ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಡ ಬನ್ನಿ ಮುಡುಕುತೊರೆ ಜಾತ್ರೆ...

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Mudukuthore Mallikarjuna Temple
ಐತಿಹಾಸಿಕ ಕ್ಷೇತ್ರ ತಲಕಾಡು ಬಳಿಯಿರುವ ಮುಡುಕುತೊರೆಯಲ್ಲೀಗ ಜಾತ್ರೆಯ ಸಂಭ್ರಮ... ಸುತ್ತಮುತ್ತಲಿನ ಹಳ್ಳಿಗಳಲ್ಲದೆ, ದೂರದ ಊರಿನಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದು ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಆಧಿದೇವತೆ ಮಲ್ಲಿಕಾರ್ಜುನನ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಇಲ್ಲಿ ದಿನನಿತ್ಯ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿವೆ.

ವಿಶಿಷ್ಟ ಜಾತ್ರೆ: ಇತರೆ ಕಡೆಗಳಲ್ಲಿ ನಡೆಯುವ ಜಾತ್ರೆಗೆ ಹೋಲಿಸಿದರೆ ಮುಡುಕುತೊರೆಯಲ್ಲಿ ನಡೆಯುವ ಜಾತ್ರೆ ಒಂದೆರಡು ದಿನಕ್ಕೆ ಸೀಮಿತವಾಗಿರದೆ ಇಲ್ಲಿ ಬರೋಬ್ಬರಿ ಹದಿನೇಳು ದಿನ ನಡೆಯುತ್ತದೆ. ಈಗಾಗಲೇ ಜಾತ್ರೆ (ಫೆ.5ರಿಂದ) ಆರಂಭವಾಗಿದ್ದು, ಫೆಬ್ರವರಿ 21ರವರೆಗೆ ನಡೆಯಲಿದೆ. ಫೆ.12ರಂದು ಮಹಾರಥೋತ್ಸವ ನಡೆಯಲಿದೆ.

ಬಳಿಕ ಫೆ.13 ರಿಂದ 21ರವರೆಗೆ ಕ್ರಮವಾಗಿ ಶಯನೋತ್ಸವ, ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವ, ಕೈಲಾಸ ವಾಹನೋತ್ಸವ, ಮಂಟಪೋತ್ಸವಗಳು, ಗಿರಿ ಪ್ರದಕ್ಷಿಣೆ, ಪರ್ವತ ಪರಿಷೆ ಕಾರ್ಯಕ್ರಮಗಳು ನಡೆಯಲಿವೆಯಲ್ಲದೆ, ಮಹಾಭಿಷೇಕದೊಂದಿಗೆ ಜಾತ್ರೆಗೆ ತೆರೆಬೀಳಲಿದೆ.

ವಿಶಾಲವಾಗಿ ಹರಿಯುವ ಕಾವೇರಿ ನದಿ... ಸುತ್ತ ಮುತ್ತ ಹಸಿರಿನಿಂದ ಕಂಗೊಳಿಸುವ ನಿಸರ್ಗ... ಬೆಟ್ಟದ ಮೇಲೆ ಭವ್ಯ ಮಲ್ಲಿಕಾರ್ಜುನ ಸ್ವಾಮಿ ದೇಗುಲ... ಮುಡುಕುತೊರೆಯ ಸೌಂದರ್ಯ ವರ್ಣಿಸಲಾರದ್ದು, ಹಾಗಾಗಿ ಆಸ್ತಿಕ, ನಾಸ್ತಿಕ ಎನ್ನದೆ ಎಲ್ಲರೂ ಈ ತಾಣಕ್ಕೆ ಆಗಮಿಸಿ, ಇಲ್ಲಿನ ನಿಸರ್ಗ ಸಿರಿಯನ್ನು ಮನದಣಿಯೆ ಸವಿಯುತ್ತಾರೆ.

ಮುಡುಕುತೊರೆ ಎಲ್ಲಿದೆ?: ಈ ಕ್ಷೇತ್ರವು ಮೈಸೂರು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾದ ತಿ.ನರಸೀಪುರದಿಂದ 19 ಕಿ.ಮೀ ದೂರದಲ್ಲಿದೆ. ಕಾವೇರಿ ನದಿ ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ಹರಿದು, ಪೂರ್ವಕ್ಕೆ ಮುರಿದು ದಕ್ಷಿಣಕ್ಕೆ ಪ್ರವೇಶಿಸಿದ್ದರಿಂದ ಬಹುಶಃ ಮುಡುಕುತೊರೆ ಎಂಬ ಹೆಸರು ಬಂದಿರಬಹುದೆಂದು ಹೇಳಲಾಗುತ್ತಿದೆ. ಇನ್ನು ಇಲ್ಲಿನ ಸೋಮಗಿರಿ ಬೆಟ್ಟದ ಮೇಲಿನ ಐತಿಹಾಸಿಕ ಮಲ್ಲಿಕಾರ್ಜುನ ದೇಗುಲದ ಆದಿದೈವ ಮಲ್ಲಿಕಾರ್ಜುನ ಲಿಂಗವೂ ಕೂಡ ತಲಕಾಡು ಪಂಚಲಿಂಗದೊಂದಿಗೆ ಸೇರಿರುವುದು ಇಲ್ಲಿನ ಮತ್ತೊಂದು ವಿಶೇಷತೆ.

ಮಲ್ಲಿಕಾರ್ಜುನ ದೇಗುಲ: ಮಲ್ಲಿಕಾರ್ಜುನ ದೇಗುಲ ನೆಲೆ ನಿಂತ ಬೆಟ್ಟವು ಸುಮಾರು ೩೦೦ ಅಡಿಯಷ್ಟು ಎತ್ತರದಲ್ಲಿದ್ದು, ಈ ಬೆಟ್ವನ್ನೇರಲು 101 ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಈ ಮೆಟ್ಟಿಲುಗಳ ಮೇಲೆ ದಾನಿಗಳ ಹೆಸರು ಹಾಗೂ ಸೂಕ್ತಿಗಳನ್ನು ಬರೆದಿರುವುದು ಕಂಡುಬರುತ್ತದೆ. ದೇವಾಲಯವು ಗಂಗರ ಕಾಲದ ರಚನೆಯನ್ನು ಹೊಂದಿದ್ದು, ಪುಟ್ಟದಾಗಿ ನಿರ್ಮಾಣಗೊಂಡ ದೇಗುಲ ಬಳಿಕ ವಿಸ್ತರಿಸುತ್ತಾ ಹೋಗಿರಬಹುದೆಂದು ಹೇಳಲಾಗುತ್ತದೆ. ಇದು ಪಶ್ಚಿಮಾಭಿಮುಖವಾಗಿದ್ದು, ಗರ್ಭಗೃಹ, ಶುಕನಾಸಿ, ಅಂತರಾಳ, ನವರಂಗ ಮತ್ತು ದ್ವಾರಮಂಟಪಗಳನ್ನು ಹೊಂದಿದೆ. ನವರಂಗದಲ್ಲಿ ವರ್ತುಲಾಕೃತಿಯ ಸ್ತಂಭಗಳನ್ನು ನಾವು ಕಾಣಬಹುದು.

ಈ ಸ್ತಂಭಗಳಲ್ಲಿ ಗಂಗಶೈಲಿಯನ್ನು ಹೋಲುವಂತಹ ರಾಮ ಲಕ್ಷ್ಮಣ ಹನುಮಂತನ ಚಿತ್ರಗಳು ಕಂಡು ಬರುತ್ತವೆ. ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಬಾಗಿಲುಗಳಿದ್ದು, ನವರಂಗದ ಅಗ್ನೇಯ ಭಾಗದಲ್ಲಿ ಎರಡು ಶಿವಲಿಂಗವಿದ್ದರೆ, ಉತ್ತರಭಾಗದಲ್ಲಿ ಕುಮಾರಸ್ವಾಮಿಯ ಉತ್ಸವಮೂರ್ತಿ, ನಟರಾಜ, ವಿಘ್ನೇಶ್ವರ, ಶಿವಕಾಮೇಶ್ವರಿ ಅಮ್ಮನವರ ವಿಗ್ರಹಗಳಿವೆ. ಅಲ್ಲದೆ ಶುಕನಾಸಿಯಲ್ಲಿ ವೃಷಭ ಮೂರ್ತಿಯಿದೆ. ದೇಗುಲದ ಗರ್ಭಗುಡಿಯ ಮೇಲೆ ಕಲಶವಿರುವ ವಿಮಾನ, ಒಳಗೆ ಒಂದಡಿ ಚದರಳತೆಯ ಪೀಠದ ಮೇಲೆ ಐದು ಅಂಗುಲ ಪಾದಾಂಕಿತವಿರುವ ಮಲ್ಲಿಕಾರ್ಜುನನ ಶೋಭಾಯಮಾನ ಲಿಂಗವನ್ನು ನಾವು ಕಾಣಬಹುದು.

ಭ್ರಮರಾಂಬ ದೇಗುಲ: ಇನ್ನು ಮಲ್ಲಿಕಾರ್ಜುನ ದೇಗುಲದ ಬಳಿಯೇ ಪತ್ನಿ ಭ್ರಮರಾಂಬೆಯ ದೇವಾಲಯವಿದ್ದು, ವಿಜಯನಗರ ವಾಸ್ತುಶೈಲಿಯನ್ನು ದೇವಾಲಯ ಗರ್ಭಗೃಹ, ಶುಕನಾಸಿ, ನವರಂಗ, ಮುಖಮಂಟಪವನ್ನು ಹೊಂದಿದೆ. ಗರ್ಭಗುಡಿಯ ಸಿಂಹ ಪೀಠದ ಮೇಲೆ ಐದಡಿ ಎತ್ತರದ ಭ್ರಮರಾಂಬ ವಿಗ್ರಹವಿದೆ. ಈ ಭ್ರಮರಾಂಬ ವಿಗ್ರಹವು ಚತುರ್ಭುಜವನ್ನು ಹೊಂದಿದ್ದು, ಎರಡು ಕೈಗಳು ವರದ ಮುದ್ರೆ ಕಮಲ ಕುಮುದ ಹಸ್ತಗಳಿಂದ ಕೂಡಿದೆ. ಅಲ್ಲದೆ, ಕಮಲಹಸ್ತ, ಅಭಯಹಸ್ತ, ಕರ್ಣಪತ್ರ, ಕಿರೀಟ, ಗೋರಂಭ, ಪಾದ, ಕಮಲಪೀಠ, ಸಿಂಹಪೀಠ, ಪ್ರಭಾವಳಿ, ಶ್ರೀಚಕ್ರ ಮೊದಲಾದ ಆಭರಣಗಳಿಂದ ದೇವಿ ಸಾಲಂಕೃತಳಾಗಿ ಶೋಭಿಸುತ್ತಿದ್ದಾಳೆ. ಈ ದೇವಾಲಯವೂ ವಿಮಾನವನ್ನು ಹೊಂದಿದೆ.

ದೇಗುಲದ ಹೊರಭಾಗದ ಗೋಪುರ ಮೂರನೆಯ ಕೃಷ್ಣರಾಜ ಒಡೆಯರ ಕಾಲದಲ್ಲಿ ರೂಪುತಳೆದಿದ್ದು, ಗೋಪುರ ದ್ವಾರದ ಎರಡೂ ಬದಿಯಲ್ಲಿ ಇಟ್ಟಿಗೆ ಮತ್ತು ಗಾರೆಯಿಂದ ರಚಿಸಿದ ಎರಡು ಬಸವನ ವಿಗ್ರಹಗಳಿವೆ. ಗೋಪುರದ ಮೇಲೆ ಕಲಶವಿದೆ. ಪ್ರವೇಶ ದ್ವಾರದ ಬಳಿ ಸುಮಾರು ನಲವತ್ತು ಅಡಿ ಎತ್ತರದ ದೀಪಸ್ತಂಭವಿದ್ದು, ದೇಗುಲದ ವಾಯುವ್ಯ ಮೂಲೆಯಲ್ಲಿ ಚಿತ್ರಮಂಟಪವಿದೆ.

ಈ ಮಂಟಪದ ಮುಂಭಾಗದಲ್ಲಿ ಪಾಕಶಾಲೆ, ಯಾಗಶಾಲೆ ಅಡುಗೆ ಮನೆಗಳಿವೆ. ಇನ್ನು ಈಶಾನ್ಯ ಭಾಗದಲ್ಲಿ ಗಣಪತಿ ಮತ್ತು ನವಗ್ರಹ ದೇವಸ್ಥಾನವಿದೆ. ಪೂರ್ವದಲ್ಲಿ ದುರ್ಗಾದೇವಿ, ಬಸವೇಶ್ವರ, ಕಾಶಿವಿಶ್ವನಾಥ ಮತ್ತು ಪಂಚಲಿಂಗಗಳ ಎಂಟು ಪುಟ್ಟ ಗುಡಿಗಳಿವೆ. ಆಗ್ನೇಯದಲ್ಲಿ ವೃಷಭಮೂರ್ತಿ ನಾಗಮೂರ್ತಿಗಳಿವೆ. ದಕ್ಷಿಣ ದ್ವಾರದ ಹೊರಗೆ ಮಾದೇಶ್ವರನ ಪಾದಪೀಠದ ಗುಡಿಯಿದೆ.

ದೇವಾಲಯದ ಧ್ವಜಸ್ತಂಭವನ್ನು ತಗಡಿನಿಂದ ಮಾಡಲಾಗಿದ್ದು ಇದು ಹನ್ನೆರಡು ಅಡಿ ಎತ್ತರವಿದೆ. ಇದರ ಮುಂದೆ ವೃಷಭೇಶ್ವರ ಮೂರ್ತಿಯ ಕಲ್ಲುಕಂಬವನ್ನು ಕಾಣಬಹುದು.ಬೆಟ್ಟದ ತಳಭಾಗದಲ್ಲಿ ಬೆಟ್ಟಹಳ್ಳಿ ಮಾರಮ್ಮ ಎಂಬ ಗ್ರಾಮ ದೇವತೆಯ ದೇವಸ್ಥಾನವೂ ಇದೆ. ಸುತ್ತಮುತ್ತ ಕಣ್ಣೀರ್‌ಕಟ್ಟೆ, ಹಾಲುಗಟ್ಟೆ, ಕಪಿಲಗೋಮಾಳ ಮುಂತಾದ ಸ್ಥಳಗಳಿದ್ದು ಇವುಗಳಿಗೂ ತನ್ನದೇ ಐಹಿತ್ಯವಿದೆ.

English summary
Annual 17 day Mallikarjunaswamy Jatre(fair) has started in Mudukuthore, T Narsipur Taluk, Mysore Feb.5. Mudukuthore is located on the banks of river Cauvery and is one of the main Pilgrimage Centre in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X