ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರ ನಂಜನಗೂಡು ಪಂಚ ಮಹಾರಥೋತ್ಸವ

By * ಬಿಎಂ ಲವಕುಮಾರ್, ಮೈಸೂರು
|
Google Oneindia Kannada News

Nanjanagudu Car Festival
ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಮೈಸೂರಿನ ನಂಜನಗೂಡಿನಲ್ಲೀಗ ಪಂಚ ಮಹಾರಥೋತ್ಸವದ ಸಂಭ್ರಮ. ಹಾಗಾಗಿ ಎಲ್ಲೆಡೆಯಿಂದ ಭಕ್ತ ಸಾಗರವೇ ನಂಜನಗೂಡಿಗೆ ಹರಿದು ಬರತೊಡಗಿದೆ. ಮೈಸೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ನಂಜನಗೂಡು ಪುರಾಣ ಪ್ರಸಿದ್ಧ ಕ್ಷೇತ್ರವಾಗಿದ್ದು ಇಲ್ಲಿರುವ ಶ್ರೀಕಂಠೇಶ್ವರ ದೇಗುಲ ಇತಿಹಾಸ ಪ್ರಸಿದ್ಧವಾಗಿದೆ. ವರ್ಷಂಪ್ರತಿ ಮೀನ ಮಾಸದಲ್ಲಿ ಉತ್ತರ ನಕ್ಷತ್ರದ ದಿನದಂದು ಉತ್ತಮ ಲಗ್ನದಲ್ಲಿ ನಡೆಯುವ ಪಂಚಮಹಾರಥೋತ್ಸವ ವೈಶಿಷ್ಟ್ಯಪೂರ್ಣವಾಗಿದ್ದು, ಇಂತಹವೊಂದು ರಥೋತ್ಸವವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.

ಪ್ರಸಕ್ತ ವರ್ಷ ಮಾರ್ಚ್ 17ರಂದು ಪ್ರಾತಃಕಾಲ 5.50 ರಿಂದ 6.25 ಗಂಟೆಯೊಳಗಿನ ಸಲ್ಲುವ ಶುಭ ಕುಂಭಲಗ್ನದಲ್ಲಿ ಶ್ರೀ ಮನ್ಮಹಾ ಗೌತಮ ರಥೋತ್ಸವ ನಡೆಯಲಿದೆ. ಪಂಚರಥೋತ್ಸವದ ಸಂದರ್ಭ ಗಣಪತಿ, ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಹಾಗೂ ಗೌತಮ ರಥಗಳನ್ನು ಎಳೆಯಲಾಗುವುದು. ಈ ಐದು ರಥಗಳ ಪೈಕಿ ಗೌತಮ ರಥ ಮುಖ್ಯವಾಗಿದ್ದು, ಪಂಚ ರಥೋತ್ಸವದ ಪ್ರಮುಖ ಆಕರ್ಷಣೆಯಾಗಿದೆ.

ಈ ರಥವು ಸುಮಾರು 205 ಟನ್ ತೂಕ, 90 ಅಡಿ ಎತ್ತರವನ್ನು ಹೊಂದಿದೆ. ವಿವಿಧ ಬಣ್ಣದ ಬಟ್ಟೆಗಳನ್ನು ಸುತ್ತಿ, ಹೂವಿನಿಂದ ಅಲಂಕರಿಲಾಗುವ ರಥದ ತುದಿಯಲ್ಲಿ ಧ್ವಜವನ್ನು ಕಟ್ಟಲಾಗುತ್ತದೆ. ಬಳಿಕ ನವರತ್ನ ಹಾಗೂ ಹೂವಿನಿಂದ ಕಂಗೊಳಿಸುವ ಶ್ರೀಕಂಠಸ್ವಾಮಿಯ ವಿಗ್ರಹವನ್ನು ರಥದಲ್ಲಿರಿಸಿ ಮುಂಜಾನೆ ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ವಿಧಿವಿಧಾನದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನಂತರ ರಥಕ್ಕೆ ಮಹಾಮಂಗಳಾರತಿಯನ್ನು ಮಾಡುವ ಮೂಲಕ ರಥಕ್ಕೆ ಚಾಲನೆ ನೀಡಲಾಗುತ್ತದೆ.

ಮುಗಿಲು ಮುಟ್ಟುವ ಘೋಷಣೆ : ರಥೋತ್ಸವದ ಈ ಭವ್ಯ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದ ಭಕ್ತರು ಜೈಶ್ರೀಕಂಠ, ಜೈ ನಂಜುಂಡ ಎಂದು ಮುಗಿಲು ಮುಟ್ಟುವಂತೆ ಘೋಷಣೆಗಳನ್ನು ಕೂಗುತ್ತಾ ರಥಕ್ಕೆ ಎರಡು ಕಡೆಯಲ್ಲಿ ಕಟ್ಟಿದ್ದ ಹಗ್ಗವನ್ನು ಎಳೆಯುತ್ತಾರೆ. ರಥ ಮುಂದೆ ಚಲಿಸುತ್ತಿದ್ದಂತೆಯೇ ಭಾವಪರವಶಗೊಂಡ ಭಕ್ತರು ರಥದ ಮೇಲೆ ದವನ ಬಾಳೆಹಣ್ಣುಗಳನ್ನು ಎಸೆದು ತಮ್ಮ ಹರಕೆಯನ್ನು ಶ್ರೀಕಂಠನಿಗೆ ಅರ್ಪಿಸುತ್ತಾರೆ. ರಥವು ಜನಸಾಗರದೊಂದಿಗೆ ಚಲಿಸಿ ರಾಜಗೋಪುರಕ್ಕೆ ನೇರವಾಗಿ ಬಂದು ನಿಂತಾಗ ಕಂಡು ಬರುವ ದೃಶ್ಯ ಮನಮೋಹಕವಾಗಿರುತ್ತದೆ. ನೂತನವಾಗಿ ವಿವಾಹವಾದ ನವದಂಪತಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಹಣ್ಣು-ದವನ ಎಸೆಯುವ ಮೂಲಕ ತಮ್ಮ ಹರಕೆಯನ್ನು ಒಪ್ಪಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.

ಎಲ್ಲೆಡೆ ಸಂಭ್ರಮ : ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪಂಚರಥೋತ್ಸವ ಸಾಮಾನ್ಯವಾಗಿ ಪ್ರತಿವರ್ಷ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಡೆಯುತ್ತದೆ. ಈ ರಥೋತ್ಸವಕ್ಕೆ ಇಡೀ ನಂಜನಗೂಡು ಪಟ್ಟಣವೇ ತಳಿರು ತೋರಣಗಳಿಂದ ಅಲಂಕಾರಗೊಂಡು ನವವಧುವಿನಂತೆ ಕಂಗೊಳಿಸಿದರೆ, ಮನೆಮನೆಗಳಲ್ಲಿ ಹಬ್ಬದ ವಾತಾವರಣ ನೆಲೆಸುತ್ತದೆ. ದೂರದ ಊರಿನಲ್ಲಿ ನೆಲೆಸಿರುವವರು ತಪ್ಪದೆ ತಮ್ಮ ಊರಿಗೆ ಬಂದು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಹಿಂದೊಮ್ಮೆ ರಥೋತ್ಸವದ ಸಂದರ್ಭ ಅವಘಡ ಸಂಭವಿಸಿ ಓರ್ವ ಮೃತಪಟ್ಟು ಮೂವರು ತೀವ್ರಗಾಯಗೊಂಡ ಹಿನ್ನಲೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಬಹಳ ಹಿಂದಿನ ಕಾಲದ ರಥಗಳಾಗಿರುವುದರಿಂದ ಅವುಗಳ ಚಕ್ರಗಳು ಶಿಥಿಲಗೊಂಡಿತ್ತು. ಆದರೆ ಈ ಬಾರಿ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ರಥಗಳನ್ನು ಗೊಬ್ಬಳಿ ಮರ ಬಳಸಿ ದುರಸ್ತಿ ಮಾಡಲಾಗಿದೆ. ಕನ್ಯಾಕುಮಾರಿಯ ರಾಮಸ್ವಾಮಿ ಆಚಾರ್ ನೇತೃತ್ವದ 12 ಮಂದಿಯ ತಂಡ ದುರಸ್ತಿ ಕಾರ್ಯನಡೆಸಿದ್ದಾರೆ.

ರಥೋತ್ಸವದ ಪ್ರಯುಕ್ತ ಭಕ್ತರಿಗೆ ಅನುಕೂಲವಾಗುವಂತೆ ಮೈಸೂರಿನಿಂದ ನಂಜನಗೂಡಿಗೆ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ರಥೋತ್ಸವದಲ್ಲಿ ವಿವಿಧ ಸಂಘ ಸಂಸ್ಥೆಗಳು ಅನ್ನಸಂತರ್ಪಣೆ, ಪಾನಕ, ಮಜ್ಜಿಗೆ, ಕೋಸಂಬರಿಯನ್ನು ವಿತರಿಸಲು ಮುಂದಾಗಿವೆ.

English summary
Pilgrimage Tourism Karnataka : Nanjanagud Srikhanteshwara pancha Maha Rathotsava 17 March 2011. The temple town near Mysore all set for the Unique Car festival. Millions of Shiva devotees throng the temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X