ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆ ರಜೆ ಕಳೆಯಲು ಕೊಡಗಿನ ನಿಸರ್ಗಧಾಮ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Cauvery Nisargadhama, Kushalnagar
ಈ ಬಾರಿಯ ಬೇಸಿಗೆ ರಜೆಯಲ್ಲಿ ಎಲ್ಲಾ ಜಂಜಾಟವನ್ನು ಬದಿಗೊತ್ತಿ ಪ್ರಕೃತಿಯ ಮಡಿಲಲ್ಲಿ ಒಂದಷ್ಟು ಸಮಯ ನೆಮ್ಮದಿಯಾಗಿ ಕಳೆದು ಬರಬೇಕೆಂಬ ಆಲೋಚನೆಯಲ್ಲಿರುವವರು ಎಲ್ಲಿಗೆ ಹೋಗೋದಪ್ಪಾ? ಎಂದು ತಲೆಕೆಡಿಸಿಕೊಂಡಿದ್ದರೆ? ಅಂತಹವರು ತಮ್ಮ ಪ್ರವಾಸಕ್ಕೆ ಕೊಡಗಿನ ಕಾವೇರಿ ನಿಸರ್ಗಧಾಮವನ್ನು ಆಯ್ಕೆ ಮಾಡಿಕೊಳ್ಳಬಹುದು.

ಕಾವೇರಿ ನಿಸರ್ಗಧಾಮವು ಜೀವನದಿ ಕಾವೇರಿ ಸೃಷ್ಟಿಸಿರುವ ದ್ವೀಪಗಳಲ್ಲೊಂದಾಗಿದೆ. ತನ್ನದೇ ಆದಂತಹ ವೈಶಿಷ್ಟ್ಯತೆ ಹಾಗೂ ಮುಖ್ಯರಸ್ತೆಗೆ ಸಮೀಪದಲ್ಲಿಯೇ ಇರುವುದರಿಂದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದೆ. ಹಾಗಾಗಿ ವರ್ಷದ ಎಲ್ಲಾ ದಿನಗಳಲ್ಲಿಯೂ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ.

ಕೊಡಗಿನ ಹೆಬ್ಬಾಗಿಲು ಕುಶಾಲನಗರದಿಂದ ಮಡಿಕೇರಿ ಕಡೆಗಿನ ಮುಖ್ಯ ರಸ್ತೆಯಲ್ಲಿ ಸುಮಾರು ಒಂದೂವರೆ ಕಿ.ಮೀ. ಸಾಗಿದರೆ ರಸ್ತೆಯ ಎಡಭಾಗದಲ್ಲಿಯೇ ನಿಸರ್ಗಧಾಮದ ಪ್ರವೇಶ ದ್ವಾರ ಕಾಣಸಿಗುತ್ತದೆ.

ಜುಳು...ಜುಳು... ನಿನಾದಗೈಯುತ್ತಾ ಹರಿಯುವ ಕಾವೇರಿ ನದಿ ಅದರ ದಡದುದ್ದಕ್ಕೂ ಮುಗಿಲೆತ್ತರಕ್ಕೆ ಬೆಳೆದು ನಿಂತ ಮರಗಿಡಗಳು... ಬಿದಿರು ಮೆಳೆಗಳು... ಚಿಲಿಪಿಲಿ ಗುಟ್ಟುವ ಹಕ್ಕಿಗಳು... ಇಂತಹವೊಂದು ನಿಸರ್ಗ ರಮಣೀಯತೆಯನ್ನು ತನ್ನೊಡಲಿನಲ್ಲಿರಿಸಿಕೊಂಡು ನಿಸರ್ಗಧಾಮ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ.

ಅರಣ್ಯ ಸಂರಕ್ಷಣಾಧಿಕಾರಿ ಆರ್.ಕೆ.ತೋರ್ವೆ ಹಾಗೂ ವಲಯಾಧಿಕಾರಿ ಟಿ.ಎನ್.ನಾರಾಯಣ್‌ರವರ ಸತತ ಪ್ರಯತ್ನದಲ್ಲಿ 1989 ರಲ್ಲಿ ನಿರ್ಮಿಸಲ್ಪಟ್ಟ ಕಾವೇರಿ ನಿಸರ್ಗಧಾಮ ಅಲ್ಲಿಂದ ಇಲ್ಲಿಯವರೆಗೆ ದೇಶ, ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ನಿಸರ್ಗಧಾಮವನ್ನು ವೀಕ್ಷಿಸಲು ಬರುವವರು ಇಲ್ಲಿನ ಕುಟೀರವೊಂದರಲ್ಲಿ ಟಿಕೆಟ್ ಪಡೆದು ಪ್ರವೇಶ ದ್ವಾರದ ಮೂಲಕ ತೂಗು ಸೇತುವೆಯ ಮೇಲೆ ಹೆಜ್ಜೆ ಹಾಕುತ್ತಾ ಮುನ್ನಡೆದರೆ ನಿಸರ್ಗದ ಕೌತುಕಮಯ ದೃಶ್ಯಗಳು ಕಣ್ಮುಂದೆ ಬಂದು ನಿಲ್ಲುತ್ತದೆ. ತಳುಕಿ ಬಳುಕಿ ಜುಳು ಜುಳು ಎನ್ನುತ್ತಾ ಹರಿಯುವ ಕಾವೇರಿ ನದಿ... ಬೀಸುವ ತಂಗಾಳಿ... ಪ್ರಕೃತಿಯ ಸೋಜಿಗ ಮೈಪುಳಕಗೊಳಿಸುತ್ತದೆ. ಇಲ್ಲಿ ಮಾರ್ಗಸೂಚಿ ಫಲಕಗಳಿದ್ದು, ನಿಸರ್ಗಧಾಮದ ಬಗ್ಗೆ ಮಾಹಿತಿ ನೀಡುತ್ತದೆ. ಅರಣ್ಯ ಇಲಾಖೆಯು ಪ್ರವಾಸಿಗರ ಅನುಕೂಲಕ್ಕಾಗಿ ಉಪಹಾರ ಗೃಹವನ್ನು ತೆರೆದಿದ್ದು ಇದರ ಸಮೀಪವೇ ಮಕ್ಕಳ ವಿಹಾರಧಾಮವಿದೆ.

ಜಿಂಕೆವನ:ಈ ವಿಹಾರಧಾಮದಲ್ಲಿ ಮಕ್ಕಳು ಆಡಿ ನಲಿಯಲು ಏಣಿಯಾಟ, ಉಯ್ಯಾಲೆ, ಉದ್ದಜಿಗಿತ ಮುಂತಾದ ಆಟದ ಸಾಮಾಗ್ರಿಗಳನ್ನಿಡಲಾಗಿದೆ. ಇಲ್ಲಿಂದ ಮುಂದೆ ಬಿದಿರುಮೆಳೆಗಳ ನಡುವೆ ನಡೆದರೆ ಆನೆ ಸವಾರಿ ನಡೆಸುವ ಜಾಗವನ್ನು ತಲುಪಬಹುದು. ಇಲ್ಲಿ ನಿಗದಿತ ಹಣವನ್ನು ನೀಡಿ ಆನೆಯ ಮೇಲೆ ಕುಳಿತು ಸವಾರಿಯನ್ನು ಮಾಡಬಹುದು. ಆನೆ ಸವಾರಿ ಪಕ್ಕದಲ್ಲಿಯೇ ಜಿಂಕೆವನವಿದೆ. ಸುಮಾರು 5 ಎಕರೆ ಪ್ರದೇಶದಲ್ಲಿ ಸುತ್ತಲೂ ಸುಸಜ್ಜಿತವಾಗಿ ತಂತಿ ಬೇಲಿ ಹಾಕಿ ನಿರ್ಮಿಸಲಾಗಿರುವ ಈ ವನದಲ್ಲಿ ಹಲವಾರು ಜಿಂಕೆ, ಕಡವೆಗಳಿವೆ.

ಕಾಲು ದಾರಿಯಲ್ಲಿ ಹೆಜ್ಜೆಯಿಡುತ್ತಾ ಮುನ್ನಡೆದರೆ ಅಲ್ಲಲ್ಲಿ ಬೆಳೆದಿರುವ ಬಿದಿರು ಮೆಳೆಗಳ ಮೇಲೆ ನಿರ್ಮಿಸಲಾಗಿರುವ ಕುಟೀರಗಳು ಮನಸ್ಸೆಳೆಯುತ್ತವೆ. ಈ ಕುಟೀರಗಳಿಗೆ ಹತ್ತಲು ಏಣಿಗಳನ್ನು ನಿರ್ಮಿಸಿದ್ದು, ಇದರಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು. ಜೊತೆಗೆ ಇಲ್ಲಿನ ನಿಸರ್ಗ ಸೌಂದರ್ಯವನ್ನು ಕೂಡ ಸವಿಯಬಹುದು.

ದೋಣಿ ವಿಹಾರ:ನಿಸರ್ಗಧಾಮದಲ್ಲಿ ಅಡ್ಡಾಡುತ್ತಾ ಅಂಚಿಗೆ ಬಂದರೆ ವಿಶಾಲವಾಗಿ ಹರಿಯವ ಕಾವೇರಿ ನದಿಯ ದರ್ಶನವಾಗುತ್ತದೆ. ಇಲ್ಲಿ ಪ್ರವಾಸಿಗರಿಗಾಗಿ ದೋಣಿ ವಿಹಾರದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ನದಿಯ ಒಳಭಾಗದಲ್ಲಿ ವಿಹಾರ ಮಾಡುವ ಸಂದರ್ಭ ಅಪಾಯವಾಗದಿರಲಿ ಎಂಬ ಉದ್ದೇಶದಿಂದ ನದಿಯಲ್ಲಿರುವ ಸುಳಿ ಹಾಗೂ ಹೆಬ್ಬಂಡೆಗಳಿರುವ ಸ್ಥಳಗಳಲ್ಲಿ ಅಪಾಯದ ಸಂಕೇತವಾದ ಕೆಂಪು ಬಾವುಟವನ್ನು ಹಾರಿಸಲಾಗಿದೆ. ಇಲ್ಲಿ ವಿಹಾರಕ್ಕಾಗಿ ಕಪಿಲಾ, ಭದ್ರಾ, ನೇತ್ರಾವತಿ, ತುಂಗಾ, ನರ್ಮದಾ, ಬ್ರಹ್ಮಪುತ್ರ ಹೆಸರಿನ ದೋಣಿಗಳಿವೆ.

ನಿಸರ್ಗದ ಚೆಲುವನ್ನು ಸವಿಯುತ್ತಾ ಅಲ್ಲಿಯೇ ತಂಗುವುದಾದರೆ ಅದಕ್ಕೂ ವ್ಯವಸ್ಥೆಯಿದೆ. ಇಟ್ಟಿಗೆ ಗೋಡೆ, ತೇಗದ ಮರ, ಹುಲ್ಲಿನ ಛಾವಣಿಯಿಂದ ನಿರ್ಮಿಸಲಾದಂತಹ ಐದು ಕಾಟೇಜ್‌ಗಳಿದ್ದು, ಇವುಗಳಿಗೆ ನಿಗದಿತ ಶುಲ್ಕ ಪಾವತಿಸ ಬೇಕಾಗುತ್ತದೆ. ಪ್ರವಾಸಿಗರಿಗಾಗಿಯೇ ಇಲ್ಲೊಂದು ಮಾಹಿತಿ ಕೇಂದ್ರವನ್ನು ಕೂಡ ನಿರ್ಮಿಸಲಾಗಿದೆ.

ಕಾವೇರಿ ನಿಸರ್ಗಧಾಮವು ಎಲ್ಲಾ ರೀತಿಯಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಇಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಬೇಕಾದ ಅಗತ್ಯವಿದೆ. ನಿಸರ್ಗಧಾಮವು ನಿರ್ಮಾಣಗೊಂಡಿರುವ ದ್ವೀಪವು ಸುಮಾರು 65 ಎಕರೆ ಪ್ರದೇಶವನ್ನು ಹೊಂದಿದ್ದು ಕೇವಲ 15 ಎಕರೆ ಪ್ರದೇಶದಲ್ಲಿ ಮಾತ್ರ ವಿವಿಧ ಸವಲತ್ತುಗಳನ್ನು ಕಲ್ಪಿಸಿ ನಿಸರ್ಗಧಾಮವನ್ನು ನಿರ್ಮಿಸಲಾಗಿದೆ. ಹಾಗಾಗಿ ಉಳಿದ ಸ್ಥಳಗಳಲ್ಲಿ ಪವಿತ್ರವನ, ಶ್ರೀಚಕ್ರವನ, ರಾಶಿವನ ಹಾಗೂ ಕೊಡಗಿನ ಇತಿಹಾಸ ಸಾರುವ ಕಾವೇರಿ ಪುರಾಣ, ಶ್ರೀಕೃಷ್ಣವನ, ಕೃತಕ ಜಲಪಾತ, ಕಾರಂಜಿ ನಿರ್ಮಾಣವಲ್ಲದೆ, ಈಗಿರುವ ಜಿಂಕೆವನವನ್ನು ಅಭಿವೃದ್ಧಿಪಡಿಸುವ ಬಗ್ಗೆ ಮಾತುಗಳು ಕೇಳಿ ಬಂದಿತ್ತಾದರೂ ಅದ್ಯಾವುದೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.

ಕಾವೇರಿ ನಿಸರ್ಗಧಾಮಕ್ಕೆ ಹೊಂದಿಕೊಂಡಂತೆ ಇನ್ನೆರಡು ದ್ವೀಪಗಳಿದ್ದು ಅವುಗಳಿಗೆ ತೂಗು ಸೇತುವೆ ನಿರ್ಮಿಸುವ ಮೂಲಕ ಅಭಿವೃದ್ಧಿಪಡಿಸಿದ್ದೇ ಆದಲ್ಲಿ ಕಾವೇರಿ ನಿಸರ್ಗಧಾಮಕ್ಕೆ ಇನ್ನಷ್ಟು ಪ್ರವಾಸಿಗರು ಭೇಟಿ ನೀಡಬಹುದು.

English summary
Cauvery Nisargadhama is a forest resort in Kushalanagar. The forest department has developed this place as a natural island covering over 65 acres. Over 9 beautiful cottages, Elephant riding, boating, tree top shelters, hanging bridge are some of the attraction to tourists during the summer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X