ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಖಂಡತೆಯಲ್ಲೇ ಶಕ್ತಿ, ರಾಜ್ಯ ಒಡೆದರೆ ಹಾಳು

By ವಸಂತ್ ಶೆಟ್ಟಿ, ಬೆಂಗಳೂರು
|
Google Oneindia Kannada News

Karnataka state bifurcation not necessary
ಅಖಂಡ ಆಂಧ್ರಪ್ರದೇಶವನ್ನು ಒಡೆದು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಯುಪಿಎ ಸರ್ಕಾರ ಮುಂದಾದ ಬೆನ್ನಲ್ಲೇ ದೇಶದ ಹಲವು ರಾಜ್ಯಗಳಲ್ಲೂ ವಿಭಜನೆ ಮಂತ್ರ ಜಪಿಸಲಾಗುತ್ತಿದೆ. ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಈಶಾನ್ಯ ರಾಜ್ಯಗಳಲ್ಲಿ ಪ್ರತ್ಯೇಕತೆಯ ಕೂಗೆದ್ದಿದೆ. ಈ ನಡುವೆ ಕರ್ನಾಟಕದಲ್ಲೂ ಈ ಹಿಂದೆ ರಾಜ್ಯ ಒಡೆಯುವ ಅಸಹ್ಯಕರ ಮಾತುಗಳು ಕೇಳಿ ಬಂದಿದ್ದವು. ಈಗ ಮತ್ತೊಮ್ಮೆ ಅದೇ ಕೂಗು ಏಳದಂತೆ ನಾವುಗಳು ಒಟ್ಟಾಗಿದ್ದು ಕೇಂದ್ರಕ್ಕೆ ಸೆಡ್ಡು ಒಡೆಯಬೇಕಿದೆ.

ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗಲು ರಾಜ್ಯ ಸರ್ಕಾರ ಯತ್ನಿಸುತ್ತಿರುವುದು ಸಂತಸದ ವಿಷಯ. ಅದೇ ರೀತಿ ಕಿತ್ತೂರು ಕರ್ನಾಟಕ (ಹೈದರಾಬಾದ್-ಕರ್ನಾಟಕ) ಭಾಗದಲ್ಲಿ ಸಂವಿಧಾನದ ವಿಧಿ ಪ್ರಕಾರ ಸಿಗಬೇಕಿರುವ ಸ್ಥಾನಮಾನವನ್ನು ದೊರೆಕಿಸಿಕೊಡಲು ನಮ್ಮ ಜನಪ್ರತಿನಿಧಿಗಳು ಮುಂದಾದರೆ ಒಳ್ಳೆಯದು.

ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ (ತುಳು ನಾಡು), ಮಲೆನಾಡು ಹೀಗೆ ರಾಜ್ಯವನ್ನು ಭಾಷೆ, ಜನಸಂಖ್ಯೆ, ಜಾತಿವಾರು ಹರಿದು ಹಂಚಿದರೆ ರಾಜ್ಯದ ಭೂಪಟ ಮುಂದೊಂದು ದಿನ ಸಿಡುಬಿನ ಕಲೆಗಳ ರೀತಿ ಚುಕ್ಕೆ ಚುಕ್ಕೆಯಾಗಿ ಕಾಣಿಸುವುದರಲ್ಲಿ ಸಂಶಯವಿಲ್ಲ.

ತೆಲಂಗಾಣ, ಜಾರ್ಖಂಡ್, ಉತ್ತರಪ್ರದೇಶದ ರಾಜ್ಯ ವಿಂಗಡನೆಯನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕವನ್ನು ಇಬ್ಭಾಗ ಅಥವಾ ಇನ್ನಷ್ಟು ಭಾಗ ಮಾಡಲು ಸಾಧ್ಯವಿಲ್ಲ ಅದಕ್ಕೆ ಸಮಗ್ರ ಕನ್ನಡಿಗರು ಒಪ್ಪುವುದೂ ಇಲ್ಲ. ಅದರೆ, ರಾಜಕಾರಣಿಗಳು ಜನರ ಮನಸ್ಸಿನಲ್ಲಿ ಈ ರೀತಿ ವಿಷ ಬೀಜ ಬಿತ್ತುವುದನ್ನು ನಿಲ್ಲಿಸಲಿ. Small is beautiful ಎನ್ನುವುದು ಎಲ್ಲೆಡೆ ಸರಿ ಕಾಣುವುದಿಲ್ಲ. ವಿಶೇಷ ರಾಜ್ಯ ವಿಂಗಡನೆ ವಿಷಯದಲ್ಲಿ ಹೇಗೆ? ಮುಂದೆ ಓದಿ...

ಕರ್ನಾಟಕವನ್ನು ಒಡೆದು ಮೂರು ಭಾಗ ಮಾಡಿದರೆ ನಿಜಕ್ಕೂ ಎಲ್ಲ ಭಾಗಗಳು ಅಭಿವೃದ್ಧಿ ಹೊಂದುತ್ತಾ? ಎಂಬ ಪ್ರಶ್ನೆ ಇಟ್ಟುಕೊಂಡು ನೋಡಿದ್ರೆ, ಖಂಡಿತವಾಗಿಯೂ ಆಗಲ್ಲ ಅನ್ನೋದೇ ನನ್ನ ಅಭಿಪ್ರಾಯ. ಹೇಗೆ ಅಂತೀರಾ?

ಹತ್ತತ್ತು ಬಾರಿ ಆಯ್ಕೆಯಾಗಿ ಬಂದರೂ ಹೈದ್ರಾಬಾದ್ ಕರ್ನಾಟಕಕ್ಕೆ ನಯಾ ಪೈಸೆ ಕೆಲಸ ಮಾಡದ, ಆ ಭಾಗದ ಜನರ ಕುಂದು ಕೊರತೆಗೆ ಸ್ಪಂದಿಸದ ಅಲ್ಲಿನ ಜನ ನಾಯಕರ ಕೈಗೆ ಹೈದ್ರಾಬಾದ್ ಕರ್ನಾಟಕವೆಂಬ ಹೊಸ ರಾಜ್ಯ ಮಾಡಿ ಕೊಟ್ಟರೆ ಏನಾದೀತು? ನಮ್ಮ ಧಾರವಾಡದ ಕಡೆ ಹೇಳುವಂತೆ "ಊದುದ್ ಕೊಟ್ಟು, ಬಾರ್ಸುದ್ ತಗೊಂಡಂತೆ" ಆಗುತ್ತೆ ಅಷ್ಟೇ.

ಅಸ್ಸಾಂ, ಮಣಿಪುರ, ಮೀಜೊರಾಮ್, ನಾಗಾಲ್ಯಾಂಡ್ ನಂತಹ ಚಿಕ್ಕ ಚಿಕ್ಕ ರಾಜ್ಯಗಳಿಗೆ ದೆಹಲಿಯಲ್ಲಿ ಯಾವ ಅಸ್ತಿತ್ವವೂ ಇಲ್ಲ. ದೆಹಲಿಯಲ್ಲಿ ಏನಿದ್ರೂ ದೊಡ್ಡ ರಾಜ್ಯಗಳ ಮಾತೇ ನಡೆಯೋದು. ನಿಮ್ಮ ಬಳಿ 1,2,5 ಇಲ್ಲ 10 ಎಮ್.ಪಿಗಳಿದ್ದರೆ, ದೆಹಲಿಯಲ್ಲಿರುವ ಕೇಂದ್ರ ಸರ್ಕಾರಕ್ಕೆ ನೀವು ನಗಣ್ಯ. ಅಂತಾದ್ರಲ್ಲಿ, ಕೊಡಗಿನ ಒಬ್ಬ ಎಮ್.ಪಿ, ಹೈದ್ರಾಬಾದ್ ಕರ್ನಾಟಕದ 5 ಎಮ್.ಪಿಗಳ ಕೂಗು ದೆಹಲಿಯಲ್ಲಿರುವ ದೊರೆಯ ಕಿವಿಗೆ ಎಂದಿಗಾದರೂ ಬಿದ್ದಿತಾ?

28 ಲೋಕಸಭೆ ಸದಸ್ಯರನ್ನಿಟ್ಟುಕೊಂಡೇ ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನ, ಯೋಜನೆಗಳನ್ನು ತಂದುಕೊಳ್ಳಲು ನಾವು ಒದ್ದಾಡುತ್ತಿರುವಾಗ, ಇನ್ನೂ ಈ ಚುಲ್ಟು ರಾಜ್ಯಗಳ ಕಥೆ ಏನಾದೀತು ಅನ್ನುವುದನ್ನು ಊಹಿಸಲು ಅಸಾಧ್ಯವೇ?

ಕಾವೇರಿ ನೀರಿಗಾಗಿ, ಕೊಡಗು-ಕರ್ನಾಟಕ, ಕೃಷ್ಣಾ ನದಿ ನೀರಿಗಾಗಿ ಹೈ.ಕ - ಕರ್ನಾಟಕದ ನಡುವೆ ವಿವಾದಗಳು,ಕಿತ್ತಾಟಗಳು, ಕೋರ್ಟ್ ಮೆಟ್ಟಿಲು ಏರೋ ಪ್ರಸಂಗಗಳು ಬರಲ್ವಾ? ಈಗಲೇ ಇರೋ ವಿವಾದಗಳು ಸಾಕಾಗಿಲ್ವಾ? ಒಂದು ಭಾಷೆ ಮಾತನಾಡುವ ಜನರ ನಡುವೆ ಒಗ್ಗಟ್ಟಿನ ಅಗತ್ಯ ಇವತ್ತು ಹಿಂದೆಂದಿಗಿಂತಲೂ ಹೆಚ್ಚಿದೆ. ಹಿಂದಿ ರಾಷ್ಟ್ರ ಭಾಷೆ ಅನ್ನುವ ಸುಳ್ಳಿನ ಮುಂದೆ, ಇವತ್ತಿಗೂ ನಮ್ಮ ಭಾಷೆಗಳು ಎರಡನೆ ದರ್ಜೆಯ ಪ್ರಜೆಗಳಂತೆ ನಲುಗುತ್ತಿವೆ.

ಅದು ಅಲ್ಲದೇ, ಕಲಿಕೆಯ ಎಲ್ಲ ಹಂತದಲ್ಲೂ ಭಾರತದ ಎಲ್ಲ ಭಾಷೆಗಳ ಬೆಳವಣಿಗೆಯೊಂದೇ ಜಾಗತಿಕ ಮಟ್ಟದಲ್ಲಿ ಭಾರತವನ್ನು ಸ್ಪರ್ಧೆಗೆ ಸಜ್ಜುಗೊಳಿಸಲು ಸಾಧ್ಯವಾಗಿಸೋದು. ಕನ್ನಡಿಗರ ಒಗ್ಗಟ್ಟು, ಕನ್ನಡಿಗರ ಒಂದು ರಾಜ್ಯವಿಲ್ಲದೇ, ಭಾಷೆಯ ಮೇಲೆ, ಅದರಿಂದ ಉದ್ಧಾರ ಆಗೋ ಬಗ್ಗೆ ಗಮನ ಕೇಂದ್ರಿಕರಿಸುವುದು ಸಾಧ್ಯವೇ?

English summary
Karnataka state bifurcation and division is not acceptable. small is beautiful theory won't suite in this matter. It is true that Hyderabad Karnataka, Kodagu and Tulu nadu in Karavali region is not getting enough grants and infrastructure but, demands can be fulfilled says CJ Vasanth Shetty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X