• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರವಾಸ ಕಥನ : ಮುಕ್ತಿಗೆ ಮೂರೇ ಗೇಣು

By * ಸೀತಾ ಕೇಶವ, ಸಿಡ್ನಿ
|

ಈ ಹಿಂದೆ ನಮ್ಮ ಯಾತ್ರೆಗಳ ಪ್ರವಾಸದ ಅನುಭವವನ್ನು ಓದುಗರಲ್ಲಿ ಹಂಚಿಕೊಂಡಿದ್ದೆ. ಇತ್ತೀಚೆಗೆ "ಮುಕ್ತಿನಾಥನ" ದರ್ಶನ ಪೂರೈಸಿಕೊಂಡು ಬಂದದ್ದನ್ನು ನಿಮ್ಮೊಡನೆ ತಿಳಿಯಬಯಸಲು ಇಚ್ಛಿಸುತ್ತೇನೆ.

ಕೈಲಾಸ ಮಾನಸ ಸರೋವರದ ಬದಿಯಲ್ಲಿಯೇ ಅಂದರೆ, ಉತ್ತರಭಾಗದ ಅನ್ನಪೂರ್ಣ ಪರ್ವತ ಶ್ರೇಣಿಯಲ್ಲಿರುವ ಮುಕ್ತಿನಾಥ (ಮುಕ್ತಿನಾರಾಯಣ) ಎಂದು ಕರೆಸಿಕೊಳ್ಳುವ ಪುಣ್ಯಕ್ಷೇತ್ರಕ್ಕೂ ಹೋಗಿ ಬರಬೇಕೆಂಬುವ ಹಂಬಲ ದಿನೇದಿನೇ ಹೆಚ್ಚಾಗುತ್ತಲೇ ಇತ್ತು. ಅದಕ್ಕೆ ಪೂರಕವಾಗಿ, ಕೇಳುವವರೆಲ್ಲರೂ, ಮುಕ್ತಿನಾಥಕ್ಕೆ ಹೋಗಲಿಲ್ಲವಾ? ಕೈಲಾಸ ಪರ್ವತಕ್ಕೆ ಹೋದಮೇಲೆ ಇದನ್ನೂ ಮುಗಿಸಿಯೇ ಬರಬಹುದಿತ್ತಲ್ಲವೇ? ಎನ್ನುವ ಮಾತುಗಳೂ ಕೇಳಿ ಬರುತ್ತಲೇ ಇತ್ತು. ಒಮ್ಮೆಲೆ ಈ ವಿಚಾರವಾಗಿ ತೀವ್ರವಾಗಿ ಯೋಚಿಸಿ, ಮುಕ್ತಿನಾಥನ ದರ್ಶನ ಮಾಡುವ ಸಂಕಲ್ಪ ಮಾಡಿದ್ದಾಯಿತು.

ನಮ್ಮ ಹಳೆಯ ಪರಿಚಯವಿರುವ, ಮುಖ್ಯಸ್ಥ ವಾಂಗುಚು ಸಂಪರ್ಕಿಸಿದಾಗ ಅವರು ಮಾರ್ಚಿ ತಿಂಗಳಿನಿಂದ ಮೇವರೆಗೆ ಮುಕ್ತಿನಾಥ ಪರ್ವತ ಶ್ರೇಣಿಯಲ್ಲಿ ಒಳ್ಳೆಯ ಹವಾಮಾನವಿರುವುದೆಂದು ತಿಳಿಸಿದರು. ತಡವೇಕೆ ಮಾಡಬೇಕೆಂದು ನಾನು ಮತ್ತು ನನ್ನ ಯಜಮಾನರು ಮಾರ್ಚಿ 26ರಂದು ಹೊರಟು ಏಪ್ರಿಲ್ 3 ವಾಪಸ್ಸು ಬರುವಹಾಗೆ ನಿರ್ಧರಿಸಿಕೊಂಡೆವು. ಮುಕ್ತಿನಾಥ, ಲುಂಬಿನಿ, ದೇವಘಟ್, ಜನಕಪುರಿ, ನೋಡಬೇಕು, ಹಾಗೂ ಮುಕ್ತಿನಾಥ್ ನಿಂದ ಜಾಂಸಂ ಅಥವಾ ಜಾಂಸಂನಿಂದ ಮುಕ್ತಿನಾಥ್ ಒಂದು ಮಾರ್ಗವಾದರೂ ನಡಿಗೆಗೆ (trek) ಮೀಸಲಾಗಿಡಿಸಬೇಕೆಂದು ಪ್ಲ್ಯಾನ್ ಹಾಕಿಕೊಂಡೆವು. ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿ ಅವರ ಮಗ ಷೆರಿಂಗ್ ಶರ್ಪನ ಜೊತೆಮಾಡಿ, "ಕಿಯ" ಎ.ಸಿ. ಕಾರು, ಡ್ರೈವರ್ ರಾಮಕೃಷ್ಣ ಜೊತೆಮಾಡಿ ಕಳುಹಿಸಿಕೊಟ್ಟರು.

ಏಪ್ರಿಲ್ 27ರಂದು ಕಠ್ಮಂಡು ತಲುಪಿ ಅಲ್ಲಿಂದ ಮಧ್ಯಾಹ್ನ ಸುಮಾರು 2 ಗಂಟೆಗೆ 200 ಕಿ.ಮಿ ದೂರವಿರುವ, ಬರೀ ಬೆಟ್ಟ ಗುಡ್ಡಗಳು ಮತ್ತು ಸರೋವರಕ್ಕೆಂದೇ ಹೆಸರು ವಾಸಿಯಾಗಿರುವ ಹಾಗೂ ನೇಪಾಳದ ಎರಡನೆಯ ದೊಡ್ಡ ಪಟ್ಟಣ ವಾಗಿರುವ ಪೊಖ್ರಗೆ ಹೊರಟೆವು. ಮಾರ್ಗವೂ ಹೆಚ್ಚು ಕಡಿಮೆ ಎಲ್ಲಾ ಬರೀ ಸಣ್ಣ ಸಣ್ಣ ತಿರುವಿನಿಂದಲೇ ಕೂಡಿದೆ. ಆದರೆ ನಮ್ಮ ತಿರುಪತಿಯ "ಹೇರ್ಪಿನ್ ಕರ್ವ್" ತರಹವಿಲ್ಲ! ಸುಮಾರು ರಾತ್ರಿ 8 ಗಂಟೆಗೆ ಪೊಖ್ರ ತಲುಪಿದೆವು.

28ರಂದು ಬೆಳಿಗ್ಗೆ ಪೊಖ್ರದಿಂದ ಹೊರಡುವ ಸ್ಥಳೀಯ ವಿಮಾನದಲ್ಲಿ ಸುಮಾರು 22 ಜನ ಕೂತುಕೊಳ್ಳುವ, 30 ನಿಮಿಷ ಪ್ರಯಾಣದ ಊರು ಜಾಂಸಂಗೆ ಬಂದೆವು. ಇಲ್ಲಿಂದ ಮುಂದಕ್ಕೆ ಮುಕ್ತಿನಾಥನೆಡೆಗೆ ಪ್ರಯಾಣ ಆರಂಭ.

ಮುಕ್ತಿನಾಥನ ದೇವಸ್ಥಾನವು ಅನ್ನಪೂರ್ಣ ಪರ್ವತ ಶ್ರೇಣಿಯ 3,800 ಮೀಟರುಗಳ ಎತ್ತರದಲ್ಲಿದೆ. ಭಾರತ ಮತ್ತು ನೇಪಾಳ್ ಗೆ ಅಂಟಿಕೊಂಡು, ನೇಪಾಳಕ್ಕೆ ಅಂಚಿನಲ್ಲಿ ಎನ್ನಬಹುದು. ಪಗೋಡಾ ಮಾದರಿಯ ಮುಕ್ತಿನಾಥ ದೇವಸ್ಥಾನ, ಹಿಂದೂ ಮತ್ತು ಬುದ್ಧ ಜನಾಂಗದವರಿಗೆ, ನಂಬಿಕೆ, ಮುಕ್ತಿ, ಮೋಕ್ಷ ಸಿಕ್ಕುವುದಕ್ಕೆ ಪವಿತ್ರ ಸ್ಥಳ. ಹಿಂದೂಗಳು, ವಿಷ್ಣುವೆಂದೂ, ಬುದ್ಧರು "ಅವಲೋಕಿಕೇಶ್ವರ" ವೆಂದೂ ಪೂಜಿಸುವರು. ಮುಕ್ತಿನಾಥ ಅನ್ನಪೂರ್ಣ (conservation area)ದಲ್ಲಿರುವುದರಿಂದ ಜಾಂಸಂ ಚೆಕ್ ಪೋಸ್ಟ್ ನಲ್ಲಿ ನಮ್ಮ ಪಾಸ್ ಪೋರ್ಟ್ ತೋರಿಸಿ ಹೊರಡಬೇಕು. ಇಲ್ಲಿಂದ ಸುಮಾರು 1 ಕಿ.ಮಿ ನಡೆದಮೇಲೆ, ಮುಕ್ತಿನಾಥ ಹೋಗುವ ಜೀಪಿನ ನಿಲ್ಧಾಣಕ್ಕೆ ಬಂದು, ಜೀಪಿನಲ್ಲಿ ಒಂದುವರೆ ಗಂಟೆ ಕಾಲದಲ್ಲಿ, 22 ಕಿ.ಮೀ ದೂರದಲ್ಲಿರುವ ಮುಕ್ತಿನಾಥಕ್ಕೆ ತಲುಪಿದೆವು.

ಕೈಕಾಲು ಮನಸ್ಸು ಗಟ್ಟಿ ಇರುವವರು ಮುಕ್ತಿನಾಥವರೆಗೂ ನಡೆದೇ ಹೋಗುವರು. ಮಾರ್ಗದಲ್ಲಿ, ಕಾಲಿಗಂಡಕಿ ನದಿ, ಕಗ್ ಬೀನಿ ಮತ್ತು Jharkot ಎಂಬ ಊರುಗಳು ಸಿಕ್ಕುತ್ತವೆ. ನಾವು ಅದೇ ದಿನ ನಮ್ಮ ಬ್ಯಾಕ್ ಪಾಕ್ ಬ್ಯಾಗ್ ನ ಹೋಟೆಲಿನಲ್ಲಿಟ್ಟು, ಸುಮಾರು 3 ಕಿ.ಮೀ ಮಾರ್ಗದ ಮುಕ್ತಿನಾಥ ದರ್ಶನಕ್ಕೆ ಹೊರಟೆವು. ಇಲ್ಲಿ ಕುದುರೆ ಮೇಲೆ ಜನ ಕೂತು ಬರುವುದು ಕಡಿಮೆ. ಮೋಟಾರ್ ಬೈಕ್ ನಲ್ಲಿ ಸ್ವಲ್ಪ ದೂರ ಬಂದು, ನಂತರ ಮೆಟ್ಟಲುಗಳು ಹತ್ತಿಕೊಂಡು ದೇವಸ್ಥಾನಕ್ಕೆ ಬರುವ ವ್ಯವಸ್ಥೆ ಇದೆ. ಆದರೂ 3800 ಮೀಟರು ಎತ್ತರದ ಹವಾಗುಣ, ಗಾಳಿ ಎದುರಿಸಲೇಬೇಕು.

ದೇವಸ್ಥಾನಕ್ಕೆ ಹತ್ತಿ ಬರುವಾಗ ಎಡಭಾಗದಲ್ಲಿ, ಕುಂಡ, ಗೋಂಪಾದಲ್ಲಿ, ಶಿವ ಪಾರ್ವತಿಯರ ಮಂದಿರದ ನಾಲ್ಕು ಭಾಗದಲ್ಲೂ, ಎಡಭಾಗದಲ್ಲಿ ವಿಷ್ಣು, ಹಿಂದುಗಡೆ ರಾಮ, ಬಲಭಾಗದಲ್ಲಿ ಕೃಷ್ಣ ಮತ್ತು ಗಣೇಶ ಹೀಗೆ ಎಲ್ಲ ಮೂರ್ತಿಗಳನ್ನೂ ನೋಡಬಹುದು. ದೇವಸ್ಥಾನದ ಕಟ್ಟಡವನ್ನು 1815ರಲ್ಲಿ ಹಿಂದೂ ಮತ್ತು ಬುದ್ಧ ಜನಾಂಗದವರಿಗೆಂದು ಕಟ್ಟಿಸಿದವರು ನೇಪಾಳಿ ರಾಣಿ ಸುಬಾಮ ಪ್ರಭ. ಇದು ಮುಕ್ತಿನಾಥ - "ಚುಮಿಗ್ ಗ್ಯಾಟಸೆ" ಸಾಲಿಗ್ರಾಮವೆಂದು ಕರೆದರು. ರಾಣಿಪಾವ ಊರಿಗೆ 90 ಮೀಟರ್ ಎತ್ತರದಲ್ಲಿ ಹಾಗೂ ಖಡಂಗ್ ಕಂಗ್ ದಡದಲ್ಲಿದೆ. ಸಾಲಿಗ್ರಾಮ ಸಿಕ್ಕಬೇಕಾದರೂ ಕೂಡ, ವಿಪರೀತ ಹಿಮವಾಗಿ ಹಾಗೂ ಮಳೆಯ ಕಾಲದಲ್ಲಿ ಕೊಚ್ಚಿಬಂದಾಗ, ಮಾತ್ರ ಕೆಲವು ಕಡೆ ಸಾಲಿಗ್ರಾಮ ಸಿಕ್ಕುವುದೆಂದು ನನಗೆ ಗೊತ್ತಾಗಿಬಂತು.

ದೇವಸ್ಥಾನದ ಹಿಂಭಾಗದಲ್ಲಿ 108 ಕೋಣದ ಬಾಯಿಗಳನ್ನು ಅರ್ಧ ಚಂದ್ರನಾಕಾರದಲ್ಲಿ ಜೋಡಿಸಿ, 7 ಅಡಿ ಎತ್ತರದಿಂದ ಗಂಡಕಿ ನದಿನೀರು ಕೊಳವೆಗಳಿಂದ ಕೋಣದ ಬಾಯಿನಿಂದ ಬರುವಹಾಗೆ ಮಾಡಿ, ಅದರ ಕೆಳಗಡೆ ತಲೆ ಇಟ್ಟು ನಡೆದು ಬಂದರೆ (ಸ್ನಾನ), ಮಾಡಿದ ಪಾಪಕಾರ್ಯವೆಲ್ಲಾ, ಪರಿಪೂರ್ಣವಾಗಿ ತೊಳೆದುಹೋಗುತ್ತೆಂದು ಹೇಳುವ ಪ್ರತೀತಿ. ಪಾಪ ಮಾಡದವರುಂಟೆ? ಅದರಂತೆಯೇ ನಾವೂ ನೀರಿನ ಕೆಳಗೆ ನಡೆದು ಬಂದೆವು. ಬಿಸಿಲು ಚೆನ್ನಾಗಿದ್ದುದರಿಂದ ನೀರು ಮಂಜಿನಂತೆ ಕೊರೆಯುತ್ತಿರಲಿಲ್ಲ. ನಂತರ ದೇವಸ್ಥಾನದ ಮುಂದೆ ಎರಡು ಕುಂಡಗಳು (ದೊಡ್ಡ ತೊಟ್ಟಿಗಳು) ನೀರಿನಿಂದ ತುಂಬಿತ್ತು. ಅದರ ಒಳಗೂ ನಡೆದು ಬಂದೆವು. ಇದರಲ್ಲಿದ್ದ ನೀರು ಬಹಳ ಕೊರೆಯುತ್ತಿತ್ತು. ಯಾತ್ರಿಗಳು ಇದನ್ನು wishing pond ಎಂದು ಭಾವಿಸಿ, ಮಾಡಿದ ಪಾಪ ಕಾರ್ಯಗಳೆಲ್ಲಾ ತೊಳೆದು ನಿಷ್ಕಲ್ಮಶವಾಗಲೆಂದು ಪ್ರಾರ್ಥಿಸಿಕೊಂಡು ನಾಣ್ಯಗಳನ್ನು ಹಾಕಿಬರುತ್ತಾರೆ.

ಮಂದಿರದ ಒಳಗೆ ಪೂಜಾರಿಣಿ (ಅನ್ನಿ) ಇದ್ದರು. ಅವರು ನಮಗೆ ಕಂಚಿನ ಲೋಹದ ಸುಮಾರು 2 ಅಡಿ ಎತ್ತರದ ಮುಕ್ತಿನಾರಾಯಣ ಮತ್ತು ಅವರ ಎಡಗಡೆಗೆ ಸ್ವಾಮಿನಾರಾಯಣ ಮತ್ತು ಬಲಗಡೆಗೆ ಜ್ವಾಲಾಮಾಯಿ ಹಾಗೂ ಲಕ್ಷ್ಮಿ ತೋರಿಸಿ, ಪ್ರಸಾದ ಕೊಟ್ಟು, ಇಬ್ಬರ ಕೈಗೂ ರಕ್ಷ (ಹಳದಿ ಬಟ್ಟೆ) ಕಟ್ಟಿದರು. ನಾನು ಅಲ್ಲಿಯೇ ನಿಂತು ಎಕ್ಸ್ ಪ್ರೆಸ್ ವೇಗದಲ್ಲಿ ವಿಷ್ಣುಸಹಸ್ರನಾಮ ಪಠಿಸಿಕೊಂಡುಬಿಟ್ಟೆ. ನನ್ನ ಯಜಮಾನರ ಹಣೆಯಲ್ಲಿ "ವಿಭೂತಿ" ನೋಡಿ, ಮೆಲ್ಬೋರ್ನ್ ನಿಂದ ಬಂದ ದಂಪತಿಗಳು ಪರಿಚಯಮಾಡಿಕೊಂಡು, ವಿಭೂತಿ ಪಡೆದು ದೇವಸ್ಥಾನದ ಒಳಗೆ ಹೋದರು.

ಮುಕ್ತಿನಾಥ ದೇವರು ಏಳು ಅದ್ಭುತ ದೇವರುಗಳು ಉದ್ಭವವಾಗಿರುವ ಪಟ್ಟಿಗೆ ಸೇರಿರುತ್ತೆ. ಅವೆಂದರೆ ತಿರುಪತಿ, ನೈಮಿಶಾರಣ್ಯ, ತೊತಾದ್ರಿ, ಪುಷ್ಕರಂ, ಬದರಿನಾಥ್, ಶ್ರೀರಂಗಂ ಮತ್ತು ಶ್ರೀಮುಷ್ಣಂ.

ಮುಕ್ತಿನಾಥನ ದರ್ಶನವಾಗಿ ವಾಪಸ್ಸು ಬರುವಾಗ ಸಮೀಪದಲ್ಲಿರುವ ಜ್ವಾಲಾಮಾಯಿ ದೇವಸ್ಥಾನದ ಒಳಗೆ ಹೋದೆವು. ಅಲ್ಲಿಯ ವಿಶೇಷವೆಂದರೆ, ಗರ್ಭಗುಡಿಯ ಕೆಳಗೆ ಬಂಡೆಗಳ ಮಧ್ಯ ಹರಿಯುವ ಪುರಾತನ ನದಿ ದಕ್ಷಿಣದಲ್ಲಿದ್ದು, ನೀರಿನಿಂದ ಸತತವಾಗಿ ಪವಿತ್ರ ಜ್ವಾಲೆ ಬರುತ್ತಿರುವುದನ್ನೂ ನಾವೂ ನೋಡಿ ಆಶ್ಚರ್ಯ ಪಟ್ಟೆವು. ನಡೆದು ಬಂದದ್ದೇ ಗೊತ್ತಾಗಲೇ ಇಲ್ಲ. ಏನಿದ್ದರೂ ಹೋಗುವಾಗಲೇ ಉಸಿರಾಟದ, ಆಮ್ಲಜನಕದ ಕೊರತೆ ನಿಭಾಯಿಸಬೇಕು ಅಷ್ಟೇ! ಮಾರನೆಯ ದಿನ ಮುಕ್ತಿನಾಥನಿಗೂ ಮುಡುಪಾಗಿರಲೆಂದು, ಮುಕ್ತಿನಾಥದಿಂದ ಜಾಂಸಂವರೆಗೂ 22 ಕಿ.ಮೀ ನಡಿಗೆಯಲ್ಲಿ ಬಂದುಬಿಟ್ಟೆವು. ಬರುವಾಗ ಬೆಟ್ಟಗಳಲ್ಲಿ ಗಣಪತಿ ವಿಗ್ರಹ ಕೆತ್ತಿರುವ ಹಾಗೆ ಬಹಳ ಚೆನ್ನಾಗಿ ಕಾಣಿಸುತ್ತಿತ್ತು. ಮಾರ್ಗಮಾತ್ರ ಬಯಲುಗಾಡಿನ ರೀತಿ ಹಾಗೂ ಮಧ್ಯಾಹ್ನ ಧೂಳಿನ ಗಾಳಿ ಶುರುವಾಗಿಬಿಟ್ಟರೆ ನಡೆಯಲು ಬಹಳ ಕಷ್ಟ.

ಮುಂದೆ ಓದಿ : ಭಗವಾನ್ ಬುದ್ಧನ ಜನನ ಸ್ಥಾನ ಲುಂಬಿನಿ »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Piligrimage to lord Muktinatha temple, mount everest and Lumbini, birth place of Buddha : Travelogue by Seetha Keshava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more