ರಣಜಿ: ಭರ್ಜರಿ ಶತಕ ಸಿಡಿಸಿದ ಯುವರಾಜ್ ಸಿಂಗ್

Posted By:
Subscribe to Oneindia Kannada

ಲಾಹ್ಲಿ(ಹರ್ಯಾಣ), ಅಕ್ಟೋಬರ್ 14: ಟೀಂ ಇಂಡಿಯಾದ ಏಕದಿನ ತಂಡಕ್ಕೆ ಆಯ್ಕೆಯಾಗದ ಸಿಟ್ಟನ್ನು ಹಿರಿಯ ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು ಸರಿಯಾಗಿ ತೀರಿಸಿಕೊಂಡಿದ್ದಾರೆ. ಮಧ್ಯಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ.

ಈ ಮೂಲಕ ರಾಷ್ಟ್ರೀಯ ಆಯ್ಕೆದಾರರಿಗೆ ಸರಿಯಾದ ಉತ್ತರ ನೀಡಿದ್ದಾರೆ. 34 ವರ್ಷ ವಯಸ್ಸಿನ ಯುವರಾಜ್ ಅವರು ಪಂಜಾಬ್ ಪರ ಬ್ಯಾಟಿಂಗ್ ಮಾಡಿ 295 ಎಸೆತಗಳಲ್ಲಿ 177 ರನ್ ಚೆಚ್ಚಿದ್ದಾರೆ. ಇದು ಯುವರಾಜ್ ಸಿಂಗ್ ಅವರ ಪ್ರಥಮ ದರ್ಜೆ ಕ್ರಿಕೆಟ್ ನ 25ನೇ ಶತಕವಾಗಿರುವುದು ವಿಶೇಷ. 24 ಭರ್ಜರಿ ಬೌಂಡರಿ ಬಾರಿಸಿ ಚೌಧರಿ ಬನ್ಸಿ ಲಾಲ್ ಕ್ರಿಕೆಟ್ ಮೈದಾನದಲ್ಲಿ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ.

Ignored for New Zealand ODIs, Yuvraj Singh smashes 177 in Ranji Trophy

ಪಂಜಾಬ್ ತಂಡದ ನಾಯಕ ಯುವರಾಜ್ ಅವರು ಮೊದಲ ದಿನದ ಅಂತ್ಯಕ್ಕೆ 164ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಮೊದಲ ದಿನದ ಕೊನೆಗೆ ಪಂಜಾಬ್ 347/3 ಸ್ಕೋರ್ ಮಾಡಿತ್ತು. ಇದು ಮೊದಲ ದಿನದಂದು ರಣಜಿ ತಂಡ ಗಳಿಸಿದ ಅತಿ ದೊಡ್ಡ ಮೊತ್ತವಾಗಿದೆ. 2015ರಲ್ಲಿ ರಾಜಸ್ಥಾನದ ವಿರುದ್ಧ ಹರ್ಯಾಣ 339/7 ಸ್ಕೋರ್ ಮಾಡಿದ್ದು ದಾಖಲೆಯಾಗಿತ್ತು.

ಯುವರಾಜ್ ಸಿಂಗ್ ರಿಂದ ಸ್ಫೂರ್ತಿ ಪಡೆದು ಯುವ ಬ್ಯಾಟ್ಸ್ ಮನ್ ಗುರ್ ಕೀರತ್ ಮಾನ್ ಅವರು 113ಎಸೆತಗಳಲ್ಲಿ 103(16X4, 1x6) ರನ್ ಗಳಿಸಿ ರಂಜಿಸಿದರು.

ಯುವರಾಜ್ ಅವರು ನಿನ್ನೆಯ ತಮ್ಮ ಸ್ಕೋರಿಗೆ 13ರನ್ ಸೇರಿಸಿ ಬೌಲರ್ ಈಶ್ವರ್ ಪಾಂಡೆಗೆ ಕ್ಯಾಚಿತ್ತು ಶುಕ್ರವಾರ(ಅಕ್ಟೋಬರ್ 14)ಔಟಾದರು. ಪಾಂಡೆ 36.2 ಓವರ್ ಗಳಲ್ಲಿ 102ರನ್ನಿತ್ತು 8 ವಿಕೆಟ್ ಕಿತ್ತು ಗಮನ ಸೆಳೆದರು.

2011 ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರು 40 ಟೆಸ್ಟ್, 293 ಏಕದಿನ ಕ್ರಿಕೆಟ್, 55 ಟಿ20ಐ ಪಂದ್ಯಗಳನ್ನಾಡಿದ್ದಾರೆ. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯವನ್ನು ಮೊಹಾಲಿಯಲ್ಲಿ ಆಡಿದ ಮೇಲೆ ಮತ್ತೆ ತಂಡ ಸೇರಲು ಸಾಧ್ಯವಾಗಿಲ್ಲ.

ಕಿವೀಸ್ ವಿರುದ್ಧದ ಐದು ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿ ಅಕ್ಟೋಬರ್ 16ರಿಂದ ಆರಂಭವಾಗಲಿದ್ದು, ಈ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಯುವರಾಜ್ ರನ್ನು ಆಯ್ಕೆ ಮಾಡಲಾಗಿಲ್ಲ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Senior left-handed batsman Yuvraj Singh, who was ignored for national duty for this week's New Zealand One Day International series, sent a reminder to the new selectors with a superb knock of 177 in Ranji Trophy.
Please Wait while comments are loading...