ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲವಾರಹಳ್ಳಿ ದುರ್ಗಮ ಬೆಟ್ಟಕ್ಕೆ ಟ್ರೆಕ್ಕಿಂಗ್ ಮಾರ್ಗದರ್ಶಿ

By Staff
|
Google Oneindia Kannada News

Kalavarahalli Betta, Chikkaballapura
ಟ್ರೆಕ್ಕಿಂಗ್ ಎನ್ನುವ ಪದ ಬಹುಶಃ ಬೆಂಗಳೂರಿನ ಯುವಕ, ಯುವತಿಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿಬಿಟ್ಟಿದೆ. ವಾರಾಂತ್ಯ ಬಂದರೆ ಸಾಕು ಎಲ್ಲಿ ಚಾರಣಕ್ಕೆ ಹೋಗುವುದು ಎಂಬ ಪ್ರಶ್ನೆ ಕಾಡಲು ಶುರು ಮಾಡುತ್ತದೆ. ಅನೇಕ ಚಾರಣಗಳಿಗೆ, ಪಿಕ್ನಿಕ್‌ಗಳಿಗೆ ತಯಾರಿಯೆಂಬುದೇ ಇರುವುದಿಲ್ಲ. ದಿಢೀರನೆ ಹೆಗಲಿಗೊಂದು ಬ್ಯಾಗು ಏರಿಸಿಕೊಂಡು, ಕೈಯಲ್ಲೊಂದು ಡಿಜಿಟಲ್ ಕ್ಯಾಮೆರಾವನ್ನೋ, ಹ್ಯಾಂಡಿಕ್ಯಾಂ ಅನ್ನೋ ಹಿಡಿದು ಹೊರಟರೆ ಬೆಂಗಳೂರಿನ ಹೆಕ್ಟಿಕ್ ಜೀವನಕ್ಕೊಂದು ಆ ಕ್ಷಣದಲ್ಲಿ, ಆ ಎರಡು ದಿನಗಳಲ್ಲಿ ಸಲಾಂ ಹೊಡೆದಂತೆಯೇ.

ಬೈಕು, ಕಾರು ಇದ್ದರಂತೂ ಬಸ್ಸಿನ ಹಂಗೇ ಬೇಕಿಲ್ಲ, ಬೆಂಗಳೂರು, ಮೈಸೂರು ಸುತ್ತಮುತ್ತ ನೂರಾರು ಚಾರಣಕ್ಕೆ ಆಹ್ವಾನವೀಯುವ ಸ್ಥಳಗಳು ಸಿಗುತ್ತವೆ. ತುಮಕೂರು ರಸ್ತೆಯಲ್ಲಿನ ಡಾಬಸ್ ಪೇಟೆ ಬಳಿಯ ಶಿವಗಂಗಾ ಬೆಟ್ಟ, ತುಮಕೂರು ಬಳಿಯ ಸಿದ್ದಗಂಗಾ ಬೆಟ್ಟ, ಮಾಗಡಿ ಬಳಿಯ ಸಾವನದುರ್ಗ ಬೆಟ್ಟ, ರಾಮನಗರ ಸಮೀಪದ ಶೋಲೆ ಶೂಟಿಂಗ್ ನಡೆದ ರಾಮಗಿರಿ, ನಂಜನಗೂಡಿನ ಹತ್ತಿರದ ಹಿಮವದ್ ಪರ್ವತ (ಗೋಪಾಲಸ್ವಾಮಿ ಬೆಟ್ಟ). ಪಟ್ಟಿ ಮಾಡುತ್ತ ಹೋದರೆ ನೂರಾರು ಸಿಗುತ್ತವೆ.

ಆದರೆ, ಬೆಂಗಳೂರು ಬಳಿಯ ನಂದಿ ಬೆಟ್ಟದ ಬಳಿಯೇ ಸಾಹಸಿಗರಿಗೆ ಪಂಥಾಹ್ವಾನ ನೀಡುವ ಇನ್ನೊಂದು ತಾಣವಿರುವುದನ್ನು ಬಲ್ಲಿರಾ? ಅದೇ ಕಲವಾರಹಳ್ಳಿ ಬೆಟ್ಟ. ಈ ಬೆಟ್ಟವನ್ನು ಸ್ಕಂದ ಬೆಟ್ಟವೆಂದೂ ಕರೆಯುತ್ತಾರೆ. ಉಳಿದ ಚಾರಣಗಳು ನೀಡುವ ರೋಮಾಂಚನ ಒಂದು ಬಗೆಯದಾದರೆ ಸ್ಕಂದ ಬೆಟ್ಟದಲ್ಲಿ ಮಾಡುವ ಚಾರಣದ ಥ್ರಿಲ್ಲೇ ಬೇರೆ, ಆ ಅನುಭವ ಅನಿರ್ವಚನೀಯವಾದುದು.

ಪರಿಶುದ್ಧ ಗಾಳಿಯನ್ನು ಹೀರುತ್ತಾ, ಪೂರ್ಣಚಂದಿರನ ನೀರವ ರಾತ್ರಿಯಲ್ಲಿ ಬೀಸುವ ತಣ್ಣನೆಯ ಗಾಳಿಗೆ ಮೈಯೊಡ್ಡುತ್ತಾ, ಬೆಳ್ಳಂಬೆಳಿಗ್ಗೆ ಕೇಸರಿ ಬಣ್ಣದ ಉದಯರವಿಯನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸುತ್ತಾ, ಮೊಸರುಸದೃಶ ಮೋಡಗಳ ಮೇಲೆ ತೇಲಾಡುವ ಅನುಭವವನ್ನು ಅಕ್ಷರದಲ್ಲಿ ಹಿಡಿದಿಡುವುದು ಅಕ್ಷರಶಃ ಸಾಧ್ಯವಿಲ್ಲ. ಅದನ್ನು ಅನುಭವಿಸಿಯೇ ದಕ್ಕಿಸಿಕೊಳ್ಳಬೇಕು.

ಸ್ಕಂದ ಬೆಟ್ಟ ತಲುಪುವ ಬಗೆ : ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿರುವ ಈ ಚಾರಣ ತಾಣಕ್ಕೆ ಹೋಗಲು ಎರಡು ಮಾರ್ಗಗಳಿವೆ. ಒಂದು, ಬೆಂಗಳೂರಿನಿಂದ ಬಳ್ಳಾರಿ ರಸ್ತೆಗುಂಟ ಸಾಗಿ ನಂದಿಬೆಟ್ಟದ ತಿರುವಿನಲ್ಲಿ ತಿರುಗಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಸಮಾಧಿಯಿರುವ ಮುದ್ದೇನಹಳ್ಳಿಯ ಮುಖಾಂತರ ಕಲವಾರ ಹಳ್ಳಿ ತಲುಪಬಹುದು.

ಎರಡನೇ ದಾರಿ, ಚಿಕ್ಕಬಳ್ಳಾಪುರದ ಮುಖಾಂತರ ಕಲವಾರ ಹಳ್ಳಿ ತಲುಪುವುದು. ಈ ಎರಡು ದಾರಿಗಳಲ್ಲಿ ನಂದಿ ಬೆಟ್ಟದ ಮುಖಾಂತರ ಸಾಗುವ ದಾರಿಯೇ ಹತ್ತಿರದು. ಇಲ್ಲಿಂದ ಓಂಕಾರ ಜ್ಯೋತಿ ಆಶ್ರಮ ಅಥವಾ ಪಾಪಾಗ್ನಿ ಮಠ ತಲುಪಬೇಕು. ಬೆಟ್ಟದ ಬುಡದಲ್ಲಿರುವ ಈ ಸ್ಥಳದಿಂದ ಚಾರಣ ಪ್ರಾರಂಭಿಸಬೇಕು. ಇಲ್ಲಿರುವ ಶಿವನ ದೇವಸ್ಥಾನದ ಬಳಿ ವಾಹನಗಳನ್ನು ನಿಲ್ಲಿಸಿ ಚಾರಣ ಪ್ರಾರಂಭಿಸಬಹುದು. ನಂದಿ ಬೆಟ್ಟದಿಂದ ಪಾಪಾಗ್ನಿ ಮಠ 6 ಕಿ.ಮೀ. ದೂರದಲ್ಲಿದೆ. ಚಿಕ್ಕಬಳ್ಳಾಪುರದಿಂದ ಮಠ 3 ಕಿ.ಮೀ. ದೂರದಲ್ಲಿದೆ.

ನೆನಪಿನಲ್ಲಿಡಿ : ಕಲವಾರ ಬೆಟ್ಟದ ಬುಡದಿಂದ ತುದಿ ಮುಟ್ಟುವವರೆಗೂ ಪರಿಶುದ್ಧ ಗಾಳಿ, ಅತ್ಯದ್ಭುತ ನಿಸರ್ಗ ಸೌಂದರ್ಯದ ಹೊರತಾಗಿ ಏನೂ ಸಿಗುವುದಿಲ್ಲವಾದ್ದರಿಂದ ಬುತ್ತಿ, ನೀರನ್ನು ತೆಗೆದುಕೊಂಡು ಹೋಗಬೇಕು. ತುದಿ ಮುಟ್ಟುವ ದಾರಿ ಕೂಡ ಅನೇಕ ಕಡೆಗಳಲ್ಲಿ ಅತ್ಯಂತ ಕಡಿದಾಗಿದ್ದು ಯಾವುದೇ ಮೆಟ್ಟಿಲುಗಳ ಸಹಾಯವೂ ಇರುವುದಿಲ್ಲ. ಅದಲ್ಲದೆ, ರಾತ್ರಿ ಸಮಯದಲ್ಲಿ ಟ್ರೆಕ್ ಮಾಡಬೇಕಾಗಿರುವುದರಿಂದ ಪ್ರಥಮ ಚಿಕಿತ್ಸೆ ಕಿಟ್ ತೆಗೆದುಕೊಂಡು ಹೋಗುವುದು ಅತಿ ಅವಶ್ಯಕ. ಸಮುದ್ರಮಟ್ಟದಿಂದ 1750 ಮೀ. ಎತ್ತರದಲ್ಲಿರುವ ಈ ತಾಣ ಯುವ ಚಾರಣಿಗರಿಗೆ ಚಾಲೆಂಜಿಂಗ್ ಎನ್ನುವುದರಲ್ಲಿ ಸಂದೇಹವಿಲ್ಲ.

(ಈ ಸ್ಥಳಕ್ಕೆ ಟ್ರೆಕ್ಕಿಂಗ್ ಹೋಗುವವರಿಗೆ ಶುಭಹಾರೈಕೆಗಳು. ಹೋಗಿ ಬಂದ ಮೇಲೆ ನಿಮ್ಮ ಅನುಭವಗಳನ್ನು (ಅಕ್ಷರದಲ್ಲಿ ಹಿಡಿದಿಡಲಾಗದಿದ್ದರೂ) ನಮಗೆ ಬರೆದು ತಿಳಿಸಿ - ಸಂಪಾದಕ)

ಚಾರಣ ಕುರಿತ ಲೇಖನಗಳು

ತಡಿಯದೇ ಕಾಡುವ ತಡಿಯಂಡಮೋಲ್
ಬಂಡಾಜೆ ಚಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X