ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರ ಬಂದು ಗುಳೆ ಹೋದಾಗ ಎಲ್ಲಿದ್ರೀ ಸಾರ್

By ನೊಂದ ಕನ್ನಡಿಗರು
|
Google Oneindia Kannada News

Migration
ಪೂರ್ವಾಂಚಲ - ಅಸ್ಸಾಂ ನ ಜನರು ತಮ್ಮ ತಮ್ಮ ಊರಿಗೆ ವಾಪಸ್ ಹೋಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೊಡನೆ ಎದ್ದನೋ ಬಿದ್ದನೋ ಎಂದು ಕರ್ನಾಟಕ ಸರ್ಕಾರದ ಗೃಹಮಂತ್ರಿಗಳು ಮತ್ತು ಕಾನೂನು ಸಚಿವರು ರೈಲ್ವೇ ಸ್ಟೇಷನ್ ಗೆ ಹೋಗಿ ಆ ಜನರನ್ನು ಬೇಡಿಕೊಳ್ಳುತ್ತಿದ್ದಾರೆ. ದಯವಿಟ್ಟು ಹೋಗಬೇಡಿ ಇಲ್ಲಿ ನಿಮಗೆ ಏನು ತೊಂದರೆಯಾಗದ ಹಾಗೆ ನೋಡಿಕೊಳ್ಳುತ್ತಿದ್ದೇವೆ ಎಂದು ಕರ ಮುಗಿದು ನಿಂತಿದ್ದಾರೆ. ಒಳ್ಳೆ ಕೆಲ್ಸ ಆದರೆ, ಇದೇ ಕೆಲ್ಸವನ್ನು ನಮ್ಮ ಮಂತ್ರಿ ಮಹೋದಯರು ಸಹೃದಯಿಗಳಾದ ನಮ್ಮ ಸಚಿವರು.... ಬರ ಬಡಿದು ಅನ್ನ ನೀರು ಗತಿ ಇಲ್ಲದೆ ಊರಿಂದ ಊರಿಗೆ ಗುಳೆ ಎದ್ದ ಮಂದಿಯನ್ನು ಎಂದಾದರೂ ಮಾತನಾಡಿಸಿದ್ದೀರಾ?

ಕಳೆದ ತಿಂಗಳು ಕೊಪ್ಪಳದ ನಮ್ಮ ಸಾವಿರಾರು ರೈತರು ಮಳೆಯಿಲ್ಲದೆ ಹಾಗು ಜಾನುವಾರುಗಳಿಗೆ ನೀರು ಮೇವು ಇಲ್ಲದೆ ಸಾವಿರಾರು ದನ-ಕರುಗಳ ಜೊತೆ ಗುಳೆ ಹೊರಟಾಗ ಇದೇ ಸಚಿವರು ಉಪಮುಖ್ಯಮಂತ್ರಿಗಾಗಿ ಲಾಬಿ ನಡೆಸಿಕೂಂಡು ಕಿತ್ತಾಡಿಕೊಂಡಿದ್ದರು. 176 ತಾಲೂಕಿನಲ್ಲಿ 146 ತಾಲೂಕುಗಳು ಬರ ಪೀಡಿತವಾಗಿದೆ. ಕೇಂದ್ರ ಸರ್ಕಾರವನ್ನು 5000 ಕೋಟಿ ಪರಿಹಾರ ಕೇಳಿದ್ದೇವೆ. 250 ಕೋಟಿ ರು ಕೊಟ್ಟಿದ್ದಾರೆ ಎಂದು ಬರೀ ಅಂಕಿ ಅಂಶವನ್ನು ಸರ್ಕಾರ ಮುಂದಿಡುತ್ತಾ ಬಂದಿದೆ.

ಎಲ್ಲಾ ಕಡೆ ಮುಖ್ಯಮಂತ್ರಿಗಳು ಖುದ್ದು ಭೇಟಿ ನೀಡಲು ಸಾಧ್ಯವಿಲ್ಲ ಎಂಬುದು ಗೊತ್ತಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರುಗಳು ಬರ ಪರಿಹಾರಕ್ಕಾಗಿ ಕೈಗೊಂಡಿರುವ ಕ್ರಮದ ಬಗ್ಗೆ ಕೇಳಿ ನೋಡಿ ಮತ್ತದೇ ಅಂಕಿ ಅಂಶಗಳು ನಿಮ್ಮ ಮುಂದಿಡುತ್ತಾರೆ.

ಇನ್ನು ಸಹಿಸಿದ್ದು ಸಾಕು: ಹೆತ್ತಮ್ಮನ ಮೈ ಮುಚ್ಚಲು ಆಗದೆ ಪಕ್ಕದ ಮನೆ ಅಮ್ಮನಿಗೆ ಜರತಾರಿ ಸೀರೆ ಉಡಿಸುವ ಕೆಲಸದಲ್ಲಿ ಕನ್ನಡಿಗರು ಎತ್ತಿದ ಕೈ. ಪರಭಾಷಾ ಸಹಿಷ್ಣುತೆ, ಕಾಸ್ಮೋಪಾಲಿಟನ್ ಕಲ್ಚರ್ ಎಂದು ಉದ್ದುದ್ದಾ ಭಾಷಣ ಬಿಗಿಯುವ ಸಮಾಜ ಸುಧಾರಕರು, ಬುದ್ಧಿಜೀವಿಗಳಿಗೆ ಬೆಂಗಳೂರಿನಿಂದ ಆಚೆ ಇನ್ನೊಂದು ಪ್ರಪಂಚ ಇದೆ. ಉತ್ತರ ಕರ್ನಾಟಕದ ಮಂದಿ ರೊಟ್ಟಿ ನೀರು ಇಲ್ಲದೆ ನಿಲ್ಲಲು ನೆಲೆ ಇಲ್ಲದೆ ಪರಿತಪಿಸುವುದು ಮಾತ್ರ ಎಂದಿಗೂ ಗೊತ್ತಾಗುವುದಿಲ್ಲ.

Institute for Social and Economic Change (ISEC) ನ ಸೆನ್ಸಾನ್ಸ್ ವಿಭಾಗದ ನಿರ್ದೇಶಕ ಟಿ.ಕೆ ಅನಿಲ್ ಕುಮಾರ್ ಅವರ ಮಾಹಿತಿ ಪ್ರಕಾರ ಬೆಂಗಳುರು ಯದ್ವಾ ತದ್ವಾ ಬೆಳೆಯಲು ಕಾಸ್ಮೋಪಾಲಿಟನ್ ಸಂಸ್ಖೃತಿ ಒಂದು ರೀತಿ ಕಾರಣವಾದರೂ, ಬೆಂಗಳೂರಿನ ಅವನತಿಗೂ ಇದೇ ಕಾರಣವಾಗುವ ಸಾಧ್ಯತೆಗಳಿದೆ.

2011ರಲ್ಲಿ ನೆರೆ ಹಾವಳಿಗೆ ತುತ್ತಾಗಿ ಉದ್ಯೋಗ ಅರಸಿಕೊಂಡು ಬೆಂಗಳೂರಿನತ್ತ ಮುಖ ಮಾಡಿದ ಉತ್ತರ ಕರ್ನಾಟಕದ ಮಂದಿಗಿಂತ ಒರಿಸ್ಸಾ, ಅಸ್ಸೋಂ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್ ಕಡೆಯಿಂದ ವಲಸೆ ಬಂದವರ ಸಂಖ್ಯೆ ಅಧಿಕವಾಗಿದೆ.

ಬೆಂಗಳೂರಿನಲ್ಲಿ ಅಚ್ಚ ಕನ್ನಡಿಗರು ಶೇ 26 ಕ್ಕಿಂತ ಕಡಿಮೆ ಪ್ರಮಾಣದಲ್ಲಿದ್ದಾರೆ ಎಂಬ ಐತಿಹಾಸಿಕ ಸತ್ಯವನ್ನು ಕಷ್ಟವಾದರೂ ಸಹಿಸಕೊಳ್ಳಬಹುದು. ಏಕೆಂದರೆ ಬೆಂಗಳೂರು ಎಂದಿಗೂ ಕನ್ನಡಿಗರಿಂದ ತುಂಬಿತುಳುಕಿರಲಿಲ್ಲ. ಚೆನ್ನೈ, ಹೈದರಾಬಾದ್, ಕೊಚ್ಚಿ ಅಥವಾ ಕೊಯಮತ್ತೂರಿಗೆ ಹೋಲಿಸಿದರೆ ಬೆಂಗಳೂರಿನ ಸಹೃದಯ ಕನ್ನಡಿಗರನ್ನು ಪಳಗಿಸುವುದು ಬ್ರಿಟಿಷರಿಗೆ ಸುಲಭವಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಅಕ್ಕ ಪಕ್ಕದ ರಾಜ್ಯದಿಂದ ಅನೇಕ ಉದ್ಯೋಗಾರ್ಥಿಗಳನ್ನು ಬ್ರಿಟಿಷರು ಕರೆ ತಂದಿದ್ದೇ ಬಂತು. ಅಂದಿನಿಂದ ಇಲ್ಲಿ ತನಕ ಇದು ಮುಂದುವರೆದಿದೆ.

ಪ್ರಮುಖ ಐಟಿ ಹಾಗೂ ಐಟಿಯೇತರ ಕಂಪನಿಗಳಲ್ಲಿ ಕನ್ನಡೇತರ ಎಚ್ ಆರ್ ಇದ್ದ ಮೇಲೆ ತಮ್ಮ ಊರಿನ ನಾಲ್ಕು ಮಂದಿ ಪ್ರತಿಭಾವಂತರಿಗೆ ಕೆಲಸ ಕೊಡಿಸುವುದರಲ್ಲಿ ತಪ್ಪೇನಿದೆ ಎಂಬ ವಾದವೂ ಹುಟ್ಟಿಕೊಂಡಿದೆ. ಇದೇ ಡೈಲಾಗ್ ನಮ್ಮ ಬೆಂಗಳೂರಿನ ಕನ್ನಡಿಗರ ಎಚ್ ಆರ್ ಒಬ್ಬ ಉತ್ತರ ಕರ್ನಾಟಕದ ಪದವೀಧರನ ಬಗ್ಗೆ ಮಾತಾಡುವ ದಿನ ಊಹಿಸಲು ಮಾತ್ರ ಸಾಧ್ಯ.

ಐಟಿ ಕಂಪನಿಗಳ ವ್ಯವಹಾರ ಪ್ರಶ್ನಿಸುವುದೇ ಬೇಡ. 5 ಲಕ್ಷ ಐಟಿ ಉದ್ಯೋಗಿಗಳಿದ್ದರೆ ಅದರಲ್ಲಿ ಶೇ 30 ರಷ್ಟು ಮಾತ್ರ ಕನ್ನಡಿಗರು ಇದ್ದಾರೆ. ಸರ್ಕಾರಿ ಸ್ವಾಮ್ಯದ ಇಸ್ರೋ, ಎನ್ ಎ ಎಲ್, ಎಚ್ ಎಎಲ್ ಗಳಲ್ಲಿ ಸ್ವತಃ ನಿರ್ದೇಶಕರೇ ಕರ್ನಾಟಕದಿಂದ ಹೊರಕ್ಕೆ ಹೋಗಿ ಪ್ರತಿಭಾವಂತರನ್ನು ಆರಿಸಿ ಇಲ್ಲಿಗೆ ಕರೆತಂದು ತುಂಬುತ್ತಿದ್ದಾರೆ ಎಂಬುದು ಕಹಿ ಸತ್ಯ.

ಪರಿಸ್ಥಿತಿ ಹೀಗಿರುವಾಗ ಪರ ಊರಿನಿಂದ ಬರುವ ಅಥವಾ ಬಲವಂತವಾಗಿ ಕರೆಸಿಕೊಂಡವರಿಗೆ ಇಲ್ಲಿ ನೆಲೆ ನಿಲ್ಲಲು ನಮ್ಮ ಸರ್ಕಾರವೇ ಸಕಲ ಸೌಲಭ್ಯ ನೀಡುತ್ತಿರುವಾಗ ಕೇವಲ ಪದವಿ ಪಡೆದ ಉತ್ತರ ಕರ್ನಾಟಕದ ಯುವಕ/ತಿ ಯೊಬ್ಬರು ಹೇಗೆ ತಾನೆ ತನ್ನ ಊರಿಗೆ ಮನೆಗೆ ನ್ಯಾಯ ಸಲ್ಲಿಸಲು ಸಾಧ್ಯ.

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನದ ಬಗ್ಗೆ ಮಾತನಾಡುವವರಿಗೆ ಅಧಿಕಾರವಿಲ್ಲ. ಅಧಿಕಾರದಲ್ಲಿರುವವರಿಗೆ ಬ್ಯಾಂಕ್ ಬ್ಯಾಲೆನ್ಸ್ ಸರಿ ಹೊಂದಿಸುವುದಕ್ಕೆ ಸಮಯ ಸಾಲುತ್ತಿಲ್ಲ. ಮೊದಲು ನಾವು ಬದುಕುತ್ತೇನೆ ನಂತರ ಇತರರನ್ನು ಬದುಕಿಸುತ್ತೇವೆ ಎಂಬುದು ಸ್ವಾರ್ಥದ ಹೇಳಿಕೆ ಎನಿಸಿದರೂ ಎಎಂಎನ್ ಎಸ್, ಶಿವಸೇನೆ ಮುಂದೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಕನ್ನಡ ಸೇನೆ ಹಾಗೂ ಸ್ವಾಭಿಮಾನಿ ಕನ್ನಡ ಸಂಘ ಪೇಲವ ಎನಿಸಿಬಿಡುತ್ತದೆ. ಭಾಷೆ, ಸಂಸ್ಕೃತಿಗಾಗಿ ಕಿತ್ತಾಡುವ ಈ ಸಂಘಟನೆಗಳು ಬೆಂಗಳೂರಿನ ನೀರು ಕುಡಿಯುತ್ತಿರುವುದರಿಂದ ಇಲ್ಲಿನ ಮಣ್ಣಿನ ಗುಣವೇ ಮೈಗೂಡಿಸಿಕೊಂಡಿರುವುದರಲ್ಲಿ ಅಚ್ಚರಿಯೇನಿಲ್ಲ.

ಒಟ್ಟಾರೆ, ಸರ್ಕಾರ ಇಂದು ವಲಸಿಗರನ್ನು ಓಲೈಕೆಯಲ್ಲಿ ತೊಡಗಿರುವ ಕಾರ್ಯವನ್ನು ಹೀಗೆ ಮುಂದುವರೆಸಿ ರಾಜ್ಯದ ಇತರೆ ಜಿಲ್ಲೆಯ ಪ್ರತಿ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣಗಳಿಗೆ ಭೇಟಿ ಕೊಟ್ಟು ಜನರ ಕಷ್ಟ ಸುಖಗಳನ್ನು ಆಲಿಸಲಿ.

English summary
Karnataka Government has ensured safety to the northeast people residing in the garden city. There is report about 5000 people have already boarded Guwahati train from Bangalore. Why did R Ashok didn't tried to convince our own North Karnataka people not to migrate due to drought and deluge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X