keyboard_backspace

ಬದುಕಿನ ಹುಡುಕಾಟ: ಅಫ್ಘಾನ್ ನಿರಾಶ್ರಿತರಿಗೆ ಯಾವ ರಾಷ್ಟ್ರಗಳಲ್ಲಿ ನೆಲೆ!?

Google Oneindia Kannada News

ಕಾಬೂಲ್, ಆಗಸ್ಟ್ 22: ತಾಲಿಬಾನ್ ಉಗ್ರ ಸಂಘಟನೆ ಮುಷ್ಠಿಯಲ್ಲಿ ಸಿಲುಕಿರುವ ಅಫ್ಘಾನಿಸ್ತಾನದಿಂದ ಸಾವಿರಾರು ಪ್ರಜೆಗಳು ಪಲಾಯನ ಮಾಡುತ್ತಿದ್ದಾರೆ. ಕರಾಳ ಇತಿಹಾಸ ಅರಿತುಕೊಂಡಿರುವ ಪ್ರಜೆಗಳಲ್ಲಿ ಆತಂಕ ಭಾವ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ದೇಶ ತೊರೆದವರ, ತೊರೆಯುತ್ತಿರುವವರ ಹಾಗೂ ತೊರೆಯಲು ಹಾತೊರೆಯುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ಕಾಬೂಲ್ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೊಂದನ್ನು ಹೊರತುಪಡಿಸಿ ಉಳಿದಂತೆ ಇಡೀ ದೇಶ ತಾಲಿಬಾನ್ ಅಟ್ಟಹಾಸಕ್ಕೆ ಸಾಕ್ಷಿಯಾಗಿದೆ. ಕ್ಷಣಕ್ಷಣಕ್ಕೂ ಸಾವಿನ ಭೀತಿ ಎದುರಿಸುತ್ತಿರುವ ಜನರು ಬೇರೆ ರಾಷ್ಟ್ರಗಳಿಗೆ ಹಾರುತ್ತಿದ್ದಾರೆ. ಕಳೆದ ಶುಕ್ರವಾರ ಅಮೆರಿಕಾ ಭದ್ರತಾ ಸಿಬ್ಬಂದಿ ತೆಗೆದುಕೊಂಡು ಹೋಗಲಿ ಎಂಬುದಕ್ಕಾಗಿ ಹೆತ್ತ ತಾಯಿಯೇ ತಮ್ಮ ಮಗುವನ್ನು ಮುಳ್ಳಿನ ತಂತಿಯ ಮೇಲೆ ಎಸೆಯುತ್ತಿದ್ದ ದೃಶ್ಯ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ಕಾಬೂಲ್‌ನಿಂದ 80 ಭಾರತೀಯರ ರಕ್ಷಣೆ; ವಿಮಾನ ತಪ್ಪಿಸಿಕೊಂಡ 150 ಜನಕಾಬೂಲ್‌ನಿಂದ 80 ಭಾರತೀಯರ ರಕ್ಷಣೆ; ವಿಮಾನ ತಪ್ಪಿಸಿಕೊಂಡ 150 ಜನ

ಅಪಾಯದಲ್ಲಿ ಇರುವವರಿಗೆ ಬೇರೆ ಮಾರ್ಗವೇ ತಿಳಿಯುತ್ತಿಲ್ಲ, ಹೆಚ್ಚಿನ ಅಫ್ಘನ್ನರು ದೇಶ ತೊರೆಯಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಹೇಳಿದೆ. ಬಿಕ್ಕಟ್ಟು ಹೆಚ್ಚಾಗುತ್ತಿರುವ ಹಿನ್ನೆಲೆ ಅಕ್ಕಪಕ್ಕದ ರಾಷ್ಟ್ರಗಳು ಅಫ್ಘನ್ನರಿಗಾಗಿ ತಮ್ಮ ಗಡಿಯನ್ನು ತೆರೆಯುವಂತೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮೀಷನರ್ ವಕ್ತಾರೆ ಶಾಬಿಯಾ ಮಂಟೂ ಪುನರ್ ಉಚ್ಛರಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ನಿರಾಶ್ರಿತರಾಗಿ ಪ್ರಾಣ ಭಯದಲ್ಲಿ ಬದುಕುತ್ತಿರುವವ ಪ್ರಜೆಗಳಿಗೆ ಹಲವು ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ಅತಂತ್ರ ಸ್ಥಿತಿಯಲ್ಲಿ ಅಸಹಾಯಕರಾಗಿ ನಿಂತಿರುವ ಅಫ್ಘಾನ್ ಪ್ರಜೆಗಳಿಗೆ ಜಗತ್ತಿನ ಹಲವು ರಾಷ್ಟ್ರಗಳು ಭವಿಷ್ಯದ ಬಾಗಿಲು ತೆರೆದಿವೆ. ತಮ್ಮ ದೇಶದಲ್ಲಿ ಬದುಕು ಕಟ್ಟಿಕೊಳ್ಳುವ ಅವಕಾಶ ನೀಡುವುದಕ್ಕೆ ಮನವು ಮಾಡಿವೆ. ಅಫ್ಘಾನಿಸ್ತಾನದಲ್ಲಿ ವಾಸ್ತವ ಸ್ಥಿತಿ ಹೇಗಿದೆ?, ನಿರಾಶ್ರಿತರ ಬದುಕು ಹೇಗಾಗಿದೆ?, ಯಾವ ಯಾವ ರಾಷ್ಟ್ರಗಳು ಅಫ್ಘಾನ್ನರಿಗೆ ನೆರಳು ನೀಡುವುದಕ್ಕೆ ಮುಂದಾಗಿವೆ? ಎಂಬುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

ನಿರಾಶ್ರಿತರು ಯಾರು ಗೊತ್ತೆ?

ನಿರಾಶ್ರಿತರು ಯಾರು ಗೊತ್ತೆ?

ಯಾರು ಯುದ್ಧ, ಕಿರುಳುತ, ಹಿಂಸಾಚಾರಕ್ಕೆ ಬೇಸತ್ತು ತಮ್ಮ ದೇಶದಿಂದ ಒತ್ತಾಯಪೂರ್ವಕವಾಗಿ ಪಲಾಯನಮಾಡುತ್ತಾರೋ ಅಂಥವರನ್ನು ನಿರಾಶ್ರಿತರು ಎಂದು ವಿಶ್ವಸಂಸ್ಥೆಯ ಉನ್ನತ ಆಯುಕ್ತರು ವ್ಯಾಖ್ಯಾನಿಸಿದೆ. "ನಿರಾಶ್ರಿತರಿಗೆ ನಿರ್ದಿಷ್ಟ ಸಾಮಾಜಿಕ ಗುಂಪಿನಲ್ಲಿ ಜನಾಂಗ, ಧರ್ಮ, ರಾಷ್ಟ್ರೀಯತೆ, ರಾಜಕೀಯ ಅಭಿಪ್ರಾಯ ಅಥವಾ ಸದಸ್ಯತ್ವದ ಕಾರಣಗಳಿಂದಾಗಿ ಕಿರುಕುಳದ ಭಯವಿರುತ್ತದೆ. ಅಂಥವರು ತಾಯ್ನಾಡಿಗೆ ಮರಳುವುದಕ್ಕೆ ಯಾವುದೇ ಕಾರಣಕ್ಕೂ ಬಯಸುವುದಿಲ್ಲ. ಏಕೆಂದರೆ ಯುದ್ಧ ಮತ್ತು ಜನಾಂಗೀಯ, ಬುಡಕಟ್ಟು ಮತ್ತು ಧಾರ್ಮಿಕ ಹಿಂಸಾಚಾರಗಳು ನಿರಾಶ್ರಿತರು ದೇಶ ತೊರೆಯಲು ಪ್ರಮುಖ ಕಾರಣಗಳಾಗಿರುತ್ತವೆ.

ಯುಎನ್‌ಎಚ್‌ಸಿಆರ್ ಪ್ರಕಾರ, ಸಿರಿಯಾ, ವೆನಿಜುವೆಲಾ, ಅಫ್ಘಾನಿಸ್ತಾನ, ದಕ್ಷಿಣ ಸುಡಾನ್ ಮತ್ತು ಮ್ಯಾನ್ಮಾರ್ ರಾಷ್ಟ್ರಗಳಲ್ಲೇ ದೇಶ ಹೊರೆದವರ ಸಂಖ್ಯೆ ಹೆಚ್ಚಾಗಿದೆ. ಈ ಐದು ದೇಶಗಳಿಂದಲೇ ಶೇ. 68ರಷ್ಟು ಪ್ರಜೆಗಳು ಪಲಾಯನಗೊಂಡಿದ್ದಾರೆ. 2020ರ ವೇಳೆ ಸುಮಾರು 28 ಲಕ್ಷ ಅಫ್ಘಾನ್ ನಿರಾಶ್ರಿತರು ವಿದೇಶಕ್ಕೆ ಹೋಗಿದ್ದಾರೆ. "ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಹುಡುಗಿಯರು ಸೇರಿದಂತೆ ನಾಗರಿಕರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯಾಗುವ ಅಪಾಯದ ಬಗ್ಗೆ ಕಾಳಜಿ ವಹಿಸಲಾಗುತ್ತದೆ" ಎಂದು ಯುಎನ್‌ಹೆಚ್‌ಸಿಆರ್ ಶುಕ್ರವಾರ ಹೇಳಿದೆ. ಪ್ರಸ್ತುತ ಸ್ಥಿತಿಯಲ್ಲಿ ಯಾವ ರಾಷ್ಟ್ರಗಳು ಅಫ್ಘಾನ್ ಪ್ರಜೆಗಳಿಗೆ ಆಶ್ರಯ ನೀಡಲು ತಮ್ಮ ಗಡಿಯನ್ನು ತರೆದಿವು ಎಂಬುದನ್ನು ಮುಂದೆ ತಿಳಿಯೋಣ.

ಯುನೈಟೆಡ್ ಸ್ಟೇಟ್ಸ್ (ಅಮೆರಿಕಾ)

ಯುನೈಟೆಡ್ ಸ್ಟೇಟ್ಸ್ (ಅಮೆರಿಕಾ)

ಅಫ್ಘಾನಿಸ್ತಾನದಿಂದ "ಮಿತ್ರರ ಆಶ್ರಯ ಕಾರ್ಯಾಚರಣೆ" ಅಡಿಯಲ್ಲಿ 1200 ಜನರನ್ನು ಅಮೆರಿಕಾಗೆ ಸ್ಥಳಾಂತರಿಸಲಾಗಿದ್ದು, ಮುಂದಿನ ವಾರಗಳಲ್ಲಿ ಈ ಸಂಖ್ಯೆ 3500ಕ್ಕಿಂತ ಹೆಚ್ಚಾಗಲಿದೆ. ವರ್ಜಿನಿಯಾದ ಸೇನೆ ನೆಲೆಯಲ್ಲಿ ಎಲ್ಲ ದಾಖಲೆಗಳ ಪರಿಶೀಲನೆ ಕಾರ್ಯವನ್ನು ನಡೆಸಲಾಗುತ್ತಿದೆ. ಕಳೆದ ವಾರ ಯುಎಸ್ ಆದ್ಯತಾ 2 (P-2) ಅನ್ನು ಘೋಷಿಸಿತ್ತು. ಯುಎಸ್ ನಿರಾಶ್ರಿತರ ಪ್ರವೇಶ ಕಾರ್ಯಕ್ರಮಕ್ಕೆ (USRAP) ಕೆಲವು ಅಫ್ಘಾನ್ ಪ್ರಜೆಗಳು ಮತ್ತು ಅವರ ಅರ್ಹ ಸಂಬಂಧಿಗಳಿಗೆ ಪ್ರವೇಶ ನೀಡಲಾಗಿತ್ತು.

"ಶಾಂತಿಯು ಮತ್ತು ಸುರಕ್ಷಿತ ಅಫ್ಘಾನಿಸ್ಥಾನವು ಯುಎಸ್ ಉದ್ದೇಶವಾಗಿದೆ. ಅದಾಗ್ಯೂ, ತಾಲಿಬಾನ್ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆ ಯುನೈಟೆಡ್ ಸ್ಟೇಟ್ಸ್ ಜೊತೆಗೆ ಕೆಲಸ ಮಾಡಿದ ಕೆಲವು ಅಫ್ಘನ್ನರು ಸುರಕ್ಷಿತವಾಗಿ ಅಮೆರಿಕಾದಲ್ಲಿ ನೆರೆ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ," ಎಂದು ಯುಎಸ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಯುಎಸ್ ಜೊತೆ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ಸೇರಿದಂತೆ 10,000 ಅಫ್ಘನ್ನರನ್ನು ಯುಎಸ್ ಸ್ಥಳಾಂತರಿಸಿದೆ.

ಕೆನಡಾ

ಕೆನಡಾ

ಕಳೆದ ವಾರವಷ್ಟೇ ಕೆನಡಾ ಸರ್ಕಾರದ ಸಮಿತಿಯು ಅಫ್ಘಾನಿಸ್ತಾನದಿಂದ ವಲಸೆ ಹೋಗಿರುವ 20,000 ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. ಅಫ್ಘಾನ್ ರಾಷ್ಟ್ರದಿಂದ ಕೆನಡಾಗೆ ಆಗಮಿಸುವ ನಿರಾಶ್ರಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ ಅಥವಾ ಇತರ ಮಿತ್ರರಾಷ್ಟ್ರಗಳ ಪರವಾಗಿ ಹೆಚ್ಚು ಅಫ್ಘಾನ್ ನಿರಾಶ್ರಿತರನ್ನು ಕೆನಡಾ ಸ್ವಾಗತಿಸಲಿದೆ ಎಂದು ವಲಸೆ ಸಚಿವ ಮಾರ್ಕೊ ಮೆಂಡಿಸಿನೊ ಹೇಳಿದರು. "ನಾವು ಎಲ್ಲದಕ್ಕೂ ಮುಕ್ತವಾಗಿ ದೇಶದ ಗಡಿಯನ್ನು ಇಟ್ಟುಕೊಂಡಿದ್ದೇವೆ. ಈ ಕಾರ್ಯ ಯೋಜನೆಯಲ್ಲಿ ಪಾಲುದಾರರಾದ ಅಫ್ಘನ್ನರಿಗೆ ಮಾನವೀಯ ಮಾನದಂಡದ ಮೇಲೆ ಪುನರ್ವಸತಿ ಒದಗಿಸುವುದಕ್ಕೆ ನಾವು ಸಿದ್ದರಿದ್ದೇವೆ," ಎಂದು ಸಚಿವರು ಹೇಳಿದ್ದಾರೆ.

ತಾಲಿಬಾನ್ ಆಕ್ರಮಣದ ಬಗ್ಗೆ ಮೊದಲೇ ನಿರೀಕ್ಷಿಸಿಲಾಗಿತ್ತು. ಇದರ ಮಧ್ಯೆ ಕೆನಡಾ ಹಲವು ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಪಾಶ್ಚಿಮಾತ್ಯ ಕಾರ್ಯಾಚರಣೆಗಳನ್ನು ಬೆಂಬಲಿಸಿದ ಅಫ್ಘಾನ್ ನಾಗರಿಕರನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವ ದೇಶಗಳ ಒಕ್ಕೂಟದ ಭಾಗವಾಗಿವೆ. ಕಳೆದ 2011ರಲ್ಲಿ ಕೆನಡಾ ಅಫ್ಘಾನಿಸ್ತಾನದಿಂದ ತನ್ನ ಹೆಚ್ಚಿನ ಸೇನೆಯನ್ನು ವಾಪಸ್ ಕರೆಸಿಕೊಂಡಿತ್ತು. ಇದರ ಹೊರತಾಗಿಯೂ 2014 ರವರೆಗೆ ಅಫ್ಘಾನ್ ಸೇನೆಗೆ ತರಬೇತಿ ನೀಡುವ ನ್ಯಾಟೋ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

ಇಂಗ್ಲೆಂಡ್

ಇಂಗ್ಲೆಂಡ್

ಮೊದಲ ವರ್ಷ ಪುನರ್ವಸತಿ ಕಾರ್ಯಕ್ರಮದ ಅಡಿಯಲ್ಲಿ ಅಫ್ಘಾನಿಸ್ತಾನದಲ್ಲಿರುವ 5,000 ನಿರಾಶ್ರಿತರನ್ನು ಕರೆ ತರುವುದಾಗಿ ಬ್ರಿಟನ್ ಘೋಷಿಸಿದೆ. ಮಹಿಳೆಯರು, ಯುವತಿಯರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಲಾಗುತ್ತಿದೆ. "ಯುನೈಟೆಡ್ ಕಿಂಗ್ ಡಮ್ ಅಧಿಕಾರಿಗಳು ಹಾಗೂ ಸರ್ಕಾರದ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವ ಅಫ್ಘಾನ್ ಪ್ರತೆಗಳು ಈ ಕಾರ್ಯಾಚರಣೆಯಿಂದ ಹೊರತಾಗಿರುತ್ತಾರೆ," ಎಂದು ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಭಾರತ

ಭಾರತ

ಭಾರತವು 1951 ನಿರಾಶ್ರಿತರ ಸಮಾವೇಶ ಅಥವಾ 1967 ರ ನಿರಾಶ್ರಿತರ ಸ್ಥಿತಿಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿಲ್ಲ ಮತ್ತು ನಿರಾಶ್ರಿತರಿಗೆ ಪ್ರತ್ಯೇಕ ಶಾಸನವನ್ನು ಹೊಂದಿಲ್ಲ. ಅದಾಗ್ಯೂ, ದೇಶ ನೆರೆಹೊರೆಯಲ್ಲಿ ಮತ್ತು ಅದರಾಚೆಗಿನ ವೈಯಕ್ತಿಕ ಸಂಬಂಧದ ಆಧಾರದ ಮೇಲೆ ನಿರಾಶ್ರಿತರ ಬಿಕ್ಕಟ್ಟನ್ನು ನಿಭಾಯಿಸಿದೆ. ಕಳೆದ ವಾರ, ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನ ಹಿನ್ನೆಲೆ ಭಾರತವು ಅಫ್ಘಾನ್ ಪ್ರಜೆಗಳಿಗಾಗಿ ಹೊಸ ವರ್ಗದ ಇ-ವೀಸಾವನ್ನು ಪರಿಚಯಿಸಿತು. ಈ ವೀಸಾಗಳು ಆರು ತಿಂಗಳು ಮಾತ್ರ ಮಾನ್ಯವಾಗಿರುತ್ತವೆ ಮತ್ತು ಯೋಜನೆಯನ್ನು ಕೇಂದ್ರ ಇನ್ನೂ ನಿರ್ಧರಿಸಿಲ್ಲ. ಕಳೆದ 2011ರಲ್ಲಿ ಭಾರತ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರಾಶ್ರಿತರು ಎಂದು ಹೇಳಿಕೊಳ್ಳುವ ವಿದೇಶಿ ಪ್ರಜೆಗಳೊಂದಿಗೆ ವ್ಯವಹರಿಸಲು ಒಂದು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಸೂಚಿಸಿತ್ತು.

ಪಾಕಿಸ್ತಾನ

ಪಾಕಿಸ್ತಾನ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆ ಅಧಿಕಾರ ವಹಿಸಿಕೊಂಡರೆ ಪಾಕಿಸ್ತಾನ ಮತ್ತು ಅಫ್ಘಾನ್ ನಡುವಿನ ಗಡಿಯನ್ನು ಮುಚ್ಚುತ್ತೇವೆ ಎಂದು ಸ್ವತಃ ಪ್ರಧಾನಮಂತ್ರಿ ಇಮ್ರಾನ್ ಖಾನ್ ಜೂನ್ ತಿಂಗಳಿನಲ್ಲೇ ಹೇಳಿದ್ದರು. ಆದರೆ ಆ ಮಾತು ಇಂದಿಗೂ ಹುಸಿಯಾಗಿದೆ. ಈಗಾಗಲೇ 30 ಲಕ್ಷ ಅಫ್ಘಾನ್ ನಿರಾಶ್ರಿತರನ್ನು ನಿಭಾಯಿಸಲು ಹೆಣಗಾಡುತ್ತಿರುವ ದೇಶದಲ್ಲಿ ಮತ್ತೊಂದು ಸುತ್ತಿನ ನಿರಾಶ್ರಿತರ ಒಳಹರಿವನ್ನು ಬಯಸುವುದಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಇರಾನ್

ಇರಾನ್

ಅಫ್ಘಾನಿಸ್ತಾನದ ನಿರಾಶ್ರಿತರಿಗಾಗಿ ಇರಾನ್ ತನ್ನ ಮೂರು ಪ್ರಾಂತ್ಯಗಳಲ್ಲಿ ತಾತ್ಕಾಲಿಕ ವಸತಿ ಶಿಬಿರಗಳನ್ನು ನಿರ್ಮಿಸುತ್ತಿದೆ. ಏತನ್ಮಧ್ಯೆ, ಇರಾನ್‌ಗೆ ಪ್ರವೇಶಿಸಿದ ಯಾವುದೇ ಅಫ್ಘಾನಿಸ್ತಾನರು, "ಒಮ್ಮೆ ಪರಿಸ್ಥಿತಿ ಸುಧಾರಿಸಿದರೆ, ಸ್ವದೇಶಕ್ಕೆ ಕರೆತರಲಾಗುವುದು" ಎಂದು ಆಂತರಿಕ ಸಚಿವಾಲಯದ ಗಡಿ ವ್ಯವಹಾರಗಳ ಮುಖ್ಯಸ್ಥ ಹೊಸೈನ್ ಘಸ್ಸೆಮಿ IRNA ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ಪ್ರಕಾರ, ಅಫ್ಘಾನಿಸ್ತಾನದೊಂದಿಗೆ 900 ಕಿಲೋಮೀಟರ್ (560 ಮೈಲಿ) ಗಡಿಯನ್ನು ಹಂಚಿಕೊಂಡಿರುವ ಇರಾನ್, ಅಫ್ಘಾನಿಸ್ತಾನದ ಅತಿಹೆಚ್ಚು ನಿರಾಶ್ರಿತರಿಗೆ ಅಂದರೆ 35 ಲಕ್ಷ ವಲಸಿಗರಿಗೆ ಆಶ್ರಯ ನೀಡಿದೆ.

ಉಜ್ಬೇಕಿಸ್ತಾನ್

ಉಜ್ಬೇಕಿಸ್ತಾನ್

ತಾಲಿಬಾನ್‌ಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಬೆನ್ನಲ್ಲೇ ಸಾವಿರಾರು ಪ್ರಜೆಗಳು ಪಲಾಯನ ಮಾಡುವುದಕ್ಕೆ ಮಾರ್ಗವನ್ನು ಹುಡುಕುತ್ತಿದ್ದಾರೆ. ಈ ಮಧ್ಯೆ ನೆರೆಯ ಅಫ್ಘಾನ್ ನಿರಾಶ್ರಿತರ ಪ್ರವಾಹದ ಬಗ್ಗೆ ಉಜ್ಬೇಕಿಸ್ತಾನ್ ಜಾಗರೂಕತೆ ವತಿಸುತ್ತಿದೆ. ಉಜ್ಬೇಕ್ ವೀಸಾ ನೀಡುವಂತೆ ಅಫ್ಘಾನಿಸ್ತಾನಿ ಪ್ರಜೆಗಳು ಸಲ್ಲಿಸಿದ ಅರ್ಜಿಯನ್ನು ಕೊರೊನಾವೈರಸ್ ಕಾರಣದಿಂದ ತಿರಸ್ಕರಿಸಲಾಗಿದೆ ಎಂದು ದಿ ಅಸೋಸಿಯೇಟೆಡ್ ಪ್ರೆಜ್ ವರದಿ ಮಾಡಿದೆ. ಅಫ್ಘಾನಿಸ್ತಾನದಿಂದ ಉಗ್ರರ ನುಸುಳುವಿಕೆ ಮತ್ತು ನೆರೆರಾಷ್ಟ್ರದ ಅಸ್ಥಿರತೆ ಬಗ್ಗೆ ಜಾಗೃತವಾಗಿದ್ದ ಉಜ್ಬೇಕಿಸ್ತಾನ್ ಗಡಿಯಲ್ಲಿ ಬಿಗಿ ಭದ್ರತೆಯನ್ನು ಮಾಡಿಕೊಂಡಿದ್ದು ನಿರಾಶ್ರಿತರಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ತಜ್ಞರು ಹೇಳಿದ್ದಾರೆ.

1990ರ ದಶಕದಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ನಿಯಂತ್ರಿಸಿದಾಗಿನಿಂದ, "ಉಜ್ಬೇಕ್ ಸರ್ಕಾರವು ನಿರಾಶ್ರಿತರ ಒಪ್ಪಂದಕ್ಕೆ ಸಹಿ ಹಾಕಲು ಮತ್ತು ಅಂಗೀಕರಿಸಲು ನಿರಂತರವಾಗಿ ನಿರಾಕರಿಸಿತ್ತು. ಶೋಷಣೆಯ ಭಯದಿಂದ ಆಶ್ರಯ ಬಯಸಿದವರಿಗೆ ರಕ್ಷಣೆ ಮತ್ತು ನೆಲೆಯನ್ನು ಒದಗಿಸುವ ನಿಟ್ಟಿನಲ್ಲಿ ವಿಶ್ವದಲ್ಲೇ ಅತಿಹೆಚ್ಚು ಗಮನ ಸೆಳೆದ ಒಪ್ಪಂದಗಳಲ್ಲಿ ಇದೂ ಒಂದಾಗಿದೆ," ಎಂದು ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮಾನವ ಹಕ್ಕುಗಳ ವಕೀಲ ಮತ್ತು ಮಾನವ ಹಕ್ಕುಗಳ ಸಹಾಯಕ ಪ್ರಾಧ್ಯಾಪಕ ಸ್ಟೀವ್ ಸ್ವರ್ಡ್ಲೋ ಹೇಳಿದ್ದಾರೆ.

ಉತ್ತರ ಮ್ಯಾಸಿಡೋನಿಯಾ

ಉತ್ತರ ಮ್ಯಾಸಿಡೋನಿಯಾ

ತಾಲಿಬಾನ್ ವಶಕ್ಕೆ ಪಡೆದ ನಂತರದಲ್ಲಿ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದ 450 ಅಫ್ಘನ್ನರಿಗೆ ಅವಕಾಶ ನೀಡಲಾಗುತ್ತಿದ್ದು, ಅಮೆರಿಕಾ ಪ್ರವೇಶಿಸಲು ವೀಸಾ ಕೇಳಲಾಗುತ್ತಿದೆ ಎಂದು ಸ್ಕೋಪ್ಜೆ ಸರ್ಕಾರ ಹೇಳಿದೆ. ಅಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡುವಂತೆ ಅಧ್ಯಕ್ಷ ಜೋ ಬೈಡನ್ ಸೂಚನೆ ಮೇರೆಗೆ ವೆಸ್ಟರ್ನ್ ಬಾಲ್ಕನ್ ಪೈಕಿ ನಿರಾಶ್ರಿತರಿಗೆ ನೆರವು ನೀಡಲು ಮುಂದಾಗಿರುವ ಮೂರನೇ ರಾಷ್ಟ್ರ ಉತ್ತರ ಮ್ಯಾಸಿಡೋನಿಯಾ ಆಗಿದೆ. ಇದರ ಹೊರತಾಗಿ ಅಲ್ಬಾನಿಯಾ ಮತ್ತು ಕೊಸೊವೊ ಈಗಾಗಲೇ ನಿರಾಶ್ರಿತರಿಗೆ ನೆರವು ನೀಡುತ್ತಿವೆ.

"ಮಾನವೀಯ ಮತ್ತು ಶಾಂತಿಪಾಲನಾ ಕಾರ್ಯಾಚರಣೆ ಅಡಿಯಲ್ಲಿ ಉತ್ತರ ಮ್ಯಾಸಿಡೋನಿಯಾಕ್ಕೆ ಆಗಮಿಸುವ ನಿರಾಶ್ರಿತರಲ್ಲಿ ಉದ್ಯೋಗಿಗಳು ಮತ್ತು ಅಫ್ಘಾನ್ ಉದ್ಯೋಗಿಗಳ ಕುಟುಂಬಸ್ಥರು, ಪತ್ರಕರ್ತರು, ಅನುವಾದಕರು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿವೇತನ ಹೊಂದಿರುವವರು ಸೇರಿದ್ದಾರೆ" ಎಂದು ಉತ್ತರ ಮ್ಯಾಸಿಡೋನಿಯಾದ ಸರ್ಕಾರ ತಿಳಿಸಿದೆ. ಈ ವಾರಾಂತ್ಯದ ವೇಳೆಗೆ ಕಾಬೂಲ್ ವಿಮಾನ ನಿಲ್ದಾಣದಿಂದ 450 ಅಫ್ಘಾನ್ ನಿರಾಶ್ರಿತರು ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಉಗಾಂಡಾ

ಉಗಾಂಡಾ

ತಾಲಿಬಾನ್ ಮುಷ್ಠಿಗೆ ಸಿಲುಕಿ ನಲುಗಿರುವ ಅಫ್ಘಾನಿಸ್ತಾನದಿಂದ 2000 ನಿರಾಶ್ರಿತರನ್ನು ಕರೆ ತರುವುದಾಗಿ ಉಗಾಂಡಾ ಹೇಳಿದೆ. ಪೂರ್ವ ಆಫ್ರಿಕಾದ ರಾಷ್ಟ್ರವು ಸಂಘರ್ಷದಿಂದ ಪಾರಾಗುವ ಜನರನ್ನು ಸ್ವಾಗತಿಸುವ ಹಾಗೂ ನೆರವು ನೀಡುವ ಸುದೀರ್ಘ ಅನುಭವವನ್ನು ಹೊಂದಿದೆ. ಪ್ರಸ್ತುತ ಸುಮಾರು 14 ಲಕ್ಷ ನಿರಾಶ್ರಿತರಿಗೆ ಉಗಂಡಾ ಆತಿಥ್ಯ ನೀಡಿದ್ದು, ಹೆಚ್ಚಿನವರವು ದಕ್ಷಿಣ ಸುಡಾನ್‌ನಿಂದ ಬಂದಿದ್ದಾರೆ. ಯುಎಸ್ ಸರ್ಕಾರದ ಮನವಿ ಮೇರೆಗೆ ಉಗಾಂಡಾಕ್ಕೆ 2,000 ಅಫ್ಘಾನ್ ನಿರಾಶ್ರಿತರನ್ನು ಕರೆತರಲು ಒಪ್ಪಿಗೆ ನೀಡಲಾಗಿದೆ ಎಂದು ಉಗಾಂಡಾದ ಪರಿಹಾರ, ವಿಪತ್ತು ಸನ್ನದ್ಧತೆ ಮತ್ತು ನಿರಾಶ್ರಿತರಿಗೆ ಎಸ್ತರ್ ಅನ್ಯಾಕುನ್ ಡೇವಿನಿಯಾ ತಿಳಿಸಿದ್ದಾರೆ. "ಯುಎಸ್ ಸರ್ಕಾರವು ಅವರನ್ನು ಮೂರು ತಿಂಗಳಿನಲ್ಲಿ ಬೇರೆಡೆಗೆ ಸ್ಥಳಾಂತರಿಸಲಿದ್ದು, ಅಲ್ಲಿಯವರೆಗೂ ನಿರಾಶ್ರಿತರಿಗೆ ಉಗಾಂಡಾ ತಾತ್ಕಾಲಿಕವಾಗಿ ನೆಲೆ ಒದಗಿಸಲಿದೆ.

English summary
Taliban Crisis: How Many Nations Opening the door for Afghan refugees for resettlement.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X