ಬೆಂಗಳೂರು, ಅಕ್ಟೋಬರ್ 17: ಅಕ್ಟೋಬರ್ 17ರಂದು ಅನಿಲ್ ಕುಂಬ್ಳೆಗೆ 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳು ತೊಡಗಿರುವಾಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ದೊಡ್ಡ ಅಪಮಾನವಾಗಿದೆ. ಕ್ರಿಕೆಟ್ ಲೋಕದ ದಿಗ್ಗಜ ಕುಂಬ್ಳೆ ಅವರಿಗೆ ಶುಭಕೋರಿದ್ದ ಟ್ವೀಟ್ ಕಂಡು ಅಭಿಮಾನಿಗಳು ಗರಂ ಆಗಿದ್ದಾರೆ.
AK 47- ಹೆಮ್ಮೆಯ ಕನ್ನಡಿಗ ಕುಂಬ್ಳೆಗೆ ಹುಟ್ಟುಹಬ್ಬದ ಸಂಭ್ರಮ
ಅನಿಲ್ ಕುಂಬ್ಳೆ ಅವರಿಗೆ ಅಭಿಮಾನಿಗಳು, ಕ್ರಿಕೆಟಿಗರು, ಗಣ್ಯರು ಸೇರಿದಂತೆ ಹಲವಾರು ಮಂದಿ ಟ್ವಿಟ್ಟರ್ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.
ಆದರೆ, ಬಿಸಿಸಿಐ ಟ್ವೀಟ್ನಲ್ಲಿ ಅನಿಲ್ ಕುಂಬ್ಳೆ ಅವರನ್ನು ಕೇವಲ 'ಸಾಮಾನ್ಯ ಬೌಲರ್' ಎಂದು ನಮೂದಿಸಲಾಗಿತ್ತು. ಇದರ ಸ್ಕ್ರೀನ್ ಶಾಟ್ ತೆಗೆದು ಅಭಿಮಾನಿಗಳು ಬಿಸಿಸಿಐ ವಿರುದ್ಧ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ನಂತರ ಬಿಸಿಸಿಐ ಎಚ್ಚೆತ್ತುಕೊಂಡಿದ್ದು, ಟ್ವೀಟ್ ಡಿಲೀಟ್ ಮಾಡಿದೆ. ನಂತರ ಕುಂಬ್ಳೆಯನ್ನು ಲೆಜೆಂಡ್ ಎಂದು ಹ್ಯಾಶ್ ಟ್ಯಾಗ್ ಹಾಕಿ ಮತ್ತೊಂದು ಟ್ವೀಟ್ ಮಾಡಲಾಗಿದೆ.