ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಲುಕೋಟೆ ವೈರಮುಡಿ ಕ್ಷೇತ್ರ ಪುರಾಣ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Melkote Kshetra purana
ಪವಿತ್ರ ಕ್ಷೇತ್ರ ಮಾತ್ರವಲ್ಲದೆ, ಪ್ರವಾಸಿ ತಾಣವಾಗಿಯೂ ಆಸ್ತಿಕ-ನಾಸ್ತಿಕರೆನ್ನದೆ ಎಲ್ಲರನ್ನೂ ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುವ ತಾಣವೇ ಮೇಲುಕೋಟೆ. ಬೆಟ್ಟಗುಡ್ಡಗಳು... ಅವುಗಳ ಮೇಲೆ ಮತ್ತು ನಡುವೆ ನೆಲೆನಿಂತಿರುವ ಹತ್ತಾರು ದೇಗುಲಗಳು... ಸ್ಪಟಿಕದಂತೆ ಹೊಳೆಯುವ ಸುಂದರ ಕಲ್ಯಾಣಿ, ಕೆರೆಗಳು... ಹಚ್ಚ ಹಸಿರಿನೊಂದಿಗೆ ಸುತ್ತಲೂ ಹರಡಿಕೊಂಡಿರುವ ಕೃಷಿ ಭೂಮಿಗಳು... ಇಂತಹವೊಂದು ನಿಸರ್ಗ ಸುಂದರ ವಿಹಂಗಮ ನೋಟ ಮೇಲುಕೋಟೆಗೆ ತೆರಳಿದಾತನಿಗೆ ಲಭ್ಯವಾಗುತ್ತದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿಗೆ ಸೇರಿರುವ ಮೇಲುಕೋಟೆಯು ಮಂಡ್ಯದಿಂದ 28 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ಮೂರು ಸಾವಿರ ಅಡಿಯಷ್ಟು ಎತ್ತರದಲ್ಲಿದೆ. ಇದು ಭಾರತದಲ್ಲಿರುವ ಪವಿತ್ರ ಕ್ಷೇತ್ರಗಳ ಪೈಕಿ ಒಂದಾಗಿದ್ದು, ದಕ್ಷಿಣ ಭಾರತದ ಪ್ರಮುಖ ನಾಲ್ಕು ವೈಷ್ಣವ ಕ್ಷೇತ್ರ ( ಶ್ರೀರಂಗ, ತಿರುಪತಿ, ಕಾಂಚೀಪುರ, ಮೇಲುಕೋಟೆ)ಗಳಲ್ಲಿ ಒಂದಾಗಿದೆ.

ಮೇಲುಕೋಟೆಯಲ್ಲಿ ಪ್ರತಿವರ್ಷವೂ ಹಲವಾರು ಕಾರ್ಯಕ್ರಮ, ಉತ್ಸವಗಳು ನಡೆಯುತ್ತವೆಯಾದರೂ ಅವುಗಳಲ್ಲಿ ಹತ್ತು ದಿನಗಳ ಕಾಲ ನಡೆಯುವ ಚೆಲುವರಾಯಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಅತ್ಯಂತ ಪ್ರಮುಖವಾದುದಾಗಿದೆ. ಚೆಲುವರಾಯಸ್ವಾಮಿಯ ವೈರಮುಡಿಯ ಬ್ರಹ್ಮೋತ್ಸವವು ಪ್ರತಿ ವರ್ಷವೂ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಡೆಯುತ್ತದೆ. (ಪ್ರಸಕ್ತ ವರ್ಷ ಮಾರ್ಚ್ 12 ರಿಂದ 21ರವರೆಗೆ ನಡೆಯಲಿದ್ದು, ಮಾ.15ರಂದು ವೈರಮುಡಿ, ಮಾ.18ರಂದು ರಥೋತ್ಸವ ನಡೆಯಲಿದೆ.) ವೈರಮುಡಿ ಎಂಬುವುದು ವಜ್ರ ಖಚಿತ ಕಿರೀಟವಾಗಿದ್ದು, ಇದು ಶ್ರೀಮಾನ್ ನಾರಾಯಣನ ಕಿರೀಟವೆಂದೂ ದ್ವಾಪರಯುಗದಲ್ಲಿ ಕೃಷ್ಣನ ಮೂಲಕ ಚೆಲುವರಾಯನಿಗೆ ಗರುಡನಿಂದ ತೊಡಿಸಿದನೆಂಬುವುದು ಒಂದೆಡೆಯಾದರೆ, ಮತ್ತೊಂದೆಡೆ ವೈಕುಂಠದಿಂದ ರಾಕ್ಷಸ ವಿರೋಚನ ಕದ್ದಿದ್ದ ನಾರಾಯಣನ ಕಿರೀಟವನ್ನು ಗರುಡ ರಾಕ್ಷಸನೊಂದಿಗೆ ಹೋರಾಡಿ ಮರಳಿ ತಂದು ಚೆಲುವರಾಯನಿಗೆ ಅರ್ಪಿಸಿದನೆಂಬುದು ಜನವಲಯದಲ್ಲಿರುವ ನಂಬಿಕೆಯಾಗಿದೆ.

ಇದನ್ನು ಚೆಲುವರಾಯಸ್ವಾಮಿಗೆ ಧರಿಸುವ ಸಂದರ್ಭ ನಡೆಯುವ ಉತ್ಸವವೇ ವೈರಮುಡಿ ಬ್ರಹ್ಮೋತ್ಸವವಾಗಿದೆ. ಇದು ಹೇಗೆ ಆಚರಣೆಗೆ ಬಂತೆಂಬುವುದರ ಬಗ್ಗೆ ಪುರಾಣದ ಕಥೆಯೊಂದು ಪ್ರಚಲಿತದಲ್ಲಿರುವದನ್ನು ನಾವು ಕಾಣಬಹುದು.

ಕ್ಷೇತ್ರ ಪುರಾಣ : ಅದು ತ್ರೇತಾಯುಗದ ದಿನಗಳು... ಅಯೋಧ್ಯೆಯಲ್ಲಿ ದಶರಥ ಮಹಾರಾಜ ತನ್ನ ಮಾನಸ ಪುತ್ರ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿ, ಪಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನವನ್ನು ಗೊತ್ತು ಮಾಡಿ ಅರಮನೆಯಲ್ಲಿ ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿದ್ದನು. ಇನ್ನೇನು ಪಟ್ಟಾಭಿಷೇಕ ನಡೆಯಬೇಕೆನ್ನುವಷ್ಟರಲ್ಲಿ ಕೈಕೇಯಿಯ ಕುತಂತ್ರದಿಂದಾಗಿ ಶ್ರೀರಾಮ ವನವಾಸಕ್ಕೆ ತೆರಳಬೇಕಾಯಿತು. ಆದರೆ ತನ್ನ ಅಣ್ಣ ಶ್ರೀರಾಮನ ಪಟ್ಟಾಭಿಷೇಕವನ್ನು ಕಣ್ಣಾರೆ ನೋಡಬೇಕೆನ್ನುವ ಬಯಕೆಯಲ್ಲಿದ್ದ ತಮ್ಮ ಲಕ್ಷಣನಿಗೆ ತನ್ನ ಆಸೆ ಈಡೇರಲಿಲ್ಲವಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು.

ಆದರೆ ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಆದಿಶೇಷನ ಅವತಾರವಾಗಿದ್ದ ಲಕ್ಷ್ಮಣ ಮುಂದೆ ಕಲಿಯುಗದಲ್ಲಿ ರಾಮಾನುಜರಾಗಿ ಜನಿಸಿ, ಶ್ರೀರಾಮನ ಆರಾಧ್ಯದೈವ ಚೆಲುವರಾಯಸ್ವಾಮಿ ನೆಲೆಸಿದ ಮೇಲುಕೋಟೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕೆ ನಿಗದಿಪಡಿಸಿದ ಫಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನದಂದೇ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಧರಿಸುವ ಮೂಲಕ ತನ್ನ ಮನದ ಇಚ್ಛೆಯನ್ನು ನೆರವೇರಿಸಿಕೊಂಡನಂತೆ ಈ ಸುದಿನವನ್ನು ಪ್ರತಿವರ್ಷವೂ ವೈರಮುಡಿ ಬ್ರಹ್ಮೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಮೈಸೂರು ರಾಜರ ಆಡಳಿತದಲ್ಲಿ ವೈರಮುಡಿ ಕಿರೀಟ ರಾಜಾಶ್ರಯದಲ್ಲಿತ್ತಾದರೂ ಬಳಿಕ ಸರ್ಕಾರದ ವಶಕ್ಕೆ ಹಸ್ತಾಂತರಿಸಲಾಯಿತು. ಈಗ ಮಂಡ್ಯದ ಸರ್ಕಾರಿ ಖಜಾನೆಯಲ್ಲಿದ್ದು, ಉತ್ಸವದ ಸಂದರ್ಭ ವೈರಮುಡಿ, ರಾಜಮುಡಿ ಕಿರೀಟವನ್ನು ಬಿಗಿ ಭದ್ರತೆಯಲ್ಲಿ ಮೇಲುಕೋಟೆಗೆ ತರಲಾಗುತ್ತದೆಯಲ್ಲದೆ, ಬಳಿಕ ದ್ವಾರದ ಹನುಮಂತನ ಗುಡಿಯ ಬಳಿಯಿಂದ ಬೆಳ್ಳಿ ಪಲ್ಲಕಿಯಲ್ಲಿರಿಸಿ ಪೂಜಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ.

ವೈರಮುಡಿ : ಬ್ರಹ್ಮೋತ್ಸವ ಸಂದರ್ಭ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಮಾತ್ರವಲ್ಲದೆ, ಮೈಸೂರು ಅರಸರಾದ ರಾಜ ಒಡೆಯರ್ ಅರ್ಪಿಸಿದ ರಾಜಮುಡಿಯಲ್ಲದೆ, ಗಂಡಭೇರುಂಡ ಪದಕ, ಶಂಖ, ಚಕ್ರ, ಗಧೆ, ಪದ್ಮಪೀಠ, ಕರ್ಣಕುಂಡಲ ಸೇರಿದಂತೆ ೧೪ ಆಭರಣಗಳನ್ನು ಧರಿಸಲಾಗುತ್ತದೆ.

ಹತ್ತು ದಿನಗಳ ಉತ್ಸವದಲ್ಲಿ ಪ್ರತಿದಿನವೂ ವಿವಿಧ ಕೈಂಕರ್ಯಗಳೊಂದಿಗೆ ಉತ್ಸವ ನಡೆಯುತ್ತದೆ. ಸಂಜೆ ನಡೆಯುವ ಕಲ್ಯಾಣೋತ್ಸವದ ಮೂಲಕ ಉತ್ಸವ ಆರಂಭವಾಗುತ್ತದೆ. ಧ್ವಜಾರೋಹಣಂದು ಗರುಡನಿಗೆ ಪೂಜೆ ಸಲ್ಲಿಸುವುದರೊಂದಿಗೆ ಬ್ರಹ್ಮೋತ್ಸವಕ್ಕೆ ದೇವಾನುದೇವತೆಗಳನ್ನು ಆಹ್ವಾನಿಸಲಾಗುವುದು. ಆ ದಿನ ಚೆಲುವರಾಯಸ್ವಾಮಿ ಹಂಸವಾಹನದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ. ಎರಡನೆಯ ದಿನ ಶ್ರೀದೇವಿ ಭೂದೇವಿಯರೊಂದಿಗೆ ಶೇಷವಾಹನದ ಸೊಬಗಾದರೆ, ಮೂರನೆಯ ದಿನ ಕಲ್ಯಾಣನಾಯಕಿ ಅಮ್ಮನವರೊಂದಿಗೆ ಬಂಗಾರದ ಪಲ್ಲಕ್ಕಿಯಲ್ಲಿ ನಾಗವಲ್ಲಿ ಮಹೋತ್ಸವದ ಮೆರವಣಿಗೆ ನಡೆಯುತ್ತದೆ. ಅಲ್ಲದೆ ಲೋಕಕಲ್ಯಾಣಾರ್ಥ ಹೋಮ ಕೂಡ ಮಾಡಲಾಗುತ್ತದೆ.

ಜಾತ್ರೆಯಲ್ಲಿ ನಾಲ್ಕನೆಯ ದಿನವು ಬಹಳ ಪ್ರಮುಖ ದಿನವಾಗಿದ್ದು ಅಂದು ರಾತ್ರಿ ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾದ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಹಾಗೂ ಬ್ರಾಹ್ಮಿ ಮುಹೂರ್ತದಲ್ಲಿ ರಾಜಮುಡಿ ಕಿರೀಟವನ್ನು ಧಾರಣೆ ಮಾಡಲಾಗುತ್ತದೆ. ಐದನೆಯ ದಿನ ಸಂಜೆ ದೇಶಿಕರ ಸನ್ನಿಧಿಯಲ್ಲಿ ಪ್ರಹ್ಲಾದ ಪರಿಪಾಲನೋತ್ಸವ ನಡೆಯುತ್ತದೆ. ಅಂದು ರಾತ್ರಿ ಬಂಗಾರದ ಗರುಡವಾಹನದಲ್ಲಿ ಅಲಂಕಾರಗೊಂಡ ಚೆಲುವರಾಯಸ್ವಾಮಿ ಭಕ್ತರಿಗೆ ದರ್ಶನ ನೀಡುತ್ತಾನೆ. ಆರನೆಯ ದಿನ ಗಜೇಂದ್ರಮೋಕ್ಷ ಅಲಂಕಾರದ ವೈಭೋತ್ಸವ ಬಳಿಕ ಆನೆ, ಕುದುರೆ ಮಹೋತ್ಸವವು ನಡೆಯುತ್ತದೆ.

ಏಳನೆಯ ದಿನ ಶ್ರೀದೇವಿ, ಭೂದೇವಿ, ಕಲ್ಯಾಣನಾಯಕಿ ಹಾಗೂ ರಾಮಾನುಜರೊಂದಿಗೆ ಮಹಾರಥೋತ್ಸವವು ನಡೆಯುತ್ತದೆ. ರಾತ್ರಿ ಬಂಗಾರದ ಪಲ್ಲಕಿ ಸೇವೆಯೂ ಜರುಗುತ್ತದೆ. ಎಂಟನೆಯ ದಿನದಂದು ಕಲ್ಯಾಣಿಯಲ್ಲಿ ಚೆಲುವರಾಯಸ್ವಾಮಿಯ ತೆಪ್ಪೋತ್ಸವವು ನಡೆಯುತ್ತದೆ. ಒಂಭತ್ತನೆಯ ದಿನ ತೀರ್ಥಸ್ನಾನ, ಅವಭೃತ ನಂತರ ಸಂಜೆ ಪರಕಾಲ ಮಠದಲ್ಲಿ ವೈಭವದಿಂದ ಪಟ್ಟಾಭಿಷೇಕ ಜರುಗುತ್ತದೆ. ಹತ್ತನೆಯ ದಿನ ಜಾತ್ರೆಯ ಅಂತಿಮ ದಿನವಾಗಿದ್ದು ಅಂದು ಶ್ರೀಚೆಲುವರಾಯಸ್ವಾಮಿಗೆ ಮಹಾಭಿಷೇಕ ನೆರವೇರುತ್ತದೆ. ಅಲ್ಲಿಗೆ ವೈರಮುಡಿ ಜಾತ್ರೆಯ ಸಂಭ್ರಮ ಮುಗಿದು ಹೋಗುತ್ತದೆ. ಜಾತ್ರೆಗೆ ಸುತ್ತಮುತ್ತಲ ಹಳ್ಳಿಗಳಿಂದ ದೂರದ ಊರುಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡು ಪುನೀತರಾದ ಸಂತಸದಲ್ಲಿ ಮನೆಗೆ ತೆರಳುತ್ತಾರೆ.

ಹಾಗೆ ನೋಡಿದರೆ ವೈರಮುಡಿ ಬ್ರಹ್ಮೋತ್ಸವ ಕಳೆದ ತಕ್ಷಣ ಜನಜಂಗುಳಿ ಕಡಿಮೆಯಾಗುವುದಿಲ್ಲ. ಇಲ್ಲಿಗೆ ವರ್ಷಪೂರ್ತಿ ದೇಶ, ವಿದೇಶದಿಂದ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಏಕೆಂದರೆ ಈ ತಾಣದ ಮಹಿಮೆಯೇ ಹಾಗಿದೆ. ಇಲ್ಲಿ ಹಲವಾರು ದೇಗುಲಗಳು, ಕಲ್ಯಾಣಿಗಳು, ಕೆರೆಗಳು ಇರುವುದನ್ನು ನಾವು ಕಾಣಬಹುದು, ವಿಶಿಷ್ಟ ವಾಸ್ತುಶಿಲ್ಪದ ವಿಶಾಲವಾದ ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ಚೆಲುವರಾಯಸ್ವಾಮಿ ದೇಗುಲ ಹಾಗೂ ಬೆಟ್ಟದ ಮೇಲೆ ನೆಲೆ ನಿಂತಿರುವ ಯೋಗನರಸಿಂಹ ದೇವಾಲಯದ ನಡುವೆ ಬದರಿ ನಾರಾಯಣ ದೇವಾಲಯ, ಪಟ್ಟಾಭಿರಾಮ ದೇವಾಲಯ, ಶಾಂಡಿಲ್ಯದ ಸನ್ನಿಧಿ, ಕುಲಶೇಖರ್ ಆಳ್ವಾರ್ ಸನ್ನಿಧಿ, ಜೀಯರ್ ಸನ್ನಿಧಿ, ವೇದಾಂತದೇಶಿಕರ ಸನ್ನಿಧಿ, ಕೇಶವ ದೇವರ ಸನ್ನಿಧಿ, ನಂಜೀಯರ್ ಸನ್ನಿಧಿ, ಮಾರಮ್ಮನ ಸನ್ನಿಧಿ, ಪೇಟೆ ಆಂಜನೇಯ ಸನ್ನಿಧಿ, ನಮ್ಮಾಳ್ವಾರ್ ಗುಡಿ, ತಿರುಮಂಗೈ ಆಳ್ವಾರ್ ಗುಡಿ, ಪೇಟೆ ಕೃಷ್ಣದೇವರ ಗುಡಿ, ಸೀತಾರಣ್ಯ ಕ್ಷೇತ್ರ, ಕರಣಿಕ ನಾರಾಯಣನ ಗುಡಿ, ವೆಂಕಟೇಶ್ವರ ಗುಡಿ, ಪರಕಾಲ ಮಠ, ಅಹೋಬಲ ನರಸಿಂಹ ಸ್ವಾಮಿ ಸನ್ನಿಧಿ, ಆದಿಶೇಷ ಸನ್ನಿಧಿ, ಪಂಚ ಭಾಗವತ ಕ್ಷೇತ್ರ ಸನ್ನಿಧಿ, ಪೇಯಾಳ್ವಾರ್ ಸನ್ನಿಧಿ, ವರಾಹ ದೇವಾಲಯ, ಬಿಂದು ಮಾಧವ ದೇವಾಲಯ, ಹನುಮಾನ್ ದೇವಾಲಯ, ಹಯಗ್ರೀವ ಸನ್ನಿಧಿ, ಲಕ್ಷ್ಮಿ ನಾರಾಯಣ ಸನ್ನಿಧಿ, ದತ್ತ ನಾರಾಯಣ ಗುಡಿ, ವರಸಿದ್ದಿ ವಿನಾಯಕ (ಏಕಶಿಲೆ ಗಣಪ), ಕೇಶವ (ನಯನಕ್ಷೇತ್ರ), ಶನೇಶ್ವರ ಗುಡಿ, ಕವಿಗಲ್ ಆಂಜನೇಯ ಗುಡಿ, ಕರಮೆಟ್ಟಿಲು ಆಂಜನೇಯ ಗುಡಿ, ಮೂಡ ಬಾಗಿಲು ಆಂಜನೇಯ ಗುಡಿ, ರಾಯರಗೋಪುರ ಆಂಜನೇಯ ಗುಡಿ, ಚೋಳರ ಬಂಡೆ, ಶ್ರೀನಿವಾಸ ದೇವಾಲಯ, ಸುಗ್ರೀವನ ಗುಡಿ, ಕಾಳಮ್ಮನ ಗುಡಿ, ಗರುಡ ದೇವರ ಗುಡಿ, ಆಂಜನೇಯ ಗುಡಿ(ಅಕ್ಕ ತಂಗಿಯರ ಹೊಂಡ), ಹೊರತಮ್ಮನ ದೇವಾಲಯ, ಶಿವನ ಗುಡಿ(ಉಳ್ಳಿಬಾವಿ) ಮೊದಲಾದ ದೇವಾಲಯಗಳಿವೆ.

ಇನ್ನು ಇಲ್ಲಿರುವ ವಿಶಾಲ ಭವ್ಯ ಕಲ್ಯಾಣಿ, ತೆಪ್ಪಕೊಳ, ಅಕ್ಕತಂಗಿಕೊಳ(ಚಲುವರಸಿಯರ ಕೊಳ), ನಿಂಗಣ್ಣನ ಕಟ್ಟೆ, ನಕ್ಷತ್ರಕೊಳ, ವೃತ್ತಕೊಳ, ಬಸವರಾಜನಕೊಳ, ವೇದಪುಷ್ಕರಣಿ, ಚಿಕ್ಕಯ್ಯನಕೊಳ, ದರ್ಭತೀರ್ಥ, ಯಾದವತೀರ್ಥ, ಪಲಾಶ ತೀರ್ಥ, ಮೈತ್ರೇಯ ತೀರ್ಥ, ಪದ್ಮತೀರ್ಥ, ನಾರಾಯಣ ತೀರ್ಥ, ತೊಟ್ಟಿಲಮಡು, ಹಾಲುಕೊಲ, ಭಟ್ಟರಕೊಳ, ನರಸಿಂಹಮಡು(ಬೆಟ್ಟದಕೊಳ), ಅಜ್ಜನಕಟ್ಟೆ, ಅಕ್ಕತಂಗಿಕೊಳ(ಗಿರಿ ಪ್ರದಕ್ಷಿಣೆ), ಒಕ್ಕರಣೆ(ಪಂಚಬಾವಿ), ಒಂಭತ್ತು ಕಲ್ಲು ಬಾವಿ, ಹೊಸಬಾವಿ, ಛತ್ರಿಕೊಳ, ಸಂತೆಮಡು, ಗಣಪತಿ ಕಟ್ಟೆ, ಪುಟ್ಟನರಸೀಕೊಳ, ಸಿಹಿನೀರುಕೊಳ, ಕೆಳಗಿನ ಚಿಕ್ಕಯ್ಯನಕೊಳ ಮೊದಲಾದ ನೀರಿನಕೊಳಗಳು ಹಾಗೂ ದಳವಾಯಿ ಕೆರೆ, ಹೊಸಕೆರೆ, ಯಾದವ, ಹೆಬ್ಬಳ್ಳ ಕೆರೆಗಳು ಇವೆಯಲ್ಲದೆ, ಯತಿರಾಜ ಮಠ, ವಾನಮಾಮಲೈ ಮಠ, ಪರಕಾಲ ಮಠ, ಅಹೋಬಲ ಮಠ, ಆಂಡವನ್ ಆಶ್ರಮಂ, ಕಂಚಿವಾದ ಕೇಸರಿ ಆಳಹಿಯ ಮಣವಾದ ಮಠ, ತ್ರಿದಂಡಿ ಚಿನ್ನಜೀಯಾರ್ ಮಠ, ತಿರುಪತಿ ಪೆರಿಯ ಜೀಯಾರ್ ಮಠ, ಬೈರಾಗಿ ಮಠಗಳಿವೆ. ಅಲ್ಲದೆ ಮೇಲುಕೋಟೆಯಲ್ಲಿ ಪ್ರೇಕ್ಷಣೀಯ ತಾಣಗಳಾಗಿ ಪ್ರವಾಸಿಗರನ್ನು ರಾಯಗೋಪುರ(ಪಟ್ಟಣದ ಬಾಗಿಲು), ನಯನಕ್ಷೇತ್ರ(ಗುಹಾಂತರ ದೇವಾಲಯ), ತಾರ್ಕ್ಷ್ಯ ಕ್ಷೇತ್ರ, ಏಕಶಿಲಾ ಗಣಪತಿ, ಅಕ್ಕತಂಗಿಯರ ಕೊಳ, ಭುವನೇಶ್ವರಿ ಮಂಟಪ, ದಳವಾಯಿಕೆರೆ, ಹೊಗರಮ್ಮನ ಗುಡಿ ಗಮನಸೆಳೆಯತ್ತದೆ.

English summary
Large number of devotees throng Mandhya district, on the Brahmotsava night to witness the Procession of the Lord Cheluva Narayana in Melkote. Lord Cheluva Narayana will be fitted with diamond crown. It is one of the most important festivals for Sri Vaishnavas in Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X