ಮುಂಬೈ ತಂಡಕ್ಕೆ ತವರಿನ ಅಂಗಳದಲ್ಲಿ ಜಯದ ಸಿಹಿ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 12: ಬೌಲರ್ ಗಳ ಕರಾರುವಾಕ್ ಬೌಲಿಂಗ್ ಹಾಗೂ ಪ್ರಮುಖ ಆಟಗಾರರ ಆಕರ್ಷಕ ಬ್ಯಾಟಿಂಗ್ ನಿಂದಾಗಿ ಮುಂಬೈ ಇಂಡಿಯನ್ಸ್ ತಂಡ, ಬುಧವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ 4 ವಿಕೆಟ್ ಜಯ ಸಾಧಿಸಿತು.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್, ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು. ಈ ಮೊತ್ತವನ್ನು ಹಿಂದಿಕ್ಕಲು ಕಣಕ್ಕಿಳಿದ ಮುಂಬೈ ಇಂಡಿಯನ್ಸ್, 18.4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಪೇರಿಸಿ ಗೆಲುವು ದಾಖಲಿಸಿತು.

Mumbai Indians celebrate victory on their home soil over Hyderabad

ಕರಾರುವಾಕ್ ಬೌಲಿಂಗ್: ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಸನ್ ರೈಸರ್ಸ್ ತಂಡಕ್ಕೆ ಮುಂಬೈ ಪಡೆ, ತನ್ನ ಕರಾರುವಾಕ್ ಬೌಲಿಂಗ್ ನಿಂದ ಸಡ್ಡು ಹೊಡೆಯಿತು. ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಿ, ಮುಂಬೈನ ಬೌಲಿಂಗ್ ಸವಾಲನ್ನು ಕೊಂಚ ಎದುರಿಸಿದರಾದರೂ, 10.2 ಓವರ್ ಗಳಲ್ಲಿ 81 ರನ್ ಪೇರಿಸಿದ ನಂತರ, ಈ ಜೋಡಿ ಬೇರ್ಪಟ್ಟಿತು.

ಆನಂತರ ಬಂದವರಲ್ಲಿ ಯಾರೂ ಉತ್ತಮವಾಗಿ ಆಡಲಿಲ್ಲ. ಎಲ್ಲರೂ ಮುಂಬೈ ತಂಡ ಬೌಲಿಂಗ್ ದಾಳಿಯ ಮುಂದೆ ತರಗೆಲೆಗಳಂತೆ ಉದುರಿ ಹೋದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬೆನ್ ಕಟಿಂಗ್ ಮಾತ್ರ 20 ರನ್ (10 ಎಸೆತ, 4 ಬೌಂಡರಿ) ಗಳಿಸಿದರು. ಅವರನ್ನು ಬಿಟ್ಟರೆ ಎಲ್ಲರೂ ಒಂದಂಕಿ ರನ್ ಮಾಡಿದವರೇ.

ಪ್ರಮುಖ ಆಟಗಾರ ಯುವರಾಜ್ ಸಿಂಗ್ ಕೂಡಾ ಗಳಿಸಿದ್ದು ಕೇವಲ 5 ರನ್. ಆದರೂ, ಆರಂಭಿಕರ ಬಿರುಸಿನ ಆಟ ಹಾಗೂ ಮುಂಬೈ ತಂಡದ ಬೌಲಿಗರು ತಾವೇ ತಾವಾಗಿ ಹಾಕಿ ಕೊಟ್ಟ 11 ಎಕ್ಸ್ ಟ್ರಾ ರನ್ ಗಳಿಂದಾಗಿ, ಸನ್ ರೈಸರ್ಸ್ ತಂಡ, 20 ಓವರ್ ಗಳಲ್ಲಿ 158 ರನ್ ಗಳ ಸಾಧಾರಣ ಮೊತ್ತ ದಾಖಲಿಸಿತು.

ಜಯದ ಸಿಹಿ: ಬೌಲರ್ ಗಳ ಸಹಾಯದಿಂದ ಎದುರಾಳಿ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರೂ ಮುಂಬೈ ಪಾಲಿಗೆ ಗೆಲುವು ಎನ್ನುವುದು ಸುಲಭವಾಗಿರಲಿಲ್ಲ. ಆರಂಭಿಕ ಜೋಸ್ ಬಟ್ಲರ್ (14), ಮಧ್ಯಮ ಕ್ರಮಾಂಕದಲ್ಲಿ ನಾಯಕ ರೋಹಿತ್ ಶರ್ಮಾ (4), ಕೀರನ್ ಪೊಲಾರ್ಡ್ (11), ಹಾರ್ದಿಕ್ ಪಾಂಡ್ಯ (2) ಅವರ ಆಟ ಮುಂಬೈ ಬೌಲರ್ ಗಳ ಮುಂದೆ ನಡೆಯಲಿಲ್ಲ.

ಆದರೂ, ಆರಂಭಿಕ ಆಟಗಾರ ಹಾಗೂ ನಾಯಕ ಪಾರ್ಥೀವ್ ಪಟೇಲ್ (39 ರನ್, 24 ಎಸೆತ, 7 ಬೌಂಡರಿ), ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ನಿತೀಶ್ ರಾಣಾ (45 ರನ್, 36 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ಕುನಾಲ್ ಪಾಂಡ್ಯ (37 ರನ್, 20 ಎಸೆತ, 3 ಬೌಂಡರಿ, 3 ಸಿಕ್ಸರ್) ಅವರ ಆಕರ್ಷಕ ಬ್ಯಾಟಿಂಗ್ ನಿಂದಾಗಿ ತಂಡ ಗೆಲವು ಸಾಧಿಸುವಲ್ಲಿ ಯಶಸ್ವಿಯಾಯಿತು.

ಸಂಕ್ಷಿಪ್ತ ಸ್ಕೋರ್: ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 158 (ಡೇವಿಡ್ ವಾರ್ನರ್ 49, ಶಿಖರ್ ಧವನ್ 48; ಬುಮ್ರಾ 24ಕ್ಕೆ 3, ಹರ್ಭಜನ್ ಸಿಂಗ್ 23ಕ್ಕೆ 2); ಮುಂಬೈ ಇಂಡಿಯನ್ಸ್ 18.4 ಓವರ್ ಗಳಲ್ಲಿ 6 ವಿಕೆಟ್ ಗೆ 159 (ನಿತೀಶ್ ರಾಣಾ 45, ಪಾರ್ಥೀವ್ ಪಟೇಲ್ 39; ಭುವನೇಶ್ವರ್ ಕುಮಾರ್ 21ಕ್ಕೆ 3, ರಷೀದ್ ಖಾನ್ 19ಕ್ಕೆ 1).

ಪಂದ್ಯಶ್ರೇಷ್ಠ: ಜಸ್ ಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Impressive batting by middle order batsman Nitish Rana (-) and Opener-cum-captain Parthiv Patel (39) lead Mumbai Indians to victory in IPL match against Sunrisers Hyderabad on 12th April,2017. The match was played at Wankhede stadium of Mumbai.
Please Wait while comments are loading...