ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಗಭದ್ರೆ ಉಸಿರುಗಟ್ಟಿಸುತ್ತಿರುವ ಗಟಾರದ ನೀರು

By ಚಿತ್ರ, ಬರಹ : ವಿಠ್ಠಲ ಲ. ಗಲಗಲಿ, ಕುಪ್ಪೇಲೂರ
|
Google Oneindia Kannada News

Drainage water maligning Tungabhadra in Harihara
ಸುತ್ತಮುತ್ತಲಿನ ಊರುಗಳ ಜನರಿಗೆ, ಪ್ರಾಣಿಗಳಿಗೆ ಕುಡಿಯುವ ನೀರು, ಸುತ್ತಲಿನ ಹೊಲಗದ್ದೆಗಳಿಗೆ ನೀರುಣಿಸುತ್ತಿರುವ ತುಂಗಭದ್ರೆಯು ಈಗ ಅಕ್ಷರಶಃ ಮಲಿನವಾಗಿದ್ದಾಳೆ. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಹರಿಯುತ್ತಿರುವ ಈ ನದಿ ಇಂದು ಗಟಾರದ ನೀರನ್ನು ತನ್ನೊಂದಿಗೆ ಸೇರಿಸಿಕೊಂಡು ಹರಿಯುತ್ತಿದೆ. ಹರಿಹರದ ಹರಿಹರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಗೆ, ಹರಿಹರದ ಅನೇಕ ಗಟಾರಗಳ ನೀರು ಉಪನದಿಗಳಂತೆ ಅಲ್ಲಲ್ಲಿ ಸೇರಿಕೊಂಡು ತುಂಗಭದ್ರೆಯ ಉಸಿರುಗಟ್ಟಿಸುತ್ತಿವೆ.

ಹರಿಹರೇಶ್ವರ ದೇವಸ್ಥಾನದಿಂದ ಬಲಕ್ಕೆ ಬಂದು, ಬಿರ್ಲಾ ಕಲ್ಯಾಣ ಮಂಟಪ ಮುಂದೆ ಹಾಯ್ದು, ಎಡಕ್ಕೆ ಹೋದರೆ ಅಲ್ಲಿರುವ ಮೆಟ್ಟಿಲುಗಳ ಸಹಾಯದಿಂದ ಈ ನದಿಗೆ ಹೋಗಬಹುದು. ಮೆಟ್ಟಿಲುಗಳು ಮುಗಿದ ನಂತರ, ಬಂಡೆಗಳ ಮೂಲಕ ಅಥವಾ ಕಾಲು ದಾರಿಯ ಮೂಲಕ ನದಿಯನ್ನು ತಲುಪಬಹುದು. ಹೀಗೆ ತುಂಗಭದ್ರಾ ನದಿಯನ್ನು ತಲುಪುವುದರೊಳಗೆ ಸುಮಾರು ಗಟಾರಗಳ ಮೂಲಕ ನೀರು ಹರಿದುಬಂದು ನದಿ ಸೇರುತ್ತಿರುವ 'ರಮಣೀಯ' ದೃಶ್ಯವನ್ನು ನಾವು ಕಾಣಬಹುದು.

ಮಳೆಗಾಲದಲ್ಲಿ ವಿಶಾಲವಾಗಿ ಮೈದುಂಬಿ ಹರಿಯುವ ಈ ನದಿ, ಬೇಸಿಗೆಯಲ್ಲೂ ಸಂಪೂರ್ಣವಾಗಿ ಬತ್ತದೆ ಸ್ವಲ್ಪ ಮಟ್ಟಿಗೆ ಹರಿಯುತ್ತಿರುತ್ತದೆ. ಸುತ್ತಮುತ್ತಲಿನ ಜನರ, ಪ್ರಾಣಿಗಳ, ಭೂಮಿಯ ಜೀವಾಳವಾಗಿರುವ ಈ ತುಂಗಭದ್ರಾ ನದಿಗೆ ಇಂದು ಗಟಾರಗಳ ನೀರಿನ ಜೊತೆಗೂಡಿ ಹರಿಯುವಂಥ ದುಃಸ್ಥಿತಿ ಬಂದಿರುವುದು ಎಲ್ಲರ ದುರದೃಷ್ಟ.

ಈಗ ಈ ನದಿಯಲ್ಲಿ ನೀರು ಹರಿಯುವುದು ಕಡಿಮೆ. ಸದ್ಯದ ಪರಿಸ್ಥಿತಿಯಲ್ಲಿ ಒಂದೆಡೆ ನದಿಯ ನೀರು, ಇನ್ನೊಂದೆಡೆ ಗಟಾರದ ನೀರು ಹರಿಯುವುದನ್ನು ನಾವು ನೋಡಬಹುದು. ನದಿಯ ನೀರನ್ನು ನಾವು ನೋಡಬೇಕೆಂದರೆ, ಗಟಾರಗಳ ನೀರಿನಿಂದುಂಟಾದ ಈ ಎಲ್ಲ ಸಣ್ಣ ಉಪನದಿಗಳನ್ನು ದಾಟಿ, ಪಾದುಕೆ ಇರುವ ಕಲ್ಲಿನ ಮಂಟಪವನ್ನು ದಾಟಿ ಮುಂದೆ ಸಾಗಬೇಕು.

ಕೆಲಸದ ನಿಮಿತ್ತ ಹರಿಹರಕ್ಕೆ ಹೋದಾಗ ಹರಿಹರೇಶ್ವರನ ದರ್ಶನ ಭಾಗ್ಯ ಪಡೆಯದಿದ್ದರೂ ಚಿಂತೆಯಿಲ್ಲ, ತುಂಗಭದ್ರೆಗೆ ಸೇರುತ್ತಿರುವ ಗಟಾರದ ನೀರಿನ ದರ್ಶನ ಮಾಡಿರಿ. ಆದರೆ, ಒಂದು ಕಿವಿಮಾತು. ಎಲ್ಲಾದರೂ ಪ್ರೋಕ್ಷಣೆ ಮಾಡಿಕೊಂಡೀರಿ ಎಚ್ಚರ!

ಇಂಥದ್ದೊಂದು ದುಃಸ್ಥಿತಿ ತುಂಗಭದ್ರಾ ನದಿಗೆ ಬಂದೊದಗಿದ್ದರೂ ಜನಪ್ರತಿನಿಗಳಾಗಲಿ, ನಗರಭೆಯ ಅಧಿಕಾರಿಗಳಾಗಲಿ ಯಾರೊಬ್ಬರೂ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇನ್ನುಮುಂದೆಯಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಆರೋಗ್ಯಕರ ವಾತಾವರಣಕ್ಕೆ ಅನುಕೂಲ ಮಾಡಿಕೊಟ್ಟರೆ ಎಲ್ಲರಿಗೂ ಒಳ್ಳೆಯದು. ದಯಮಾಡಿ ತುಂಗಭದ್ರೆಯನ್ನು ಕಾಪಾಡಿ.

English summary
Letter to the editor : Vittal has lamented the pathetic state of Tungabhadra river in Harihara in Davanagere district. He says, drainage water from many parts of the city is culminating in the river and maligning it. Same water is supplied to surrounding cities as drinking water. Please save Tungabhadra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X