ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನ್ನಿ ಬಿಳಿಗಿರಿರಂಗನ ಬೆಟ್ಟಕ್ಕೆ...ನಿಸರ್ಗದ ಸ್ವರ್ಗಕ್ಕೆ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

BR hills
ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದಾದ ಬಿಳಿಗಿರಿರಂಗನ ಬೆಟ್ಟದಲ್ಲಿ ಜಾತ್ರೆಯ ಸಂಭ್ರಮ. ಏಪ್ರಿಲ್ 18ರಂದು ಮಧ್ಯಾಹ್ನ 12 ರಿಂದ 12.15ಗಂಟೆಯೊಳಗೆ ಶ್ರೀ ಬಿಳಿಗಿರಿರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ (ದೊಡ್ಡಜಾತ್ರೆ) ನಡೆಯಲಿದ್ದು, ಈಗಾಗಲೇ ಭಕ್ತರು ಇಲ್ಲಿಗೆ ಆಗಮಿಸತೊಡಗಿದ್ದಾರೆ.

ಮೈಸೂರಿನಿಂದ ಸುಮಾರು ತೊಂಬತ್ತು ಕಿ.ಮೀ. ದೂರದಲ್ಲಿದ್ದು, ಚಾಮರಾಜನಗರ ಹಾಗೂ ಯಳಂದೂರು ಮಾರ್ಗವಾಗಿ ತೆರಳಬಹುದಾಗಿದೆ. ಪವಿತ್ರ ಕ್ಷೇತ್ರ ಮಾತ್ರವಲ್ಲದೆ, ಪ್ರವಾಸಿಗರನ್ನು ಸದಾ ತನ್ನತ್ತ ಸೆಳೆಯುವ ಒಂದು ಸುಂದರ ಪ್ರವಾಸಿ ತಾಣವೂ ಆಗಿರುವ ಬಿಳಿಗಿರಿರಂಗನಬೆಟ್ಟಕ್ಕೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಿರುತ್ತಾರೆ. ಕೆಲವರು ಚಾರಣಿಗರಾಗಿ ಬಂದರೆ ಇನ್ನು ಕೆಲವರು ಭಕ್ತರಾಗಿ ಬಂದು ಸ್ವಾಮಿಯ ದರ್ಶನ ಪಡೆದು ಹಿಂತಿರುಗುತ್ತಾರೆ. ಜಾತ್ರೆಯ ಸಂದರ್ಭ ಮಾತ್ರ ರಾಜ್ಯದ ಹಲವೆಡೆಗಳಿಂದ ಭಕ್ತರು ಆಗಮಿಸಿ ಶ್ರೀ ಬಿಳಿಗಿರಿರಂಗನಾಥನ ಕೃಪೆಗೆ ಪಾತ್ರರಾಗುತ್ತಾರೆ.

ಉಲ್ಲಾಸ ತುಂಬುತ್ತದೆ: ಸುಮಾರು 540 ಚದರ ಕಿ.ಮೀ. ವಿಸ್ತಾರವನ್ನು ಹೊಂದಿರುವ ಬಿಳಿಗಿರಿರಂಗನಬೆಟ್ಟವು ಸದಾ ಹಸಿರು ಹಚ್ಚಡದಿಂದ ಕೂಡಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಬಿಳಿಗಿರಿರಂಗನಬೆಟ್ಟವನ್ನು ಪ್ರವೇಶಿಸುತ್ತಿದ್ದಂತೆಯೇ ಮೇಲಿಂದ ಮೇಲೆ ಬೀಸಿ ಬರುವ ತಂಗಾಳಿಯಿಂದಾಗಿ ನಡುಬೇಸಿಗೆಯೂ ಕೂಡ ಬೆಳದಿಂಗಳೆನೋ ಎಂಬಂತೆ ಭಾಸವಾಗುತ್ತದೆ. ಕಣ್ಣು ಹಾಯಿಸಿದುದ್ದಕ್ಕೂ ಕಾಣಸಿಗುವ ಪ್ರಕೃತಿಯ ವಿಹಂಗಮ ನೋಟ ನಮ್ಮೆಲ್ಲಾ ಜಂಜಾಟಗಳನ್ನು ಮರೆಸಿ ಉಲ್ಲಾಸ ತುಂಬುತ್ತದೆ. ಕಾಡಿನಂಚಿನ ಸೋಲಿಗರ ಜೋಪಡಿಗಳು...

ಅದರಾಚೆಗಿನ ಕಾಡಿನ ನಡುವಿನ ಅಂಕುಡೊಂಕಿನ ರಸ್ತೆಗಳಲ್ಲಿ ತಲೆ ಮೇಲೆ ಅರಣ್ಯ ಉತ್ಪನ್ನಗಳನ್ನು ಹೊತ್ತು ಸಾಗುವ ಸೋಲಿಗರು... ಅರಣ್ಯದ ನಡುವಿನಿಂದ ಛಂಗನೆ ನೆಗೆದು ಓಡುವ ಜಿಂಕೆಗಳು... ಘೀಳಿಡುವ ಆನೆಗಳು... ಹೀಗೆ ಒಂದು, ಎರಡಲ್ಲ ಹತ್ತಾರು ವಿಸ್ಮಯ ನೋಟಗಳು ಕಣ್ಮುಂದೆ ಹಾದು ಹೋಗುತ್ತವೆ.

ಸೋಲಿಗರ ನಂಟು: ಬಿಳಿಗಿರಿರಂಗನಬೆಟ್ಟವನ್ನು ಶ್ವೇತಾದ್ರಿ ಬಿಳಿಕಲ್ಲು ಬೆಟ್ಟ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಇದೊಂದು ವನ್ಯಧಾಮವಾಗಿದ್ದು, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿ ಎಂದರೆ ತಪ್ಪಾಗುವುದಿಲ್ಲ. ಏಷ್ಯಾದ ಆನೆಗಳು, ಬಿಳಿಪಟ್ಟೆಗಳ ಹುಲಿಗಳ ವಾಸಕ್ಕೆ ಯೋಗ್ಯವಾಗಿರುವ ಈ ತಾಣದಲ್ಲಿ ಸುಮಾರು 700ಕ್ಕೂ ಹೆಚ್ಚು ವೈವಿಧ್ಯಮಯ ಸಸ್ಯ ಪ್ರಭೇದಗಳಿವೆ. ಇಷ್ಟು ಮಾತ್ರವಲ್ಲದೆ ಚಿರತೆ, ಜಿಂಕೆ, ಸೀಳುನಾಯಿ ಮುಂತಾದ ಪ್ರಾಣಿಗಳು 200ಕ್ಕೂ ಅಧಿಕ ಪಕ್ಷಿ ಸಂಕುಲಗಳು ಇಲ್ಲಿವೆ. ಈ ಅರಣ್ಯದಲ್ಲಿ ಬಹಳ ಹಿಂದಿನಿಂದಲೂ ಸೋಲಿಗರು ವಾಸ ಮಾಡುತ್ತಾ ಬಂದಿದ್ದು, ಇಲ್ಲಿ ಸಿಗುವ ಅರಣ್ಯ ಉತ್ಪನ್ನವೇ ಅವರ ಬದುಕಿಗೆ ಆಸರೆಯಾಗಿದೆ.

ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವಿದ್ದು, ಈ ದೇವಾಲಯವು ಬಹಳ ಹಿಂದಿನ ಕಾಲದಲ್ಲಿ ನಿರ್ಮಾಣಗೊಂಡಿದ್ದಾಗಿದ್ದು, ದ್ರಾವಿಡ ಶೈಲಿಯಲ್ಲಿದೆ. ಇಲ್ಲಿನ ಆಧಿದೇವತೆ ಶ್ರೀ ಬಿಳಿಗಿರಿರಂಗನಾಥ ಹಾಗೂ ಶ್ರೀರಂಗಪಟ್ಟಣದ ರಂಗನಾಥ, ಶಿವನಸಮುದ್ರದ ಹಾಗೂ ತಿರುಚನಾಪಳ್ಳಿಯ ಶ್ರೀರಂಗ, ವೆಂಕಟೇಶ ಅಣ್ಣತಮ್ಮಂದಿರು ಎಂಬ ನಂಬಿಕೆ ಇಲ್ಲಿನವರದ್ದಾಗಿದೆ.

ವರ್ಷಕ್ಕೆ ಎರಡು ಬಾರಿ ಇಲ್ಲಿ ಜಾತ್ರೆ ನಡೆಯುತ್ತದೆಯಾದರೂ ಯುಗಾದಿ ಕಳೆದ ನಂತರ ನಡೆಯುವ ಜಾತ್ರೆ ಪ್ರಸಿದ್ಧಿ ಪಡೆದಿದೆ. ಈ ಸಂದರ್ಭ ನಡೆಯುವ ಬ್ರಹ್ಮರಥೋತ್ಸವವನ್ನು ನೋಡಲು ಸಹಸ್ರಾರು ಮಂದಿ ನೆರೆಯುತ್ತಾರೆ. ಈ ಸಂದರ್ಭ ಸ್ವಾಮಿಗೆ ಪಾದುಕೆ ಅರ್ಪಿಸಲಾಗುತ್ತದೆಯಲ್ಲದೆ, ಈ ಪಾದುಕೆಯಿಂದ ಆಶೀರ್ವಾದ ಪಡೆದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುವುದು ಪ್ರತೀತಿ.

ಇನ್ನಷ್ಟು ಅಭಿವೃದ್ಧಿ ಅಗತ್ಯ: ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿದ್ದು ಅಲ್ಲಿಗೂ ಹೋಗಬಹುದಾಗಿದೆ. ದೇವಾಲಯದಿಂದ ಸುಮಾರು ಹತ್ತು ಕಿ.ಮೀ. ದೂರದಲ್ಲಿ ಶತಮಾನಗಳನ್ನು ಸವೆಸಿದ ದೊಡ್ಡಸಂಪಿಗೆ ಮರ, ಹದಿನಾರು ಕಿ.ಮೀ.ದೂರದಲ್ಲಿ ಭಾರ್ಗವಿ ನದಿಯಿದೆ. ಅಲ್ಲದೆ ಕೆ.ಗುಡಿ ಎಂಬ ನಿಸರ್ಗ ತಾಣವಿದೆ. ಇಲ್ಲಿನ ಸುತ್ತಮುತ್ತಲ ಪರಿಸರ ಹಾಗೂ ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಗೆ ಸೇರುವಂತಹ ಬೇಡಗುಳಿ, ಹೊನ್ನಮೇಟಿ, ಅತ್ತಿಖಾನಿ ಮೊದಲಾದ ಅರಣ್ಯ ಪ್ರದೇಶಗಳು ನಿಸರ್ಗ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿದೆ.

ಇಷ್ಟೆಲ್ಲಾ ವೈಶಿಷ್ಟ್ಯತೆಗಳನ್ನು ಹೊಂದಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಈ ತಾಣವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಬೇಕೆಂಬುವುದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಒತ್ತಾಯವಾಗಿದೆ. ಚಾರಣಕ್ಕೆಂದು ವರ್ಷಪೂರ್ತಿ ಸಾವಿರಾರು ಮಂದಿ ಬರುತ್ತಿದ್ದು ಹಾಗೆ ಬರುವ ಪ್ರವಾಸಿಗರಿಗೆ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರ ಹಾಗೂ ಅರಣ್ಯ ಇಲಾಖೆಯ ಕೆಲವೇ ಕೆಲವು ಕೊಠಡಿಗಳನ್ನು ಹೊರತು ಪಡಿಸಿದರೆ ಉಳಿದುಕೊಳ್ಳಲು ಬೇರೆ ಯಾವುದೇ ರೀತಿಯ ವಸತಿ ವ್ಯವಸ್ಥೆಯಿಲ್ಲದಿರುವುದರಿಂದ ಸಮಸ್ಯೆವುಂಟಾಗುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ಅಥವಾ ಪ್ರವಾಸೋದ್ಯಮ ಇಲಾಖೆ ಇತ್ತ ಗಮನಹರಿಸಿ ಸರ್ಕಾರಿ ಕಾಟೇಜ್‌ಗಳನ್ನು ನಿರ್ಮಿಸಿದ್ದೇ ಆದರೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ.

English summary
Biligiri Rangana Betta(BR Hills) neat Yelandur, Chamarajnagar district is the is a lofty hillock surrounded by natural beauty. Sriranganathaswamy temple Jatra Mahotsav to be held on April 18. Soligas living near by are the main protectors of natural flora and fauna here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X