ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಫೈನಲ್: ಪುಣೆ ಸೋತಿದ್ದಕ್ಕೆ 5 ಪ್ರಮುಖ ಕಾರಣಗಳಿವು

ಜಯದ ಗೆರೆಯ ಅಷ್ಟು ಸನಿಹಕ್ಕೆ ಬಂದರೂ, ಗೆಲುವು ಕಾಣುವಲ್ಲಿ ವಿಫಲವಾದ ಪುಣೆ ತಂಡ; ಸ್ಮಿತ್, ರಹಾನೆ ಹೊರತಾಗಿ ಮಿಕ್ಕವರು ಕೈ ಕೊಟ್ಟಿದ್ದೇ ಪುಣೆ ತಂಡ ಹೈದರಾಬಾದ್ ವಿರುದ್ಧ ಸೋಲಲು ಕಾರಣ.

ಹೈದರಾಬಾದ್, ಮೇ 22: ಅದೊಂದು ಐತಿಹಾಸಿಕ ಕ್ಷಣಗಳನ್ನು ಎದುರು ನೋಡುತ್ತಿದ್ದ ಪುಣೆ ಸೂಪರ್ ಜೈಂಟ್ಸ್ ತಂಡದ ಕನಸು ಭಗ್ನಗೊಂಡಿದೆ. ತಾನು ಆಡುತ್ತಿರುವ ಕಡೇ ಐಪಿಎಲ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಸಾಧನೆಯೊಂದನ್ನು ಮಾಡಬಹುದಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ.

ಭಾನುವಾರ (ಮೇ 21) ರಾತ್ರಿ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ ಬಾರಿಯ ಐಪಿಎಲ್ ನ ಫೈನಲ್ ಪಂದ್ಯದಲ್ಲಿ ಪುಣೆ ತಂಡ, ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕೇವಲ 1 ರನ್ ಅಂತರದಲ್ಲಿ ಸೋಲು ಕಂಡಿತು.

ಮೊದಲು ಬ್ಯಾಟ್ ಮಾಡಿದ್ದ ಮುಂಬೈ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತ್ತು. ಆನಂತರ ಬ್ಯಾಟಿಂಗ್ ಮಾಡಿದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 128 ರನ್ ಮಾತ್ರ ಗಳಿಸಿತು.

ಜಯದ ಗೆರೆಯ ಅಷ್ಟು ಸನಿಹಕ್ಕೆ ಬಂದರೂ, ಗೆಲುವು ಕಾಣುವಲ್ಲಿ ವಿಫಲವಾದ ಪುಣೆ ತಂಡದ ಪ್ರಮುಖ ವೈಫಲ್ಯಗಳೇನು ಎಂಬುದಕ್ಕೆ ಸಾಕ್ಷಿ ಇಲ್ಲಿದೆ.

ತಿರುವು ತಂದ ಪೊಲಾರ್ಡ್

ತಿರುವು ತಂದ ಪೊಲಾರ್ಡ್

ಪುಣೆ ತಂಡದ ಕಡೆಗೆ ವಾಲಬೇಕಿದ್ದ ಫಲಿತಾಂಶವನ್ನು ಮುಂಬೈ ಕಡೆಗೆ ತಿರುಗಿದ್ದು ಯಾವಾಗ ಗೊತ್ತಾ? ಅರ್ಧಶತಕ ಗಳಿಸಿ ತಂಡವನ್ನು ಏಕಾಂಗಿಯಾಗಿ ಗೆಲುವಿತ್ತ ಕೊಂಡೊಯ್ಯುತ್ತಿದ್ದ ಸ್ಟೀವನ್ ಸ್ಮಿತ್ ಔಟಾದಾಗ. ಹೌದು. ಆಗಲೇ, ಫಲಿತಾಂಶ ಮುಂಬೈ ಕಡೆಗೆ ತಿರುಗಿದ್ದು. ಏಕೆಂದರೆ, ಧೋನಿ ಹೊರನಡೆದ ಮೇಲೆ, ತಂಡದ ಏಕೈಕ ಭರವಸೆಯಾಗಿದ್ದ ಸ್ಮಿತ್, 20ನೇ ಓವರ್ ನ 3ನೇ ಎಸೆತ ಎದುರಿಸುವಾಗ ಪುಣೆ ತಂಡಕ್ಕೆ ಬೇಕಿದ್ದು 4 ಎಸೆತಗಳಲ್ಲಿ 9 ರನ್. ಆದರೆ, ಭರ್ಜರಿ ಹೊಡೆತವೊಂದಕ್ಕೆ ಕೈ ಹಾಕಿದ ಸ್ಮಿತ್, ಲಾಂಗ್ ಆನ್ ನಲ್ಲಿ ಬೌಂಡರಿಯ ಬಳಿ ನಿಂತಿದ್ದ ಕೀರನ್ ಪೊಲಾರ್ಡ್ ಹಿಡಿದ ಬ್ರಿಲಿಯಂಟ್ ಕ್ಯಾಚ್ ನಿಂದಾಗಿ ಅವರು ಕ್ರೀಸ್ ತೊರೆಯಬೇಕಾಯಿತು. ಆಗಲೇ ಪುಣೆ ಅಭಿಮಾನಿಗಳಲ್ಲಿ ಜಯ ಆಸೆ ಅರ್ಧಕ್ಕದ್ಧ ಕಮರಿತು.

ರೋಹಿತ್ ನಿರ್ಧಾರ ಸುಳ್ಳಾಗಲಿಲ್ಲ

ರೋಹಿತ್ ನಿರ್ಧಾರ ಸುಳ್ಳಾಗಲಿಲ್ಲ

ಪುಣೆ ತಂಡದ ಸೋಲಿಗೆ ಮತ್ತೊಂದು ಕಾರಣ, ಮಿಚೆಲ್ ಜಾನ್ಸನ್ ಮಾಡಿದ ಆ ಕಡೆಯ ಓವರ್. ಆ ಕಡೆಯ ಓವರ್, ಪಂದ್ಯಕ್ಕೆ ತಿರುವು ತಂದಿತು. ಇಡೀ ಇನಿಂಗ್ಸ್ ನಲ್ಲಿ ಮಾಡದಿದ್ದ ಜಾದೂವನ್ನು ಮಿಚೆಲ್ ಜಾನ್ಸನ್ ಆ ಒಂದು ಕೊನೆಯ ಓವರ್ ನಲ್ಲಿ ಮಾಡಿಬಿಟ್ಟರು. ಯಾವುದೇ ಬೌಲರ್ ಮೇಲೆ ಭಾರೀ ಒತ್ತಡ ತರುವ ಆ ಓವರ್ ಮಾಡಿದ ಜಾನ್ಸನ್, 7 ರನ್ ನೀಡಿದರೂ ಅತೀ ಮಹತ್ವ ಎನಿಸಿದ್ದ ಸ್ಮಿತ್ ಅವರ ವಿಕೆಟ್ ಸೇರಿದಂತೆ ಮೂರು ವಿಕೆಟ್ ಗಳನ್ನು ಕಬಳಿಸಿದ್ದು ನಿಜಕ್ಕೂ ಶ್ಲಾಘನೀಯ. ಆ ಓವರ್ ನ ಮೊದಲ ಎಸೆತದಲ್ಲಿ ಬೌಂಡರಿ ಚಚ್ಚಿಸಿಕೊಂಡರೂ ಆನಂತರದ ಎಸೆತಗಳಲ್ಲು ಅತ್ಯಂತ ಜಾಗರೂಕತೆಯಿಂದ ಎಸೆದ ಅವರು ನಾಯಕ ರೋಹಿತ್ ಅವರು ತಮ್ಮ ಮೇಲಿಟ್ಟಿದ್ದ ಭರವಸೆಯನ್ನು ಉಳಿಸಿಕೊಂಡರು.

ಫಾರ್ಮ್ ತೋರದ ಮಾಜಿ ನಾಯಕ

ಫಾರ್ಮ್ ತೋರದ ಮಾಜಿ ನಾಯಕ

ಪುಣೆ ತಂಡದ ಸೋಲಿಗೆ ಮಗದೊಂದು ಕಾರಣ, ಧೋನಿ ಆಡದೇ ಇದ್ದಿದ್ದು. 11.5ನೇ ಓವರ್ ನಲ್ಲಿ ರಹಾನೆ ವಿಕೆಟ್ ಉರುಳಿದಾಗ ಕ್ರೀಸ್ ಗೆ ಬಂದ ಧೋನಿಗೆ ಕ್ರೀಸ್ ನ ನಾನ್ ಸ್ಟ್ರೈಕಿಂಗ್ ಎಂಡ್ ನಲ್ಲಿದ್ದಿದ್ದು ಸ್ಮಿತ್. ಈ ಇಬ್ಬರೇ ಸಾಕಿತ್ತು... ಮುಂಬೈ ತಂಡ ಗುಡ, ಚಾಪೆ ಸುತ್ತಿಕೊಂಡು ತವರಿಗೆ ಮರಳುವಂತೆ ಮಾಡಲು. ಆದರೆ, ಹಾಗಾಗಲಿಲ್ಲ. ಧೋನಿಯ ಆಟದಲ್ಲಿ ಎಂದಿನ ಚುರುಕು ಇರಲಿಲ್ಲ.
ಮಹತ್ವದ ಪಂದ್ಯಗಳಲ್ಲಿ ಬಿರುಸಾಗಿಯೇ ಬ್ಯಾಟ್ ಬೀಸುವ ಧೋನಿ, ಈ ಪಂದ್ಯದಲ್ಲಿ 12ನೇ ಓವರ್ ನಲ್ಲಿ ಆಡಲಿಳಿದರೂ, ಅವರಿಂದ ಮೊದಲ ಬೌಂಡರಿ ಹೊರಬಂದಿದ್ದು 16ನೇ ಓವರ್ ನಲ್ಲಿ. ಅಲ್ಲಿಯವರೆಗೆ ಅವರು 11 ಎಸೆತ ಎದುರಿಸಿ 6 ರನ್ ಮಾತ್ರ ಗಳಿಸಿದ್ದರು. ತಾವು ಎದುರಿಸಿದ 12ನೇ ಎಸೆತದಲ್ಲಿ (15.3 ನೇ ಓವರ್, ಹಾರ್ದಿಕ್ ಪಾಂಡ್ಯ ಬೌಲಿಂಗ್) ಒಂದು ಬೌಂಡರಿ ಬಾರಿಸಿದ್ದು ಬಿಟ್ಟರೆ ಮತ್ಯಾವುದೇ ಮಿಂಚಿನ ಆಟ ಅವರಿಂದ ಹೊರಹೊಮ್ಮಲಿಲ್ಲ. 17ನೇ ಓವರ್ ನ 2ನೇ ಎಸೆತದಲ್ಲಿ ಬುಮ್ರಾ ಬೌಲಿಂಗ್ ನಲ್ಲಿ ಕೀಪರ್ ಕ್ಯಾಚ್ ನೀಡಿ ಹೊರನಡೆದ ಧೋನಿ ಅನಿರೀಕ್ಷಿತ ಆಘಾತ ನೀಡಿದರು.

ಅನಗತ್ಯ ಹೊಡೆತ ಬೇಕಿರಲಿಲ್ಲ

ಅನಗತ್ಯ ಹೊಡೆತ ಬೇಕಿರಲಿಲ್ಲ

ಇನ್ನು, ತಂಡದ ಜಯ ಕಳೆಯಲು ಕಾರಣರಾದ ಮತ್ತೊಬ್ಬ ಬ್ಯಾಟ್ಸ್ ಮನ್ ಮನೋಜ್ ತಿವಾರಿ. ಪುಣೆ ತಂಡವು ಗೆಲುವಿನ ಹೊಸ್ತಿಲಲ್ಲಿದೆ. ಇನ್ನೊಂದು ಓವರ್ ನಲ್ಲಿ 11 ರನ್ ಬಾರಿಸಬೇಕಿದೆ ಪುಣೆ. ಬೌಲ್ ಮಾಡಲು ಮಿಚೆಲ್ ಜಾನ್ಸನ್ ಸಿದ್ದರಾಗಿದ್ದರೆ, ಸ್ಟ್ರೈಕಿಂಗ್ ಎಂಡ್ ನಲ್ಲಿ ಆ ಓವರ್ ನ ಮೊದಲ ಎಸೆತ ಎದುರಿಸಲು ಸಿದ್ಧರಾಗಿ ನಿಂತಿದ್ದು ಮನೋಜ್ ತಿವಾರಿ.
ಸರಿ. ಮಿಚೆಲ್ ಅವರು ಚೆಂಡು ಎಸೆದರು. ಈ ಎಸೆತದಲ್ಲಿ ಮನೋಜ್ ಬೌಂಡರಿ ಬಾರಿಸಿದರು. ಕ್ರೀಡಾಂಗಣದಲ್ಲಿದ್ದ ಪುಣೆ ಬೆಂಬಲಿಗರೆಲ್ಲರೂ ಕುಣಿದು ಕುಪ್ಪಳಿಸಿದರು. ಅಲ್ಲಿಗೆ, ತಿವಾರಿಯೂ ಕೊಂಚ ಉತ್ತೇಜಿತರಾದರು.
ಸರಿ. ಎರಡನೇ ಎಸೆತವನ್ನು ಸುಮ್ಮನೇ ಗ್ಯಾಪ್ ಕಡೆಗೆ ತಳ್ಳಿಯಾದರೂ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಸ್ಮಿತ್ ಗೆ ಬ್ಯಾಟಿಂಗ್ ಕೊಡಬಹುದಿತ್ತು. ಆದರೆ, ಅವರು ಸುಮ್ಮನೇ ಅನಗತ್ಯವಾಗಿ ದೊಡ್ಡ ಹೊಡೆತವೊಂದಕ್ಕೆ ಕೈ ಹಾಕಿ, ಲಾಂಗ್ ಆನ್ ನಲ್ಲಿದ್ದ ಕೀರನ್ ಪೊಲಾರ್ಡ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ನಿಜ ಹೇಳಬೇಕೆಂದರೆ, ದೊಡ್ಡ ಹೊಡೆತಗಳು ಆಗ ಅವಶ್ಯವಿತ್ತಾದರೂ, ಮನೋಜ್ ಆ ಹೊಡೆತವನ್ನು ಸರಿಯಾಗಿ ಬಾರಿಸಲಿಲ್ಲ ಎಂಬುದು ಅಷ್ಟೇ ಸತ್ಯ.

ಕೊಂಚ ಪ್ರಯತ್ನಿಸಿದ್ದರೂ ಗೆಲ್ಲಬಹುದಿತ್ತು

ಕೊಂಚ ಪ್ರಯತ್ನಿಸಿದ್ದರೂ ಗೆಲ್ಲಬಹುದಿತ್ತು

ಒಟ್ಟಾರೆಯಾಗಿ, ಟಿ20 ಪಂದ್ಯಗಳಲ್ಲಿ ಸಾಧಾರಣ ಮೊತ್ತ ಎಂದೇ ಹೇಳಬಹುದಾದ 129 ರನ್ ಮೆಟ್ಟಲೂ ಪುಣೆಗೆ ಸಾಧ್ಯವಾಗದೇ ಇದ್ದಿದ್ದು ವಿಪರ್ಯಾಸ. ಇಲ್ಲಿ ಮುಂಬೈ ತಂಡವು ಪುಣೆಯನ್ನು ಮಣಿಸಿತು ಎನ್ನುವುದಕ್ಕಿಂತ ಪುಣೆ ತಂಡದ ಬ್ಯಾಟ್ಸ್ ಮನ್ ಗಳು ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿದರು ಎಂಬುದೇ ಹೆಚ್ಚು ಸೂಕ್ತ ಎಂದೆನಿಸುತ್ತದೆ. ಆರಂಭಿಕ ತ್ರಿಪಾಠಿ ಕೊಂಚ ಮಿಂಚಿದ್ದರೆ, ಧೋನಿ ತಮ್ಮ ಫಾರ್ಮ್ ತೋರಿದ್ದರೆ, ಮನೋಜ್ ತಿವಾರಿ ಮತ್ತಷ್ಟು ಸಮಯ ಪ್ರಜ್ಞೆ ಮೆರೆದಿದ್ದರೆ ಪುಣೆ ತಂಡಕ್ಕೆ ಗೆಲುವು ತಂದು ಕೊಡಬಹುದಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಅರ್ಧಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದ ಸ್ಮಿತ್ ಆಟ ವ್ಯರ್ಥವಾಗಿದ್ದು ಬೇಸರದ ಸಂಗತಿ. ಇಂಥ ವಿಚಾರಗಳು ಕ್ರಿಕೆಟ್ ಎಂಬ ಮಾಯಾ ಕ್ರೀಡೆಯ ಅವಿಭಾಜ್ಯ ಅಂಗವೂ ಹೌದು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X