keyboard_backspace

ಕೆಎಫ್‌ಸಿ ತಿರಸ್ಕರಿಸಿ ಕರವೇ ಅಭಿಯಾನಕ್ಕೆ ತಮಿಳುನಾಡಲ್ಲೂ ಬೆಂಬಲ

Google Oneindia Kannada News

ಬೆಂಗಳೂರು ಅಕ್ಟೋಬರ್ 26: ಕೆಎಫ್‌ಸಿ ಮಳಿಗೆಯಲ್ಲಿ ಕನ್ನಡ ಹಾಡು ಹಾಕದ ಬಗ್ಗೆ ಮಹಿಳೆಯೊಬ್ಬಳು ಪ್ರಶ್ನೆ ಎತ್ತಿದಾಗ ಸಿಬ್ಬಂದಿ ಕೊಟ್ಟ ಉತ್ತರಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯ ಪ್ರಶ್ನೆಗೆ ಉತ್ತರ ಕೊಟ್ಟ ಸಿಬ್ಬಂದಿ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಾತ್ರವಲ್ಲದೇ ಇದು ಕನ್ನಡಿಗರ ಕೆಂಗಣ್ಣಿಗೂ ಗುರಿಯಾಗಿದೆ. ಕೂಡಲೇ ಕೆಎಫ್‌ಸಿ ಕ್ಷಮೆ ಕೇಳಬೇಕು. ಜೊತೆಗೆ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಹಾಗೆಯೇ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಈ ವಿಚಾರದಲ್ಲಿ ಪ್ರತಿಭಟನೆಯನ್ನು ಕೂಡಾ ನಡೆಸಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಮಹಿಳೆ "ನಾವು ಕನ್ನಡದವರು ಕರ್ನಾಟಕದಲ್ಲಿ ಕನ್ನಡ ಹಾಡು ಹಾಕಿ" ಎಂದು ಕೇಳುತ್ತಾರೆ. ಈ ವೇಳೆ ಕೆಎಫ್‌ಸಿ ಸಿಬ್ಬಂದಿ "ನಾವು ಭಾರತದಲ್ಲಿ ಇರುವುದು. ನಾವು ಎಲ್ಲಿ ಬೇಕಾದರೂ ಹೋಗಬಹುದು. ಕರ್ನಾಟಕಕ್ಕೆ ಬರಲು ಪಾಸ್‌ಪೋರ್ಟ್ ಬೇಕಾ?," ಎಂದು ಮಹಿಳೆಗೆ ಮರು ಪ್ರಶ್ನೆ ಮಾಡುತ್ತಾನೆ. ಜೊತೆಗೆ "ನೀವು ಕರ್ನಾಟಕಕ್ಕೆ ಬಂದವರು ಕನ್ನಡ ಮಾತನಾಡಬೇಕು ಎಂದು ಹೇಳಿದರೆ ಯಾವುದೇ ಅರ್ಥವಿಲ್ಲ. ಹಿಂದಿ ನಮ್ಮ ರಾಷ್ಟ್ರ ಭಾಷೆ," ಎಂದು ಕೂಡಾ ಹೇಳಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಆಗ ಮಹಿಳೆ ಕನ್ನಡ ಹಾಡು ಹಾಕಲು ಒತ್ತಾಯಿಸುತ್ತಾರೆ. ಈ ವೇಳೆ ಕೆಎಫ್‌ಸಿಯ ಮಹಿಳಾ ಸಿಬ್ಬಂದಿಯೊಬ್ಬರು ಬಂದು "ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿರುವುದಾ? ಇದಕ್ಕೆ ಮುಂಚೆ ಬಂದವರೂ ಇದೇ ರೀತಿ ಕೇಳಿದ್ರು, ಆಗ ಆಫಿಸರ್‌ ಬಂದು ಕೂತು ಮಾತನಾಡಿದರು. ಆ ಬಳಿಕ ಅವರಿಂದ ಏನು ಮಾಡಲು ಆಗಲಿಲ್ಲ. ನೀವು ಸುಮ್ಮನೆ ಯಾಕೆ ಮಾತನಾಡುತ್ತೀರಿ. ಕಂಪನಿ ರೂಲ್ಸ್‌ ಏನಿದೆ ಅದನ್ನು ನಾವು ಫಾಲೋ ಮಾಡುತ್ತೇವೆ," ಎಂದಿದ್ದರು. ಈ ವಿಡಿಯೋದಲ್ಲಿ ಕನ್ನಡ ಭಾಷೆಯ ಬಗ್ಗೆ ಕೆಎಫ್‌ಸಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಾತನಾಡುತ್ತಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.

ಕೆಎಫ್‌ಸಿ ಸಂಸ್ಥೆ ಕನ್ನಡ ವಿರೋಧಿ ನೀತಿ

ಕೆಎಫ್‌ಸಿ ಸಂಸ್ಥೆ ಕನ್ನಡ ವಿರೋಧಿ ನೀತಿ

ಕೆಎಫ್‌ಸಿ ಸಂಸ್ಥೆ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಕನ್ನಡಿಗರು ನಡೆಸುತ್ತಿರುವ ಅಭಿಯಾನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು ಇಂದು ಹುಬ್ಬಳ್ಳಿಯ ಕೆಎಫ್ ಸಿ ಮಳಿಗೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದಿಗ್ಬಂಧನ ಹೂಡಿದರು. ಕರವೇ ರಾಜ್ಯ ಕಾರ್ಯದರ್ಶಿ ಹನುಮಂತ ಅಬ್ಬಿಗೇರಿ, ಧಾರವಾಡ ಜಿಲ್ಲಾಧ್ಯಕ್ಷ ರುದ್ರೇಶ್ ಹಳವದ ಅವರ ನೇತೃತ್ವದಲ್ಲಿ ಇಂದು ಕರವೇ ಪದಾಧಿಕಾರಿಗಳು ಕೆಎಫ್ ಸಿ ಮಳಿಗೆಗೆ ಮುತ್ತಿಗೆ ಹಾಕಿ, ಅಲ್ಲಿನ ಸಿಬ್ಬಂದಿಗೆ ಕನ್ನಡದ ಪಾಠ ಹೇಳಿದರು. ಕೆಎಫ್ ಸಿ ಮಳಿಗೆಗಳಲ್ಲಿ ಸಂಪೂರ್ಣ ಕನ್ನಡವನ್ನೇ ಬಳಸಬೇಕು, ಕನ್ನಡದಲ್ಲೇ ವ್ಯವಹರಿಸಬೇಕು, ಎಲ್ಲ ನಾಮಫಲಕಗಳೂ ಕನ್ನಡದಲ್ಲಿ ಇರಬೇಕು, ಕನ್ನಡದ ಹಾಡುಗಳನ್ನು ಹಾಕಬೇಕು. ಇದಕ್ಕಾಗಿ ಒಂದು ವಾರದ ಗಡುವು ನೀಡುತ್ತಿದ್ದೇವೆ ಎಂದು ಕರವೇ ರಾಜ್ಯ ಕಾರ್ಯದರ್ಶಿ ಹನುಮಂತ ಅಬ್ಬಿಗೇರಿ ಎಚ್ಚರಿಕೆ ನೀಡಿದರು.

ರಾಜ್ಯೋತ್ಸವಕ್ಕೆ ಮುನ್ನ ಕೆಎಫ್‌ಸಿ ಕನ್ನಡೀಕರಣವಾಗಬೇಕು. ಬೆಂಗಳೂರಿನ ಇಂದಿರಾನಗರ ಕೆಎಫ್ ಸಿ ಮಾಲ್ ನಲ್ಲಿ ಕನ್ನಡಿಗರ ವಿರುದ್ಧ ಮಾತಾಡಿದ್ದಕ್ಕೆ ಸಂಸ್ಥೆ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಕರವೇ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ಆಗ ಆಗುವ ಅನಾಹುತಗಳಿಗೆ ಕೆಎಫ್ ಸಿಯೇ ಹೊಣೆ ಹೊರಬೇಕಾಗುತ್ತದೆ ಎಂದು ಕರವೇ ಧಾರವಾಡ ಜಿಲ್ಲಾಧ್ಯಕ್ಷ ರುದ್ರೇಶ ಹಳವದ ಎಚ್ಚರಿಕೆ ನೀಡಿದರು.

 ಕನ್ನಡವನ್ನು ಅಪಮಾನಿಸಿದ ಕೆಎಫ್‌ಸಿ

ಕನ್ನಡವನ್ನು ಅಪಮಾನಿಸಿದ ಕೆಎಫ್‌ಸಿ

ಕನ್ನಡವನ್ನು ಅಪಮಾನಿಸಿದ ಕೆಎಫ್‌ಸಿ ವಿರುದ್ಧ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು ಭಾನುವಾರ #RejectKFC #KFCಕನ್ನಡಬೇಕು ಎಂಬ ಹ್ಯಾಶ್ ಟ್ಯಾಗ್ ಗಳು ರಾಷ್ಟ್ರಮಟ್ಟದಲ್ಲಿ ಟ್ರೆಂಡ್ ಆಗಿದ್ದವು. ನಿನ್ನೆ ದಾವಣಗೆರೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡರ ನೇತೃತ್ವದಲ್ಲಿ ಕೆಎಫ್ ಸಿ ಮುಂಭಾಗ ಪ್ರತಿಭಟನೆ ನಡೆದಿತ್ತು.

ಇಂದು ಕರವೇ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಹುಬ್ಬಳ್ಳಿ ಗೋಕುಲ ರೋಡ್ ಕೆ.ಎಫ್.ಸಿ ಮಳಿಗೆ ಮುಂದೆ ನಡೆದ ಪ್ರತಿಭಟನೆಯಲ್ಲಿ ಕರವೇ ರಾಜ್ಯ ಸಂಚಾಲಕರಾದ ಹನುಮಂತಪ್ಪ ಮೇಟಿ, ಕರವೇ ರಾಜ್ಯ ಪದವೀಧರ ಘಟಕದ ಕಾರ್ಯದರ್ಶಿ ಪ್ರಭುಗೌಡ ಸಖ್ಯಾಗೌಡಶಾನಿ, ಯುವ ಘಟಕ ಜಿಲ್ಲಾ ಧ್ಯಕ್ಷರಾದ ಸಾಗರ್ ಗಾಯಕವಾಡ, ರೈತ ಘಟಕ ಜಿಲ್ಲಾಧ್ಯಕ್ಷರಾದ ಪಾಪು ಧಾರೆ, ಹುಬ್ಬಳ್ಳಿ ತಾಲೂಕು ಅಧ್ಯಕ್ಷರಾದ ಗುರಪ್ಪ ಹಳ್ಯಾಳ, ಹುಬ್ಬಳ್ಳಿ ತಾಲೂಕ ಯುವ ಘಟಕ ಅಧ್ಯಕ್ಷರಾದ ಗಂಗು ಪಾಟೀಲ್, ಧಾರವಾಡ ನಗರ ಘಟಕ ಅಧ್ಯಕ್ಷರಾದ ಮಲಿಕರೀಯಾಜ ಕಂಬಾರಗಣವಿ, ಧಾರವಾಡ ತಾಲ್ಲೂಕ ಉಪಾಧ್ಯಕ್ಷರಾದ ಕಲ್ಮೇಶ ಸಾಲಿ ಇನ್ನಿತರರು ಪಾಲ್ಗೊಂಡರು.

 #RejectKFC ಅಭಿಯಾನಕ್ಕೆ ತಮಿಳರ ಬೆಂಬಲ

#RejectKFC ಅಭಿಯಾನಕ್ಕೆ ತಮಿಳರ ಬೆಂಬಲ

"ನಮ್ಮ ರಾಷ್ಟ್ರಭಾಷೆ ಹಿಂದಿ, ನಮ್ಮ ಮಳಿಗೆಯಲ್ಲಿ ಕನ್ನಡದ ಹಾಡು ಹಾಕುವುದಿಲ್ಲ, ಹಿಂದಿಯನ್ನೇ ಹಾಕುತ್ತೇವೆ. ನೀವು ಏನೂ‌ ಮಾಡಿಕೊಳ್ಳಲು ಆಗುವುದಿಲ್ಲ" ಎಂದು ದುರಹಂಕಾರ ಮೆರೆದ ಕೆಎಫ್ ಸಿ ಸಂಸ್ಥೆ ವಿರುದ್ಧ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದು, ಕಳೆದ ಮೂರು ದಿನಗಳಿಂದ ನಡೆಯುತ್ತಿರುವ #RejectKFC ಅಭಿಯಾನಕ್ಕೆ ತಮಿಳುನಾಡಿನ ತಮಿಳು ಭಾಷಿಕರು ಭಾರಿ‌ ಬೆಂಬಲ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನ ತಮಿಳರು ಭಾನುವಾರದಿಂದ #RejectKFC ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡುತ್ತಿದ್ದು, ಕೆಎಫ್ ಸಿಯಂಥ ಸಂಸ್ಥೆಗಳು ಆಯಾ ರಾಜ್ಯದ ಭಾಷೆ, ಸಂಸ್ಕೃತಿಯನ್ನು ಗೌರವಿಸಬೇಕು, ಇಲ್ಲವಾದಲ್ಲಿ ಅಂಥವುಗಳನ್ನು ನಾವೇ ಧಿಕ್ಕರಿಸಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿ, ಕನ್ನಡಿಗರ ಹೋರಾಟಕ್ಕೆ ಬೆಂಬಲ‌ ನೀಡುತ್ತಿದ್ದಾರೆ. ಸಣ್ಣಪುಟ್ಟ ವಿಷಯಗಳಿಗೆ ಸ್ಪಂದಿಸಿ ಉತ್ತರ ನೀಡುವ ಕೆಎಫ್ ಸಿ, ಇದುವರೆಗೆ ಕನ್ನಡಿಗರ ಅಭಿಯಾನದ ಕುರಿತು ಮಾತನಾಡದೇ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಈಗಾಗಲೇ ಒಂದು‌ವಾರದ ಗಡುವು ನೀಡಿದ್ದು, ಉಗ್ರ ಸ್ವರೂಪದ ಹೋರಾಟದ ಎಚ್ಚರಿಕೆ ನೀಡಿದೆ.

ರಾಜಾಜಿನಗರದ ಕೆಎಫ್‌ಸಿ ಮಳಿಗೆಗೆ ಎಚ್ಚರಿಕೆ

ಇಂದು‌ ಬೆಂಗಳೂರಿನ ರಾಜಾಜಿನಗರದ ಕೆಎಫ್‌ಸಿ ಮಳಿಗೆಗೆ ಕರವೇ ಬೆಂಗಳೂರು ನಗರ ಉಪಾಧ್ಯಕ್ಷ ಕೆ.ಪಿ.ನರಸಿಂಹ ಅವರ ನೇತೃತ್ವದ ತಂಡ ಭೇಟಿ ನೀಡಿ, ಅಲ್ಲಿನ‌ ಮೇಲ್ವಿಚಾರಕರಿಗೆ ಎಚ್ಚರಿಕೆಯ ಪತ್ರ ನೀಡಿತು. ವಾರದ ಒಳಗೆ ಕೆಎಫ್ ಸಿ ನಾಮಫಲಕಗಳು ಕನ್ನಡೀಕರಣಗೊಳ್ಳಬೇಕು, ಕನ್ನಡಿಗರಿಗೆ ಉದ್ಯೋಗ ನೀಡಬೇಕು, ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು, ಇಲ್ಲವಾದಲ್ಲಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗುತ್ತೀರಿ ಎಂದು ಕೆ.ಪಿ.ನರಸಿಂಹ ಎಚ್ಚರಿಸಿದರು. ಕರವೇ ರಾಜಾಜಿನಗರ ಕ್ಷೇತ್ರ ಅಧ್ಯಕ್ಷರಾದ ಮಂಜುನಾಥ್, ಬಸವೇಶ್ವರನಗರ ಕ್ಷೇತ್ರ ಅಧ್ಯಕ್ಷರಾದ ಸಿದ್ಧರಾಜು, ಪ್ರಕಾಶನಗರ ವಾರ್ಡ್ ಉಪಾಧ್ಯಕ್ಷ ರವಿ, ಮುಖಂಡರಾದ ಗಂಗಣ್ಣ, ನಿರ್ಮೋಹ, ಲಕ್ಷ್ಮಿನಾರಾಯಣಪುರ ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.

English summary
Karnataka rakshana vedike has expressed outrage over KFC saying that Kannada is disrespectful in Bengaluru. The campaign against the KFC has received tremendous support and is being protested demanding forgiveness.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X