ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ

By * ಬಾಲರಾಜ್ ತಂತ್ರಿ, ಉಡುಪಿ
|
Google Oneindia Kannada News

Bappanadu Durga Parameshwari temple famous for Dolu
ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 17ರ ಮಧ್ಯಭಾಗದಲ್ಲಿರುವ ಮೂಲ್ಕಿ ಪಟ್ಟಣದಲ್ಲಿರುವ ಪುರಾತನ ದೇವಾಲಯಗಳಲ್ಲೊಂದು ಶ್ರೀ ದುರ್ಗಾ ಪರಮೆಶ್ವರಿ ದೇವಾಲಯ. ಇಲ್ಲಿಂದ 29 ಕಿ.ಮೀ ಉತ್ತರಕ್ಕೆ ಮಂಗಳೂರು 29 ಕಿ.ಮೀ ದಕ್ಷಿಣಕ್ಕೆ ಉಡುಪಿ ನಗರಗಳಿವೆ. ಶಾಂಭವಿ ನದಿ ತಟದಲ್ಲಿರುವ ಈ ಕ್ಷೇತ್ರಕ್ಕೆ ಬಪ್ಪು ಎನ್ನುವ ಮುಸ್ಲಿಂ ವ್ಯಾಪಾರಿಯಿಂದಾಗಿ ಈ ಹೆಸರು ಬಂದಿದೆ. ಬಪ್ಪು ದೇವಾಲಯ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದ. ಬಪ್ಪನಾಡು ಡೋಲು ಬಹಳ ಪ್ರಸಿದ್ದ. ಈ ಕಾರಣದಿಂದಾಗಿ ದೇವಾಲಯದ ಆವರಣದಲ್ಲಿ ಬಹಳಷ್ಟು ಡೋಲುಗಳನ್ನು ಕಾಣಬಹುದು.

ಪುರಾಣ : ದಾರಿಗಾಸುರ ಎನ್ನುವ ರಾಕ್ಷಸ ಶೋನಿತಪುರ ಎನ್ನುವ ನಗರವನ್ನು ಆಳುತ್ತಿದ್ದ. ಈತ ದೇವತೆಗಳನ್ನು ಮತ್ತು ವಿಷ್ಣು ದೇವರ ಜೊತೆ ದ್ವೇಷ ಸಾಧಿಸುತ್ತಿದ್ದ. ಬ್ರಹ್ಮದೇವರ ವರದ ಪ್ರಭಾವದಿಂದ ದೇವತೆಗಳನ್ನು ಮತ್ತು ವಿಷ್ಣುವನ್ನು ಸೋಲಿಸಿ ವಿಷ್ಣುವಿನ ಬಳಿಯಿದ್ದ ಚಕ್ರವನ್ನು ಕಸಿದು ತನ್ನ ಮಡದಿಯ ಬಳಿ ನೀಡಿ ಅದನ್ನು ಭದ್ರವಾಗಿ ದೇವರ ಕೋಣೆಯಲ್ಲಿ ಇಡುವಂತೆ ಸೂಚಿಸಿದ. ತನ್ನ ಚಕ್ರ ರಾಕ್ಷಸನ ಪಾಲಾಯಿತೆಂದು ವಿಷ್ಣು ವ್ಯಥೆ ಪಡುತ್ತಿದ್ದಾಗ ದುರ್ಗಾ ಪರಮೇಶ್ವರಿ ದೇವಿ ಏಳು ಮಹಿಳೆಯ ರೂಪದಲ್ಲಿ ಬಂದು ಆ ರಾಕ್ಷಸನನ್ನು ಕೊಲ್ಲುವುದಾಗಿ ಭರವಸೆ ನೀಡುತ್ತಾಳೆ. ಸಪ್ತದುರ್ಗೆಯರು ಗುಳಿಗ ದೈವದ ಜೊತೆಗೆ ಶೋನಿತಪುರ ಪ್ರವೇಶಿಸಿದಾಗ ದಾರಿಗಾಸುರ ನದಿಯಲ್ಲಿ ಸ್ನಾನ ಮಾಡಲೆಂದು ಬಂದಾಗ ದುರ್ಗೆ ವೃದ್ದ ಭಿಕ್ಷುಕಿಯ ರೂಪದಲ್ಲಿ ಬಂದು ಊಟ ನೀಡುವಂತೆ ಕೇಳಿಕೊಳ್ಳುತ್ತಾಳೆ. ರಾಕ್ಷಸ ಅರಮನೆಗೆ ಹೋಗಿ ತನ್ನ ಮಡದಿಯ ಬಳಿ ಊಟ ಕೇಳೆಂದು ಹೇಳಿ ಕಳುಹಿಸುತ್ತಾನೆ. ದುರ್ಗಾವತಾರಿಯಾದ ಭಗವತಿ ಅರಮನೆಗೆ ಬಂದು ಊಟ ಕೇಳುವ ಬದಲು ವಿಷ್ಣು ಚಕ್ರವನ್ನು ಕೇಳುತ್ತಾಳೆ, ರಾಕ್ಷಸನ ಮಡದಿ ಅದನ್ನು ಕೊಡಲು ನಿರಾಕರಿಸಿದಾಗ ಮತ್ತೆ ರಾಕ್ಷಸನ ಬಳಿ ಬಂದು ನಿನ್ನ ಮಡದಿ ಊಟ ನೀಡಲು ನಿರಾಕರಿಸಿದಳು ಎಂದಾಗ ರಾಕ್ಷಸ ಮತ್ತೆ ಈ ಭಿಕ್ಷುಕಿ ಕೇಳಿದ್ದನ್ನು ನೀಡಬೇಕೆಂದು ಸೂಚಿಸಿದಾಗ ಆತನ ಮಡದಿ ವಿಷ್ಣುಚಕ್ರವನ್ನು ನೀಡುತ್ತಾಳೆ.

ನಂತರ ತಾನು ಮೋಸ ಹೊದೆಯೆಂದು ಅರಿತ ರಾಕ್ಷಸ ಶಾಂಭವಿ ಜೊತೆ ಯುದ್ದಕ್ಕೆ ನಿಲ್ಲುತ್ತಾನೆ. ಮೊದಲು ಗುಳಿಗ ದೈವವನ್ನು ಸೋಲಿಸುತ್ತಾನೆ, ಏಳು ದಿನಗಳ ಅಹೋರಾತ್ರಿ ಹೋರಾಟದ ನಂತರ ರಾಕ್ಷಸ ಭೂಗತನಾಗುತ್ತಾನೆ. ರಾಕ್ಷಸಸನ್ನು ಹುಡುಕಲು ಭದ್ರ-ಕಾಳಿ ರೂಪ ತಾಳಿದ ಭಗವತಿ ಒಂದು ದಿನ ಸಂಜೆ ರಾಕ್ಷಸ ಶಿವನನ್ನು ಪೂಜಿಸಲು ಬಂದಾಗ ಆತನನ್ನು ಸಂಹರಿಸಿ ಚಕ್ರವನ್ನು ವಿಷ್ಣುವಿಗೆ ನೀಡುತ್ತಾಳೆ. ಗಂಧದಿಂದ ಮಾಡಿದ ದೋಣಿಯಲ್ಲಿ ವೈಕುಂಠದಿಂದ ಭೂಲೋಕಕ್ಕೆ ಪ್ರಯಾಣಿಸುತ್ತಾ, ಕಾಸರಗೋಡು, ಕುಂಬ್ಳೆ, ಪತ್ತತ್ತೂರು, ಮಂಜೇಶ್ವರ, ಉದ್ಯಾವರ, ಉಲ್ಲಾಳ, ಕುದ್ರೋಳಿ ಜೊತೆ ದಕ್ಷಿಣ ಭಾರತದ ಕರಾವಳಿಯಲ್ಲಿ ಸುತ್ತಾಡಿ ಸಸಿಹಿತ್ಲು (ಮೂಲ್ಕಿ ಪಟ್ಟಣ) ಬಳಿ ನೆಲೆಸುತ್ತಾಳೆ.

ಇತಿಹಾಸ : ಬಪ್ಪಬ್ಯಾರಿ ಎನ್ನುವ ಮುಸ್ಲಿಂ ವ್ಯಾಪಾರಿಯೊಬ್ಬ ಶಾಂಭವಿ ನದಿಯಲ್ಲಿ ದೋಣಿಯಲ್ಲಿ ಬರುತ್ತಿದ್ದಾಗ ದೋಣಿ ಇದ್ದಕ್ಕಿದ್ದಂತೆ ನಿಲ್ಲುತ್ತದೆ. ನದಿ ತುಂಬಾ ರಕ್ತ ನೋಡಿದ ಬಪ್ಪಬ್ಯಾರಿ ಭಯಗೊಂಡಾಗ ದೇವಿಯ ವಾಣಿ ಕೇಳಿಸುತ್ತದೆ. ನೀನು ನನಗೊಂದು ಗುಡಿ ಕಟ್ಟಿಸಿಕೊಡು, ಜೈನ ಸಾವಂತನ ಬಳಿ ಹೋಗಿ ಸಹಾಯ ಕೇಳು ಹಾಗೂ ಬಾಳಿಯ ಉಡುಪನನ್ನು ನನ್ನ ಗುಡಿಯ ಅರ್ಚಕನನ್ನಾಗಿ ನೇಮಿಸು ಎಂದು ಹೇಳುತ್ತಾಳೆ. ಅದರಂತೆ ನಡೆದ ವಿಷಯವನ್ನು ಸಾವಂತನ ಬಳಿ ಬಪ್ಪಬ್ಯಾರಿ ತೋಡಿಕೊಂಡಾಗ ದೇವಿಗೆ ಗುಡಿ ನಿರ್ಮಾಣವಾಗುತ್ತದೆ. ಅಂದಿನಿಂದ ಕ್ಷೇತ್ರವನ್ನು ಬಪ್ಪನಾಡು ಎಂದು ಕರೆಯಲಾಗುತ್ತದೆ ಎನ್ನುವುದು ಕ್ಷೇತ್ರದ ಇತಿಹಾಸ.

ಮುಸ್ಲಿಂರೂ ಉತ್ಸವದಲ್ಲಿ ಭಾಗಿ : ಈ ಭಾಗದ ಶಕ್ತಿ ದೇವಾಲಯಗಳಲ್ಲೊಂದಾದ ಈ ದೇವಾಲಯ ಲಿಂಗರೂಪಿಣಿ ದುರ್ಗೆ, ಮುಸ್ಲಿಮರಿಗೂ ಕ್ಷೇತ್ರದಲ್ಲಿ ಪ್ರಸಾದ ವಿತರಣೆ ನಡೆಯುತ್ತದೆ. ಬ್ರಹ್ಮರಥೋತ್ಸವದಲ್ಲಿ ಮುಸ್ಲಿಮರೂ ಭಾಗವಹಿಸುತ್ತಾರೆ ಅಲ್ಲದೆ ಪೂಜಾನಂತರ ಮೊದಲ ಪ್ರಸಾದ ಬಪ್ಪಬ್ಯಾರಿ ಕುಟುಂಬದವರಿಗೆ ನೀಡಲಾಗುತ್ತದೆ.

ಕ್ಷೇತ್ರದ ವಿಳಾಸ
ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ
ರಾ.ಹೆ. 17 , ಮೂಲ್ಕಿ
ದಕ್ಷಿಣ ಕನ್ನಡ - 574154
ದೂ : 0824 - 290585 [ದೇಗುಲ ದರ್ಶನ]

English summary
Bappanadu Durga Parameshwari temple in Mulki, Dakshina Kannada district, is one of the ancient temples in Karnataka. The temple was built by a muslim Bappabyari and even muslims devotees participate in the brahmotsava festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X