ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಳುನಾಡಿನ ಸಂಭ್ರಮದ 'ಢಕ್ಕೆಬಲಿ' ನಡಾವಳಿ

By Prasad
|
Google Oneindia Kannada News

Padubidri Dakke bali utsav
ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 17ರ ಪಡುಬಿದ್ರೆಯಲ್ಲಿರುವ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ನಡಾವಳಿಗೆ 'ಢಕ್ಕೆಬಲಿ' ಎಂದು ಕರೆಯಲಾಗುತ್ತದೆ. ಉಡುಪಿಯಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಪೀಠಾರೋಹಣವಿರದ ವರ್ಷದಲ್ಲಿ ಇಲ್ಲಿ ಈ ಸಂಭ್ರಮವಿರುತ್ತದೆ.

ಸನ್ನಿಧಾನದಲ್ಲಿ ಬ್ರಹ್ಮಸ್ವರೂಪಿಯಾಗಿರುವ ಖಡ್ಗೇಶ್ವರೀಗೆ ಮೊದಲ ಆದ್ಯತೆ. ಇಲ್ಲಿ ನಾಗ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲರ ಸಾನಿಧ್ಯವೂ ಇದೆ. ದಟ್ಟಾರಣ್ಯದಲ್ಲಿರುವ ಈ ಸಾನಿಧ್ಯದಲ್ಲಿ ರಾತ್ರಿಯ ಕಾಲದಲ್ಲಿ ಢಕ್ಕೆಬಲಿ ಸೇವೆ ಆರಂಭವಾಗುತ್ತದೆ. ಇಲ್ಲಿ ಮರಳೇ ಆಸನ. ಇಲ್ಲಿನ ಬೀಡಿನ ಅರಸರೆಂದು ಕರೆಯಲ್ಪಡುವ ವಂಶಸ್ಥರಿಗೆ ಚಾಪೆ, ಉಡುಪಿ ಅಷ್ಠಮಠಾಧೀಶರಿಗೆ ಚಪ್ಪಡಿ ಕಲ್ಲಿನ ವ್ಯವಸ್ಥೆ ಮಾತ್ರ ಇರುತ್ತದೆ. ಕರ್ಪೂರ ಮತ್ತು ದೊಂದಿ ದೀಪಗಳು ರಾತ್ರಿಯ ವೇಳೆ ಈ ಪ್ರದೇಶವನ್ನು ಬೆಳಗುವ ಪರಿಕರ.

ಸಂಜೆಯ ಬಳಿಕ ದೇವಾಲಯವು ಹೂ ಮತ್ತು ಹಿಂಗಾರಗಳಿಂದ ಅಲಂಕೃತಗೊಳ್ಳುತ್ತದೆ. ಅಲಂಕಾರದ ಬಳಿಕ ಇಲ್ಲಿನ ದರ್ಶನ ಪಾತ್ರಿಗಳು ಮಡಿಯನ್ನುಟ್ಟು ಬಂದ ನಂತರ ಸನ್ನಿಧಾನದಲ್ಲಿ ಪ್ರಸನ್ನ ಪೂಜೆಗಳು ನಡೆಯುತ್ತದೆ. ಆ ನಂತರ ವೈದ್ಯ (ನಾಗಪಾತ್ರಿಯನ್ನು ಆಡಿಸುವವರು) ಕುಟುಂಬದವರು ಬಾರಿಸುವ ಕಂಚಿನ ಢಕ್ಕೆಯ ನಿನಾದಕ್ಕೆ ನಾಗಪಾತ್ರಿಗಳಲ್ಲಿ ಆವೇಶ ಮೈದೆಳೆದು ಬರುತ್ತದೆ. ಮೊದಲಾರ್ಧದಲ್ಲಿ ರಾತ್ರಿ ಪ್ರಸಾದ ತಂಬಿಲ ವಿತರಣೆಯಾದ ನಂತರ ನಾಗಪಾತ್ರಿಗಳು ಮತ್ತು ವೈದ್ಯರು ವಿಶ್ರಾಂತಿ ಪಡೆಯುತ್ತಾರೆ.

ವಿಶ್ರಾಂತಿಯ ನಂತರ ಪಾತ್ರಿಗಳು ಮತ್ತು ವೈದ್ಯರು ಮತ್ತೆ ನಾಗಕನ್ನಿಕೆಯಾಗಿ ಅಲಂಕರಿಸಿಕೊಂಡು ಢಕ್ಕೆಬಲಿ ಮಂಡಲ, ನಾಗಮಂಡಲಗಳನ್ನು ಸುತ್ತುವರಿದು ಅಲ್ಲಿ ಢಕ್ಕೆಬಲಿಯ ಪ್ರಧಾನ ಆಚರಣೆಗಳು, ಪೂಜೆಗಳು ಬೆಳಗಿನ ಜಾವದವರೆಗೆ ನಡೆಯುತ್ತವೆ. ಢಕ್ಕೆಬಲಿ ಸೇವೆಗಳಲ್ಲದೆ ಪಂಚಾಮೃತ, ಹಗಲು ತಂಬಿಲ, ರಾತ್ರಿ ತಂಬಿಲ ಸೇವೆ ನಡೆಯುತ್ತದೆ. ಈ ನಡಾವಳಿಗೆ ಶತಮಾನಗಳ ಇತಿಹಾಸವಿದೆ.

ಇದೇ ಜನವರಿ 18, 2011ರಿಂದ ಢಕ್ಕೆಬಲಿ ಮಹೋತ್ಸವ ಆರಂಭವಾಗಿದೆ. ಮಾರ್ಚ್ 12, 2011ರ ಮಂಡಲ ವಿಸರ್ಜನೆಯೊಂದಿಗೆ ಈ ವಿಜೃಂಭಣೆಯ ನಡಾವಳಿ ಮುಕ್ತಾಯಗೊಳ್ಳುತ್ತದೆ. ಸರ್ವಧರ್ಮ ಸಾಮರಸ್ಯದ ಈ ನಡಾವಳಿಗೆ ಹರಕೆಯ ರೂಪದಲ್ಲಿ ಹಿಂಗಾರದ ಹಾಳೆಗಳನ್ನು ಭಕ್ತರು ತಂದು ತಮ್ಮ ಮನದ ದುಗುಡಗಳಿಗೆ ಪರಿಹಾರ ಕೊಂಡು ಕೊಳ್ಳುತ್ತಾರೆನ್ನುವುದು ಕ್ಷೇತ್ರದ ನಂಬಿಕೆ. [ದೇಗುಲ ದರ್ಶನ]

English summary
Dakke bali utsav in Padubidri, Mangalore. Dakke bali is a form of snake worship, also called as Nagaradhane, is held at Padubidri, Mangalore district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X