ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಸಿಗರಿಗೆ ದೂರವಾದ ಚಿಕ್ಲಿಹೊಳೆ ಜಲಾಶಯ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Chiklihole Dam, Kodagu
ಕೊಡಗಿನಲ್ಲಿ ಪ್ರವಾಸಿಗರ ವೀಕ್ಷಣೆಗೆ ಅರ್ಹವಾದಂತಹ ಹತ್ತಾರು ತಾಣಗಳಿದ್ದು, ಅವುಗಳ ಪೈಕಿ ಚಿಕ್ಲಿಹೊಳೆ ಜಲಾಶಯವೂ ಒಂದಾಗಿದೆ. ಈ ಜಲಾಶಯ ಇತರೆ ಜಲಾಶಯಗಳೊಂದಿಗೆ ಹೋಲಿಕೆ ಮಾಡುವಷ್ಟು ದೊಡ್ಡದಾಗಿಲ್ಲ ಆದರೆ ಈ ಜಲಾಶಯವನ್ನು ಅಭಿವೃದ್ಧಿಪಡಿಸಿದ್ದೇ ಆದಲ್ಲಿ ಖಂಡಿತಾ ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ.

ಚಿಕ್ಲಿಹೊಳೆ ಜಲಾಶಯ ಪ್ರಕೃತಿಯ ರಮಣೀಯ ತಾಣದಲ್ಲಿ ನೆಲೆ ನಿಂತಿರುವುದರಿಂದಾಗಿ ನಿಸರ್ಗ ಪ್ರೇಮಿಗಳು ಅತ್ತ ಹೆಜ್ಜೆ ಹಾಕಿ ಒಂದಷ್ಟು ಹೊತ್ತನ್ನು ಪ್ರಶಾಂತ, ಸುಂದರ ವಾತಾವರಣದಲ್ಲಿ ಕಳೆದು ಬರುತ್ತಾರೆ.

ಹಾಗೆನೋಡಿದರೆ ಹೆಚ್ಚಿನವರಿಗೆ ಹಾರಂಗಿ ಜಲಾಶಯವನ್ನು ಹೊರತು ಪಡಿಸಿದರೆ ಕೊಡಗಿನಲ್ಲಿ ಮತ್ತೊಂದು ಪುಟ್ಟದಾದ ಚಿಕ್ಲಿಹೊಳೆಜಲಾಶಯದ ಬಗ್ಗೆ ತಿಳಿದೇ ಇಲ್ಲ ಎನ್ನಬೇಕು. ಇವತ್ತು ಈ ಜಲಾಶಯ ಸಂಬಂಧಿಸಿದ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾಗಿದ್ದು, ದಿನದಿಂದ ದಿನಕ್ಕೆ ತನ್ನ ಅವಶೇಷವನ್ನು ಕಳೆದುಕೊಂಡು ಅನಾಥವಾಗುತ್ತಿದೆ ಎಂದರೆ ತಪ್ಪಾಗಲಾರದು. ಕೆಲವೊಮ್ಮೆ ಜಲಾಶಯಕ್ಕೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿನ ಅವ್ಯವಸ್ಥೆಯನ್ನು ಕಣ್ಣಾರೆ ಕಂಡು ಹಿಡಿಶಾಪ ಹಾಕುತ್ತಾರೆ.

ಮಡಿಕೇರಿಯಿಂದ ಸುಮಾರು 26 ಕಿ.ಮೀ. ದೂರದಲ್ಲಿರುವ ಚಿಕ್ಲಿಹೊಳೆ ಜಲಾಶಯಕ್ಕೆ ಯಾವುದೇ ಬಸ್ ಸೌಲಭ್ಯವಿಲ್ಲ. ಹಾಗಾಗಿ ಸ್ವಂತ ವಾಹನಗಳಲ್ಲಿ ಅಥವಾ ಮಡಿಕೇರಿಯಿಂದ ಸುಂಟಿಕೊಪ್ಪದವರೆಗೆ ಬಸ್‌ನಲ್ಲಿ ತೆರಳಿ ಅಲ್ಲಿಂದ ಕಂಬಿಬಾಣೆಗೆ ಆಟೋ ಅಥವಾ ಜೀಪಿನಲ್ಲಿ ತೆರಳಬಹುದು. ಎರಡು ಗುಡ್ಡದ ನಡುವೆ ಹರಿಯುತ್ತಿದ್ದ ಚಿಕ್ಲಿಹೊಳೆಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿ ಜಲಾಶಯವನ್ನು ನಿರ್ಮಿಸಲಾಗಿದೆ.

ಜಲಾಶಯದ ಹಿಸ್ಟರಿ: ಈ ಜಲಾಶಯವನ್ನು ಕೃಷಿ ಉದ್ದೇಶದಿಂದ 1982ರಲ್ಲಿ ನಿರ್ಮಿಸಲಾಗಿದೆ. ಆದರೆ ಬ್ರಿಟಿಷರ ಕಾಲದಲ್ಲಿಯೇ ಕೃಷಿಗೆ ನೀರು ಹರಿಸಲು ಇಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಸ್ವಾತಂತ್ರ್ಯ ನಂತರ 1978ರಲ್ಲಿ ಶಂಕುಸ್ಥಾಪನೆ ನೆರವೇರಿಸಿ 1982ರಲ್ಲಿ ಜಲಾಶಯ ನಿರ್ಮಾಣವಾಯಿತು.

ಒಂದೆಡೆ ಕಾಫಿ ತೋಟ ಮತ್ತೊಂದೆಡೆ ಅರಣ್ಯ ಇದರ ನಡುವಿನ ಪ್ರಕೃತಿಯ ಮಡಿಲಲ್ಲಿ ನಿರ್ಮಾಣಗೊಂಡ ಜಲಾಶಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಅಷ್ಟೇ ಅಲ್ಲ ಈ ಜಲಾಶಯ ಸುತ್ತಮುತ್ತಲಿನ ವಿರುಪಾಕ್ಷಪುರ, ರಸೂಲ್‌ಪುರ, ರಂಗಸಮುದ್ರ, ಬೊಳ್ಳೂರು, ಬಸವನಹಳ್ಳಿ, ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ, ಹೊಸಪಟ್ಟಣ ಮುಂತಾದ ಗ್ರಾಮಗಳ ರೈತರ ಸುಮಾರು ಎರಡು ಸಾವಿರ ಎಕರೆಗೂ ಹೆಚ್ಚು ಕೃಷಿ ಭೂಮಿಗೆ ನೀರನ್ನು ಒದಗಿಸುತ್ತಿತ್ತು.

ಆ ಕಾಲದಲ್ಲಿ ಸಮೃದ್ಧ ಮಳೆಯಾಗುತ್ತಿದ್ದುದರಿಂದ ಮುಂಗಾರು ಪ್ರಾರಂಭವಾಗುತ್ತಿದ್ದಂತೆಯೇ ಜಲಾಶಯ ಭರ್ತಿಯಾಗಿ ರೈತರಿಗೆ ನೀರೊದಗಿಸುತ್ತಿತ್ತು. ಜಲಾಶಯದ ಪಕ್ಕದಲ್ಲಿಯೇ ಕಾವೇರಿ ನೀರಾವರಿ ನಿಗಮದ ಕಛೇರಿಯಿದ್ದುದರಿಂದ ಎಲ್ಲವೂ ಸಮರ್ಪಕವಾಗಿ ನಡೆಯುತ್ತಿತ್ತು.

ಅವತ್ತು ಈ ಜಲಾಶಯದ ಬಗ್ಗೆ ಒಂದಷ್ಟು ಕಾಳಜಿ ವಹಿಸಿ ಅಭಿವೃದ್ಧಿಪಡಿಸಿದ್ದರೆ ಬಹುಶಃ ಇದೊಂದು ಸುಂದರ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿತ್ತು. ಆದರೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಲಾಶಯ ಅಭಿವೃದ್ಧಿ ಕಾಣುವ ಬದಲು ಅಧೋಗತಿಯತ್ತ ಸಾಗತೊಡಗಿತು.

ಜಲಾಗಾರ, ಸಮಸ್ಯೆಗಳ ಆಗರ: ಈ ಜಲಾಶಯವನ್ನು ಕಾಯಲು ಕಾವಲುಗಾರರನ್ನು ನೇಮಿಸದ ಕಾರಣ ಜಲಾಶಯದ ಉದ್ದಕ್ಕೂ ನಿರ್ಮಿಸಲಾಗಿದ್ದ ಕಬ್ಬಿಣದ ಸರಪಳಿಗಳು, ಯಂತ್ರೋಪಕರಣಗಳ ಬಿಡಿಭಾಗಗಳು ಕಳ್ಳರ ಪಾಲಾಗಿದೆ. ಅಷ್ಟೇ ಅಲ್ಲ ನಿರ್ಜನ ಪ್ರದೇಶವಾದುದರಿಂದ ಮೋಜು ಮಸ್ತಿ ಹಾಗೂ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಾಡಾಗುತ್ತಿದೆ. ಹೀಗಾಗಿ ದೂರದಿಂದ ಬರುವ ಪ್ರವಾಸಿಗರು ಮುಜುಗರಕ್ಕೊಳಗಾಗುವಂತಹ ಸನ್ನಿವೇಶ ನಿರ್ಮಾಣವಾಗಿದೆ.

ಈ ಜಲಾಶಯದ ಹೂಳನ್ನು ಸಮರ್ಪಕವಾಗಿ ತೆಗೆಯದ ಕಾರಣ ಹೆಚ್ಚು ನೀರು ಶೇಖರಣೆಯಾಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಈ ಜಲಾಶಯದಲ್ಲಿ ದೇವಾಲಯವೊಂದು ಮುಳುಗಡೆಯಾಗಿದ್ದು, ಬೇಸಿಗೆ ಬರುತ್ತಿದ್ದಂತೆಯೇ ನೀರು ಕಡಿಮೆಯಾದಾಗ ದೇವಾಲಯ ಕಾಣಸಿಗುತ್ತದೆ. ಈ ಜಲಾಶಯದಲ್ಲಿ ಇರುವುದು ಒಂದೇ ಕ್ರೆಸ್ಟ್‌ಗೇಟ್ ಜಲಾಶಯದ ಗರಿಷ್ಠ ಮಟ್ಟಕ್ಕಿಂತ ಹೆಚ್ಚಿನ ನೀರು ತುಂಬಿದ ಸಂದರ್ಭ ಅದು ತಾನಾಗಿಯೇ ಹರಿದು ಹೋಗಲು ಅನುಕೂಲವಾಗುವಂತೆ ಜಲಾಶಯದ ಒಂದು ಬದಿಯಲ್ಲಿ ವೃತ್ತಾಕಾರದ ತೂಬನ್ನು ಮಾಡಿದ್ದಾರೆ. ಇದರ ಮೂಲಕ ನೀರು ಹರಿದು ಹೋಗುತ್ತದೆ.

ಮಳೆಸುರಿದು ಜಲಾಶಯ ತುಂಬಿದಾಗ ಹೆಚ್ಚಾದ ನೀರು ವೃತ್ತಾಕಾರವಾಗಿ ಧುಮುಕುತ್ತಾ ತೂಬಿನ ಮೂಲಕ ಹರಿದು ಹೋಗುವ ದೃಶ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗಿ ಬಿಡುತ್ತದೆ. ಮಳೆಗಾಲದಲ್ಲಿ ಈ ಮನಮೋಹಕ ದೃಶ್ಯವನ್ನು ನೋಡಲೆಂದೇ ಪ್ರವಾಸಿಗರು ತಂಡೋಪತಂಡವಾಗಿ ಇತ್ತ ಬರುತ್ತಿರುತ್ತಾರೆ. ಜಲಾಶಯದ ಸುತ್ತಲೂ ತಂತಿಬೇಲಿ ನಿರ್ಮಿಸಿ ಉದ್ಯಾನವನ ಮಾಡಿದ್ದೇ ಆದರೆ ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ. ಆದರೆ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಇಚ್ಚಾಕೊರತೆಯಿಂದಾಗಿ ಅಭಿವೃದ್ಧಿ ಬದಲಾಗಿ ಅವನತಿಯತ್ತ ಸಾಗುತ್ತಿದೆ.

ರೈತರ ಕೃಷಿ ಭೂಮಿಗೆ ನೀರೊದಗಿಸುವ ಉದ್ದೇಶದಿಂದ ಜಲಾಶಯವನ್ನು ನಿರ್ಮಿಸಲಾಗಿದ್ದರೂ ರೈತರ ಕೃಷಿ ಭೂಮಿಗೆ ಅದು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತದೆ. ಸಕಾಲದಲ್ಲಿ ನಾಲೆಗಳಿಗೆ ನೀರು ಹರಿಸದೆ ರೈತರು ಪ್ರತಿವರ್ಷವೂ ಪ್ರತಿಭಟನೆ ನಡೆಸಿ ನೀರು ಪಡೆಯುವ ಸನ್ನಿವೇಶವೂ ಸೃಷ್ಟಿಯಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ.

2006ರಲ್ಲಿ ಚಿಕ್ಲಿಜಲಾಶಯಕ್ಕೆ ಸಂಬಂಧಿಸಿದ ಎಲ್ಲಾ ಕಛೇರಿಗಳನ್ನು ಹಾರಂಗಿ ಜಲಾಶಯಕ್ಕೆ ವರ್ಗಾಯಿಸಲಾಗಿದೆ. ಹಾಗಾಗಿ ಅಧಿಕಾರಿಗಳಿಗೆ ಇಲ್ಲಿಯ ಸಮಸ್ಯೆ ಅರ್ಥವಾಗುತ್ತಲೇ ಇಲ್ಲ. ಜೊತೆಗೆ ನಾಲೆಗಳು ಕೂಡ ದುಸ್ಥಿತಿಯಲ್ಲಿದ್ದು ಅವುಗಳನ್ನು ದುರಸ್ತಿಪಡಿಸದ ಕಾರಣದಿಂದಾಗಿ ನೀರು ಕೂಡ ಪೋಲಾಗುತ್ತಿದೆ. ಹೀಗೆ ಹತ್ತು ಹಲವು ಸಮಸ್ಯೆಗಳ ಆಗರವಾಗಿರುವ ಜಲಾಶಯದತ್ತ ಸಂಬಂಧಿಸಿದವರು ಗಮನಹರಿಸಿ ಅಭಿವೃದ್ಧಿಪಡಿಸಿದ್ದೇ ಆದರೆ ಚಿಕ್ಲಿಹೊಳೆ ಜಲಾಶಯ ಜಿಲ್ಲೆಯಲ್ಲಿಯೇ ಅತ್ಯುತ್ತಮ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರುರು?

English summary
Chiklihole reservoir in Coorg is located in between Madikeri and Kushalnagar. Chiklihole dam the lesser known plac is also near to Dubare. There is no direct transport service from Madikeri. Tourists need to take Suntikoppa bus and travel by auto or jeep to Chilihole. Nobody is bothered to improve this dam and all ayes are on Harangi Dam which is main attraction in Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X