ಬೆಲ್ಜಿಯಂ, ಜು.02: ಜಸ್ಜಿತ್ ಸಿಂಗ್ ಅವರು ಎರಡು ಪೆನಾಲ್ಟಿ ಕಾರ್ನರ್ ಗಳನ್ನು ಗೋಳಾಗಿ ಪರಿವರ್ತಿಸಿ, ಭಾರತ ತಂಡ ವಿಶ್ವ ಹಾಕಿ ಲೀಗ್ ಉಪಾಂತ್ಯ ತಲುಪವಂತೆ ಮಾಡಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಲೇಷಿಯಾ ತಂಡವನ್ನು 3-2 ಅಂತರದಿಂದ ಸೋಲಿಸಿತು. ಒಟ್ಟಾರೆ ಎಂಟರ ಘಟ್ಟದ ಪಂದ್ಯ ರೋಚಕವಾಗಿತ್ತು.
ಹಾಕಿ ಇಂಡಿಯಾ ಪರ ಸತ್ಬೀರ್ ಸಿಂಗ್ (2ನೇ ನಿಮಿಷ), ಜಸ್ಜೀತ್ ಸಿಂಗ್ (49ನೇ ಹಾಗೂ 55ನೇ ನಿಮಿಷದಲ್ಲಿ) ಗೋಲು ದಾಖಲಿಸಿದರೆ, ಮಲೇಷಿಯಾ ಪರ ರಜಾಯ್ ರಹೀಮ್ (15ನೇ) ಮತ್ತು ಶಾಹ್ರಿಲ್ ಸಾಬಾಹ್ (23ನೇ) ನಿಮಿಷದಲ್ಲಿ ಗೋಲು ದಾಖಲಿಸಿದರು. ಪಂದ್ಯದುದ್ದಕ್ಕೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸರ್ದಾರ್ ಸಿಂಗ್ ಪಡೆ ಅಂತಿಮವಾಗಿ ಅರ್ಹ ಜಯ ದಾಖಲಿಸಿತು.
ಭಾರತ ಪಂದ್ಯದ ಮೊದಲಾರ್ಧದಲ್ಲಿ 1-2 ಗೋಲುಗಳ ಹಿನ್ನಡೆ ಅನುಭವಿಸಿತ್ತು. ಆದರೆ, ಪಂದ್ಯದ ಮೂರನೇ ಕ್ವಾರ್ಟರ್ ನಲ್ಲಿ ಉತ್ತಮ ಆಟ ಪ್ರದರ್ಶಿಸಿ ಉಪಾಂತ್ಯಕ್ಕೆ ಅರ್ಹತೆ ಪಡೆದುಕೊಂಡಿದೆ.
ಈಗಾಗಲೇ ಸೆಮಿಫೈನಲ್ ತಲುಪಿರುವ ಹಾಕಿ ಇಂಡಿಯಾ 2016ರ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಕೂಡಾ ಪಡೆದುಕೊಂಡಿದೆ. ಬೆಲ್ಜಿಯಂ ಹಾಗೂ ಫ್ರಾನ್ಸ್ ನಡುವಿನ ಕ್ವಾರ್ಟರ್ ಫೈನಲ್ ನಲ್ಲಿ ಗೆದ್ದವರನ್ನು ಸೆಮೀಸ್ ನಲ್ಲಿ ಇಂಡಿಯಾ ಎದುರಿಸಲಿದೆ.
ವಿಶ್ವದ ನಂ.1 ಆಸ್ಟ್ರೇಲಿಯಾ ತಂಡ ಕ್ವಾರ್ಟರ್ ಫೈನಲ್ ನಲ್ಲಿ ಐರ್ಲೆಂಡ್ ತಂಡವನ್ನು 4-1 ಅಂತರದಲ್ಲಿ ಸೋಲಿಸಿ ಸೆಮೀಸ್ ಸೇರಿದ್ದು ಇಂಗ್ಲೆಂಡ್ ವಿರುದ್ಧ ಆಡಲಿದೆ. ಪಾಕಿಸ್ತಾನ ತಂಡ 1-2 ಅಂತರದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿದೆ. ಈ ಮೂಲಕ ನಾಲ್ಕು ಬಾರಿ ವಿಶ್ವ ಚಾಂಪಿಯನ್ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದ್ದಲ್ಲದೆ 2016 ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.