ಸನ್ ರೈಸರ್ಸ್ ಗೆಲುವಿಗೆ ಕಾರಣವಾದ 5 ಅಂಶಗಳು

Posted By:
Subscribe to Oneindia Kannada

ಬುಧವಾರ (ಏಪ್ರಿಲ್ 19) ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಕರಾರುವಾಕ್ ಪ್ರದರ್ಶನ ತೋರುವ ಮೂಲಕ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ದ 15 ರನ್ ಗಳ ಗೆಲುವು ದಾಖಲಿಸಿತು.

ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್, 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಪಡೆ, 20 ಓವರ್ ಗಳಲ್ಲಿ 5 ವಿಕೆಟ್ ಗೆ 176 ರನ್ ಗಳಿಸಿತು.

ಆದರೂ, ಇಲ್ಲಿ ಪಂದ್ಯ ಗೆಲ್ಲಲು ಡೆಲ್ಲಿ ತಂಡದ ಆರಂಭಿಕ ಸಂಜು ಸ್ಯಾಮ್ಸನ್, ಮೂರನೇ ಕ್ರಮಾಂಕದ ಕರುಣ್ ನಾಯರ್, ಮಧ್ಯಮ ಕ್ರಮಾಂಕದ ಶ್ರೇಯಸ್ ಅಯ್ಯರ್ ಅವರು ನಡೆಸಿದ ಧೀರೋದಾತ್ತ ಬ್ಯಾಟಿಂಗ್ ಅನ್ನು ಮೆಚ್ಚಲೇ ಬೇಕು.

ಅವರ ಆ ಅಮೋಘ ಬ್ಯಾಟಿಂಗ್ ಗೆ ಜಯ ಸಿಗದೇ ಇದ್ದದ್ದು ಎರಡನೇ ಮಾತು. ಆದರೆ, ಆ ಒತ್ತಡದಲ್ಲಿ ಈ ಮೂವರೂ ತೋರಿದ ಛಾತಿ ಇದೆಯಲ್ಲಾ... ಅದಂತೂ ಪ್ರತಿಯೊಬ್ಬ ಆಟಗಾರನಿಗೂ ಅನುಕರಣೀಯ.

ಈ ಹೋರಾಟಗಾರರನ್ನು ಹತ್ತಿಕ್ಕಿ ಗೆಲುವು ಪಡೆದ ಸನ್ ರೈಸರ್ಸ್ ನ ಯಶಸ್ಸಿಗೆ ಕಾರಣಗಳೇನು ಎಂಬುದರ ಸಂಕ್ಷಿಪ್ತ ವಿವರಣೆ ಇಲ್ಲಿದೆ.

 ಇದು ಅತ್ಯಗತ್ಯವೂ ಆಗಿತ್ತು ಕೂಡಾ!

ಇದು ಅತ್ಯಗತ್ಯವೂ ಆಗಿತ್ತು ಕೂಡಾ!

ಮೊದಲಿಗೆ, ಎದುರಾಳಿಗಳ ವಿರುದ್ಧ ದೊಡ್ಡದೊಂದು ಮೊತ್ತ ಪೇರಿಸಿದ್ದು ಸನ್ ರೈಸರ್ಸ್ ತಂಡದ ಯಶಸ್ಸಿಗೆ ಮೊದಲ ಕಾರಣ. ಏಕೆಂದರೆ, ಇಂದಿನ ದಿನಗಳಲ್ಲಿ 20 ಓವರ್ ಗಳಲ್ಲಿ 150ರಿಂದ 170 ರನ್ ಗಳಿಸುವುದು ಸಾಮಾನ್ಯ ವಿಚಾರವಾಗಿದೆ. ಬಲಿಷ್ಠ ಆಟಗಾರರಿರುವ ಎದುರಾಳಿಗಳನ್ನು ಬಗ್ಗು ಬಡಿಯಬೇಕಾದಲ್ಲಿ ಮೊದಲು ಬ್ಯಾಟ್ ಮಾಡುವ ತಂಡ, ಏನಿಲ್ಲವೆಂದರೂ, 190ರ ಆಜುಬಾಜು ಮೊತ್ತ ಪೇರಿಸಿದರೆ ಉತ್ತಮ. 200 ರನ್ ಗಡಿ ದಾಟಿದರಂತೂ ಅತ್ಯುತ್ತಮ. ಬುಧವಾರ ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಇದೇ ಆಗಿದ್ದು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್, 20 ಓವರ್ ಗಳಲ್ಲಿ 192 ರನ್ ಗಳಿಸಿದ್ದು ಅದರ ಯಶಸ್ಸಿನ ಮೊದಲ ಕಾರಣ.

 ಈ ಇಬ್ಬರೇ ದೊಡ್ಡ ಮೊತ್ತದ ರೂವಾರಿಗಳು

ಈ ಇಬ್ಬರೇ ದೊಡ್ಡ ಮೊತ್ತದ ರೂವಾರಿಗಳು

ಸನ್ ರೈಸರ್ಸ್ ತಂಡವು ಹಾಗೆ ದೊಡ್ಡ ಮೊತ್ತದ ಸವಾಲನ್ನು ಎದುರಾಳಿಗಳಿಗೆ ನೀಡಲು ಸಾಧ್ಯವಾಗಿದ್ದು, ಆರಂಭಿಕ ಶಿಖರ್ ಧವನ್ ಹಾಗೂ ಮೂರನೇ ಕ್ರಮಾಂಕದ ಬ್ಯಾಟ್ಸ್ ಮನ್ ಕೇನ್ ವಿಲಿಯಮ್ಸನ್ ಅವರ ದಾಖಲೆಯ ಜತೆಯಾಟದಿಂದ. ಈ ಇಬ್ಬರೂ ಎರಡನೇ ವಿಕೆಟ್ ಗೆ 136 ರನ್ ಗಳ ಉಪಯುಕ್ತ ಕಾಣಿಕೆ ನೀಡಿದ್ದರಿಂದಲೇ ತಂಡವು ಇಷ್ಟು ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಯಿತು. ಅದರಲ್ಲೂ, ತಂಡವು ಅಲ್ಪ ಮೊತ್ತಕ್ಕೇ ಮೊದಲ ವಿಕೆಟ್ ಕಳೆದುಕೊಂಡಾಗ ನಂತರ ಬರುವ ಬ್ಯಾಟ್ಸ್ ಮನ್ ಹಾಗೂ ಕ್ರೀಸ್ ನಲ್ಲಿರುವ ಮತ್ತೊಬ್ಬ ಆರಂಭಿಕನ ಮೇಲೆ ಒತ್ತಡ ಬೀಳುತ್ತದೆ. ಸನ್ ರೈಸರ್ಸ್ ವಿಚಾರದಲ್ಲಿ ಕೇವಲ 12 ರನ್ ಮೊತ್ತಕ್ಕೇ ಆರಂಭಿಕ ಡೇವಿಡ್ ವಾರ್ನರ್ ಔಟಾಗಿದ್ದರು. ಆ ಆರಂಭಿಕ ಆಘಾತವನ್ನು ಮೆಟ್ಟಿ ನಿಂತ ಶಿಖರ್-ವಿಲಿಯಮ್ಸನ್ ಅವರ ಜತೆಯಾಟಕ್ಕೆ ಹ್ಯಾಟ್ಸಾಫ್.

 ಸಂಜುಗೆ ಕಡಿವಾಣ ಹಾಕಿದ್ದು ಪ್ಲಸ್ ಪಾಯಿಂಟ್

ಸಂಜುಗೆ ಕಡಿವಾಣ ಹಾಕಿದ್ದು ಪ್ಲಸ್ ಪಾಯಿಂಟ್

ಇನ್ನು, ಮೂರನೇಯ ಕಾರಣ, ಡೆಲ್ಲಿ ಡೇರ್ ಡೆವಿಲ್ಸ್ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದ್ದು ಹಾಗೂ ಅದರಲ್ಲಿ ಯಶಸ್ವಿಯಾಗಿದ್ದು. ಏಕೆಂದರೆ, ತಮ್ಮ ಜವಾಬ್ದಾರಿ ಅರಿತಿದ್ದ ಡೆಲ್ಲಿ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್, ಇನಿಂಗ್ಸ್ ಆರಂಭದಿಂದಲೇ ಬ್ಯಾಟ್ ಬೀಸಲಾರಂಭಿಸಿದ್ದರು. ಅವರಿಗೆ ಕಡಿವಾಣ ಹಾಕಿದ್ದು ಹಾಗೂ ಬಿಲ್ಲಿಂಗ್ಸ್ ನಂಥ ಪ್ರತಿಭಾನ್ವಿತನನ್ನು ಆರಂಭದಲ್ಲಿಯೇ ಬೇಗನೇ ಪೆವಿಲಿಯನ್ ಗೆ ಕಳುಹಿಸಿದ್ದು ಪ್ಲಸ್ ಪಾಯಿಂಟ್.

 ಜೋಡಿ ಮುರಿದಿದ್ದು ಅನುಕೂಲವಾಯ್ತು

ಜೋಡಿ ಮುರಿದಿದ್ದು ಅನುಕೂಲವಾಯ್ತು

ಮೊದಲ ವಿಕೆಟ್ ಬೇಗ ಉರುಳಿದರೂ, ಆರಂಭಿಕ ಸಂಜು ಸ್ಯಾಮ್ಸನ್ ಜತೆಗೂಡಿದ ಕರ್ನಾಟಕದ ಆಟಗಾರ ಕರುಣ್ ನಾಯರ್ ಅವರು ಬಲವಾಗಿ ಕ್ರೀಸ್ ಗೆ ಅಂಟಿಕೊಳ್ಳುವ ಛಾತಿ ತೋರಿದ್ದರು. ಈ ಜೋಡಿಯನ್ನು ಹಾಗೇ ಬಿಟ್ಟಿದ್ದರೆ ಇವರಿಬ್ಬರೇ ಪಂದ್ಯವನ್ನು ಮುಗಿಸಿಬಿಡುತ್ತಾರೇನೋ ಎನ್ನುವಷ್ಟು ಪ್ರಬಲವಾಗುತ್ತಿದ್ದರು. ಆದರೆ, ಇವರಿಬ್ಬರ ಜೋಡಿಯನ್ನು ಬೇಗನೇ ಮುರಿದಿದ್ದು ಸನ್ ರೈಸರ್ಸ್ ತಂಡದ ಯಶಸ್ಸಿಗೆ ಮತ್ತೊಂದು ಕಾರಣ.

 ಜೋಡಿಗಳು ಗಟ್ಟಿಯಾಗಿ ನಿಲ್ಲಲು ಸನ್ ರೈಸರ್ಸ್ ಬಿಡಲಿಲ್ಲ

ಜೋಡಿಗಳು ಗಟ್ಟಿಯಾಗಿ ನಿಲ್ಲಲು ಸನ್ ರೈಸರ್ಸ್ ಬಿಡಲಿಲ್ಲ

ಡೆಲ್ಲಿ ಬ್ಯಾಟಿಂಗ್ ಲೈನ್ ಅಪ್ ನ ಅಗ್ರ ಕ್ರಮಾಂಕದ ಆಟಗಾರರನ್ನು ಪೆವಿಲಿಯನ್ ಗೆ ಕಳುಹಿಸಿದ ಮೇಲೆ ಸನ್ ರೈಸರ್ಸ್ ಮೈ ಮರೆಯಲಿಲ್ಲ. ಹಾಗೆ ಅವರು ಮೈ ಮರೆತಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ ಅವರೇ ಪಂದ್ಯವನ್ನು ತಮ್ಮ ಕಡೆಗೆ ವಾಲಿಸಿಕೊಂಡು ಬಿಡುತ್ತಿದ್ದರು.

ಅವರ ಆರ್ಭಟ ಎಷ್ಟಿತ್ತೆಂದರೆ, ಸನ್ ರೈಸರ್ಸ್ ಗೆ ಅವರನ್ನು ಔಟ್ ಮಾಡಲು ಇನಿಂಗ್ಸ್ ಮುಕ್ತಾಯವರೆಗೂ ಸಾಧ್ಯವಾಗಲೇ ಇಲ್ಲ. ಆದರೆ, ಅವರ ಜತೆಗೆ ಆ ಸಂದರ್ಭದಲ್ಲಿ ಅತ್ಯಗತ್ಯವಾಗಿ ಬೇಕಿದ್ದ ಒಬ್ಬೇ ಒಬ್ಬ ಜತೆಗಾರನನ್ನು ಗಟ್ಟಿಯಾಗಿ ಕ್ರೀಸ್ ನಲ್ಲಿ ನಿಲ್ಲಲು ಬಿಡಲಿಲ್ಲ. ಶ್ರೇಯಸ್ ಅವರಿಗೆ ಉತ್ತಮ ಜುಗಲ್ ಬಂದಿಯಾಗಿದ್ದ ಆರನೇ ಕ್ರಮಾಂಕದ ಬ್ಯಾಟ್ಸ್ ಮನ್ ಏಂಜೆಲೋ ಮ್ಯಾಧ್ಯೂಸ್ ಅವರನ್ನು ಕೊಂಚ ತಡವಾದರೂ ಪೆವಿಲಿಯನ್ ಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದು ಸನ್ ರೈಸರ್ಸ್ ಗೆಲುವಿನಲ್ಲಿ ನಿಜಕ್ಕೂ ಪ್ರಧಾನ ಪಾತ್ರ ವಹಿಸಿದ ಮತ್ತೊಂದು ಅಂಶ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here are the five reasons to explain why Sunrisers Hyderabad touched the victory over Delhi Daredevils in IPL match on April 20, 2017.
Please Wait while comments are loading...