ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ!

By ನವೀನ್ ಕುಲಕರ್ಣಿ
|
Google Oneindia Kannada News

ಹಿಂದುಳಿದ ವರ್ಗಕ್ಕೆ ಬ್ರಾಹ್ಮಣ ಸಮುದಾಯವನ್ನು ಸೇರಿಸಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿಂತನೆ ಸಾಕಷ್ಟು ಚರ್ಚೆಗೆ, ವಿವಾದಕ್ಕೆ ಗ್ರಾಸವಾಗಿದೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ದರಾಮಯ್ಯ ಈ ನೀತಿಗಳನ್ನು ರೂಪಿಸುತ್ತಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ. ಆದರೆ, ಬ್ರಾಹ್ಮಣ ಸಮುದಾಯದಿಂದ ಮಾತ್ರ ಈ ಚಿಂತನೆಗೆ ಬೆಂಬಲ ಸಿಕ್ಕಿದೆ. ಬ್ರಾಹ್ಮಣ ಎಂದರೆ ಯಾರು, ಯಾಕೆ ಬ್ರಾಹ್ಮಣರಿಗೆ ಮೀಸಲಾತಿ ಕೊಡಬೇಕು ಎಂಬ ವಿಷಯ ಕುರಿತು ಓದುಗರೊಬ್ಬರಾದ ನವೀನ್ ಕುಲಕರ್ಣಿ ಅವರು ಪ್ರಬುದ್ಧ ಲೇಖನವನ್ನು ಮಂಡಿಸಿದ್ದಾರೆ - ಸಂಪಾದಕ.

ಅಷ್ಟಕ್ಕೂ ನಾವು ವೇದಗಳನ್ನು ಪ್ರಮಾಣೀಕರಿಸುವುದಾದರೆ ನಾವು ಬ್ರಾಹ್ಮಣರೇ ಆಗುವುದಿಲ್ಲ. ಯಾಕೆಂದರೆ ಶ್ರೀಕೃಷ್ಣನು ಗೀತೆಯಲ್ಲಿ ಹೇಳಿರುವನೆನ್ನಲಾದ 'ಚಾತುರ್ವರ್ಣ್ಯಮ್ ಮಯಾಸೃಷ್ಟಮ್ ಗುಣಕರ್ಮ ವಿಭಾಗಶಃ' (ಅವರವರ ಗುಣ ಮತ್ತು ಕರ್ಮಗಳಿಗನುಸಾರವಾಗಿ ನಾನು ನಾಲ್ಕು ವರ್ಣಗಳನ್ನು ಸೃಷ್ಟಿಸಿದ್ದೇನೆ) ಎಂಬ ಮಾತುಗಳ ಪ್ರಕಾರ, ಈ 'ವರ್ಣ'ಗಳು ಮನುಷ್ಯನ ಗುಣ ಮತ್ತು ಕರ್ಮಗಳಿಗನುಸಾರವೇ ಹೊರತು ಹುಟ್ಟಿನ ಚರ್ಚೆ ಅಲ್ಲಿ ಬಂದಿಲ್ಲ.

ಬ್ರಾಹ್ಮಣನಾಗಬೇಕಾದರೆ ಬ್ರಾಹ್ಮಣ್ಯಕ್ಕೆ ಅನುಗುಣವಾದ ಗುಣ ಮತ್ತು ಕರ್ಮವನ್ನು ಬೆಳೆಸಿಕೊಳ್ಳಬೇಕು. ಅದನ್ನು ಬೆಳೆಸಿಕೊಳ್ಳಬೇಕಾದರೆ ಆಚಾರ, ವಿಚಾರ, ಆಹಾರ, ಸಂಗ, ವಿದ್ಯೆ, ಅಭ್ಯಾಸ ಎಲ್ಲವೂ ಬ್ರಾಹ್ಮಣ್ಯಕ್ಕೆ ಆಭಿಮುಖವಾಗಿರಬೇಕಲ್ಲವೆ? ಸಾತ್ವಿಕ ಗುಣಗಳನ್ನು ಬೆಳೆಸಿಕೊಳ್ಳಲು ಪೂರಕವಾದ ಮತ್ತು ಪೋಷಕವಾದ ಹತ್ತು ಹಲವಾರಿನಲ್ಲಿ ಸಾತ್ವಿಕ ಆಹಾರವೂ ಒಂದಾದ್ದರಿಂದ ಬ್ರಾಹ್ಮಣ್ಯವನ್ನು ಬೆಳೆಸಿಕ್ಕೊಳ್ಳಲು ಮತ್ತು ಉಳಿಸಿಕೊಳ್ಳಲು ಬ್ರಾಹ್ಮಣರು ರಾಜಸ ಮತ್ತು ತಾಮಸಗುಣಭರಿತವಾದ ಮಾಂಸಾಹಾರವನ್ನು ಕಾಲಕ್ರಮೇಣ ತ್ಯಜಿಸಿರಬಹುದು.

ನಿಜಸ್ವರೂಪದಲ್ಲಿ ಬ್ರಾಹ್ಮಣರು ಇದ್ದಾರೆಯೆ?

ನಿಜಸ್ವರೂಪದಲ್ಲಿ ಬ್ರಾಹ್ಮಣರು ಇದ್ದಾರೆಯೆ?

ಇಂದಿನ ಪರಿಸ್ಥಿತಿಯನ್ನು ನೋಡಿ ನಿಜಸ್ವರೂಪದಲ್ಲಿ ಬ್ರಾಹ್ಮಣರು ಇದ್ದಾರೆಯೆ? ಮಾಂಸಾಹಾರ, ಧೂಮಪಾನ, ಮದ್ಯಪಾನ, ಲಂಚಗುಳಿತನ, ವ್ಯಭಿಚಾರ (ಇಲ್ಲಿ ದೈಹಿಕ ವ್ಯಭಿಚಾರ ಮಾತ್ರವಲ್ಲ, ಮಾನಸಿಕ ವ್ಯಭಿಚಾರವೂ ಸಹ ಬ್ರಾಹ್ಮಣ್ಯಕ್ಕೆ ಧಕ್ಕೆ ತರುವಂತಾದ್ದೆ ಅಲ್ಲವೇ) ವ್ಯಾಪಾರ ಮುಂತಾದ ಅಬ್ರಾಹ್ಮಣ್ಯದ ಗುಣಗಳನ್ನು ಬೆಳೆಸಿಕೊಂಡು ಕೇವಲ ಬ್ರಾಹ್ಮಣ ಕುಲದಲ್ಲಿ ಜನಿಸಿದ ಕಾರಣದಿಂದ ತಮ್ಮನ್ನು ತಾವು ಬ್ರಾಹ್ಮಣರೆಂದು, ಉತ್ತಮ ಕುಲದವರೆಂದು ತಿಳಿದು ಅಹಂಕಾರಪಡುವ ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ.

ಈ ಸವಾಲು ಬ್ರಾಹ್ಮಣರಿಗೆ ಮಾತ್ರ ಸೀಮಿತವಲ್ಲ

ಈ ಸವಾಲು ಬ್ರಾಹ್ಮಣರಿಗೆ ಮಾತ್ರ ಸೀಮಿತವಲ್ಲ

ತರುಣಿ 'ನಾನಾಗಲೀ ನೀವಾಗಲೀ ಯಾರೂ ಬ್ರಾಹ್ಮಣರಲ್ಲ' ಎಂದಂತೆ, 'ನೀವ್ಯಾರೂ ಕ್ಷತ್ರಿಯರಲ್ಲ', 'ನೀವ್ಯಾರೂ ವೈಶ್ಯರಲ್ಲ' ಅಥವಾ ಶೂದ್ರರಲ್ಲ ಮುಂತಾಗಿ ಸವಾಲುಗಳನ್ನು ಎಸೆಯಬಹುದು. ಉದಾಹರಣೆಗೆ, ಕ್ಷತ್ರಿಯರೆಂದರೆ ತಮ್ಮ ತೋಳ್ಬಲದಿಂದ ರಾಜ್ಯವನ್ನು ಕಟ್ಟುವ, ಇತರ(ಶತ್ರು) ರಾಜ್ಯಗಳನ್ನು ಆಕ್ರಮಿಸಿ ಗೆಲ್ಲುವ ಅಥವಾ ರಣರಂಗದಲ್ಲಿ ಮಡಿದು ವೀರಸ್ವರ್ಗ ಸೇರುವ ಜನ. ಇವರು ಯುದ್ಧಮಾಡುವ ಕಲೆಯಲ್ಲಿ ನೈಪುಣ್ಯಹೊಂದಿ ಶಸ್ತ್ರಾಸ್ತ್ರಗಳ ಉಪಯೋಗದಲ್ಲಿ ಪರಿಣತಿ ಪಡೆದಿರಬೇಕು.

ಸೈನ್ಯಕ್ಕೆ ಸೇರಿದವರೆಲ್ಲ ಕ್ಷತ್ರಿಯರು

ಸೈನ್ಯಕ್ಕೆ ಸೇರಿದವರೆಲ್ಲ ಕ್ಷತ್ರಿಯರು

ಮಹಾರಾಷ್ಟ್ರದ ಮರಾಠರಲ್ಲಿ, ರಾಜಸ್ಥಾನದ ರಾಜಪುತ್ರರಲ್ಲಿ ಈಗಲೂ ತಮ್ಮನ್ನು ಕ್ಷತ್ರಿಯರೆಂದು ಕರೆದುಕೊಳ್ಳುವವರಿದ್ದಾರೆ. ಸೈನ್ಯವನ್ನು ಸೇರುವ ಸಿಖ್ಖರನ್ನು, ಕೊಡಗರನ್ನು 'ಕ್ಷತ್ರಿಯ'ರೆಂದು ಪರಿಗಣಿಸಬಹುದೇನೋ? ಒಟ್ಟಿನಲ್ಲಿ, ಹುಟ್ಟಿನಿಂದ ಯಾವ ಜಾತಿಯವರಾಗಿದ್ದರೂ ಸರಿ, ಇಂದಿನ ಲೆಕ್ಕದಲ್ಲಿ ಸೈನ್ಯಕ್ಕೆ ಸೇರಿದವರೆಲ್ಲ ಕ್ಷತ್ರಿಯರು.

ಕೈಕೆಳಗೆ ದುಡಿಯುವ ಸೇವಕರೆಲ್ಲ ಶೂದ್ರರು

ಕೈಕೆಳಗೆ ದುಡಿಯುವ ಸೇವಕರೆಲ್ಲ ಶೂದ್ರರು

ಆದೇ ರೀತಿ ಆರ್ಥಿಕ ಪ್ರಗತಿಗಾಗಿ, ವ್ಯಾಪಾರ-ವ್ಯವಸಾಯಾದಿ ವೃತ್ತಿಗಳಲ್ಲಿ ತೊಡಗಿದವರೆಲ್ಲ ವೈಶ್ಯರೇ. ತಮಗೆ ತಾವೇ ಸ್ವಾಮಿಗಳಾಗದೇ ಇತರರ ಕೈಕೆಳಗೆ ದುಡಿಯುವ ಸೇವಕ ಜನರೆಲ್ಲ ಶೂದ್ರರು. ಈ ತಕ್ಕಡಿಯಲ್ಲಿ ತೂಗಿಕೊಂಡರೆ ನಮ್ಮಲ್ಲಿ ಬಹುಸಂಖ್ಯಾತರು ಶೂದ್ರರು.

ಬ್ರಾಹ್ಮಣ್ಯವೆಂಬುದು ಒಂದು ಆದರ್ಶ

ಬ್ರಾಹ್ಮಣ್ಯವೆಂಬುದು ಒಂದು ಆದರ್ಶ

ಜಾತಿಯಿಂದ ಬ್ರಾಹ್ಮಣರಾಗಿ ವೃತ್ತಿಯಿಂದ ಇಂಜಿನಿಯರುಗಳೋ, ಡಾಕ್ಟರುಗಳೋ, ಲಾಯರುಗಳೋ ಆಗಿರುವ ನಮ್ಮಲ್ಲನೇಕರಲ್ಲಿ ಬ್ರಾಹ್ಮಣ್ಯದ ಆಚರಣೆಯಿಲ್ಲ, ಬ್ರಹ್ಮಜ್ಞಾನದ ಹಂಬಲವಾಗಲೀ ಅದನ್ನು ಕೈಗೂಡಿಸಿಕೊಳ್ಳಲು ಬೇಕಾದ ಸಿದ್ಧತೆಯಾಗಲೀ ಇಲ್ಲ. ತಾವೇ ಸ್ವತಃ ದಿಕ್ಕುಗಾಣದೇ ಇರುವ ತಂದೆತಾಯಿಗಳು ತಮ್ಮ ಮಕ್ಕಳಿಗೆ ಏನುತಾನೇ ದೀಕ್ಷೆ ಕೊಡಲು ಸಾಧ್ಯ?

ಬ್ರಾಹ್ಮಣನಲ್ಲದವ ಬ್ರಾಹ್ಮಣ್ಯ ಸಂಪಾದಿಸಿದ್ದು

ಬ್ರಾಹ್ಮಣನಲ್ಲದವ ಬ್ರಾಹ್ಮಣ್ಯ ಸಂಪಾದಿಸಿದ್ದು

ಬ್ರಾಹ್ಮಣ್ಯವೆಂಬುದು ಪ್ರತಿಯೊಬ್ಬನ ಆದರ್ಶದ ಹಂಬಲವಾಗಬೇಕು, ಅಂಥಾ ಆದರ್ಶ ಎಲ್ಲರ ಕೈಗೂ ಎಟಕಲಾರದ್ದು ಎಂಬ ತಿಳಿವು ಇದ್ದರೂ ಸಹ. ಅಲ್ಲೊಬ್ಬ ಸತ್ಯಕಾಮ, ಇಲ್ಲೊಬ್ಬ ನಚಿಕೇತ, ಅಲ್ಲೊಬ್ಬ ವಾಲ್ಮೀಕಿ, ಇಲ್ಲೊಬ್ಬ ವಿಶ್ವಾಮಿತ್ರ, ಅಲ್ಲೊಬ್ಬ ಕಬೀರ, ಇಲ್ಲೊಬ್ಬ ಕನಕ, ಹೀಗೆ ಪುರಾಣ ಇತಿಹಾಸಗಳನ್ನು ತಡಕಿದರೆ ಜಾತಿಯಿಂದ ಬ್ರಾಹ್ಮಣನಲ್ಲದವನು ಬ್ರಾಹ್ಮಣ್ಯವನ್ನು ಸಂಪಾದಿಸಿದ ಉದಾಹರಣೆಗಳು ದೊರಕುತ್ತವೆ.

ವೇದಗಳು ಹೇಳುವಂತೆ ಬ್ರಾಹ್ಮಣ ಯಾರು?

ವೇದಗಳು ಹೇಳುವಂತೆ ಬ್ರಾಹ್ಮಣ ಯಾರು?

ಬ್ರಾಹ್ಮಣನಾದವನು ಆಸ್ತಿಯನ್ನು ಮಾಡಬಾರದು, ಕೇವಲ 7 ದಿವಸಗಳಿಗಾಗುವಷ್ಟು ಮಾತ್ರ ಧಾನ್ಯಗಳನ್ನು ಸಂಗ್ರಹಿಸಬೇಕು. ಮುಂಜಿವೆಯಾದಾಗ ಯಜ್ಞೋಪವೀತ ಧರಿಸಿದ ದಿನದಿಂದ ಯಾವಾಗಲಾದರೂ 3 ದಿನ ನಿರಂತರವಾಗೆ ಸಂಧ್ಯಾವಂದನೆ ಮಾಡದಿದ್ದಲ್ಲಿ ಅವನು ಪುನಃ ಮುಂಜಿವೆಯನ್ನು ಮಾಡಿಕೊಳ್ಲಬೇಕು. ಹಾಗೆ ಮಾಡಿಕೊಳ್ಳದ, ಸಂಧ್ಯಾವಂದನೆ ಮಾಡದ ವ್ಯಕ್ತಿಯಿಂದ ಮಾಡಿಸಿಕೊಳ್ಳುವ ಉಪನಯನ ಊರ್ಜಿತವಾಗುವುದಿಲ್ಲ. 3 ತಲೆಮಾರಿನಲ್ಲಿ ಒಬ್ಬರಾದರೊ ಸೊಮಯಾಗ ಮಾಡಿರಬೇಕು, ಸಿದ್ದ ಬಟ್ಟೆಗಳನ್ನ ಧರಿಸಬಾರದು..... ಇನ್ನು ಈ ರೀತಿ ಹೋದರೆ ನಾವ್ಯಾರೊ ಬ್ರಾಹ್ಮಣರಲ್ಲ. (ಇದು ಉಪನಿಶತ್ತುಗಳಲ್ಲಿ ಬರುತ್ತದೆ).

ಬ್ರಾಹ್ಮಣ ಹಾಗೂ ಜಾತ ಬ್ರಾಹ್ಮಣ

ಬ್ರಾಹ್ಮಣ ಹಾಗೂ ಜಾತ ಬ್ರಾಹ್ಮಣ

ಸಂಸ್ಕೃತದಲ್ಲಿ 'ಜಾತ ಬ್ರಾಹ್ಮಣ' ಎಂಬ ಶಬ್ದವೊಂದಿದೆ. ಹಾಗೆಂದರೆ, ಜಾತಿಯಿಂದ ಬ್ರಾಹ್ಮಣ ಎಂದರ್ಥ, ಆಚರಣೆಯಿಂದ, ಅಧ್ಯಯನದಿಂದ ಅಲ್ಲ. 'ಜಾತ' ಎಂಬ ಶಬ್ದವೇ ಹುಟ್ಟನ್ನು ತಿಳಿಸುತ್ತದೆ, 'ಜಾತ ' ಎಂದರೆ, ಹುಟ್ಟಿದ ಎಂದರ್ಥ. 'ಜಾತಕ' ಎಂದರೆ ಹುಟ್ಟಿದ ಘಳಿಗೆ, ತಿಥಿ, ಲಗ್ನ, ರಾಶಿ, ನಕ್ಷತ್ರ ಮುಂತಾದ ವಿಷಯಗಳನ್ನು ತಿಳಿಸುವ ಜನ್ಮಕುಂಡಲಿ, ಇತ್ಯಾದಿ. ಅಂದರೆ ಬ್ರಾಹ್ಮಣನಾಗಿರಲು ಬ್ರಾಹ್ಮಣ ಜಾತಿಯಲ್ಲಿ (ಅಂದರೆ ಬ್ರಾಹ್ಮಣ ತಂದೆತಾಯಿಗಳಿಗೆ) ಹುಟ್ಟಿರಲೇಬೇಕು ಎಂಬ ವಾದ 'ಜಾತ ಬ್ರಾಹ್ಮಣ'ನಿಗೆ ಮಾತ್ರ ಸಲ್ಲತಕ್ಕದ್ದು.

'ಜಾತ ಬ್ರಾಹ್ಮಣ'ರಿಗೆ ಮೀಸಲಾತಿ ಕೊಡಿ

'ಜಾತ ಬ್ರಾಹ್ಮಣ'ರಿಗೆ ಮೀಸಲಾತಿ ಕೊಡಿ

ಹುಟ್ಟಿನಿಂದ ಲಭ್ಯವಾಗುವ ಹಲವು ಅನುಕೂಲಗಳಿವೆ, ಉದಾಹರಣೆಗೆ, ಲಕ್ಷಾಧಿಪತಿಯ ಮಗನಾಗಿ ಹುಟ್ಟಿದವ ಹುಟ್ಟಿನಿಂದಲೇ ಹಣವಂತನಾಗಿರುತ್ತಾನೆ. ತಂದೆ ಮರಣಕಾಲದಲ್ಲಿ ಆಸ್ತಿಯನ್ನು ಮಗನಿಗೆ ಬಿಟ್ಟುಹೋದರೆ, ಅವ ದಿಢೀರ್ ಲಕ್ಷಾಧಿಪತಿಯಾಗುತ್ತಾನೆ. ಇದು ಅವನ ಅದೃಷ್ಟವಷ್ಟೇ ಹೊರತು ಅವನ ಯೋಗ್ಯತೆಯ ಸೂಚಕವಲ್ಲ. ಆದ್ದರಿಂದ 'ಬ್ರಾಹ್ಮಣ'ರಿಗೆ ಮೀಸಲಾತಿ ಬೇಡ. ಶೂದ್ರರಾದ 'ಜಾತ ಬ್ರಾಹ್ಮಣ'ರಿಗೆ ಮೀಸಲಾತಿ ಬೇಕು ಕೊಡಿ.


ಅವರಿವರು ಅಂದರು ನಾನು ಬ್ರಾಹ್ಮಣನೆಂದು|
ನನಗರಿವಿತ್ತು ಅಲ್ಲವೆಂದು|
ನಿತ್ಯವೂ ಅದೇ ತುಡಿತ ನಾನು ಬ್ರಾಹ್ಮಣನೇ?
ಅದೇ ಕೊಳಕು ಮಾತುಕತೆ ಅದೇ ಕಾಡುಹರಟೆ
ಅದೇ ದುಷ್ಟಚಿಂತೆ ಅದೇ ದುಡಿತ
ಅದೇ ಭೋಗ ಅದೇ ಜೀವನ ಜಂಜಾಟ
ಕೋಪ-ತಾಪ ಮುನಿಸು-ಹೊಲಸು
ಹೊಡೆದಾಟ-ಬಡಿದಾಟ ಎಲ್ಲವೂ ಶೂದ್ರಾತಿಶೂದ್ರ
ಯಾವುದರಲ್ಲೂ ಬ್ರಾಹ್ಮಣನಲ್ಲ|
ಅಹುದು ಆಸೆಇದೆ...........ನಾನು ಬ್ರಾಹ್ಮಣನಾಗಬೇಕೆಂದು
ಸುಜ್ಞಾನವ ಪಡೆದು ಸಚ್ಚಿಂತನೆಯ ಮಾಡುತ್ತಾ
ಅಬಲರ, ದೀನದಲಿತರ ನೆಲಕಚ್ಚಿದವರ ಆತ್ಮಗಳಲಿ
ಪರಮಾತ್ಮನನು ಕಾಣುತ್ತಾ ನನ್ನೊಳಗಿರುವ ಪರಮಾತ್ಮನನು ಹುಡುಕುತ್ತಾ
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೆಂಬ ಅರಿಷಡ್ವರ್ಗಗಳಿಂದ
ದೂರ ಮಾಡೆಂದು ಅವನ ಪಾದಗಳಲಿ ಕಣ್ಣೀರಿಡುತ್ತಾ,
ಧರ್ಮ, ಅರ್ಥ, ಕಾಮ, ಮೋಕ್ಷ ಪುರುಷಾರ್ಥಗಳ ಅರ್ಥ ತಿಳಿಯುತ್ತಾ
ಧರ್ಮ-ಮೋಕ್ಷಗಳ ಚೌಕಟ್ಟಿನಲಿ ಅರ್ಥಕಾಮಗಳ ಅನುಭವಿಸುವ ಬುದ್ಧಿಕೊಡೆಂದು
ಅವನಲ್ಲಿ ಬೇಡುತ್ತಾ ನಾನಾಗಬಯಸುವೆ ಬ್ರಾಹ್ಮಣ,
ನರೇಂದ್ರ ವಿವೇಕಾನಂದ ನಾದಂತೆ ಪುಟ್ಟಪ್ಪ ವಿಶ್ವ ಮಾನವ ನಾದಂತೆ||

ಸತ್ಯ ಕಹಿಯಾಗಿದೆ ಆದ್ರೂ ಸತ್ಯ ಸತ್ಯವೇ......

English summary
Letter to the editor. Who is a Brahmin? In true sense, can today's Brahmins be called as Brahmins? Which Brahmin should be given reservation and why? A profound letter by a reader Naveen Kulkarni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X