ಸೋಲಿನ ಕಹಿ ಮರೆತ ಆರ್ ಸಿಬಿ; ಡೆಲ್ಲಿ ವಿರುದ್ಧ ರೋಚಕ ಜಯ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 8: ಉಳಿದಿರುವ ಎಸೆತ ಕೇವಲ 10. ಗೆಲ್ಲಲು ಬೇಕಾಗಿರುವ ರನ್ 20. ಯಾರು ಗೆಲ್ತಾರೆ, ಯಾರು ಸೋಲ್ತಾರೆ? ಅಬ್ಬಬ್ಬಾ... ಪ್ರೇಕ್ಷಕರ ಉಸಿರನ್ನು ಪ್ರತಿ ಎಸೆತವೂ ನಿಯಂತ್ರಿಸುತ್ತಿದ್ದ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ (ಡಿಡಿ) ನಡುವಿನ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಆರ್ ಸಿಬಿ 15 ರನ್ ಅಂತರದ ಜಯ ಸಂಪಾದಿಸಿತು.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ, ನಿಗದಿತ 20 ಓವರ್ ಗಳಲ್ಲಿ 157 ರನ್ ಗಳ ಸಾಧಾರಣ ಮೊತ್ತ ದಾಖಲಿಸಿತು. ಆನಂತರ ಬ್ಯಾಟಿಂಗ್ ನಡೆಸಿದ ಡೆಲ್ಲಿ ಪಡೆ, 20 ಓವರ್ ಗಳಲ್ಲಿ 9 ವಿಕೆಟ್ ಗಳಲ್ಲಿ 142 ರನ್ ಗಳಿಸಿ ಸೋಲೊಪ್ಪಿಕೊಂಡಿತು.

Shane watson

ಈ ಗೆಲುವಿನ ಮೂಲಕ, ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಅನುಭವಿಸಿದ್ದ ಸೋಲಿನ ಕಹಿಯನ್ನು ಮರೆತ ಆರ್ ಸಿಬಿ, ಗೆಲವಿನ ಹಾದಿಯನ್ನು ಕಂಡುಕೊಂಡಂತಾಗಿದೆ.

ಎಡವಿದ ಡೆಲ್ಲಿ: ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಬೆಂಗಳೂರು ತಂಡ ನೀಡಿದ್ದ ಸಾಧಾರಣ ಸವಾಲನ್ನು ಬೆನ್ನತ್ತಿದ ಡೆಲ್ಲಿ ತಂಡವು, ಆರಂಭದಿಂದಲೂ ಮುಗ್ಗರಿಸಿತು. ಆರಂಭಿಕರಾದ ಆದಿತ್ಯ ತಾರೆ (18), ವಿಲ್ಲಿಂಗ್ಸ್ (25), ಕರುಣ್ ನಾಯರ್ (4), ಸಂಜು ಸ್ಯಾಮ್ಸನ್ (13) ಅವರು ಬೇಗನೇ ಮರಳಿದರು.

ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್ ಮನ್ ಗಳಾದ ಕ್ರಿಸ್ ಮೋರಿಸ್ (4), ಬ್ರಾತ್ ವೇಟ್ (1), ಪ್ಯಾಟ್ ಕುಮಿನ್ಸ್ (6), ಅಮಿತ್ ಮಿಶ್ರಾ (8), ಶಾಬಾಜ್ ನದೀಮ್ (0), ಜಹೀರ್ ಖಾನ್ (ಅಜೇಯ 1) ಹೆಚ್ಚು ಆಡಲಿಲ್ಲ.

ಇದರ ಮಧ್ಯೆಯೂ, ರಿಷಬ್ ಪಂತ್ ಮಾತ್ರ 36 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಿತ 57 ರನ್ ಗಳಿಸಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಯತ್ನಿಸಿದ್ದರು. ಆದರೆ, 20ನೇ ಓವರ್ ನ ಮೊದಲ ಎಸೆತದಲ್ಲಿ ಅವರ ವಿಕೆಟ್ ಬೀಳುವ ಮೂಲಕ ಡೆಲ್ಲಿ ತಂಡದ ಗೆಲವಿನ ಭರವಸೆಯೂ ಪತನಗೊಂಡಿತು.

ಅಂತಿಮ ಹಂತದಲ್ಲಿ ಆರ್ ಸಿಬಿಗೆ ಗೆಲುವು:ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅವರ ಅನುಪಸ್ಥಿತಿ ಮತ್ತೆ ಕಾಡಿದ್ದು ಸುಳ್ಳಲ್ಲ. ಇದರ ಜತೆಗೆ, ಕ್ರಿಸ್ ಗೇಲ್ ಅವರು ಮತ್ತೆ ಸಿಡಿಯದೇ ಇದ್ದಿದ್ದು, ತಂಡಕ್ಕೆ ಅತಿ ದುಬಾರಿಯಾಗಿ ಪರಿಣಮಿಸಿತು.

ತಂಡದ ಮೊತ್ತ ಕೇವಲ 26 ರನ್ ಆಗಿದ್ದಾಗಲೇ ಗೇಲ್ ಔಟಾಗಿ ಹೊರನಡೆದರೆ, ಅವರ ಸ್ಥಾನಕ್ಕೆ ಬಂದಿದ್ದ ಮೂರನೇ ಕ್ರಮಾಂಕದ ಬ್ಯಾಟ್ಸ್ ಮನ್ ಮಂದೀಪ್ ಸಿಂಗ್ ಕೇವಲ 12 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಅವರ ಹಿಂದೆಯೇ ಹೊರಟಿದ್ದು ಮತ್ತೊಬ್ಬ ಆರಂಭಿಕ, ನಾಯಕ ಶೇನ್ ವ್ಯಾಟ್ಸನ್.

ಆನಂತರದಲ್ಲಿ, ಡೆಲ್ಲಿಯ ಬೌಲಿಂಗ್ ದಾಳಿಗೆ ನಲುಗಿದ ಆರ್ ಸಿಬಿಯ ಮಧ್ಯಮ ಕ್ರಮಾಂಕ ಪೂರ್ತಿ ಕುಸಿಯಿತು. ಸ್ಟುವರ್ಟ್ ಬಿನ್ನಿ (16), ವಿಷ್ಣು ವಿನೋದ್ (9), ಪವನ್ ನೇಗಿ (10) ಹಾಗೂ ಟೈಮಲ್ ಮಿಲ್ಸ್ (0) ಬೇಗನೇ ಔಟಾದರು.

ಆದರೆ, ಕ್ರೀಸ್ ನ ಒಂದು ತುದಿಯಲ್ಲಿ ಹೀಗೆ ವಿಕೆಟ್ ಉರುಳುತ್ತಿದ್ದರೂ, ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಬೀಸಿದ ಮಧ್ಯಮ ಕ್ರಮಾಂಕದ ಕೇದಾರ್ ಜಾಧವ್, 37 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಿತ 69 ರನ್ ಸಿಡಿಸಿ, ಸ್ಕೋರ್ ಬೋರ್ಡ್ ನಲ್ಲಿ ಆರ್ ಸಿಬಿ, ಉತ್ತಮ ಮೊತ್ತ ಪೇರಿಸುವಲ್ಲಿ ನೆರವಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Royal Challengers Bangalore captain Shane Watson won the toss and opted to bat first in the match 5 of IPL 2017 against Delhi Daredevils.
Please Wait while comments are loading...