ ಉಕ್ಕಿಹರಿದಾಗ ಜಲಪಾತ ರೌದ್ರಾವತಾರ ತಾಳುತ್ತದೆ. ಈ ಸಂದರ್ಭ ಅತ್ತ ತೆರಳುವುದು ಅಪಾಯಕಾರಿ. ಅಲ್ಲದೆ ರಕ್ತ ಹೀರುವ ಜಿಗಣೆಗಳು ಜಲಪಾತವನ್ನು ನೋಡುವ ಪ್ರವಾಸಿಗರ ಉತ್ಸಾಹಕ್ಕೆ ತಣ್ಣೀರು ಎರಚಿಬಿಡುತ್ತವೆ. ಹಾಗಾಗಿ ಮುಂಗಾರು ಆರಂಭ ಹಾಗೂ ಸೆಪ್ಟಂಬರ್ ನಂತರದ ದಿನಗಳು ಜಲಪಾತ ವೀಕ್ಷಣೆಗೆ ಅನುಕೂಲ.

ಅನಾಹುತಕಾರಿ ಜಲಪಾತ: ಅಬ್ಬಿ ಜಲಪಾತ ನೋಡಲು ಎಷ್ಟೊಂದು ಸುಂದರವಾಗಿದೆಯೋ ಅಷ್ಟೇ ಅನಾಹುತಕಾರಿಯೂ ಆಗಿದೆ ಎಂಬುವುದು ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಬೇಸಿಗೆಯ ದಿನಗಳಲ್ಲಿ ಜಲಪಾತದಲ್ಲಿ ನೀರಿನ ಭೋರ್ಗರೆತ ಕಡಿಮೆಯಾದಾಗ ಹೆಚ್ಚಿನ ಪ್ರವಾಸಿಗರು ಜಲಧಾರೆಯಾಗಿ ಧುಮುಕಿ ಬಳಿಕ ನದಿಯಾಗಿ ಹರಿದು ಹೋಗುವ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಜಲಪಾತದಿಂದ ಸ್ವಲ್ಪ ದೂರದಲ್ಲಿ ತೂಗುಸೇತುವೆಯ ಕೆಳಭಾಗದಲ್ಲಿ ಸ್ನಾನ ಮಾಡಿದರೆ ಅಥವಾ ಹರಿಯುವ ನೀರಿನಲ್ಲಿ ಆಟವಾಡಿದರೆ ತೊಂದರೆಯಿಲ್ಲ.

ಆದರೆ ಕೆಲವರು ಜಲಪಾತದ ಬಳಿ ಹಾಕಲಾಗಿರುವ ಎಚ್ಚರಿಕೆಯ ನಾಮಫಲಕವನ್ನೂ ಗಮನಿಸದೆ ನೇರವಾಗಿ ಜಲಪಾತದ ತಳಭಾಗಕ್ಕೆ ತೆರಳಿ ಧುಮುಕುವ ಜಲಧಾರೆಗೆ ತಲೆಕೊಟ್ಟು ಸ್ನಾನಮಾಡುವ ಸಾಹಸ ಮಾಡುತ್ತಾರೆ. ಇದು ಎಷ್ಟೊಂದು ಅಪಾಯಕಾರಿ ಎಂಬುವುದಕ್ಕೆ ಇದುವರೆಗೆ ಇಲ್ಲಿನ ಸುಳಿಗೆ ಸಿಲುಕಿ ಸಾವನ್ನಪ್ಪಿರುವ ಸುಮಾರು ೫೨ ಮಂದಿ ಸಾಕ್ಷಿಯಾಗುತ್ತಾರೆ. ಇನ್ನು ಕೊಡಗಿಗೆ ಬರುವ ದೂರದ ಪ್ರವಾಸಿಗರಿಗೆ ಇಲ್ಲಿ ಹರಿಯವ ನೀರೆಲ್ಲಾ ಕಾವೇರಿ ನೀರು ಎಂಬ ನಂಬಿಕೆ.

ಹಾಗಾಗಿ ಅಬ್ಬಿಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರು ಕೂಡ ಜಲಪಾತದಲ್ಲಿ ಸ್ನಾನ ಮಾಡುವುದು ಪವಿತ್ರ ಎಂದುಕೊಳ್ಳುತ್ತಾರೆ. ಅಷ್ಟೇ ಅಲ್ಲ ಈ ನೀರನ್ನು ಕೆಲವರು ಪವಿತ್ರ ತೀರ್ಥ ಎಂದು ತಮ್ಮೊಂದಿಗೆ ಕೊಂಡೊಯ್ಯವ ಪ್ರಯತ್ನವನ್ನು ಮಾಡುತ್ತಾರೆ. ದಯವಿಟ್ಟು ಇಲ್ಲಿ ಪ್ರವಾಸಿಗರು ಮನಿಸಬೇಕಾಗಿರುವುದೇನೆಂದರೆ ಮಡಿಕೇರಿ ನಗರದ ಸಮಸ್ತ ಕೊಳಚೆ ನೀರು ಹರಿದು ಬಂದು ಇದೇ ಜಲಪಾತದಲ್ಲಿ ಧುಮುಕುತ್ತದೆ.

ಈ ಕೊಳಚೆ ನೀರಿಗೆ ಹಲವು ನದಿ ತೊರೆಗಳು ಸೇರುವುದರಿಂದ ಜಲಪಾತವನ್ನು ತಲುಪುವ ವೇಳೆಗೆ ನೀರು ಶುದ್ಧವಾಗಬಹುದು ಆದರೂ ಎಚ್ಚರವಾಗಿರುವುದು ಒಳಿತು. ಇನ್ನಾದರೂ ಪ್ರವಾಸಿಗರು ಅಬ್ಬಿಜಲಪಾತದ ಸೌಂದರ್ಯವನ್ನು ದೂರದಿಂದಲೇ ನೋಡಿ ಹಿಂತಿರುಗಿದರೆ ಅಷ್ಟೇ ಸಾಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Abbey falls. This waterfalls also known as the Abbi falls, is amidst of lush spread of coffee plantation and is located at about 10kms from the town of Madikeri, Western Ghats. The waters join the river Cauvery, proves to be the trekkers delight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more