ಬೆಂಗಳೂರು, ಸೆ. 22: ಕ್ರಿಕೆಟ್ ಲೋಕ ಕಂಡ ಶ್ರೇಷ್ಠ ಕ್ರಿಕೆಟರ್ ಕಪಿಲ್ ದೇವ್ ಜೀವನಾಧಾರಿತ ಚಲನಚಿತ್ರಕ್ಕೆ ಚಾಲನೆ ಸಿಕ್ಕಿರುವ ಸುದ್ದಿ ಗೊತ್ತಿರಬಹುದು. ಈ ಚಿತ್ರಕ್ಕೆ ಸೂಕ್ತ ನಾಯಕನ ಹುಡುಕಾಟ ಇನ್ನೂ ಜಾರಿಯಲ್ಲಿದ್ದು, ಸದ್ಯಕ್ಕೆ ನಟ ಅರ್ಜುನ್ ಕಪೂರ್ ಹೆಸರು ಮುಂಚೂಣಿಯಲ್ಲಿದೆ.
ಚೆಕ್ ದೆ ಇಂಡಿಯಾ ನಂತರ ಹಿಂದಿ ಸೇರಿದಂತೆ ಕೆಲ ಭಾಷೆಗಳಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳ ಕುರಿತ ಚಿತ್ರಗಳು ಹೆಚ್ಚಾಗಿವೆ. ಪಾನ್ ಸಿಂಗ್ ತೋಮಾರ್, ಭಾಗ್ ಮಿಲ್ಕಾ ಭಾಗ್, ಮೇರಿ ಕೋಮ್, ಅಜರ್, ಎಂಎಸ್ ಧೋನಿ, ಸಚಿನ್ ಬಗ್ಗೆ ಚಿತ್ರಗಳು ಬಂದಿವೆ. ಈ ಸಾಲಿಗೆ ಕಪಿಲ್ ಅವರ ಚಿತ್ರ ಹೊಸದಾಗಿ ಸೇರ್ಪಡೆಯಾಗಲಿದೆ.
ಕಬೀರ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ 1983ರ ವಿಶ್ವಕಪ್ ಗೆಲುವು, ಕಪಿಲ್ ಅವರ ನಾಯಕತ್ವದ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆಯಂತೆ.
ಕಪಿಲ್ ಪಾತ್ರ ನಿರ್ವಹಿಸುವಂತೆ ಹೃತಿಕ್ ರೋಷನ್, ರಣವೀರ್ ಸಿಂಗ್ ರನ್ನು ಸಂಪರ್ಕಿಸಿದ್ದ ಕಬೀರ್ ಈಗ ಅರ್ಜುನ್ ಕಪೂರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸೆ.27ಕ್ಕೆ ಇನ್ನಷ್ಟು ವಿವರಗಳು ಲಭ್ಯ.