ಪಾಕಿಸ್ತಾನ ಮಣಿಸಿದ ಭಾರತ ಅಂಧರ ಪಡೆಗೆ ಟಿ20 ವಿಶ್ವಕಪ್

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 12: ಹಾಲಿ ಚಾಂಪಿಯನ್ ಭಾರತ ಅಂಧರ ಕ್ರಿಕೆಟ್ ತಂಡ, ಮತ್ತೊಮ್ಮೆ ಅಂಧರ ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಂಧರ ಟಿ20 ವಿಶ್ವಕಪ್ ನ ದ್ವಿತೀಯ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 9 ವಿಕೆಟ್ ಗಳಿಂದ ಮಣಿಸಿ ಸತತ 2ನೇ ಬಾರಿಗೆ ತನ್ನದಾಗಿಸಿಕೊಂಡಿತು.

India beat Pakistan by nine-wickets to win T20 Blind World Cup

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ, 17.4 ಓವರ್ ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 200 ರನ್ ಗಳಿಸುವ ಮೂಲಕ ಪ್ರಶಸ್ತಿಗೆ ಭಾಜನವಾಯಿತು.

ಭಾರತ ತಂಡದ ಇನಿಂಗ್ಸ್ ಆರಂಭಿಸಿದ್ದ ಕರ್ನಾಟಕದ ಆಟಗಾರ ಜಯರಾಮಯ್ಯ ಹಾಗೂ ಅಜಯ್ ಕುಮಾರ್ ರೆಡ್ಡಿ ಆರಂಭದಿಂದಲೇ ಪಾಕಿಸ್ತಾನ ಬೌಲರ್ ಗಳನ್ನು ಕಾಡಿದರು. ಆದರೆ, ವೈಯಕ್ತಿಕವಾಗಿ 43 ರನ್ ಗಳಿಸಿದ್ದ ರೆಡ್ಡಿ ಬೇಗನೇ ವಿಕೆಟ್ ಒಪ್ಪಿಸಿ ಹೊರನಡೆದರು.

ಆನಂತರ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದ ಕೇತನ್ ಪಟೇಲ್ ಅವರು ವೈಯಕ್ತಿಕವಾಗಿ 26 ರನ್ ಗಳಿಸಿದ್ದಾಗ ಗಾಯಗೊಂಡು ಪೆವಿಲಿಯನ್ ಗೆ ಮರಳಿದರು.

ಆಗ, ಕ್ರೀಸ್ ನಲ್ಲಿ ಉಳಿದಿದ್ದ ಆರಂಭಿಕ ಜಯರಾಮಯ್ಯ, ದುನ್ನಾ ವೆಂಕಟೇಶ್ ಅವರೊಂದಿಗೆ ಉತ್ತಮ ಆಟ ಪ್ರದರ್ಶಿಸಿ ತಂಡವನ್ನು ಜಯದ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು. ಇನಿಂಗ್ಸ್ ನ ಕೊನೆಯವರೆಗೂ ಅಜೇಯರಾಗುಳಿದ ಅವರು, ಅಜೇಯ 99 ರನ್ ಗಳಿಸುವ ಮೂಲಕ ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ತಂಡವು, ಬಾದರ್ ಮುನೀರ್ (57 ರನ್, 37 ಎಸೆತ) ಹಾಗೂ ಮೊಹಮ್ಮದ್ ಜಮೀಲ್ (24 ರನ್, 15 ಎಸೆತ) ಅವರ ಆಕರ್ಷಕ ಬ್ಯಾಟಿಂಗ್ ನಿಂದಾಗಿ 199 ರನ್ ಗಳ ಸವಾಲಿನ ಮೊತ್ತ ದಾಖಲಿಸಿತ್ತು.

ಮರುಕಳಿಸಿದ ಜಯ: 2012ರಲ್ಲಿ ನಡೆದಿದ್ದ ಅಂಧರ ಟಿ20 ವಿಶ್ವಕಪ್ ನ ಫೈನಲ್ ನಲ್ಲೂ ಪಾಕಿಸ್ತಾನದ ವಿರುದ್ಧವೇ ಭಾರತ ಕಣಕ್ಕಿಳಿದಿತ್ತು. ಆಗಲೂ ಭಾರತ, ಪಾಕಿಸ್ತಾನ ತಂಡವನ್ನು 29 ರನ್ ಗಳಿಂದ ಮಣಿಸಿ ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India successfully defended their title in the T20 Blind World Cup on Sunday at M. Chinnaswamy Stadium in Bangalore by beating arch-rivals Pakistan in the final by nine wickets.
Please Wait while comments are loading...